ಚಿತ್ರದುರ್ಗ: ಹೋಮ್ ಲಿಫ್ಟಿಂಗ್ ಕಾಮಗಾರಿ; ತಗ್ಗಿನಲ್ಲಿದ್ದ ಮನೆ ಮೇಲೆತ್ತಲು 4.5 ಲಕ್ಷ ರೂ. ಗುತ್ತಿಗೆ ನೀಡಿದ ದಂಪತಿ
ಇಡೀ ಮನೆಯ ಕಟ್ಟಡದ ಗೋಡೆಗಳನ್ನು ಕೊರೆದು ಎಲ್ಲೆಡೆ ಜಾಕ್ವೆಲ್ಗಳನ್ನು ಅಳವಡಿಸಿದೆ. ಇನ್ನು ಸುಮಾರು ನಾಲ್ಕೂವರೆ ಅಡಿ ಎತ್ತರಗೊಳಿಸಿ ಗೋಡೆ ಪ್ಯಾಕ್ ಮಾಡುವ ಯೋಜನೆ ರೂಪುಗೊಂಡಿದೆ. ಮನೆಯನ್ನು ಯಥಾಸ್ಥಿತಿ ಉಳಿಸಿಕೊಂಡು ಎತ್ತರಗೊಳಿಸುವ ಯೋಜನೆ ಈ ಭಾಗದ ಜನರನ್ನು ಸದ್ಯ ಅಚ್ಚರಿಗೊಳಿಸಿದೆ.
ಚಿತ್ರದುರ್ಗ: ರಸ್ತೆಗಳು ಅಭಿವೃದ್ಧಿಯಾದಂತೆ ಇದರ ಪಕ್ಕದಲ್ಲಿನ ಮನೆಗಳು ಒತ್ತುವರಿಯಾಗುವುದು ಅಥವಾ ರಸ್ತೆ ಅಗಲೀಕರಣದ ನೆಪದಲ್ಲಿ ಮನೆಗಳನ್ನು ಖಾಲಿ ಮಾಡಿಸುವುದರ ಬಗ್ಗೆ ನಾವು ಈಗಾಗಲೇ ಓದಿರುತ್ತೇವೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಅಭಿವೃದ್ಧಿಯಾದ ರಸ್ತೆಗಳು ಎತ್ತರವಾಗಿದ್ದು, ಅಲ್ಲಿಯೇ ಪಕ್ಕದಲ್ಲಿನ ಮನೆಗಳು ತಗ್ಗು ಪ್ರದೇಶದಂತಾಗಿವೆ. ಪರಿಣಾಮ ಮಳೆಗಾಲದಲ್ಲಿ ಜಲಾವೃತಗೊಂಡು ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ತಗ್ಗಾದ ಮನೆಗಳನ್ನು ಮೇಲೆತ್ತುವ ಟೆಕ್ನಾಲಜಿಯನ್ನು ಬಳಸಿಕೊಂಡ ಜಿಲ್ಲೆಯ ಮನೆ ಮಾಲೀಕರೊಬ್ಬರು, ಹೋಮ್ ಲಿಫ್ಟಿಂಗ್ ನಡೆಸುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ಮಾಳಪ್ಪನಹಟ್ಟಿ ಗ್ರಾಮದ ಶಿಕ್ಷಕಿ ಶೃತಿ ಮತ್ತು ವ್ಯಾಪಾರಿ ಶಾಂತಕುಮಾರ್ ದಂಪತಿ ಮೂರ್ನಾಲ್ಕು ವರ್ಷಗಳ ಹಿಂದಷ್ಟೇ ಈ ಮನೆ ಖರೀದಿಸಿದ್ದರು. ಆದರೆ, ರಸ್ತೆ ಅಭಿವೃದ್ಧಿ ಪಡಿಸಿದಾಗ ಈ ಕಟ್ಟಡ ತಗ್ಗು ಪ್ರದೇಶದಂತಾಗಿದ್ದು, ಮಳೆ ಬಂದರೆ ಜಲಾವೃತಗೊಳ್ಳುತ್ತದೆ. ವಾಹನಗಳನ್ನು ಕಾಂಪೌಂಡ್ ಒಳಕ್ಕೆ ತರಲು ಹೆಣಗಾಡಬೇಕು. ಮನೆ ಕೂಡ ಪೂರ್ಣ ಹಾಳಾಗಿದೆ. ಹೀಗಾಗಿ, ಚಿಂತೆಗೀಡಾಗಿದ್ದ ಶೃತಿ ಯುಟೂಬ್ ವೀಕ್ಷಿಸುವ ವೇಳೆ ಹೋಮ್ ಲಿಫ್ಟಿಂಗ್ ಮಾಹಿತಿ ಸಿಕ್ಕಿದೆ. ಹೀಗಾಗಿ, ಕುಟುಂಬದ ಜತೆ ಚರ್ಚಿಸಿ ತಗ್ಗು ಪ್ರದೇಶದಂತಾದ ಮನೆಯನ್ನು ಮೇಲೆತ್ತುವ ಬಗ್ಗೆ ಯೋಜನೆ ಮಾಡಿದ್ದಾರೆ.
