ಸರಗಳ್ಳತನದ ವೇಳೆ ಅಡ್ಡಿಪಡಿಸಿದ ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ

ಸರಗಳ್ಳತನದ ವೇಳೆ ಅಡ್ಡಿಪಡಿಸಿದ  ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ
ಸರಗಳ್ಳತನದ ವೇಳೆ ಅಡ್ಡಿಪಡಿಸಿದ ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ

ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಳ್ಳಲು ಖದೀಮನೊಬ್ಬ ಯತ್ನಿಸಿದ್ದಾನೆ. ಕಿತ್ತುಕೊಂಡು ಹೋಗಲು ಬಿಡದಿದ್ದಾಗ ಪಕ್ಕದಲ್ಲಿಯೇ ಇದ್ದ ಕೆರೆಗೆ ತಳ್ಳಿ ಹತ್ಯೆ ಮಾಡಿಹೋಗಿದ್ದಾನೆ.

TV9kannada Web Team

| Edited By: sadhu srinath

Jun 16, 2022 | 4:25 PM

ಹಾಸನ: ಸರಗಳ್ಳತನದ ವೇಳೆ ಅಡ್ಡಿಪಡಿಸಿದ ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಹೇಯ ಘಟನೆ ನಡೆದಿದೆ. ನೀಲಮ್ಮ (50) ಕೆರೆಯ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಮಹಿಳೆ. ಹಾಸನ ನಗರದ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಲು ದಾರಿಯಲ್ಲಿ ಮನೆಗೆ ಬರುವ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಳ್ಳಲು ಖದೀಮನೊಬ್ಬ ಯತ್ನಿಸಿದ್ದಾನೆ. ಕಿತ್ತುಕೊಂಡು ಹೋಗಲು ಬಿಡದಿದ್ದಾಗ ಪಕ್ಕದಲ್ಲಿಯೇ ಇದ್ದ ಕೆರೆಗೆ ತಳ್ಳಿ ಹತ್ಯೆ ಮಾಡಿಹೋಗಿದ್ದಾನೆ. ಕೊನೆಗೆ, ಸ್ಥಳೀಯರು ಖದೀಮನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರಿಗೊಪ್ಪಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು, ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಪವರ್ ಹೌಸ್​ನಲ್ಲಿ ಮತ್ತೊಂದು ರೀತಿಯ ಅವಘಡ ನಡೆದಿದ್ದು, ಇಂದು ಬೆಳಗ್ಗೆ ಚಾವಣಿ ಶೀಟ್​​ ಸರಿ ಮಾಡುವಾಗ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾನೆ. ಸೇಫ್ ಬೆಲ್ಟ್ ಧರಿಸದೇ ಕೆಲಸ ಮಾಡುತ್ತಿದ್ದ ಸುರೇಶ್​ 50 ಅಡಿ ಎತ್ತರದಿಂದ ಬಿದ್ದು ಸಾವಿಗೀಡಾಗಿದ್ದಾನೆ. ಕಂಪನಿಯ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಗೊರೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಮೀನು ಉಳುವೆ ಮಾಡುವ ವೇಳೆ ಟ್ರ್ಯಾಕ್ಟರ್ ಕುಂಟೆಗೆ ಸಿಲುಕಿ ರೈತ ಸಾವು

ವಿಜಯಪುರ: ಟ್ರ್ಯಾಕ್ಟರ್ ಮೂಲಕ ಜಮೀನು ಉಳುವೆ ಮಾಡುವ ವೇಳೆ ಅವಘಡ ಸಂಭವಿಸಿದ್ದು, ಟ್ರ್ಯಾಕ್ಟರ್ ಕುಂಟೆಗೆ ಸಿಲುಕಿ ರೈತ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಲ್ಲಣ್ಣ ಏರಡ್ಡಿ (48) ಮೃತ ರೈತ. ಟ್ರ್ಯಾಕ್ಟರ್ ಗೆ ಕಬ್ಬಿಣದ ಕುಮಟೆ ಜೋಡಿಸಿ ಉಳುವೆ ಮಾಡುವ ವೇಳೆ ಕುಂಟೆ ಅಡಿಯಲ್ಲಿ ಸಿಲುಕಿ ಮಲ್ಲಣ್ಣ ಮೃತಪಟ್ಟಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಜಮೀನು ವಿವಾದ: ರಾಜಿ ಪಂಚಾಯತಿ ವೇಳೆ ಸಂಬಂಧಿಗಳಿಂದಲೇ ಹಲ್ಲೆ ನಡೆಸಿ ವೃದ್ದನ ಕೊಲೆ

ನೆಲಮಂಗಲ: ಜಮೀನು ವಿವಾದದ ರಾಜಿ ಪಂಚಾಯತಿ ವೇಳೆ ಸಂಬಂಧಿಗಳೇ ಹಲ್ಲೆ ನಡೆಸಿ ವೃದ್ದನ ಕೊಲೆ ಮಾಡಿರುವ ಪ್ರಸಂಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋರೆಭೈರಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟರಾಜು (68) ಮೃತ ವೃದ್ದ. ಮಂಜುನಾಥ್, ಬೈರಪ್ಪ, ಶೇಖರಪ್ಪ ಎಂಬುವವರು ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಹಿನ್ನೆಲೆಯಲ್ಲಿ ಖಾಸಗಿ ಅಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ವೃದ್ದ ಕೊನೆಯುಸಿರೆಳೆದಿದ್ದಾರೆ. ವೃದ್ದನ ಮಗ ಸಿದ್ದರಾಜುಗೂ ಗಂಭೀರ ಗಾಯಗಳಾಗಿವೆ. ಜಂಟಿ ಖಾತೆ ಜಮೀನಿನ ವಿಷಯವಾಗಿ ನಡೆಯುತ್ತಿದ್ದ ರಾಜಿ ಸಂಧಾನದ ವೇಳೆ ಈ ಪ್ರಸಂಗ ನಡೆದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada