ದಾವಣಗೆರೆಯಲ್ಲಿ ಗಣೇಶೋತ್ಸವಕ್ಕೆ ಖಡಕ್ ರೂಲ್ಸ್: ಮೆರವಣಿಗೆಯಲ್ಲಿ ಡಿಜೆ ಸಂಪೂರ್ಣ ಬ್ಯಾನ್; 17 ರೌಡಿಗಳ ಗಡಿಪಾರಿಗೆ ಪ್ರಸ್ತಾವನೆ
ದಾವಣಗೆರೆ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ 17 ಜನರನ್ನು ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ರೌಡಿಶೀಟರ್‌ಗಳ ಮೇಲೆ ನಿರಂತರ ನಿಗಾ ಇಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಗಾವಲು ಇರಿಸಲಾಗಿದೆ. ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಎಸ್ಪಿ ಎಚ್ಚರಿಸಿದ್ದಾರೆ.

ದಾವಣಗೆರೆ, ಸೆ.11: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆ ಕಾಪಾಡಲು ದಾವಣಗೆರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಸೌಹಾರ್ದ ಸಭೆಯಲ್ಲಿ ಗಣೇಶ ಮೆರವಣಿಗೆಯಲ್ಲಿ ಡಿಜೆ (DJ) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಲಾಗಿದೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ 17 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಸೌಹಾರ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು, ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. “ಡಿಜೆಯಿಂದಾಗಿ ವಯೋವೃದ್ಧರು, ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದಿವೆ. ನಮ್ಮ ನಾಡಿನ ಸಂಸ್ಕೃತಿ ಮತ್ತು ಜಾನಪದ ಕಲಾ ತಂಡಗಳನ್ನು ಬೆಳೆಸಬೇಕಿದೆ. ಶಿವಮೊಗ್ಗ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಡಿಜೆ ಬ್ಯಾನ್ ಮಾಡಲಾಗಿದೆ,” ಎಂದು ತಿಳಿಸಿದರು. ಹೊರ ಜಿಲ್ಲೆಗಳಿಂದ ಬರುವ ಡಿಜೆ ಸಿಸ್ಟಮ್‌ಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದ್ದು, ಸ್ಥಳೀಯವಾಗಿ ಅನುಮತಿಸಬೇಕಾದ ಸೌಂಡ್ ಸಿಸ್ಟಮ್ ಹಾಗೂ ಸ್ಪೀಕರ್ ಬಾಕ್ಸ್‌ಗಳ ಸಂಖ್ಯೆಯನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಶೀಘ್ರವೇ ನಿರ್ಧರಿಸಲಿದೆ.
17 ಜನರ ಗಡಿಪಾರಿಗೆ ಪ್ರಸ್ತಾವನೆ: ಎಸ್ಪಿ ಡಾ. ಹೆಚ್.ಟಿ. ಶೇಖರ್ ಖಡಕ್ ಎಚ್ಚರಿಕೆ:
ಸಭೆಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಹೆಚ್.ಟಿ. ಶೇಖರ್ ಅವರು, ಜಿಲ್ಲೆಯಲ್ಲಿ ಹಬ್ಬದ ನೆಪದಲ್ಲಿ ಹದ್ದುಮೀರಿ ವರ್ತಿಸುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಶಾಂತಿ ಭಂಗ ಉಂಟುಮಾಡುವ 17 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ 9 ಜನರನ್ನು ಗಡಿಪಾರು ಮಾಡಲಾಗಿದೆ. ಉಳಿದವರ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 471 ರೌಡಿಶೀಟರ್‌ಗಳಿದ್ದು, ಅವರಲ್ಲಿ 105 ಜನ ಕೋಮುಸೌಹಾರ್ದತೆ ಕೆಡಿಸುವ ಹಿನ್ನೆಲೆ ಹೊಂದಿದ್ದಾರೆ. ಇವರೆಲ್ಲರ ಮೇಲೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರ ನಿಗಾ ಇಡಲಾಗಿದೆ. ಪ್ರತಿಯೊಂದು ಠಾಣೆಯಲ್ಲೂ ಸೋಷಿಯಲ್ ಮೀಡಿಯಾ ಕಣ್ಗಾವಲು ಘಟಕ ಸ್ಥಾಪಿಸಲಾಗಿದ್ದು, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಅಥವಾ ಭದ್ರತೆಗೆ ಧಕ್ಕೆ ತರುವ ಸಂದೇಶ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ: ರಾಜ್ಯದಲ್ಲಿ ‘ಸೂಪರ್ ಎಲ್ ನಿನೊ’ ಎಫೆಕ್ಟ್: ಮಳೆಗಾಲದಲ್ಲೂ 37°C ಬಿಸಿಲು; ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಹೈ ಅಲರ್ಟ್
ಮೆರವಣಿಗೆಯ ಭದ್ರತೆಗಾಗಿ 1.5 ಕಿಲೋಮೀಟರ್ ವ್ಯಾಪ್ತಿಯ ದೃಶ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿಯುವ 4 ಹೈ-ಟೆಕ್ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. “ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಯವರು ಶಾಂತಿಯುತವಾಗಿ ಹಬ್ಬ ಆಚರಿಸಲು ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಕಾನೂನು ಕೈಗೆತ್ತಿಕೊಂಡರೆ ಪೊಲೀಸ್ ಇಲಾಖೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ,” ಎಂದು ಎಸ್ಪಿ ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Fri, 11 September 26




