ಬೆಳಗಾವಿಯಲ್ಲಿ ಪ್ರವಾಹ: ಹಲವು ಗ್ರಾಮಗಳು ಜಲಾವೃತ, ಬಿದಿಗೆ ಬಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು
ಘಟಪ್ರಭಾ ನದಿಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಘಟಪ್ರಭೆ ಒಂದೊಂದೇ ಗ್ರಾಮಗಳನ್ನು ಆವಾಹನೆ ಮಾಡುತ್ತ ಸಾಗುತ್ತಿದೆ. ಇದು ನದಿ ತೀರದ ಜನರ ಕಣ್ಣೀರಿಗೆ ಕಾರಣವಾಗುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ ಏನೆಲ್ಲಾ ಅವಾಂತರ ಸೃಷ್ಟಿಸಿದೆ ಎಂಬ ವಿವರ ಇಲ್ಲಿದೆ.
ಬೆಳಗಾವಿ, ಜುಲೈ 28: ಜಿಲ್ಲೆಯಲ್ಲಿ 7 ನದಿಗಳಿಂದ ಪ್ರವಾಹ (flood) ಪರಿಸ್ಥಿತಿ ನಿರ್ಮಾಣವಾಗಿದೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದ ಜನರು ಅತಂತ್ರವಾಗಿದ್ದಾರೆ. ಘಟಪ್ರಭಾ ನದಿ (Ghataprabha River) ಸೃಷ್ಟಿಸಿರುವ ಅವಾಂತರಕ್ಕೆ ಈಗ ಜನ ತತ್ತರಿಸಿ ಹೋಗಿದ್ದಾರೆ. ತನ್ನ ಪಾತ್ರವನ್ನ ಬಿಟ್ಟು ಹರಿಯುತ್ತಿರುವ ನದಿ ಊರಿಗೆ ಊರನ್ನೇ ತನ್ನ ಒಡಲಿಗೆ ಹಾಕಿಕೊಂಡಿದೆ. ಸೇತುವೆ, ದೇವಸ್ಥಾನ, ಬ್ಯಾಂಕ್ ಮತ್ತು ಮನೆಗಳು ಹೀಗೆ ಎಲ್ಲವೂ ಜಲಾವೃತವಾಗಿವೆ.
ಪ್ರವಾಹದಿಂದ ಬಿದಿಗೆ ಬಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು
ಗೋಕಾಕ್, ನಿಪ್ಪಾಣಿ, ಅಥಣಿ, ಮೂಡಲಗಿ, ಹುಕ್ಕೇರಿ, ಕಾಗವಾಡ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದ ಎಫೆಕ್ಟ್ ಉಂಟಾಗಿದೆ. ಜಿಲ್ಲೆಯಲ್ಲಿ ಈವರೆಗೆ 41 ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದ ಜನರು ಅತಂತ್ರಕೊಳಗಾಗಿದ್ದು, ಪ್ರವಾಹಕ್ಕೆ ಸಿಲುಕಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. ಮೂರುವರೆ ಸಾವಿರ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಲಾಗುತ್ತಿದೆ. ಸಂಬಂಧಿಕರ ಮನೆ, ಜಮೀನಿನಲ್ಲಿ 1800 ಸಂತ್ರಸ್ತರು ಸುರಕ್ಷಿತವಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಈಗಾಗಲೇ 20 ಕಾಳಜಿ ಕೇಂದ್ರ ತೆರೆಯಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಉಕ್ಕಿ ಹರಿಯುತ್ತಿರುವ ಮಲಪ್ರಭಾ, ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ
ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಬಂದ್ ಮಾಡಿರುವ ಪೊಲೀಸರು, ಸೇತುವೆಗಳು ಮುಳುಗಡೆಯಿಂದ 80ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಗೋಕಾಕ್ ನಗರದಲ್ಲೇ ಸುಮಾರು 300 ಮನೆಗಳು ಜಲಾವೃತವಾಗಿವೆ. ಗೋಕಾಕ್ಗೆ ಕೇವಲ ಒಂದು ಸಂಪರ್ಕ ಬಿಟ್ಟರೆ ಇನ್ನುಳಿದ ರಸ್ತೆಗಳು ಬಂದ್ ಆಗಿದೆ.
ಯಡೂರ ಕಾಡಸಿದ್ದೇಶ್ವರನಿಗೆ ನೀರಲ್ಲೇ ಪೂಜೆ
ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಡಿಸಿ ಮೊಹಮ್ಮದ್ ರೋಷನ್ ವ್ಯವಸ್ಥೆ ಪರಿಶೀಲನೆ ನಡೆಸಿದರು. ಗೋಕಾಕ್ನ ಚಿಕ್ಕೊಳಿ ಸೇತುವೆ ಹಾಗೂ ಲೊಳಸೂರ ಸೇತುವೆಗೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅತ್ತ ಚಿಕ್ಕೋಡಿಯಲ್ಲಿ ನದಿ ತೀರದ ಪಾತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಗಣೇಶ್ ಹುಕ್ಕೇರಿ ಭೇಟಿ ನೀಡಿ ಪರಿಶೀಲನೆ ನಡಸಿದರು. ಯಡೂರ ಕಾಡಸಿದ್ದೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದ್ದು ನಡುಮಟದ ನೀರಲ್ಲೇ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಇದೇ ಗ್ರಾಮಕ್ಕೆ ಎನ್‌ಡಿಆರ್‌ಎಫ್ ತಂಡ ಕೂಡ ಭೇಟಿ ನೀಡಿ ಸ್ಥಿತಿಗತಿ ಅವಲೋಕಿಸಿದೆ. ಅಥಣಿಯ ಹುಲಗಬಾಳಿ ಬಳಿ ಮನೆ ಕಳೆದುಕೊಂಡ ನೆರೆ ಸಂತ್ರಸ್ತರು ಬೀದಿಯಲ್ಲೇ ತಾಡಪಲ್ ಕಟ್ಟಿಕೊಂಡು ಕಾಲ ಕಳೆಯುತ್ತಿದ್ದಾರೆ. ಅಧಿಕಾರಿಗಳು ಮನವೊಲಿಸಲು ಯತ್ನಿಸಿದ್ರೂ ಶಾಶ್ವತ ಪರಿಹಾರ ಕಲ್ಪಿಸಿ ಆ ವರೆಗೂ ಬರಲ್ಲಾ ಅಂತಾ ವಾಪಾಸ್ ಕಳುಹಿಸಿದ್ದಾರೆ.
