ಮೇವಿಲ್ಲದೇ ಪರದಾಡುತ್ತಿರುವ ಜಾನುವಾರುಗಳು, ನೆರೆ ರಾಜ್ಯ ಆಂಧ್ರ ಪ್ರದೇಶದ ಮೊರೆ ಹೋದ ಚಿತ್ರದುರ್ಗ ರೈತರು

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗದ ರೈತರು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಮೇವು ಖರೀದಿಸುತ್ತಿದ್ದಾರೆ. ಅನಂತಪುರದಲ್ಲಿ ಹೆಚ್ಚಿನ ಜಮೀನಿನಲ್ಲಿ ಭತ್ತ ಬೆಳೆಯಲಾಗುತ್ತದೆ.

ಮೇವಿಲ್ಲದೇ ಪರದಾಡುತ್ತಿರುವ ಜಾನುವಾರುಗಳು, ನೆರೆ ರಾಜ್ಯ ಆಂಧ್ರ ಪ್ರದೇಶದ ಮೊರೆ ಹೋದ ಚಿತ್ರದುರ್ಗ ರೈತರು
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Oct 09, 2023 | 11:16 AM

ಚಿತ್ರದುರ್ಗ, ಅ.09: ರಾಜ್ಯದ ಮೇಲೆ ವರುಣರಾಯ ಮುನಿಸಿಕೊಂಡಿದ್ದಾನೆ (Karnataka Rains). ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ (Drought) ಪರಿಸ್ಥಿತಿ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೇವು ಮತ್ತು ನೀರಿನ ತೀವ್ರ ಕೊರತೆ ಉಂಟಾಗಿದ್ದು ಬರ ಪರಿಸ್ಥಿತಿಯಿಂದಾಗಿ ಮನುಷ್ಯರಷ್ಟೇ ಅಲ್ಲದೆ, ಹಸು, ಕುರಿ, ಮೇಕೆಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ಮಾತನಾಡಿ, ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಹರಿಸಲು ಯಾವುದೇ ಹಣಕಾಸಿನ ಕೊರತೆ ಇಲ್ಲ. ಜಾನುವಾರುಗಳನ್ನು ರಕ್ಷಿಸಲು ಗೋಶಾಲೆಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗದ ರೈತರು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಮೇವು ಖರೀದಿಸುತ್ತಿದ್ದಾರೆ. ಅನಂತಪುರದಲ್ಲಿ ಹೆಚ್ಚಿನ ಜಮೀನಿನಲ್ಲಿ ಭತ್ತ ಬೆಳೆಯಲಾಗುತ್ತದೆ.

ರಂಗಯ್ಯನದುರ್ಗ ಅಣೆಕಟ್ಟು ತುಂಬಿ ತುಳುಕುತ್ತಿದ್ದು, ಪೆರ್ಲಗುಡ್ಡದ ಗೊರ್ಲಮಾರೆ, ಬೋಡಿಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ನಮ್ಮ ಭಾಗದ ರೈತರಿಗೆ ಅದು ಉಪಯೋಗವಾಗುತ್ತಿಲ್ಲ. ಆಂಧ್ರಪ್ರದೇಶಕ್ಕೆ ನೀರು ಹರಿದು ಬರುತ್ತಿದ್ದು, ಅಲ್ಲಿನ ರೈತರಿಗೆ ಭತ್ತ ಹಾಗೂ ಶೇಂಗಾ ಬೆಳೆ ಬೆಳೆಯಲು ಅವಕಾಶ ಹೆಚ್ಚಿದೆ. ಆದರೆ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲೂಕಿನಲ್ಲಿ ಸಾಮಾನ್ಯ ವರ್ಷದಲ್ಲಿ ಯಥೇಚ್ಛವಾಗಿ ಮೇವು ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಈಗ ಆಂಧ್ರಪ್ರದೇಶದಿಂದ ಮೇವು ಖರೀದಿಸಲು ದೊಡ್ಡ ಮೊತ್ತದ ಹಣ ತೆತ್ತಿದ್ದಾರೆ. ಟ್ರ್ಯಾಕ್ಟರ್ ಗೆ 3ರಿಂದ 4 ಸಾವಿರ ರೂ.ಗೆ ಸಿಗುತ್ತಿದ್ದ ಭತ್ತದ ಹುಲ್ಲು ಈಗ 5ರಿಂದ 6 ಸಾವಿರ ರೂ.ಗೆ ಮಾರಾಟವಾಗುತ್ತಿದೆ. 10ರಿಂದ 12 ಸಾವಿರ ರೂ.ಗೆ ಮಾರಾಟವಾಗುತ್ತಿದ್ದ ಶೇಂಗಾ ಹೊಟ್ಟು ಈಗ 20-25 ಸಾವಿರ ರೂ. ಆಗಿದೆ. ಹೀಗಾಗಿ ಹೆಚ್ಚಿನ ಹಣ ನೀಡಿ ಜಾನುವಾರುಗಳಿಗೆ ಮೇವು ಹಾಕುವ ಸ್ಥಿತಿ ನಮ್ಮ ಜಿಲ್ಲೆಯ ರೈತರಿಗೆ ಬಂದಿದೆ.

