Woman Farmer: ಶಿಕ್ಷಕ ವೃತ್ತಿ ಬಿಟ್ಟು ರೈತಾಪಿ ಯುವಕನನ್ನು ಮದುವೆಯಾಗಿ, ಬರ ಪೀಡಿತ ಬಯಲು ಸೀಮೆ ಚಾಮರಾಜನಗರದಲ್ಲಿ ಕಪ್ಪು ಚಿನ್ನ ಬೆಳೆದು ಸೈ ಎನಿಸಿಕೊಂಡ ಮಹಿಳೆ!
Chamarajanagar: ಇಂದಿನ ಕಾಲದಲ್ಲಿ ರೈತರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಹಿಂದೇಟು ಹಾಕುತ್ತಾರೆ. ಆದರೆ ಇವರು ರೈತನನ್ನೆ ಮದುವೆಯಾಗಿ ಕೃಷಿ ಮಾಡಿ ಈ ಮಟ್ಟದ ಸಾಧನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.
ಅದು ಬರ ಪೀಡಿತ ಜಿಲ್ಲೆ. ಅಲ್ಲಿ ಜೋಳ, ರಾಗಿ, ಹುರುಳಿ ಹೀಗೆ ಮಳೆ ಆಶ್ರಿತ ಬೇಳೆಗಳನ್ನೆ ಬೆಳೆಯುವುದು ಹೆಚ್ಚು. ಒಂದೊಂದು ಸಲ ಅದೂ ಸಹ ಮಳೆಯಾಗದೇ ಬೆಳೆ ರೈತರ ಕೈ ಸೇರಲ್ಲ. ಆದ್ರೆ ಇಲ್ಲೊಬ್ಬ ರೈತ ಮಹಿಯೆ (woman) ಧೈರ್ಯ ಮಾಡಿ ಬರ ನಾಡಲ್ಲಿ ಮಲೆನಾಡಿನ ಬೆಳೆ ಬೆಳೆದು ಯಶಸ್ವಿಯಾಗಿದ್ದು ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದು ಯಾವ ಜಿಲ್ಲೆ, ಯಾವ ಬೆಳೆ ಅಂತೀರಾ ತಿಳಿಯೋಣ ಬನ್ನೀ. ಹೌದು ಗಡಿ ಜಿಲ್ಲೆ ಚಾಮರಾಜನಗರವನ್ನು (chamarajanagar) ಬರ ಪೀಡಿತ ಜಿಲ್ಲೆ ಎಂದೇ ಕರೆಯುತ್ತಾರೆ. ಇಲ್ಲಿ ಮಳೆಯ ಪ್ರಮಾಣ ಕಡಿಮೆ. ಇದು ಬಯಲು ಸೀಮೆ. ಮಳೆ ಆಶ್ರಿತ ಬೆಳೆಯೇ ಹೆಚ್ಚು. ಜಿಲ್ಲೆಯ ಕೆಲವೇ ಕೆಲವು ಭಾಗದಲ್ಲಿ ಮಾತ್ರ ನೀರಾವರಿ ಸೌಲಭ್ಯ ಇರುವುದು. ಹೀಗಿದ್ದರೂ ಕೂಡ ಯಳಂದೂರು ತಾಲೂಕಿನ ಕೀರ್ತಿ ಎಂಬುವ ಮಹಿಳೆ ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿ ಮಲೆನಾಡಿನ ಪ್ರಮುಖ ಬೆಳೆಯಾದ ಕರಿ ಮೆಣಸು (pepper) ಬೆಳೆದು ಸೈ ಎನಿಸಿಕೊಂಡಿದ್ದಾರೆ (success story).
