ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ನ ಒಂದು ವಿಕೆಟ್ ಪತನ: ಪಕ್ಷದಿಂದ ಕೃಪಾ ಆಳ್ವಾ ಉಚ್ಛಾಟನೆ
ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿದ್ದ ಸ್ಟಿಂಗ್ ಆಪರೇಷನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಪಕ್ಷದವರೇ ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಷನ್ನಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದರ ಮಧ್ಯೆ ಇದೀಗ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇದರೊಂದಿಗೆ ಪ್ರಕರಣ ಸಂಬಂಧ ಕಾಂಗ್ರೆಸ್ನ ಮೊದಲ ವಿಕೆಟ್ ಪತನವಾದಂತಾಗಿದೆ.

ಬೆಂಗಳೂರು, (ಅಕ್ಟೋಬರ್ 30): ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಇದೊಂದು ಕಟ್ಟು ಕಥೆ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗಳು ನಡೆಯುತ್ತಿವೆ. ಸ್ಟಿಂಗ್ ತಂಡ ಬ್ಲ್ಯಾಕ್ ಮೇಲ್ ಏನಾದ್ರೂ ಮಾಡಿದ್ಯಾ ಎನ್ನುವ ಅನುಮಾನುಗಳು ವ್ಯಕ್ತವಾಗಿದ್ದು, ಇದರಿಂದ ದೂರುದಾರ ಸಿದ್ದರಾಮಯ್ಯನವರ ಹೇಳಿಕೆ ಪಡೆಯಲು ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೃಪಾ ಆಳ್ವಾರನ್ನ ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಲಾಗಿದೆ. ಸ್ಟಿಂಗ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ 6 ವರ್ಷಗಳ ಕಾಲ ಕೃಪಾ ಆಳ್ವಾ ಅವರನ್ನ ಉಚ್ಚಾಟಿಸಲಾಗಿದೆ.
ಈ ಸ್ಟಿಂಗ್ ಆಪರೇಷನ್ ಹಿಂದೆ ಸ್ವಪಕ್ಷದವರ ಕೈವಾಡವಿದೆ ಎಂದು ಸ್ವತಃ ದೂರುದಾರ ಸಿದ್ದರಾಮಯ್ಯನವರ ಪುತ್ರ ಸಚಿವ ಯತೀಂದ್ರ ಅವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ಸ್ವತಃ ಸಿದ್ದರಾಮಯ್ಯನವರೇ ಕೃಪಾ ಆಳ್ವಾ ಅವರ ಹೆಸರನ್ನು ಹೇಳಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪ್ರಕರಣ ಸಂಬಂಧ ಮಹತ್ವದ ಚರ್ಚೆ ಮಾಡಿದ್ದರು. ಇದಾದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೂಚನೆ ಮೇರೆಗೆ ಕೃಪಾ ಆಳ್ವಾರನ್ನು ಅಮಾನತು ಮಾಡಲಾಗಿದೆ.
ಇದನ್ನೂ ನೋಡಿ: ಸ್ಟಿಂಗ್ ಆಪರೇಷನ್ ಕೇಸಿಗೆ ಮತ್ತೊಂದು ಸ್ಫೋಟಕ ತಿರುವು: ಕುತೂಹಲ ಮೂಡಿಸಿದ ಸಿಸಿಬಿ ನಡೆ
ಉಚ್ಛಾಟನೆ ಆದೇಶದಲ್ಲೇನಿದೆ?
ಸ್ಟಿಂಗ್ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಕಾರಣ ಪ್ರಕರಣದಲ್ಲಿ ನಿಮ್ಮ ನಡವಳಿಕೆ ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಪ್ರಕರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿದೆ. ಈ ಘಟನೆಯಲ್ಲಿ ತಾವು ಭಾಗಿಯಾಗಿದ್ದಾರೆಂಬ ಆರೋಪವಿದೆ. ಈ ಹಿನ್ನೆಲೆ ಕಾರಣ ಕೇಳಿ ಕೆಪಿಸಿಸಿಯಿಂದ ನೋಟೀಸ್ ನೀಡಲಾಗಿತ್ತು. ಆದ್ರೆ,ತಾವು ಇದುವರೆಗೂ ನೋಟಿಸ್ಗೆ ಉತ್ತರಿಸಿಲ್ಲ. ಹೀಗಾಗಿ ತಮ್ಮನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಆದೇಶ ಉಲ್ಲೇಖಿಸಲಾಗಿದೆ.
ವಿಚಾರಣೆಗೆ ಹಾಜರಾದ ಬಳಿಕ ವಿದೇಶಕ್ಕೆ ಪರಾರಿ?
ದೂರುದಾರ ಸಿದ್ದರಾಮಯ್ಯನವರು ಕೃಪಾ ಆಳ್ವಾ ಹೆಸರು ಬಹಿರಂಗವಾಗಿ ಹೇಳಿದ್ದು, ಇದರ ಬೆನ್ನಲ್ಲೇ ಕೃಪಾ ಆಳ್ವಾ ಅಕ್ಟೋಬರ್ 24ರಂದು ಬೆಂಗಳೂರಿನ ಕೇಂದ್ರ ಸೈಬರ್ ಅಪರಾಧ ವಿಭಾಗದ ಪೊಲೀಸರ ಎದುರು ಅವರು ವಿಚಾರಣೆ ಹಾಜರಾಗಿದ್ದರು. ಆದ್ರೆ, ಇದೀಗ ಅವರು ವಿದೇಶಕ್ಕೆ ಹಾರಿದ್ದಾರೆ ಎಂದು ತಿಳಿದುಬಂದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಟ್ಟಿದೆ.
ಮೊದಲ ವಿಕೆಟ್ ಪತನ
ಇನ್ನು ಈ ಸ್ಟಿಂಗ್ ಆಪರೇಷನ್ ಹಿಂದೆ ಸ್ವಪಕ್ಷದವರ ಕೈವಾಡವಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಬಹಿರಂಗವಾಗಿಯೇ ಹೇಳಿದ್ದರು. ಇದು ಕಾಂಗ್ರೆಸ್ನಲ್ಲಿ ಬಾರೀ ಸಂಚಲನ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ಯಾರೆಂದು ತನಿಖೆಯಲ್ಲಿ ಗೊತ್ತಾದರೆ ಅವರ ವಿರುದ್ಧ ಕ್ರಮಕೈಗೊಳ್ಳವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಕೃಪಾ ಆಳ್ವಾ ರೂಪದಲ್ಲಿ ಒಂದು ವಿಕೆಟ್ ಪತನವಾದಂತಾಗಿದೆ.




