ರೈತರ ನೋವನ್ನು ರೈತರೇ ಅರ್ಥ ಮಾಡಿಕೊಳ್ತಾರೆ! 15 ದಿನ ಕಳೆದು ಹೋಗಿದ್ದ 3 ಎಮ್ಮೆಗಳನ್ನು ಸಾಕಿ ಸಲಹಿದ್ದು ಯಾರು?

ಬೇರೆಯವರ ಮನೆಯಿಂದ ದಾರಿ ತಪ್ಪಿ ಬಂದ ಜಾನುವಾರುಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತ, ಅವುಗಳ ಮಾಲೀಕರನ್ನು ಹುಡುಕಿ, ಮರಳಿ ಮನೆಗೆ ಜಾನುವಾರುಗಳನ್ನು ಕಳುಹಿಸಿದ ಭಾವುಕ ಕಥೆಯೊಂದು ನಿಮ್ಮೊಂದಿಗಿದೆ. ತಪ್ಪದೇ ಓದಿ..

ರೈತರ ನೋವನ್ನು ರೈತರೇ ಅರ್ಥ ಮಾಡಿಕೊಳ್ತಾರೆ! 15 ದಿನ ಕಳೆದು ಹೋಗಿದ್ದ 3 ಎಮ್ಮೆಗಳನ್ನು ಸಾಕಿ ಸಲಹಿದ್ದು ಯಾರು?
ಚೆನ್ನಮ್ಮ ಮತ್ತು ಶಿವಣ್ಣನವರು ಪ್ರೀತಿಯಿಂದ ಸಾಕಿದ್ದ ಎಮ್ಮೆಗಳೊಡನೆ ನಿಂತಿರುವ ದೃಶ್ಯ
Follow us
shruti hegde
| Updated By: ಸಾಧು ಶ್ರೀನಾಥ್​

Updated on: Jan 12, 2021 | 2:17 PM

ಧಾರವಾಡ: ಜಾನುವಾರುಗಳು ರೈತರ ಜೀವಾಳ. ಜಾನುವಾರುಗಳಿಂದಲೇ ಕೃಷಿ ಬದುಕಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂಥ ವೇಳೆಯಲ್ಲಿ ಜಾನುವಾರುಗಳಿಗೆ ಏನಾದರೂ ಆದರೆ ಅಥವಾ ಅವು ಕಳೆದು ಹೋದರೆ ರೈತರ ಬದುಕಿನ ಆಧಾರ ಸ್ತಂಭವೇ ಮುರಿದು ಬಿದ್ದಂತೆ. ಎತ್ತು, ಕೋಣಗಳಿಂದ ಕೃಷಿ ಚಟುವಟಿಕೆಗಳಲ್ಲಿ ಸಹಾಯವಾದರೆ, ಆಕಳು, ಎಮ್ಮೆಗಳಿಂದ ಹೈನುಗಾರಿಕೆ ವೃದ್ಧಿಯಾಗಿ, ಆದಾಯಗಳಿಸುತ್ತಾರೆ ರೈತರು. ಕೃಷಿ ಹಾಗೂ ಹೈನುಗಾರಿಕೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಹೀಗೆ ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದ ರೈತ ಕುಟುಂಬದ ಪಾಲಿಗೆ ರೈತರೇ ವರವಾದ ಕಥೆಯೊಂದು ಧಾರವಾಡದಲ್ಲಿ ನಡೆದಿದೆ. ಏನಿರಬಹುದು ಈ ಕಥೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಕಿದ್ದ ಎಮ್ಮೆಯೊಂದು ಕಾಣೆಯಾ ರೈತ ಕುಟುಂಬ ಕಂಗಾಲಾಗಿತ್ತು:

