ಹುಬ್ಬಳ್ಳಿಯಲ್ಲೂ ಬ್ಯಾಂಕ್ ದರೋಡೆಗೆ ಯತ್ನಿಸಿದ ಕಳ್ಳರು: ಖದೀಮರಿಗೆ ಬಲೆ ಬೀಸಿದ ಪೊಲೀಸ್
ಕರ್ನಾಟಕದಲ್ಲಿ ಸಾಲು ಸಾಲು ದರೋಡೆ ಪ್ರಕರಣದಿಂದ ಜನರು ಬೆಚ್ಚಿಬೀಳುವಂತೆ ಮಾಡಿದೆ. ನಡೆದಿರುವ ದರೋಡೆಯಲ್ಲಿ ಇನ್ನೂ ಆರೋಪಿಗಳ ಸುಳಿವೇ ಸಿಕ್ಕಿಲ್ಲ. ಹೀಗಿರುವಾಗ ಹುಬ್ಬಳ್ಳಿಯ ನವನಗರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖದೀಮರು ದರೋಡೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹುಬ್ಬಳ್ಳಿ, ಜನವರಿ 20: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸಾಲು ಸಾಲು ರಾಬರಿ (robbery), ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕೇವಲ ಒಂದೇ ಒಂದು ವಾರದಲ್ಲಿ 5 ದರೋಡೆ ಪ್ರಕರಣ ನಡೆದಿದ್ದು, ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಹೀಗಿರುವಾಗ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಬ್ಯಾಂಕ್ ದರೋಡೆಗೆ ಕಳ್ಳರು ಯತ್ನಿಸಿರುವಂತಹ ಘಟನೆ ನಡೆದಿದೆ. ಕಳ್ಳರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಿನ್ನೆ ರಾತ್ರಿ ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ದರೋಡೆಗೆ ಖದೀಮರು ಯತ್ನಿಸಿದ್ದಾರೆ. ಬ್ಯಾಂಕ್ನ ಶೆಲ್ಟರ್ ಬೀಗ ಮುರಿದು ಕನ್ನ ಹಾಕಲು ಯತ್ನಿಸಿದ್ದು, ಆದರೆ ವಿಫಲರಾಗಿದಾರೆ. ಸದ್ಯ ಬ್ಯಾಂಕ್ ಸಿಬ್ಬಂದಿ ಶೆಲ್ಟರ್ಗೆ ವೆಲ್ಡಿಂಗ್ ಮಾಡಿಸಿದ್ದಾರೆ. ಘಟನಾ ಸ್ಥಳಕ್ಕೆ ನವನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ದಾವಣಗೆರೆ ಎಸ್ಬಿಐ ಬ್ಯಾಂಕ್ನ 13 ಕೋಟಿ ರೂ ಮೌಲ್ಯದ ಚಿನ್ನ ಕಳ್ಳತನ
ದಾವಣಗೆರೆ ಜಿಲ್ಲೆಯ ನ್ಯಾಮತಿಯ ನೆಹರು ರಸ್ತೆಯಲ್ಲಿ ಇರುವ ಎಸ್ಬಿಐ ಬ್ಯಾಂಕ್ನಲ್ಲೂ ಕಳ್ಳತನ ನಡೆದಿದೆ. ಬರೋಬರಿ 13 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳತನವಾಗಿದೆ. ಕಳ್ಳತನವಾದ ದಿನ ಬ್ಯಾಂಕ್ ಸೇವಾ ಕೇಂದ್ರದ ಸಿಸಿ ಕ್ಯಾಮೆರಾ ಕೂಡ ಬಂದ್ ಆಗಿತ್ತು. ಇದು ಬ್ಯಾಂಕ್ ಪಕ್ಕದಲ್ಲಿಯೇ ಇರುವ ಬ್ಯಾಂಕಿನ ಸೇವಾ ಕೇಂದ್ರವಾಗಿದೆ. ಸೇವಾ ಕೇಂದ್ರದ ಬಳಿಯೇ ಬ್ಯಾಂಕಿನ ಕಿಡಕಿ ಮುರಿದು ಕಳ್ಳತನವೆಸಗಲಾಗಿದೆ.
ಇದನ್ನೂ ಓದಿ: ಮೈಸೂರು: ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಇಡಿ ಬ್ಯಾಂಕ್ ತುಂಬ ಕಾರದ ಪುಡಿ ಹಾಕಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರದ ಪುಡಿ ಹೊರ ರಾಜ್ಯಕ್ಕೆ ಸೇರಿದ ಕಂಪನಿಯದು ಎಂಬ ವಿಚಾರ ತನಿಖೆಯಿಂದ ಪತ್ತೆ ಆಗಿದೆ. ಅಕ್ಟೋಬರ್ 25 ರಾತ್ರಿ 8.10 ಕ್ಕೆ ಬ್ಯಾಂಕ್ ಬಾಗಿಲು ಮುಚ್ಚಲಾಗಿತ್ತು. ಅಕ್ಟೋಬರ್ 28ಕ್ಕೆ ಬೆಳಿಗ್ಗೆ 7.10 ಕ್ಕೆ ಬ್ಯಾಂಕ್ ಓಪನ್ ಮಾಡಲಾಗಿದೆ. ಅಕ್ಟೋಬರ್ 27 ರಂದು ರಾತ್ರಿ 11.45ಕ್ಕೆ ರಾತ್ರಿ ಮಾರುತಿ ವ್ಯಾನ್ ರೀತಿಯ ವಾಹನ ಬ್ಯಾಂಕ್ನ ಮುಂದೆ ನಿಂತಿರುವುದು ಪೊಲೀಸ್ ತನಿಖೆಯಿಂದ ಪತ್ತೆ ಆಗಿದೆ. ಆದರೆ ಅಲ್ಲಿಂದ ಇಲ್ಲಿಯ ತನಕ ಆರೋಪಿಗಳ ಸುಳಿವು ಸಿಕ್ಕಿಲ್ಲ. ಇದರ ಬೆನ್ನಲ್ಲೇ ಉಳಿದ ಬ್ಯಾಂಕ್ ಎಚ್ಚೆತ್ತುಕೊಂಡಿದ್ದು, ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:28 pm, Mon, 20 January 25