ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡ ಕಮಲ್ ಸಿನಿಮಾಕ್ಕೆ ಸೀಕ್ವೆಲ್
ಕಮಲ್ ಹಾಸನ್ ನಟಿಸಿ ಎಸ್ ಶಂಕರ್ ನಿರ್ದೇಶಿಸಿದ್ದ ‘ಇಂಡಿಯನ್’ ಸಿನಿಮಾ 1996 ರಲ್ಲಿ ಬಿಡುಗಡೆ ಆಗಿ ದೊಡ್ಡ ಬ್ಲಾಕ್ ಬಸ್ಟರ್ ಆಗಿತ್ತು. ಆ ಸಿನಿಮಾದ ಸೀಕ್ವೆಲ್ ಆಗಿ ‘ಇಂಡಿಯನ್ 2’ ಸಿನಿಮಾವನ್ನು 2024ರಲ್ಲಿ ಬಿಡುಗಡೆ ಮಾಡಲಾಯ್ತು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿತು. ವಿಮರ್ಶಕರಿಂದ ತೀವ್ರ ಟೀಕೆಗೆ ಒಳಗಾಯ್ತು. ಆದರೆ ಈಗ ಅದೇ ಸಿನಿಮಾದ ಮತ್ತೊಂದು ಸೀಕ್ವೆಲ್ ಅಂದರೆ ‘ಇಂಡಿಯನ್ 3’ ಸಹ ಬರಲಿದೆ.

ಮುಖ್ಯಾಂಶಗಳು
- 1996 ರಲ್ಲಿ ಬಿಡುಗಡೆ ಆಗಿದ್ದ ‘ಇಂಡಿಯನ್’ ಸಿನಿಮಾ
- 2024ರಲ್ಲಿ ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗಿತ್ತು
- ಇದೀಗ ‘ಇಂಡಿಯನ್ 3’ ಸಿನಿಮಾ ಸಹ ಬರಲಿದೆಯಂತೆ
ಇತ್ತೀಚೆಗೆ ಸೀಕ್ವೆಲ್ ಟ್ರೆಂಡ್ ಹೆಚ್ಚಾಗಿದೆ. ‘ಬಾಹುಬಲಿ’ ಸಿನಿಮಾದಿಂದ ಶುರುವಾದ ಈ ಟ್ರೆಂಡ್ ಅನ್ನು ‘ಕೆಜಿಎಫ್’ (KGF) ಜನಪ್ರಿಯಗೊಳಿಸಿತು. ತೀರಾ ಸಾಧಾರಣ ಸಿನಿಮಾಗಳಿಗೂ ಸೀಕ್ವೆಲ್ ಮಾಡುವ ಪರಿಪಾಠ ಶುರುವಾಯ್ತು. ಕೆಲವು ನಿರ್ದೇಶಕರುಗಳಂತೂ ದಶಕದ ಹಿಂದೆ ಹಿಟ್ ಆಗಿದ್ದ ತಮ್ಮ ಸಿನಿಮಾಗಳಿಗೆ ಈಗ ಸೀಕ್ವೆಲ್ ಮಾಡಲು ಪ್ರಾರಂಭಿಸಿದರು. ಅದೇ ಕಾರಣಕ್ಕೆ ಬಂದಿದ್ದೆ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’. 1996 ರಲ್ಲಿ ಬಿಡುಗಡೆ ಆಗಿದ್ದ ಕಮಲ್ ಹಾಸನ್ ಮೊನಿಷಾ ಕೊಯಿರಾಲಾ ನಟನೆಯ ‘ಇಂಡಿಯನ್’ ಸಿನಿಮಾ ಆಗ ಭಾರಿ ಹಿಟ ಆಗಿತ್ತು. ಅದನ್ನು ಶಂಕರ್ ನಿರ್ದೇಶನ ಮಾಡಿದ್ದರು. ಇತ್ತೀಚೆಗಷ್ಟೆ ಆ ಸಿನಿಮಾದ ಸೀಕ್ವೆಲ್ ‘ಇಂಡಿಯನ್ 2’ ನಿರ್ಮಿಸಲಾಯ್ತು. ಆದರೆ ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು, ಆದರೂ ಆ ಸಿನಿಮಾದ ಮತ್ತೊಂದು ಸೀಕ್ವೆಲ್ ಅನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ ಶಂಕರ್.