ಕಮಲಾಪುರ ಬಡಾವಣೆಯ ಶಿವಣ್ಣ ಇಳಿಗೇರ್ ಹಾಗೂ ಚೆನ್ನಮ್ಮ ಇಳಿಗೇರ ದಂಪತಿ ಸಣ್ಣ ಕೃಷಿಕರು. ಕೊಂಚ ಕೃಷಿ ಭೂಮಿಯೊಂದಿಗೆ ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ. ನಿತ್ಯವೂ ಎಮ್ಮೆಗಳನ್ನು ಹೊರಗೆ ಮೇಯಿಸಲು ಕರೆದೊಯ್ದು ಸಂಜೆ ಹೊತ್ತಿಗೆ ಮರಳಿ ಮನೆಗೆ ಬರುವುದು ರೂಢಿ. 15 ದಿನಗಳ ಹಿಂದೆ ಈ ಕುಟುಂಬ ಊಹಿಸದ ಘಟನೆ ನಡೆದು ಹೋಗಿತ್ತು. ಬೆಳಿಗ್ಗೆ ಮೇಯಲು ಹೋಗಿದ್ದ ಮೂರು ಎಮ್ಮೆಗಳು ಅದು ಹೇಗೋ ಮಾಲಿಕರ ಕಣ್ಣು ತಪ್ಪಿಸಿ, ಕಾಣೆಯಾಗಿ ಬಿಟ್ಟವು. ಸಂಜೆ ಹೊತ್ತಿಗೆ ಮನೆಗೆ ಮರಳಿ ಬರುವುದು ರೂಢಿಯಾಗಿದ್ದ ಹಿನ್ನೆಲೆಯಲ್ಲಿ ಮಾಲಿಕರು ಹೆಚ್ಚಿಗೆ ಯೋಚನೆ ಮಾಡಲಿಲ್ಲ. ಆದರೆ ರಾತ್ರಿಯಾದರೂ ಎಮ್ಮೆಗಳು ಮರಳಿ ಬರಲೇ ಇಲ್ಲ.

ಕಳೆದು ಹೋದ ಎಮ್ಮೆಗಳು ಹೋಗಿದ್ದೆಲ್ಲಿಗೆ?

ಹೀಗೆ ಮೇಯಲು ಹೋದ ಎಮ್ಮೆಗಳು ಮೇಯುತ್ತಾ ಏಳೆಂಟು ಕಿ.ಮೀ. ಸಾಗಿವೆ. ಅಲ್ಲಿಂದ ದಾಸನಕೊಪ್ಪ ಗ್ರಾಮದ ರೈತರ ಜಮೀನಿಗೆ ನುಗ್ಗಿವೆ. ಅಲ್ಲಿ ಮೇಯುತ್ತಿದ್ದಾಗ ಜಮೀನಿನ ಮಾಲಿಕ ಈರಪ್ಪ ಅಂಗಡಿ ಗಮನಕ್ಕೆ ಬಂದಿದೆ. ಕೂಡಲೇ ಕೆಲಸಗಾರರಿಗೆ ಹೇಳಿ ಅವುಗಳನ್ನು ಕಟ್ಟಿ ಹಾಕಿಸಿದ್ದಾರೆ.

ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಮೂರು ಎಮ್ಮೆಗಳನ್ನು ತಮ್ಮ ದನದ ಕೊಟ್ಟಿಗೆಯಲ್ಲಿ ಇಟ್ಟು ಎರಡು ದಿನ ಕಳೆದರೂ ಯಾರೂ ಬರಲೇ ಇಲ್ಲ. ಮೂಲತಃ ಕೃಷಿಕರಾಗಿರೋ ಈರಪ್ಪ ಅವರಿಗೆ ಎಮ್ಮೆಗಳನ್ನು ಕಳೆದುಕೊಂಡವರ ಸಂಕಟ ಏನು ಅನ್ನುವುದು ಗೊತ್ತಿತ್ತು. ಈ ಹಿನ್ನೆಲೆಯಲ್ಲಿ ಇಡೀ ಊರು ತಿರುಗಾಡಿ, ತಮ್ಮ ಬಳಿ ಇದ್ದ ಎಮ್ಮೆಗಳ ಬಗ್ಗೆ ಹೇಳಿದ್ದಾರೆ. ಆದರೆ ಎಮ್ಮೆಯ ಮಾಲೀಕರ ಸುಳಿವೇ ಸಿಗದಂತಾಯಿತು.