ಕೀರ್ತಿ- ಇವರು ಬಿ. ಎಡ್. ಪದವಿ ಮಾಡಿದ್ದು , ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ (teacher) ಕೂಡ ಕೆಲಸ ಮಾಡಿದ್ದಾರೆ. ಮೊದಲಿಂದಲೂ ವ್ಯವಸಾಯದಲ್ಲಿ ಆಸಕ್ತಿ ಇದ್ದ ಇವರು ರೈತನನ್ನೆ ಅರಸಿ ಮದುವೆ ಆಗಿದ್ದಾರೆ. ಬಳಿಕ ಶಿಕ್ಷಕಿ ವೃತ್ತಿ ಬಿಟ್ಟು ಗಂಡನ ಮನೆ ಸೇರಿ ಆಧುನಿಕ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ಗಂಡನ ಸಹಾಯದಿಂದ ನಾಲ್ಕಾರು ಕಡೆ ಸುತ್ತಾಡಿದ ಬಳಿಕ ಇದೇ ಭೂಮಿಯಲ್ಲಿ ಚಿನ್ನದಂತಹ ಬೆಳೆ ತೆಗೆಯಬೇಕು ಎಂದು ತೀರ್ಮಾನಿಸಿದರು.
ಅದರಂತೆ ತಮ್ಮ ಜಮೀನಲ್ಲಿದ್ದ ಬೋರ್ ವೆಲ್ ನಿಂದ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನು ಮಲೆನಾಡಿನ ಕಪ್ಪು ಮೆಣಸನ್ನು ನಮ್ಮಲ್ಲಿ ಬೆಳೆಯ ಬೇಕು ಎನ್ನುವ ಹಠದಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಕಪ್ಪು ಮೆಣಸು ಗಿಡ ತಂದು ಇದೀಗ ಉತ್ತಮವಾದ ವ್ಯಯಸಾಯ ಮಾಡಿ ಜಮೀನಿನಲ್ಲಿ ಕಪ್ಪು ಚಿನ್ನವನ್ನೇ ಬೆಳೆದಿದ್ದು ಸಾಕಷ್ಟು ಆದಾಯ ಗಳಿಸುತ್ತಿದ್ದು ಅದಕ್ಕೆ ಪತಿ ಸಾಥ್ ನೀಡುತ್ತಿದ್ದಾರೆ.
ಇನ್ನು ಕೀರ್ತಿ ಅವರಿಗೆ ಪತಿ ರಂಗಸ್ವಾಮಿ ಬೆನ್ನೆಲುಬಾಗಿದ್ದು, ಕೃಷಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಇಂದು ಕೀರ್ತಿಯವರ ಸಾಧನೆ ನೋಡಿ ಖುಷಿ ಪಡುತ್ತಿರುವ ಅವರು ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾರೆ ಎನ್ನುವ ರೀತಿ ನಾನು ನನ್ನ ಹೆಂಡತಿಯ ಸಾಧನೆಯ ಹಿಂದೆ ಇದ್ದೇನೆ. ಅವರ ಸಾಧನೆಯಲ್ಲಿ ನನ್ನ ಸಂತೋಷ ಕಾಣುತ್ತಿದ್ದೇನೆ. ಇಂದಿನ ಕಾಲದಲ್ಲಿ ರೈತರನ್ನು ಮದುವೆಯಾಗಲು ಹೆಣ್ಣು ಮಕ್ಕಳು ನಿರಾಕರಣೆ ತೋರುತ್ತಾರೆ. ಅಂತಹದರಲ್ಲಿ ನನ್ನ ಮಡದಿ ನನ್ನ ಮದುವೆಯಾಗಿದ್ದಾರೆ. ಅವಳ ಸಾಧನೆಯೇ ನನ್ನ ಖುಷಿ ಎನ್ನುತ್ತಿದ್ದಾರೆ ಕೀರ್ತಿಯವರ ಪತಿ.
ಒಟ್ಟಾರೆ ಇಂದಿನ ಕಾಲದಲ್ಲಿ ರೈತರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಹಿಂದೇಟು ಹಾಕುತ್ತಾರೆ. ಆದರೆ ಇವರು ರೈತನನ್ನೆ ಮದುವೆಯಾಗಿ ಕೃಷಿ ಮಾಡಿ ಈ ಮಟ್ಟದ ಸಾಧನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9, ಚಾಮರಾಜನಗರ