‘ಇಂಡಿಯನ್ 2’ ಸಿನಿಮಾ 2024ರ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸುಮಾರು 30 ವರ್ಷಗಳ ಬಳಿಕ ಬಂದ ಸೀಕ್ವೆಲ್ ಇದಾದ ಕಾರಣದಿಂದಾಗಿ ಭಾರಿ ನಿರೀಕ್ಷೆಗಳು ಸಿನಿಮಾದ ಮೇಲೆ ಇದ್ದವು. ಆದರೆ ಸಿನಿಮಾ ತೀರಾ ಧಾರುಣ ಸೋಲು ಕಂಡಿತು. ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೇ ಸಿನಿಮಾದ ನಿರ್ದೇಶಕ ಶಂಕರ್ ಮತ್ತು ನಿರ್ಮಾಣ ಸಂಸ್ಥೆಯಾದ ಲೈಕಾ ನಡುವೆ ಕಾನೂನು ವಿವಾದಗಳು ಏರ್ಪಟ್ಟವು. ನಿಗದಿತ ಸಮಯಕ್ಕಿಂತಲೂ ಬಹಳ ತಡವಾಗಿ ಸಿನಿಮಾದ ನಿರ್ಮಾಣ ಪ್ರಕ್ರಿಯೆ ನಡೆಯಿತು. ಸಿನಿಮಾನಲ್ಲಿ ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿದ್ದರು. ಸಿನಿಮಾ ಬಿಡುಗಡೆ ಬಳಿಕ ತೀರಾ ಹೀನಾಯ ಸೋಲನ್ನು ಬಾಕ್ಸ್ ಆಫೀಸ್ನಲ್ಲಿ ಕಂಡಿತು.
‘ಇಂಡಿಯನ್ 2’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ‘ಇಂಡಿಯನ್ 3’ ಸಿನಿಮಾ ಸಹ ಬರಲಿದೆ ಎಂಬ ಸುಳಿವನ್ನು ನಿರ್ದೇಶಕ ಶಂಕರ್ ನೀಡಿದ್ದರು. ಆದರೆ ‘ಇಂಡಿಯನ್ 2’ ಹೀನಾಯ ಸೋಲು ಕಂಡಿದ್ದು, ಹಾಗೂ ನಿರ್ಮಾಣ ಸಂಸ್ಥೆಯ ಜೊತೆಗೆ ಶಂಕರ್ ಅವರ ವಿವಾದ ಇವೆಲ್ಲವನ್ನೂ ಪರಿಗಣಿಸಿ ‘ಇಂಡಿಯನ್ 3’ ಬರುವುದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ‘ಇಂಡಿಯನ್ 3’ ಸಿನಿಮಾ ಬರಲಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯವನ್ನು ಶಂಕರ್ ಅವರು ಪ್ರಾರಂಭ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ನಟ ಕಮಲ್ ಹಾಸನ್ ಹೊಸ ಸಿನಿಮಾದ ಲುಕ್ ವೈರಲ್; ಕೌತುಕ ಮೂಡಿಸಿದ ಕಾಂಬಿನೇಷನ್
ಶಂಕರ್ ಅವರು ಭಾರತದ ನಂಬರ್ 1 ನಿರ್ದೇಶಕ ಎನಿಸಿಕೊಂಡವರು ಆದರೆ ಇತ್ತೀಚೆಗೆ ಸತತ ಸೋಲುಗಳನ್ನು ನೋಡುತ್ತಿದ್ದಾರೆ. ಅವರ ನಿರ್ದೇಶನದ ‘ಇಂಡಿಯನ್ 2’ ಫ್ಲಾಫ್ ಆಯ್ತು ಬಳಿಕ ಬಂದ ಭಾರಿ ನಿರೀಕ್ಷಿತ ಸಿನಿಮಾ ‘ಗೇಮ್ ಚೇಂಜರ್’ ಸಹ ಇನ್ನಿಲ್ಲದಂತೆ ನೆಲಕಚ್ಚಿತು. ಶಂಕರ್ ಅವರು ಹಿಂದಿಯಲ್ಲಿ ನಿರ್ದೇಶನ ಮಾಡಬೇಕಿದ್ದ ಸಿನಿಮಾ ಸಹ ನಿಂತು ಹೋಯ್ತು. ಹಾಗಾಗಿ ಅವರು ಮತ್ತೆ ಕಮ್ ಬ್ಯಾಕ್ ಮಾಡಲು ಸಿನಿಮಾ ಒಂದರ ಅವಶ್ಯಕತೆ ಇದೆ. ಹಾಗಾಗಿ ಅವರು ಈ ಬಾರಿ ‘ಇಂಡಿಯನ್ 3’ ಸಿನಿಮಾದ ಮೇಲೆ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




