ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈವರೆಗೆ ಮೃತರ ಗುರುತು ಪತ್ತೆ ಆಗಿಲ್ಲ. ಸದ್ಯ ಹಿರಿಯೂರು ಪಿಐ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಿತ್ರದುರ್ಗ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್‌ಗೇಟ್ ಬಳಿ ನಡೆದಿದೆ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಮೂಲದ ರಮೇಶ್(55), ವಿಶ್ವನಾಥ್(65), ಸೀಮಾ(45) ಮೃತರು. ಸದ್ಯ ಹಿರಿಯೂರು ಪಿಐ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಾವಿಯಿಂದ ಬೆಂಗಳೂರಿಗೆ ತೆರಳುವ ವೇಳೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಗುಯಿಲಾಳ್ ಟೋಲ್ ನಲ್ಲಿ ಘಟನೆ ನಡೆದಿದೆ.
ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು ಶಿವಮೊಗ್ಗ: ಹಾವು (snake) ತಪ್ಪಿಸಲು ಹೋಗಿ ಕಾರೊಂದು ತುಂಗಾ ನಾಲೆಗೆ ಬಿದ್ದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ನಡೆದಿದೆ. ಖೇದಕರ ಸಂಗತಿಯೆಂದರೆ ಈ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿಯ ಪೈಕಿ ಪತ್ನಿ ಸುಷ್ಮಾ (28) ಸಾವನ್ನಪ್ಪಿದ್ದು, ಕಾರ್ ಚಲಾಯಿಸುತ್ತಿದ್ದ ಪತಿ ಚೇತನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತುಂಗಾ ಚಾನಲ್ ಗೆ ಬಿದ್ದು ಒಂದು ಘಂಟೆ ಬಳಿಕ ಸ್ಥಳೀಯರ ಸಹಾಯದಿಂದ ಪತಿ ಚೇತನ್ ನೀರಿಂದ ಹೊರಬಂದಿದ್ದಾರೆ. ಈ ನಡುವೆ ಕಾರು ನೀರಿನಲ್ಲಿ ಮುಳುಗಿದ ಹಿನ್ನೆಲೆ ಪತ್ನಿ ಸ್ಥಳದಲ್ಲೇ ಜಲಸಮಾಧಿಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ತುಮಕೂರಿಗೆ ತೆರಳುವ ವೇಳೆ ಇಂದು ಗುರುವಾರ ಬೆಳಗಿನ ಜಾವ ದುರ್ಘಟನೆ ನಡೆದಿದೆ. ಸುಷ್ಮಾ ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಕೆಲಸ ಮಾಡುತ್ತಿದ್ದರು.
ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದರಹಳ್ಳಿಯಲ್ಲಿ ತಾಯಿಯೊಬ್ಬರು ಮಗಳ ಜೊತೆ ತಮ್ಮ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾ(32) ಮತ್ತು ತನ್ವಿ(4) ಸಾವಿಗೀಡಾದವರು. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಎರಡೂ ಮೃತದೇಹ ಹೊರತೆಗೆದಿದ್ದಾರೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಶಂಕೆ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ಮರ ಕಳ್ಳತನವನ್ನು ಭೇದಿಸಿದ ಮಹಿಳಾ ಅಧಿಕಾರಿ ವರ್ಗಾವಣೆ: ಶಾಸಕ ಹರೀಶ್ ಪೂಂಜಾ ಪತ್ರಕ್ಕೆ ಸ್ಪಂದಿಸಿದ ಕರ್ನಾಟಕ ಸರ್ಕಾರ
Published On - 12:23 pm, Thu, 3 February 22