ಏನಿದು ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ವಿರುದ್ಧದ ಅವ್ಯವಹಾರ ಆರೋಪ ಕಥೆ! ಮತ್ತೆ ಲೋಕಾಯುಕ್ತಕ್ಕೆ ದೂರು ಯಾಕೆ!

Sringeri Congress MLA: ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರು ನೋಡಿದರೆ ಎಲ್ಲಾ ದಾಖಲೆ ಸರಿ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ ಅಂತಾರೆ. ಆದರೆ, ಒಂದೇ ಪ್ರಕಣದಲ್ಲಿ ಹೀಗೆ ಮೇಲಿಂದ ಮೇಲೆ ಕೇಸ್ ದಾಖಲಾಗುತ್ತೆ ಅಂದರೆ ಅದು ನಿಜವೇ ಆಗಿರುತ್ತೆ ಅಂತಿದಾರೆ ಬಿಜೆಪಿಗರು.

ಏನಿದು ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ವಿರುದ್ಧದ ಅವ್ಯವಹಾರ ಆರೋಪ ಕಥೆ! ಮತ್ತೆ ಲೋಕಾಯುಕ್ತಕ್ಕೆ ದೂರು ಯಾಕೆ!
ದಾಖಲೆಗಳೊಂದಿಗೆ ದೂರುದಾರ ದಿನೇಶ್ ಹೊಸೂರು ಲೋಕಾಯುಕ್ತ ಕಚೇರಿಯಿಂದ ಹೊರಬರುತ್ತಿರುವುದು (ಒಳಚಿತ್ರ ಶಾಸಕ ರಾಜೇಗೌಡ)
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 01, 2022 | 5:48 PM

ಕಾಫಿನಾಡಿನ ಏಕೈಕ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತಕ್ಕೆ (Lokayukta) ದೂರು ದಾಖಲಾಗಿದೆ. ರಾಜೇಗೌಡ ವಿರುದ್ಧ ಅಕ್ರಮದ ಆರೋಪ ಹೊರಿಸಿ 12 ದಿನಗಳ ಹಿಂದಷ್ಟೆ ದೂರು ನೀಡಿದ್ದ ವ್ಯಕ್ತಿ ಅದ್ಯಾಕೋ ಐದೇ ದಿನಕ್ಕೆ ದೂರು ಹಿಂಪಡೆದಿದ್ದ. ಆದ್ರೀಗ, ಮತ್ತೆ ಅದೇ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಕೊಟ್ಟ ಒಂದು ದೂರನ್ನ ಹಿಂಪಡೆಯುತ್ತಿದ್ದಂತೆ ಅದೇ ಪ್ರಕರಣದಲ್ಲಿ ಮತ್ತೊಂದು ದೂರು ದಾಖಲಾಗಿರೋದನ್ನ ಕಂಡ್ರೆ ಕೈ ಶಾಸಕಗೆ ಸಂಕಷ್ಟ ಎದುರಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಹಾಗಾದ್ರೆ, ರಾಜೇಗೌಡರ (Sringeri Congress MLA TD Raju Gowda) ಕೊಟ್ಯಾಂತರ ರೂಪಾಯಿ ಅವ್ಯವಹಾರದ ಆರೋಪದ ಕಥೆ ಏನ್ ಗೊತ್ತಾ… ಈ ಸ್ಟೋರಿ ನೋಡಿ….

ಮನೆಯೊಂದು ಮೂರು ಬಾಗಿಲಾಗಿರೋ ಕಾಫಿನಾಡಿನ ಕಾಂಗ್ರೆಸ್‍ಗೆ ಪ್ರತಿ ಚುನಾವಣೆಯಲ್ಲೂ ಜಿಲ್ಲೆಯ ಒಂದೊಂದು ಕ್ಷೇತ್ರ ಗುಟುಕು ಜೀವ ನೀಡ್ತಾ ಶತಮಾನದ ಪಕ್ಷದ ಮರ್ಯಾದೆ ಉಳಿಸ್ತಿದೆ. ಒಮ್ಮೆ ಮೂಡಿಗೆರೆ, 2013ರಲ್ಲಿ ತರೀಕೆರೆ ಕಾಂಗ್ರೆಸ್ ಕೈ ಹಿಡಿದಿದ್ರೆ, 2018ರಲ್ಲಿ ಶೃಂಗೇರಿ ಕ್ಷೇತ್ರ ಕೈ ಪಡೆಯನ್ನು ಕಾಪಾಡಿತ್ತು. ಆದ್ರೀಗ, ಶೃಂಗೇರಿ ಶಾಸಕರ ಮೇಲೆ ಕೇಳಿ ಬಂದಿರೋ ಕೋಟ್ಯಾಂತರ ರೂಪಾಯಿಯ ಆರೋಪ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ (Chikmagalur News).

ಆಗಿರೋದು ಇಷ್ಟೆ. ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ, ಶಭಾನ ರಂಜಾನ್ ಟ್ರಸ್ಟ್ ಮೂಲಕ 123 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದು ಅದಕ್ಕೆ ಹಣ ಎಲ್ಲಿಂದ ಬಂತು ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿಜಯಾನಂದ ಎಂಬುವರು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಆದರೆ, ನಾಲ್ಕೈದು ದಿನಕ್ಕೆ ಕೇಸ್ ವಾಪಸ್ ಪಡೆದಿದ್ದರು. ಈಗ ಮತ್ತೆ ಏನಾಗಿದೆಯೆಂದರೆ, ಮತ್ತದೇ ಪ್ರಕರಣದಲ್ಲಿ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಮತ್ತದೇ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಎಂಬುವರು ಮತ್ತದೇ ದೂರು ದಾಖಲಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿನ ಈ ಕೊಟ್ಯಾಂತರ ರೂಪಾಯಿಯ ಆರೋಪ ಕಾಂಗ್ರೆಸ್‍ಗೆ ಮಗ್ಗಲ-ಮುಳ್ಳಾಗೋದಂತು ಗ್ಯಾರಂಟಿ ಅನ್ಸುತ್ತೆ.