ಕೆಲಸಗಾರರಿಗೆ ಹೇಳಿ ಎಮ್ಮೆಗಳ ಪಾಲನೆ ಮಾಡಿದ ಈಶ್ವರ ಅಂಗಡಿ:

ಈರಪ್ಪ ಅಂಗಡಿಯವರ ಮನೆಯಲ್ಲಿ ಅದಾಗಲೇ ಸಾಕಷ್ಟು ಜಾನುವಾರುಗಳು ಇದ್ದವು. ಆದರೆ ಆಗಲೇ ಇರುವ ಜಾನುವಾರುಗಳನ್ನು ನೋಡಿಕೊಳ್ಳುವುದೇ ಕಷ್ಟಕರ ಅನ್ನುವ ಹೊತ್ತಿನಲ್ಲಿ ಮತ್ತೆ ಮೂರು ಎಮ್ಮೆಗಳನ್ನು ನೋಡಿಕೊಳ್ಳುವುದು ಕೊಂಚ ಶ್ರಮದಾಯಕದ ಕೆಲಸವೇ ಆಗಿತ್ತು.

ಆದರೆ ಈರಪ್ಪ ಅಂಗಡಿಯವರು ಕೂಡಲೇ ತಮ್ಮ ಕೆಲಸಗಾರರಾದ ಹುಸೇನಸಾಬ್ ಯಾದವಾಡ, ಭೀಮಸೇನ ಹುಡೇದ್, ವೀರಭದ್ರ ಅಂಗಡಿ ಅವರಿಗೆ ಈ ಮೂರೂ ಎಮ್ಮೆಗಳನ್ನು ನೋಡಿಕೊಳ್ಳುವುದಲ್ಲದೇ ಇವುಗಳಿಗೆ ವಿಶೇಷ ಕಾಳಜಿ ತೋರಿಸುವಂತೆ ಸೂಚಿಸಿದರು. ಕೆಲಸಗಾರರು ಕೂಡ ಅಷ್ಟೇ ಕಾಳಜಿಯಿಂದ ಅವುಗಳನ್ನು ನೋಡಿಕೊಂಡಿದ್ದಾರೆ.

ಎರಡು ವಾರ ಕಳೆದರೂ ಪತ್ತೆಯಾಗದ ಮಾಲಿಕರು:

ಎಮ್ಮೆಗಳು ಬಂದು ಒಂದು ವಾರವಾದರೂ ಮೂಲ ಮಾಲಿಕರು ಪತ್ತೆಯೇ ಆಗಲಿಲ್ಲ.‌ ಇದರಿಂದಾಗಿ ಅಂಗಡಿ ಕುಟುಂಬದವರಲ್ಲಿ ಆತಂಕ ಹೆಚ್ಚಾಯಿತು. ಅದಾಗಲೇ ಇರುವ ಜಾನುವಾರುಗಳನ್ನು ನೋಡಿಕೊಳ್ಳುವುದೇ ಕಷ್ಟ. ಅಂಥದ್ದರಲ್ಲಿ ತಮ್ಮದಲ್ಲದ ಮೂರು ಎಮ್ಮೆಗಳನ್ನು ಸಾಕುವುದು ಇನ್ನೂ ಕಷ್ಟಕರ ಕೆಲಸ.

