ದುಡಿದ ಹಣ ಸೇನೆಗೆ ಜಮಾ; ಇಂದಿಗೂ ಲಾಲ್ ಬಹದ್ದೂರ್ ಶಾಸ್ತ್ರಿ ಆದರ್ಶ ಪಾಲಿಸುತ್ತಿರುವ ಮೂಡಿಗೆರೆ ಹಿರಿಯ

ಜನರಿಗೆ ದೇಶದ ಬಗ್ಗೆ, ಸೈನ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಹೆಬ್ಬಾರ್ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅನೇಕ ಪ್ರಶಸ್ತಿ-ಪುರಸ್ಕಾರಗಳು ಕೂಡ ಹೆಬ್ಬಾರ್ ಅವರನ್ನ ಹುಡುಕಿಕೊಂಡು ಬಂದಿವೆ. ಆದರೆ ಅದ್ಯಾವುಕ್ಕೂ ತಲೆಕೆಡಿಸಿಕೊಳ್ಳದೇ, ಪ್ರಚಾರದ ಗೀಳಿಗೂ ಬೀಳದೇ ಹೆಬ್ಬಾರ್ ಅವರು ತಮ್ಮ ಪಾಡಿಗೆ ತಾವು ಯಶಸ್ವಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ.

  • ಪ್ರಶಾಂತ್
  • Published On - 6:49 AM, 8 Apr 2021
ದುಡಿದ ಹಣ ಸೇನೆಗೆ ಜಮಾ; ಇಂದಿಗೂ ಲಾಲ್ ಬಹದ್ದೂರ್ ಶಾಸ್ತ್ರಿ ಆದರ್ಶ ಪಾಲಿಸುತ್ತಿರುವ ಮೂಡಿಗೆರೆ ಹಿರಿಯ
ನರಸಿಂಹ ರಾವ್ ಹೆಬ್ಬಾರ್ ಕೆಲಸದಲ್ಲಿ ನಿರತರಾಗಿರುವ ದೃಶ್ಯ

ಚಿಕ್ಕಮಗಳೂರು: 1964ರ ಇಸವಿ. ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು ಪ್ರಧಾನ ಮಂತ್ರಿಯಾಗಿದ್ದ ದಿನಗಳು. ನೆರೆಯ ಚೀನಾದೊಂದಿಗಿನ ಸಂಘರ್ಷದ ನೆನಪುಗಳು ಗಾಢವಾಗಿದ್ದವು. ಪಾಕಿಸ್ತಾನವೂ ಭಾರತದ ವಿರುದ್ಧ ಚಿತಾವಣೆ ನಡೆಸುತ್ತಿತ್ತು. ಇನ್ನೊಂದೆಡೆ ದೇಶ ತುಂಬಾ ಕಡುಬಡತನದಲ್ಲಿತ್ತು. ಈ ವೇಳೆ ಸೇನೆಯನ್ನು ಮತ್ತೆ ಸದೃಢಗೊಳಿಸುವುದು ಒಂದು ದೊಡ್ಡ ಸವಾಲಾಗಿತ್ತು. ಹೀಗಾಗಿ ಶಾಸ್ತ್ರೀಜಿ ಎಲ್ಲರೂ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನ ಸೇನೆಗೆ ಕಳುಹಿಸುವಂತೆ ಕರೆ ಕೊಟ್ಟಿದ್ದರು. ಆ ಕರೆಯನ್ನ ಯಾರು ಎಷ್ಟು ಪಾಲಿಸಿದರೋ ಏನೋ, ಆದರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ನಿವಾಸಿ ಮಾತ್ರ ಇಂದಿಗೂ ಚಾಚು ತಪ್ಪದೇ ಶಾಸ್ತ್ರೀಜಿ ಕರೆಯನ್ನು ಪಾಲಿಸಿಕೊಂಡು ಬರ್ತಿದ್ದಾರೆ

1964ರಿಂದ ಇಂದಿನವರೆಗೂ ದಿನಕ್ಕೆ ಎರಡೇ ಹೊತ್ತು ಊಟ ಮಾಡು ಈ ವ್ಯಕ್ತಿ ಬೇರೆ ಯಾರು ಅಲ್ಲ 82 ವರ್ಷದ ನರಸಿಂಹ ರಾವ್ ಹೆಬ್ಬಾರ್. ಇವರು ಒಂದು ಹೊತ್ತಿನ ಊಟ ತ್ಯಾಗ ಮಾಡಿರುವುದು ದೇಶಕ್ಕಾಗಿ. ಹೌದು, 1964ನೇ ಇಸವಿಯಲ್ಲಿ ಅಂದಿನ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ದೇಶ ತುಂಬಾ ಬಡತನದಲ್ಲಿದ್ದಾಗ ಎಲ್ಲರೂ ಒಂದು ಹೊತ್ತಿನ ಊಟ ಬಿಟ್ಟು ದೇಶಕ್ಕೆ, ಸೇನೆಗೆ ನೆರವಾಗುವಂತೆ ತಿಳಿಸಿದರು. ಪ್ರತಿದಿನ ಒಂದು ಹೊತ್ತು ಊಟ ತ್ಯಜಿಸುವ ಹೆಬ್ಬಾರ್, ವರ್ಷಕ್ಕೊಂದು ಸಲ ಹೀಗೆ ಉಳಿಸಿದ ಹಣವನ್ನ ಸೇನೆಗೆ ಜಮಾ ಮಾಡುತ್ತಾ ಬರುತ್ತಿದ್ದಾರೆ.

