ಏನಿದು ‘ಫಿಲಾಟೇಲಿ ಪಾಸ್‌ಪೋರ್ಟ್’?: ಬೆಂಗಳೂರಿನಲ್ಲಿ ಈ ನೀಲಿ ಪುಸ್ತಕಕ್ಕಾಗಿ ಜನ ಸಾಲಿನಲ್ಲಿ ನಿಲ್ಲುತ್ತಿರುವುದಕ್ಕೆ ಇದೇ ಕಾರಣ!
ಕರ್ನಾಟಕದಲ್ಲಿ ಫಿಲಾಟೇಲಿ ಪಾಸ್‌ಪೋರ್ಟ್ ಕ್ರೇಜ್ ಜೋರಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಅಂಚೆ ಕಚೇರಿಗಳ ಮುಂದೆ ಸಾರ್ವಜನಿಕರು ಮುಗಿಬಿದ್ದು ಈ ವಿಶೇಷ ಬುಕ್‌ಲೆಟ್ ಪಡೆಯುತ್ತಿದ್ದಾರೆ. 100 ಪ್ರವಾಸಿ ತಾಣಗಳ ಅಂಚೆ ಚೀಟಿ ಹಾಗೂ ಸೀಲ್‌ಗಳನ್ನು ಸಂಗ್ರಹಿಸಲು ಅವಕಾಶವಿರುವ ಈ ಪಾಸ್‌ಪೋರ್ಟ್‌ನ ವಿಶೇಷತೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಪ್ರವಾಸಿಗರಿಗಾಗಿ ಇಂಡಿಯಾ ಪೋಸ್ಟ್‌ನಿಂದ ವಿಶೇಷ ನೀಲಿ ಬಣ್ಣದ ಫಿಲಾಟೇಲಿ ಪಾಸ್‌ಪೋರ್ಟ್ ಬಿಡುಗಡೆ.
- ಬೆಂಗಳೂರು ಪೋಸ್ಟ್ ಆಫೀಸ್ ಮುಂದೆ ಪಾಸ್‌ಪೋರ್ಟ್ ಪಡೆಯಲು ಜನರಿಂದ ಭಾರೀ ಸಾಲು.
- ರಾಜ್ಯದ 100 ಪ್ರವಾಸಿ ತಾಣಗಳ ಸೀಲ್ ಸಂಗ್ರಹಿಸಲು ಜನರಿಂದ ಪೈಪೋಟಿ.
ಬೆಂಗಳೂರು, ಅಕ್ಟೋಬರ್ 11: ಕರ್ನಾಟಕದಲ್ಲಿ ಈಗ ‘ಫಿಲಾಟೇಲಿ ಪಾಸ್‌ಪೋರ್ಟ್’ (Philately Passport) ಹೊಸ ಕ್ರೇಜ್ ಸೃಷ್ಟಿಸಿದೆ. ಪ್ರವಾಸಿಗರಿಗೆ ಮತ್ತು ಅಂಚೆ ಚೀಟಿ ಸಂಗ್ರಹಕಾರರಿಗೆಂದೇ ಇಂಡಿಯಾ ಪೋಸ್ಟ್ ಡಿಪಾರ್ಟ್‌ಮೆಂಟ್ ಒಂದು ವಿಶೇಷ ಬುಕ್‌ಲೆಟ್ ಅನ್ನು ಪರಿಚಯಿಸಿದ್ದು, ಇದನ್ನು ಪಡೆಯಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಬೆಂಗಳೂರು ಪೋಸ್ಟ್ ಆಫೀಸ್ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ ಕಂಡುಬಂದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಯುವಕ-ಯುವತಿಯರು ಆಗಮಿಸುತ್ತಿದ್ದಾರೆ. ಈ ವಿಶೇಷ ಪಾಸ್‌ಪೋರ್ಟ್ ಪಡೆಯಲು ಜನರು ಹಿಂದಿನ ರಾತ್ರಿ 10 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಈ ಕಲೆ ಹಾಗೂ ಪ್ರವಾಸೋದ್ಯಮದ ಮೇಲಿನ ಜನರ ಒಲವನ್ನು ತೋರಿಸುತ್ತದೆ.
ಏನಿದು ಫಿಲಾಟೇಲಿ ಪಾಸ್‌ಪೋರ್ಟ್?
ನೋಡಲು ಅಸಲಿ ಪಾಸ್‌ಪೋರ್ಟ್‌ನಂತೆಯೇ ಕಾಣುವ ಈ ನೀಲಿ ಬಣ್ಣದ ಪುಟ್ಟ ಪುಸ್ತಕವು ಪ್ರವಾಸಿಗರಿಗೆ ಅತ್ಯಂತ ವಿಶಿಷ್ಟ ಅನುಭವ ನೀಡುತ್ತದೆ. ಕರ್ನಾಟಕದ ಪ್ರಮುಖ 100 ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನೆನಪನ್ನು ಇದರಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಹಂಪಿ, ಮೈಸೂರು ಅರಮನೆ, ಚಿತ್ರದುರ್ಗ ಕೋಟೆ, ಬನ್ನೇರುಘಟ್ಟ ಸೇರಿದಂತೆ ಪ್ರಮುಖ ತಾಣಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಆಯಾ ಪ್ರದೇಶದ ಪೋಸ್ಟ್ ಆಫೀಸ್‌ನಲ್ಲಿ ವಿಶೇಷ ಸೀಲ್ ಮತ್ತು ಸಹಿ ಪಡೆಯಬಹುದು. ಡಿಜಿಟಲ್ ಫೋಟೋಗಳು ಮತ್ತು ಸೆಲ್ಫಿಗಳ ಜಮಾನಾದಲ್ಲಿ, ಪ್ರವಾಸದ ನೆನಪುಗಳನ್ನು ವಿಭಿನ್ನವಾಗಿ ಭೌತಿಕ ರೂಪದಲ್ಲಿ ಸಂಗ್ರಹಿಸಲು ಇದು ಅತ್ಯುತ್ತಮ ಅವಕಾಶವಾಗಿದೆ.
ಯುವಜನತೆಯಲ್ಲಿ ಪೈಪೋಟಿ
ಸದ್ಯ ಈ ಫಿಲಾಟೇಲಿ ಪಾಸ್‌ಪೋರ್ಟ್‌ಗೆ 600 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಆದರೆ ಜನರಿಂದ ವ್ಯಕ್ತವಾಗುತ್ತಿರುವ ಅಪಾರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಇಂದು ಕೇವಲ 2 ಸಾವಿರ ಜನರಿಗೆ ಮಾತ್ರ ಈ ಪಾಸ್‌ಪೋರ್ಟ್ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 8 ಸಾವಿರ ಪಾಸ್‌ಪೋರ್ಟ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. 100 ಪ್ರವಾಸಿ ತಾಣಗಳ ಅಂಚೆ ಕಚೇರಿಗಳ ಸೀಲ್‌ಗಳನ್ನು ಸಂಗ್ರಹಿಸುವ ಅಪರೂಪದ ಅವಕಾಶವಿರುವುದರಿಂದ, ಯುವಜನತೆ ಮತ್ತು ಪ್ರಯಾಣ ಪ್ರಿಯರು ಈ ಫಿಲಾಟೇಲಿ ಪಾಸ್‌ಪೋರ್ಟ್ ಪಡೆಯಲು ಭಾರೀ ಪೈಪೋಟಿ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 am, Sun, 11 October 26