ಆದರೆ ಅಂಗಡಿ ಕುಟುಂಬದವರ ಜಾನುವಾರು ಪ್ರೀತಿಗೆ ಈ ಪ್ರಾಣಿಗಳನ್ನು ಸಾಕುವುದು ಅಷ್ಟು ದೊಡ್ಡ ಕೆಲಸವೆನ್ನಿಸಲಿಲ್ಲ. ಕೊನೆಗೆ ಸುತ್ತಮುತ್ತಲಿನ ಊರುಗಳಲ್ಲೆಲ್ಲಾ ಈ ಬಗ್ಗೆ ಮಾಹಿತಿ ನೀಡಿದರು. ಎರಡು ವಾರಗಳ ಬಳಿಕ ಈ ಎಮ್ಮೆಗಳು ಧಾರವಾಡ ಮೂಲದ ಇಳಿಗೇರ ಕುಟುಂಬಕ್ಕೆ ಸೇರಿದ್ದು ಅನ್ನುವುದು ಖಚಿತವಾಯಿತು.

ಕೊನೆಗೂ ಎಮ್ಮೆಗಳ ಮಾಲಿಕರು ಬಂದರು:

15 ದಿನಗಳ ಬಳಿಕ ವಿಷಯ ತಿಳಿದ ಶಿವಣ್ಣ, ಚೆನ್ನಮ್ಮ ತಮ್ಮ ಎಮ್ಮೆಗಳನ್ನು ಹುಡುಕಿಕೊಂಡು ದಾಸನಕೊಪ್ಪ ಗ್ರಾಮದ ಅಂಗಡಿ ಅವರ ಮನೆಗೆ ಆಗಮಿಸಿದರು. ತಮ್ಮ ಜಾನುವಾರುಗಳನ್ನೇ ಸಾಕದೆ ಎಷ್ಟೋ ಜನರು ಕಸಾಯಿಖಾನೆಗೆ ಮಾರಾಟ ಮಾಡುವ ಇಂದಿನ ದಿನಗಳಲ್ಲಿ, ತಾವು ಸಾಕಿದ್ದ ಮೂರು ಎಮ್ಮೆಗಳು ನೆಮ್ಮದಿಯಾಗಿ ಮೇವನ್ನು ತಿನ್ನುತ್ತಾ ನಿಂತಿದ್ದನ್ನು ನೋಡಿ ಸಂತೋಷಗೊಂಡರು. ಈರಪ್ಪ ಅಂಗಡಿಗೆ, ದಂಪತಿ ತುಂಬು ಮನಸ್ಸಿನಿಂದ ಧನ್ಯವಾದ ಅರ್ಪಿಸಿದರು.

ಇತ್ತೀಚಿನ ದಿನಗಳಲ್ಲಿ ಜಾನುವಾರುಗಳನ್ನು ಕದ್ದು ಒಯ್ಯುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಒಂದು ದಿನ ಜಾನುವಾರು ಮನೆಗೆ ಬಾರದೇ ಇದ್ದರೆ ಅದು ಕಳ್ಳರ ಪಾಲಾಗಿದೆ ಅಂದುಕೊಂಡು ಮಾಲಿಕರು ಸುಮ್ಮನಾಗಿಬಿಡುತ್ತಾರೆ. ಆದರೆ ಎರಡು ವಾರಗಳ ಕಾಲ ತಮ್ಮದೇ ಜಾನುವಾರು ಅಂದುಕೊಂಡು, ಪ್ರೀತಿಯಿಂದ ಸಾಕಿ, ಮಾಲಿಕರು ಬಂದಾಗ ಅವರ ಕೈಗೆ ಒಪ್ಪಿಸಿದ ಅಂಗಡಿ ಕುಟುಂಬ ಉಳಿದವರಿಗೆ ಮಾದರಿ.

ದೇಶದ ಬೆನ್ನೆಲುಬು ರೈತ.. ರೈತನ ಬೆನ್ನೆಲುಬು ಎತ್ತು: ದಾಖಲೆ ಮೊತ್ತಕ್ಕೆ ಕಿಲಾರಿ ಎತ್ತು ಮಾರಾಟ..