ನನ್ನ ಕೊನೆಯ ಉಸಿರು ಇರೋವರೆಗೂ ಕೂಡ ನನ್ನ ಬದ್ಧತೆ ದೇಶಕ್ಕಾಗಿ ಇದ್ದೇ ಇರುತ್ತದೆ. ಕೇವಲ ನನ್ನಲ್ಲಿ ಮಾತ್ರ ದೇಶಪ್ರೇಮ ಇದ್ದರೆ ಸಾಲದು ಪ್ರತಿಯೊಬ್ಬ ಪ್ರಜೆಯಲ್ಲೂ ದೇಶ ಪ್ರೇಮ ಮೂಡಬೇಕು ಎನ್ನುವ ಹೆಬ್ಬಾರ್, 82 ವಯಸ್ಸಾದರೂ ಯುವಕರನ್ನ ಮೀರಿಸುವ ಉತ್ಸಾಹ, ಹುಮ್ಮಸ್ಸು ಹೊಂದಿದ್ದಾರೆ. ಆರ್ಥಿಕವಾಗಿ ಚೆನ್ನಾಗಿ ಇದ್ದರೂ ಮನೆಗೆ ಸಂಬಂಧಿಸಿದ ಹಣವನ್ನಾಗಲಿ ಅಥವಾ ಜಮೀನಿನ ಹಣವನ್ನಾಗಲಿ ಇವರು ಉಪಯೋಗಿಸುವುದಿಲ್ಲ. ಬದಲಾಗಿ ತಾನೇ ದುಡಿದು, ಬಂದಂತಹ ಹಣವನ್ನ ದೇಶಕ್ಕಾಗಿಯೇ ಅಂದಿನಿಂದಲೂ ಇಂದಿನವರೆಗೂ ನೀಡುತ್ತಾ ಬಂದಿದ್ದಾರೆ. ಯಕ್ಷಗಾನದಲ್ಲೂ ಹೆಸರು ಮಾಡಿರುವ ಹೆಬ್ಬಾರ್, ಇಂದಿಗೂ ಯಕ್ಷಗಾನದ ನಂಟನ್ನು ಬಿಟ್ಟಿಲ್ಲ. ಕಣ್ಣಿನ ಸೂಕ್ಷ್ಮತೆಯನ್ನ ಕಳೆದುಕೊಂಡಿಲ್ಲ.

ಪ್ರತಿದಿನ ಒಂದಕ್ಷರವನ್ನು ಬಿಡದೇ ಪೇಪರ್ ಓದುವ ಹೆಬ್ಬಾರ್ ಅವರಿಗೆ ಕಿವಿಯೂ ಕೂಡ ತುಂಬಾ ಚೆನ್ನಾಗಿ ಕೇಳಿಸುತ್ತೆ ಅನ್ನುವುದು ವಿಶೇಷ. ಇಂದಿಗೂ ದೇಶದ ಬಗ್ಗೆ ಅಪಾರ ಹೆಮ್ಮೆ, ಶ್ರದ್ಧೆ ಗೌರವ ಇಟ್ಟುಕೊಂಡಿರುವ ಇವರ ಬಗ್ಗೆ ಮನೆಯವರು ಕೂಡ ಹೆಮ್ಮೆ ಪಡುತ್ತಾರೆ. ಅದೆಷ್ಟೋ ಜನರಿಗೆ ದೇಶದ ಬಗ್ಗೆ, ಸೈನ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಹೆಬ್ಬಾರ್ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅನೇಕ ಪ್ರಶಸ್ತಿ-ಪುರಸ್ಕಾರಗಳು ಕೂಡ ಹೆಬ್ಬಾರ್ ಅವರನ್ನ ಹುಡುಕಿಕೊಂಡು ಬಂದಿವೆ. ಆದರೆ ಅದ್ಯಾವುಕ್ಕೂ ತಲೆಕೆಡಿಸಿಕೊಳ್ಳದೇ, ಪ್ರಚಾರದ ಗೀಳಿಗೂ ಬೀಳದೇ ಹೆಬ್ಬಾರ್ ಅವರು ತಮ್ಮ ಪಾಡಿಗೆ ತಾವು ಯಶಸ್ವಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ.

ಇಂದಿನ ಯಾಂತ್ರಿಕ ಜೀವನದಲ್ಲಿ ಎಲ್ಲರೂ ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುವಾಗ ಹೆಬ್ಬಾರ್ ಅಂತವರು ನಮಗೆಲ್ಲರಿಗೂ ತುಂಬಾ ಎತ್ತರದಲ್ಲಿ ಕಾಣುವ ವ್ಯಕ್ತಿತ್ವ ಎನ್ನುವುದಂತು ಸತ್ಯ. ಅದೇನೆ ಇರಲಿ, 1964ರಿಂದ ಇಂದಿನವರೆಗೂ ಒಂದೊತ್ತು ಊಟ ಬಿಟ್ಟು ದೇಶದ ಸೇನೆಗೆ ಹಣ ಕಳಿಸುತ್ತಿರುವ ಹೆಬ್ಬಾರ್ ಅವರ ಅಪ್ಟಟ ದೇಶಪ್ರೇಮ, ನಿಜಕ್ಕೂ ನಮ್ಮ ದೇಶದ ಪ್ರತಿಯೊಬ್ಬರಿಗೂ ಮಾದರಿ.

(ವರದಿ: ಪ್ರಶಾಂತ್-9980914139)

(A Chikmagalur Old Age Man following Lal Bahadur Shastri and donating all his money to Indian Army)

ಇದನ್ನೂ ಓದಿ: ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!