ಮುಳುಗುತ್ತಿದೆ ಮುಸುಗುಪ್ಪಿ
ಮುಸುಗುಪ್ಪಿ ಒಂದೇ ಗ್ರಾಮದಲ್ಲಿ ಆರನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಾಮಕ್ಕೆ ರಾತೋರಾತ್ರಿ ನೀರು ನುಗ್ಗಿದ್ದರಿಂದ ಜನ ಜಾನುವಾರುಗಳೊಟ್ಟಿಗೆ ಕಾಳಜಿ ಕೇಂದ್ರಕ್ಕೆ ಜನರು ಶಿಫ್ಟ್ ಆಗಿದ್ದಾರೆ. ಗ್ರಾಮದ ಮನೆಗಳಲ್ಲಿ ನೀರು ತುಂಬಿಕೊಂಡು ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಇನ್ನು ಉದಗಟ್ಟಿ ಉದ್ದಮ್ಮ ದೇವಿ ದೇವಸ್ತಾನಗಳಿಗೆ ನೀರು ನುಗ್ಗಿದ್ದು ನದಿಯ ನೀರಲ್ಲಿಯೇ ದೇವಿಗೆ ಇಂದು ಪೂಜೆ ನೆರವೇರಿಸಲಾಗಿದೆ. ಘಟಪ್ರಭಾ ನದಿಯ ಅಬ್ಬರಕ್ಕೆ ಸಿಲುಕಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮಕ್ಕೂ ನದಿ ನೀರು ನುಗ್ಗಿ ಅವಾಂತರ ಹೆಚ್ಚಾಗಿದೆ. ಗ್ರಾಮದಲ್ಲಿ 150ಕ್ಕೂ ಅಧಿಕ ಮನೆಗಳಿಗೆ ಈಗಾಗಲೇ ನೀರು ನುಗ್ಗಿದೆ. ಊರ ಪಕ್ಕದಲ್ಲಿಯೇ ಹರಿದಿರುವ ನದಿ ನೀರು ಊರು ಸೇರಿ ಅಕ್ಕ ಪಕ್ಕದ ಸಾವಿರಾರು ಹೆಕ್ಟರ್ ಪ್ರದೇಶಕ್ಕೆ ನೀರು ನುಗ್ಗಿದೆ. ಘಟಪ್ರಭಾ ನದಿಯ ಅಬ್ಬರಕ್ಕೆ ಮುಸುಗುಪ್ಪಿ ಮುಳುಗಡೆಯಾಗಿದ್ರೆ ಇತ್ತ ಪಟಗುಂದಿ ಗ್ರಾಮ ಪತರಗುಟ್ಟುತ್ತಿದೆ.
ಇದನ್ನೂ ಓದಿ: ಬೆಳಗಾವಿ: ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿ ಬಂದ್, ದೋಣಿಯಲ್ಲಿ ಜನರ ಸ್ಥಳಾಂತರ; ಇಲ್ಲಿದೆ ಫೋಟೋಸ್
ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮಕ್ಕೆ ಘಟಪ್ರಭಾ ನದಿಯ ನೀರು ನುಗ್ಗಿದ್ದು, ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನ ಆವರಣದ ಮಳಿಗೆಗಳಿಗೂ ನದಿ ನೀರು ನುಗ್ಗಿದ್ದು, ಹಲವು ಮನೆಗಳಿಗೆ ನೀರು ನುಗ್ಗುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.
ಪ್ರವಾಹ ಮಧ್ಯೆ ಮೊಸಳೆಗಳ ಕಾಟ
ಇನ್ನು ಪ್ರವಾಹದ ನಡುವೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಾಟೋಳ್ಳಿ ಗ್ರಾಮದಲ್ಲಿ ಮೊಸಳೆಗಳ ಕಾಟ ಶುರುವಾಗಿದೆ. ಮಾಟೋಳ್ಳಿ ಗ್ರಾಮದ ಬಳಿ ನದಿ ತೀರದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದೆ. ಸುಮಾರು 10 ಅಡಿ ಉದ್ದದ ಮೊಸಳೆ ಕಂಡು ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದ್ದು, ಸ್ಥಳೀಯರೊಬ್ಬರ ಮೊಬೈಲ್ನಲ್ಲಿ ಮೊಸಳೆ ಓಡಾಟದ ದೃಶ್ಯ ಸೆರೆಯಾಗಿದೆ.
4 ದಿನಗಳ ಹಿಂದೆ ವೇದಗಂಗಾ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಮೊಸಳೆ ಕಾಣಿಸಿಕೊಂಡಿದೆ. ಗ್ರಾಮಕ್ಕೆ ನದಿ ನೀರು ನುಗ್ಗಿದ್ದರಿಂದ ಜನರು ಜೀವ ಭಯದಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Sun, 28 July 24