ಮೊದಲಿಗೆ ದೂರು ನೀಡಿದ್ದ ವಿಜಯಾನಂದ ಐದೇ ದಿನಕ್ಕೆ ದೂರನ್ನ ಹಿಂಪಡೆದನೋ ಆಗಲೇ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮೂರು ತಾಲೂಕಿನಲ್ಲೂ ಶಾಸಕ ರಾಜೇಗೌಡ ಬಳಿ ದೂರುದಾರ ವಿಜಯಾನಂದ ಹಣ ಪಡೆದು ಕೇಸ್ ಹಿಂಪಡೆದರಂತೆ ಎಂಬ ದೊಡ್ಡ ಗುಲ್ಲು ಎದ್ದಿತ್ತು. ಅದು ಸತ್ಯವೋ…ಸುಳ್ಳೋ…. ಗೊತ್ತಿಲ್ಲ. ಆದರೆ, ದೂರು ದಾಖಲಾಗಿದ್ದಂತೂ ಸತ್ಯವಾಗಿತ್ತು. ಹಿಂಪಡೆದ ಕೂಡಲೇ ಅದು ಸುಳ್ಳಾಗುತ್ತದಾ? ಅಥವಾ ಮತ್ತಷ್ಟು ಗಟ್ಟಿ ಆಗುತ್ತದಾ?

ಈಗ ಆಗಿರೋದು ಅದೇ. ರಾಜೇಗೌಡರು ನೋಡಿದರೆ ಎಲ್ಲಾ ದಾಖಲೆ ಸರಿ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ ಅಂತಾರೆ. ಪಾರ್ಟನರ್​ಶಿಪ್ ಆ್ಯಕ್ಟ್​​ನಲ್ಲಿ ಖರೀದಿ ಮಾಡಿರೋದು, ಎಲ್ಲಾ ದಾಖಲೆ ಇದೆ ಅಂತಾರೆ. ಆದರೆ, ಒಂದೇ ಪ್ರಕಣದಲ್ಲಿ ಹೀಗೆ ಮೇಲಿಂದ ಮೇಲೆ ಕೇಸ್ ದಾಖಲಾಗುತ್ತೆ ಅಂದರೆ ಅದು ನಿಜವೇ ಆಗಿರುತ್ತೆ ಅಂತಿದಾರೆ ಬಿಜೆಪಿಗರು. ಆದ್ರೆ ಕೈ ಶಾಸಕ, ನಾನೇನೂ ಅವ್ಯವಹಾರ ನಡೆಸಿಲ್ಲ, ಯಾರಿಗೆ ಬೇಕಾದರೂ ದೂರು ನೀಡಲಿ ಅಂತಿದ್ದಾರೆ.

ಮೊನ್ನೆ ಕೊಪ್ಪದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ರಾಜೇಗೌಡ ವಿರುದ್ಧ ತನಿಖೆ ನಡೆಸಬೇಕು ಅಂತಾ ಬಿಜೆಪಿ ಘಟಕ ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿತು. ಹಾಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ರಾಜೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬೆಳವಣಿಗೆಗಳ ಮಧ್ಯೆಯೇ ಸದ್ಯ ರಾಜೇಗೌಡರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಒಟ್ಟಾರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಅತ್ತ ಬಿಜೆಪಿ ರಾಜಕೀಯ ಅಖಾಡಕ್ಕೆ ಸರಿಯಾಗಿಯೇ ಧುಮುಕಿದಂತಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಪಂಚಪಾಂಡವರಿದ್ದೇವೆ. ಎಲ್ಲರೂ ಗೆಲ್ಲುತ್ತೇವೆ ಅಂತಿದ್ದಾರೆ. ಈ ಮಧ್ಯೆ, ಈ ರೀತಿಯ ಕೋಟ್ಯಾಂತರ ರೂಪಾಯಿ ಅವ್ಯವಹಾರದ ಆರೋಪ ಕಾಂಗ್ರೆಸ್‍ಗೆ ಮುಳ್ಳೋಗುತ್ತೇನೋ ಎಂಬ ಆತಂಕ ಪಕ್ಷದ್ದಾಗಿದೆ. ಆದ್ರೆ, ವಿಜಯಾನಂದ ದೂರು ನೀಡಿದ ಕೂಡಲೇ ಅದೇ ಸತ್ಯವಲ್ಲ. ಹಿಂಪಡೆದ ಕೂಡಲೇ ಆರೋಪ ಸುಳ್ಳಾಗಲಿಲ್ಲ. ಈಗ ಅದೇ ಪ್ರಕರಣದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಅಧಿಕಾರಿಗಳ ನಿಷ್ಪಕ್ಷಪಾತ ತನಿಖೆಯಿಂದ ಶಾಸಕ ರಾಜೇಗೌಡ ವಿರುದ್ಧ ದಾಖಲಾಗಿರೋ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾಗಿದೆ. (ವರದಿ: ಪ್ರಶಾಂತ್, ಟಿವಿ 9, ಚಿಕ್ಕಮಗಳೂರು)