ಲೋನ್ ಕಟ್ಟದ್ದಕ್ಕೆ ಬ್ಯಾಂಕ್ನಿಂದ ಕಾಲೇಜ್ ಸೀಜ್: ಆಯುರ್ವೇದಿಕ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ, ಅಹೋರಾತ್ರಿ ಧರಣಿ
ಬ್ಯಾಂಕ್ ಲೋನ್ ಕಟ್ಟದ್ದಕ್ಕೆ ದೊಡ್ಡಬಳ್ಳಾಪುರದ ಆತ್ರೇಯ ಆಯುರ್ವೇದ ಕಾಲೇಜ್ನ್ನು ಸೀಜ್ ಮಾಡಿರುವಂತಹ ಘಟನೆ ನಡೆದಿದೆ. ಇತ್ತ ನೂರಾರು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಎರಡು ತಿಂಗಳಿಂದ ಪಾಠವಿಲ್ಲದೆ, ಕ್ಯಾಂಪಸ್ ಪ್ರವೇಶವೂ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಜಿಲ್ಲಾಡಳಿತ ಹಾಗೂ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ದೇವನಹಳ್ಳಿ, ಸೆಪ್ಟೆಂಬರ್ 09: ವೈದ್ಯರಾಗುವ ಕನಸು ಹೊತ್ತು ದೂರದ ಊರುಗಳಿಂದ ಬಂದು ಕಾಲೇಜು ಸೇರಿದ್ದ ವಿದ್ಯಾರ್ಥಿಗಳು ಇದೀಗ ಬೀದಿಗೆ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೆಹಳ್ಳಿ ಬಳಿಯಿರುವ ಆತ್ರೇಯ ಆಯುರ್ವೇದಿಕ ಮಹಾವಿದ್ಯಾಲಯ ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ನ್ಯಾಯಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದಾರೆ.
ಸಾಲ ಮರುಪಾವತಿಸದ್ದಕ್ಕೆ ಕಾಲೇಜು ಸೀಜ್ ಮಾಡಿದ ಬ್ಯಾಂಕ್
ಕಾಲೇಜು ಆಡಳಿತ ಮಂಡಳಿಯು ಪಡೆದಿದ್ದ ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆ ಸಿಟಿ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಎರಡು ತಿಂಗಳ ಹಿಂದೆಯೇ ಕಾಲೇಜನ್ನು ಸೀಜ್ ಮಾಡಿದ್ದಾರೆ. ಪರಿಣಾಮ ವಿದ್ಯಾರ್ಥಿಗಳಿಗೆ ತರಗತಿಗಳೂ ಇಲ್ಲದೆ, ಕ್ಯಾಂಪಸ್ ಪ್ರವೇಶವೂ ಸಿಗದೆ ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಕಾಲೇಜು ಇಂದು ತೆರೆಯುತ್ತದೆ, ನಾಳೆ ತೆರೆಯುತ್ತದೆ ಎಂದು ಕಾಲದೂಡಿದ ಆಡಳಿತ ಮಂಡಳಿ, ಇದೀಗ ಮುಂದಿನ ಕಂತಿನ ಶುಲ್ಕ (ಫೀಸ್) ಕಟ್ಟುವಂತೆ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ದಿನಕ್ಕೆ ಕೇವಲ 1 ಗಂಟೆ ಆನ್‌ಲೈನ್ ಪಾಠ; ವಿದ್ಯಾರ್ಥಿಗಳು ಆಕ್ರೋಶ
ಕಾಲೇಜು ಯಾವಾಗ ಪುನರಾರಂಭವಾಗುತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡದ ಆಡಳಿತ ಮಂಡಳಿ, ಆನ್‌ಲೈನ್ ನೆಪದಲ್ಲಿ ದಿನಕ್ಕೆ ಕೇವಲ ಒಂದು ಗಂಟೆ ಮಾತ್ರ ತರಗತಿ ನಡೆಸುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತಿದ್ದು, ಭವಿಷ್ಯದ ಆತಂಕ ಎದುರಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಡಿಸಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ; ಅಹೋರಾತ್ರಿ ಧರಣಿ
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ, ದೊಡ್ಡಬಳ್ಳಾಪುರದಿಂದ ದೇವನಹಳ್ಳಿ ತಾಲೂಕಿನ ಚಪರಕಲ್ಲು ಬಳಿಯಿರುವ ಜಿಲ್ಲಾಡಳಿತ ಭವನದವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಕರವೇ ಕನ್ನಡಿಗರ ಬಣದ ಮುಖಂಡರು ಸಾಥ್ ನೀಡಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಕುಳಿತು ನ್ಯಾಯಕ್ಕಾಗಿ ಪಟ್ಟುಹಿಡಿದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಇಂದು ಕಾಲೇಜು ಓಪನ್ ಆಗುತ್ತೆ, ನಾಳೆ ಆಗುತ್ತೆ ಅಂತ ಎರಡು ತಿಂಗಳಿಂದ ಕಾದು ಕುಳಿತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇದೀಗ ಭವಿಷ್ಯದ ಆತಂಕ ಶುರುವಾಗಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಧ್ಯಪ್ರವೇಶಿಸಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




