ಸಿದ್ದರಾಮಯ್ಯ ವಿರುದ್ಧ ಇಡಿ, ಸಿಬಿಐ ದುರ್ಬಳಕೆ ಆರೋಪ: ನಾಳೆ ದಿಲ್ಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನಾ ಸಭೆ
ಸಿದ್ದರಾಮಯ್ಯ ಅವರ ವಿರುದ್ಧಇಡಿ ಮತ್ತು ಸಿಬಿಐ ದೌರ್ಜನ್ಯದ ಆರೋಪಗಳನ್ನು ಖಂಡಿಸಿ, ನಾಳೆ ದೆಹಲಿಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಹಿಂದುಳಿದ ವರ್ಗಗಳ ವೇದಿಕೆ ಮತ್ತು ಜಾಗೃತ ಆಯೋಗದಿಂದ ಈ ಪ್ರತಿಭಟನೆ ಆಯೋಜಿಸಲಾಗಿದೆ. ಹಲವು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.
ಬೆಂಗಳೂರು, ನವೆಂಬರ್ 06: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ (Siddramaiah) ವಿಚಾರಣೆ ಮಾಡಲಾಗಿದೆ. ತಾಳ್ಮೆಯಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯ ವಿರುದ್ಧ ಇಡಿ ಮತ್ತು ಸಿಬಿಐ ದುರ್ಬಳಕೆ ಆರೋಪ ಹಿನ್ನೆಲೆ ನಾಳೆ ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನಾ ಸಭೆ ನಡೆಯಲಿದೆ.
ದೆಹಲಿಯ ಕರ್ನಾಟಕ ಸಂಘದಲ್ಲಿ ಹಿಂದುಳಿದ ವರ್ಗಗಳ ವೇದಿಕೆಯಿಂದ ಪ್ರತಿಭಟನಾ ಸಭೆ ನಡೆಯಲಿದ್ದು, ಎಲ್. ಹನುಮಂತಯ್ಯ, ಎಸ್. ಜಿ ಸಿದ್ದರಾಮಯ್ಯ, ಕಾಳೆಗೌಡ ನಾಗವಾರ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: 2 ಗಂಟೆ ವಿಚಾರಣೆ ಎದುರಿಸಿದ ಸಿದ್ದರಾಮಯ್ಯ, ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಹಾಲಿ ಸಿಎಂ ವಿಚಾರಣೆ
ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆ ಸಂವಿಧಾನಬಾಹಿರ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ಅನೇಕ ರಾಜ್ಯಗಳಲ್ಲಿ ಇದೇ ರೀತಿ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಎಲ್ಲ ಸೇರಿಕೊಂಡಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರು ಕೇಳಿಬಂದಿದ್ದು ವಿಪಕ್ಷ ಬಿಜೆಪಿಗೆ ಅಸ್ತ್ರವಾಗಿತ್ತು. ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ಕೂಡ ಮಾಡಿದ್ದರು. ಇದೇ ವೇಳೆ ಇಡಿ ಮತ್ತು ಸಿಬಿಐಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿ ಇದೀಗ ನಾಳೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆ ನಡೆಯಲಿದೆ.
ಇದನ್ನೂ ಓದಿ: ಮುಡಾ ಹಗರಣ: ಇಂದು ಲೋಕಾಯುಕ್ತ ಪೊಲೀಸರಿಂದ ಸಿಎಂ ಸಿದ್ದರಾಮಯ್ಯ ವಿಚಾರಣೆ
ಇನ್ನು ಮೈಸೂರು ಇಂದು ದೊಡ್ಡ ಹಂಗಾಮಕ್ಕೆ ಸಾಕ್ಷಿಯಾಗಿತ್ತು. ಕೇಸರಿ ಪಡೆ ಬೀದಿಗಿಳಿದಿತ್ತು. ಒಂದ್ಕಡೆ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆ ನಡೀತಿದ್ದರೆ, ಇದೇ ಹೊತ್ತಿನಲ್ಲೇ ಬಿಜೆಪಿ ನಾಯಕರು ರಸ್ತೆಗಿಳಿದಿದ್ದರು. ಪ್ರತಿಭಟನಾಕಾರರನ್ನ ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸವೇ ಪಟ್ಟಿದ್ದಾರೆ. ದೊಡ್ಡ ಹೈಡ್ರಾಮಾವೇ ನಡೆದಿದೆ. ಲೋಕಾಯುಕ್ತ ವಿಚಾರಣೆ ನನಗೆ ಕಪ್ಪು ಮಸಿ ಅಲ್ಲ ಅಂತಾ ಬಿಜೆಪಿ ನಾಯಕರ ಆರೋಪಕ್ಕೆ ಸಿಎಂ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Wed, 6 November 24