ಹರಿಯಾಣ ಮೂಲದ ಖಾಸಗಿ ಕಂಪನಿ (ಎಸ್ ಅಂಡ್ ಎಸ್ ಸಂಸ್ಥೆ) ಸಂಪರ್ಕಿಸಿ ಸುಮಾರು ಮೂರುವರೆ ಲಕ್ಷ ರೂಪಾಯಿಗೆ ಹೋಮ್ ಲಿಫ್ಟ್ ಗುತ್ತಿಗೆ ನೀಡಿದ್ದೇವೆ. ಒಟ್ಟು ನಾಲ್ಕೂವರೆ ಲಕ್ಷ ಇದಕ್ಕೆ ಖರ್ಚು ಬರಲಿದೆ ಎಂದು ಮನೆ ಮಾಲೀಕರಾದ ಶೃತಿ ತಿಳಿಸಿದ್ದಾರೆ.
ಹರಿಯಾಣ ಮೂಲದ ಖಾಸಗಿ (ಎಸ್ ಅಂಡ್ ಎಸ್ ಬಿಲ್ಡಿಂಗ್ ಲಿಫ್ಟಿಂಗ್ ಅಂಡ್ ಶಿಫ್ಟಿಂಗ್ ಕನ್ಸ್ಟ್ರಕ್ಷನ್ ಕಂಪನಿ) ಕನ್ಸ್ಟ್ರಕ್ಷನ್ ಕಂಪನಿ ಹೋಂ ಲಿಫ್ಟ್ ಕಾರ್ಯದಲ್ಲಿ ತೊಡಗಿದೆ. ಇಡೀ ಮನೆಯ ಕಟ್ಟಡದ ಗೋಡೆಗಳನ್ನು ಕೊರೆದು ಎಲ್ಲೆಡೆ ಜಾಕ್ವೆಲ್ಗಳನ್ನು ಅಳವಡಿಸಿದೆ. ಇನ್ನು ಸುಮಾರು ನಾಲ್ಕೂವರೆ ಅಡಿ ಎತ್ತರಗೊಳಿಸಿ ಗೋಡೆ ಪ್ಯಾಕ್ ಮಾಡುವ ಯೋಜನೆ ರೂಪುಗೊಂಡಿದೆ. ಮನೆಯನ್ನು ಯಥಾಸ್ಥಿತಿ ಉಳಿಸಿಕೊಂಡು ಎತ್ತರಗೊಳಿಸುವ ಯೋಜನೆ ಈ ಭಾಗದ ಜನರನ್ನು ಸದ್ಯ ಅಚ್ಚರಿಗೊಳಿಸಿದೆ.
ಹದಿನೈದು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಸಮತಟ್ಟನ್ನು ನೋಡಿ ಬಿಲ್ಡಿಂಗ್ ಲಿಫ್ಟ್ ಮಾಡುತ್ತೇವೆ. ಮೊದಲಿನ ಕಟ್ಟಡದಂತೆಯೇ ಬಿಲ್ಡಿಂಗ್ ಇರಲಿದ್ದು, ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಜಾಕ್ವೆಲ್ ಮತ್ತು ಮ್ಯಾನ್ ಪವರ್ ಮೂಲಕವೇ ಹೋಂ ಲಿಪ್ಟ್ ನಡೆಯಲಿದೆ. ಕಟ್ಟಡದ ಗಾತ್ರದ ಮೇಲೆ ನಾವು ದರ ಫಿಕ್ಸ್ ಮಾಡುತ್ತೇವೆ. ಕರ್ನಾಟಕದಲ್ಲಿ ಇದೇ ಮೊದಲ ಸಲ ಹೋಂ ಲಿಫ್ಟ್ ಕೆಲಸ ಮಾಡುತ್ತಿದ್ದೇವೆ ಎಂದು ಕನ್ಸ್ಟ್ರಕ್ಷನ್ ಕಂಪನಿ ಮುಖ್ಯಸ್ಥ ರೋಹಿತ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಹಳೇ ಮನೆ ಯಥಾಸ್ಥಿತಿ ಉಳಿಸಿಕೊಂಡು ಮೇಲೆತ್ತುವ ವಿಭಿನ್ನ ಕೆಲಸ ನಡೆಯುತ್ತಿದೆ. ಈ ವಿಶಿಷ್ಟ ಕಾಮಗಾರಿ ನೋಡಲು ಅನೇಕ ಜನರು ಈ ಗ್ರಾಮದತ್ತ ಬರುತ್ತಿದ್ದಾರೆ. ಹೀಗಾಗಿ, ಮಾಳಪ್ಪನಹಟ್ಟಿ ಈಗ ಜನ ಆಕರ್ಷಕ ಗ್ರಾಮವಾಗಿದೆ.
ವರದಿ: ಬಸವರಾಜ ಮುದನೂರ್
ಇದನ್ನೂ ಓದಿ: ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ ಸಿಎಂ ಯಡಿಯೂರಪ್ಪ; 1800 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