ಇದನ್ನೂ ಓದಿ: ಮಳೆಗಾಲ ಕೊನೆಗೊಂಡರೂ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ಧಾರಾಕಾರ ಮಳೆ!

ಇನ್ನು ಈ ಸಂಕಷ್ಟದ ಬಗ್ಗೆ ಬಿಜಿ ಕೆರೆಯ ರೈತ ಚಿನ್ನ ಓಬಯ್ಯ ಮಾತನಾಡಿ, ಜಿಲ್ಲಾಡಳಿತ ರೈತರಿಗೆ ಮೇವಿನ ಕಿಟ್ ವಿತರಿಸಿ ಮೇವು ಬೆಳೆಯಬೇಕು. ನಿಂತ ನೀರಿಲ್ಲ, ಆದರೆ ಮೇವು ಬೆಳೆಯಲು ಸಾಕಷ್ಟು ತೇವಾಂಶವಿರುವಲ್ಲಿ ಮೇವು ಬೆಳೆಯಲು MGNREGA ಕಾರ್ಯಕರ್ತರನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ದೊಡ್ಡಉಳ್ಳಾರ್ತಿ ಕರಿಯಣ್ಣ ಮಾತನಾಡಿ, ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ಸರ್ಕಾರದ ತಂಡ ಬರಗಾಲದ ಬಗ್ಗೆ ಪರಿಶೀಲನೆ ನಡೆಸಲು ಚಳ್ಳಕೆರೆ ಮತ್ತು ಮೊಳಕಾಲ್ಮೂರಿನ ತೀವ್ರ ಪೀಡಿತ ಪ್ರದೇಶಗಳಿಗೆ ಹೋಗಬೇಕಿತ್ತು. “ನನ್ನ 10 ಮೇಕೆಗಳನ್ನು ನಾನು ಈಗಾಗಲೇ ಮಾರಾಟ ಮಾಡಿದ್ದೇನೆ. ಏಕೆಂದರೆ ನನಗೆ ಅವುಗಳನ್ನು ಸಾಕಲು ಆಗುತ್ತಿಲ್ಲ ಎಂದರು.

ನೆರೆಯ ರಾಜ್ಯಗಳಿಗೆ ಮೇವು ಮಾರಾಟ ಮತ್ತು ಸಾಗಣೆ ನಿಷೇಧ

ಈ ಬಾರಿ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಚಟುವಟಿಕೆಗಳು ಕುಂಠಿತವಾಗಿರುವುದರಿಂದ ನೆರೆಯ ರಾಜ್ಯಗಳಿಗೆ ಮೇವು ಮಾರಾಟ ಮತ್ತು ಸಾಗಣೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೇವು ಬೇರೆ ರಾಜ್ಯಗಳಿಗೆ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಜಾನುವಾರುಗಳಿಗೆ ಮೇವು ಬೆಳೆಯಲು ರೈತರಿಗೆ ಉಚಿತವಾಗಿ ಬೀಜಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರದುರ್ಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:10 am, Mon, 9 October 23