ಕಾವೇರಿ ವಿವಾದ: ಶೀಘ್ರದಲ್ಲೇ ಡಿಕೆ ಶಿವಕುಮಾರ್, ತಮಿಳುನಾಡು ಸಿಎಂ ವಿಜಯ್ ಮಾತುಕತೆ ಸಾಧ್ಯತೆ
ಕಾವೇರಿ ನೀರು ಹಂಚಿಕೆ ವಿವಾದದ ನಡುವೆಯೇ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಡುವಿನ ಮಾತುಕತೆಗೆ ಸಿದ್ಧತೆ ನಡೆಯುತ್ತಿದೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಮೇಕೆದಾಟು ಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಉಭಯ ಮುಖ್ಯಮಂತ್ರಿಗಳು ಚರ್ಚೆ ನಡೆಸುವ ಸಾಧ್ಯತೆ ಇದೆ.

ಮುಖ್ಯಾಂಶಗಳು
- ಡಿಕೆ ಶಿವಕುಮಾರ್–ಸಿಎಂ ವಿಜಯ್ ಭೇಟಿ ಸಾಧ್ಯತೆ
- ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಸಭೆಗೆ ಆಹ್ವಾನ
- ಮೇಕೆದಾಟು, ಕಾವೇರಿ ನೀರು, ಮೆಟ್ರೋ ಸಂಪರ್ಕ ಚರ್ಚೆ ಸಾಧ್ಯತೆ
ಬೆಂಗಳೂರು, ಜುಲೈ 24: ಕಾವೇರಿ ನದಿ ನೀರು ಹಂಚಿಕೆ ವಿವಾದದ (Cauvery River Water Dispute) ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಬಂಧಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಕಾಣಿಸಿಕೊಂಡಿದೆ. ಕಾವೇರಿ ನೀರು ವಿವಾದ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡುವಿನ ಮಾತುಕತೆಗೆ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆ ನಡೆದರೆ, ಹಲವು ದಶಕಗಳ ಬಳಿಕ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕಾವೇರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಒಂದೆಡೆ ಸೇರಿ ಮಾತುಕತೆ ನಡೆಸಿದಂತಾಗಲಿದೆ.
ಮೂಲಗಳ ಪ್ರಕಾರ, ತಮಿಳುನಾಡು ಸರ್ಕಾರದಿಂದ ಸಭೆಗೆ ಮನವಿ ಬಂದಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಒಪ್ಪಿಕೊಂಡಿದ್ದಾರೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಸಿಎಂಗಳ ಸಭೆಯಲ್ಲಿ ಏನೇನು ಚರ್ಚೆಯಾಗಬಹುದು?
ಸಂಭಾವ್ಯ ಸಭೆಯಲ್ಲಿ ಮೇಕೆದಾಟು ಜಲಾಶಯ ಯೋಜನೆ, ಮಳೆ ಕೊರತೆಯ ವರ್ಷಗಳಲ್ಲಿ ಕಾವೇರಿ ನೀರು ಹಂಚಿಕೆ ಕುರಿತ ಪರಸ್ಪರ ಒಪ್ಪಿಗೆಯ ವ್ಯವಸ್ಥೆ ಹಾಗೂ ಬೆಂಗಳೂರು–ಹೊಸೂರು ಮೆಟ್ರೋ ರೈಲು ಸಂಪರ್ಕ ಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
ಮೇಕೆದಾಟು ಯೋಜನೆಗೆ ತಮಿಳುನಾಡಿನ ಪ್ರಬಲ ವಿರೋಧ
ಕರ್ನಾಟಕ ಸರ್ಕಾರ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಒತ್ತು ನೀಡುತ್ತಿರುವುದು ತಮಿಳುನಾಡಿನ ವಿರೋಧಕ್ಕೆ ಕಾರಣವಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯ ಮುಂದುವರಿದಿದೆ. ಇದೀಗ ಮೇಕೆದಾಟು ಯೋಜನೆಗೆ ತಮಿಳುನಾಡು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ.
ವಿಫಲವಾಗಿದ್ದ ಯಡಿಯೂರಪ್ಪ ಯತ್ನ
2021ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸುವಂತೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದರು. ಆದರೆ ಸ್ಟಾಲಿನ್ ಆ ಆಹ್ವಾನವನ್ನು ತಿರಸ್ಕರಿಸಿದ್ದರು.
ವಿಜಯ್ ನಿರ್ಧಾರದ ಬಗ್ಗೆ ಭಾರೀ ಕುತೂಹಲ
ಇಲ್ಲಿಯವರೆಗೆ ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಸರ್ಕಾರಗಳು ಕಾವೇರಿ ನೀರು ಹಂಚಿಕೆ ಕುರಿತು ಕರ್ನಾಟಕದೊಂದಿಗೆ ನೇರ ಮಾತುಕತೆಗೆ ನಿರಾಕರಿಸುತ್ತಲೇ ಬಂದಿವೆ. ಕಾವೇರಿ ವಿವಾದವನ್ನು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಈಗಾಗಲೇ ಇತ್ಯರ್ಥಪಡಿಸಿವೆ ಎಂಬುದು ತಮಿಳುನಾಡಿನ ಅಧಿಕೃತ ನಿಲುವಾಗಿದೆ.
ಇದನ್ನೂ ಓದಿ: ಕಾವೇರಿ ವಿವಾದ: ನೀರು ಹರಿಸಲು ಒಪ್ಪದ ಕರ್ನಾಟಕ, ಸರ್ವಪಕ್ಷಗಳ ಸಭೆ ಕರೆದ ತಮಿಳುನಾಡು
ಹೀಗಾಗಿ ಮುಖ್ಯಮಂತ್ರಿ ವಿಜಯ್ ಈ ಆಹ್ವಾನವನ್ನು ಸ್ವೀಕರಿಸಿದರೆ, ಅದು ತಮಿಳುನಾಡಿನ ಹಿಂದಿನ ನಿಲುವಿನಿಂದ ಭಿನ್ನವಾದ ಮಹತ್ವದ ಬೆಳವಣಿಗೆಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




