ಮಿತಿಮೀರಿದ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ: 12 ಲಕ್ಷ ರೂ. ಸಾಲಕ್ಕೆ ಕೋಟ್ಯಂತರ ರೂಪಾಯಿ ಆಸ್ತಿ ಜಪ್ತಿ ಆರೋಪ!
ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮೀರಿದ್ದು, 12 ಲಕ್ಷ ರೂ. ಸಾಲಕ್ಕೆ 1.5 ಕೋಟಿ ರೂ. ಮೌಲ್ಯದ 12 ಪ್ಲಾಟ್‌ಗಳನ್ನು ಕಬಳಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಟಗೇರಿ ಠಾಣೆಯಲ್ಲಿ ಏಳು ಜನರ ವಿರುದ್ಧ ದೂರು ದಾಖಲಾಗಿದ್ದರೂ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂದು ಸಂತ್ರಸ್ತ ತಾಯಿ ಸುರೇಖಾ ಮತ್ತು ಮಗಳು ಅಂಬಿಕಾ ಕಬಾಡಿ ಕಣ್ಣೀರಿಡುತ್ತ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.

ಮುಖ್ಯಾಂಶಗಳು
- ಗದಗದಲ್ಲಿ 12 ಲಕ್ಷ ರೂಪಾಯಿ ಸಾಲಕ್ಕೆ ಕೋಟ್ಯಂತರ ಆಸ್ತಿ ಗುಳುಂ.
- ಬಡ್ಡಿ ದಂಧೆಕೋರರಿಂದ ತಾಯಿ-ಮಗಳಿಗೆ ಜೀವ ಬೆದರಿಕೆ ಒಡ್ಡಿ 12 ಪ್ಲಾಟ್ ಕಬಳಿಕೆ.
- ದೂರು ನೀಡಿದ ವರ್ಷವಾದರೂ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸದೇ ನಿರ್ಲಕ್ಷ್ಯ.
ಗದಗ, ಸೆಪ್ಟೆಂಬರ್ 05: ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮೀರಿದ್ದು, ಸಾಲ ನೀಡಿದ ನೆಪದಲ್ಲಿ ಬಡ್ಡಿ ಬಕಾಸುರರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಕಬಳಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಲದ ಸುಳಿಗೆ ಸಿಲುಕಿದ ತಾಯಿ ಸುರೇಖಾ ಕಬಾಡಿ ಹಾಗೂ ಮಗಳು ಅಂಬಿಕಾ ಕಬಾಡಿ ಕುಟುಂಬ ಇದೀಗ ಬೀದಿಗೆ ಬಿದ್ದು ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ.
12 ಲಕ್ಷ ರೂ. ಸಾಲಕ್ಕೆ 1.5 ಕೋಟಿ ರೂ. ಆಸ್ತಿ ಜಪ್ತಿ
ತಾಯಿ-ಮಗಳು ಬಡ್ಡಿ ದಂಧೆಕೋರರಾದ ಯಲ್ಲಪ್ಪ ಮಿಸ್ಕಿನ್ ಹಾಗೂ ಸುನಿಲ್ ಸೇಠ್ ಅವರಿಂದ ತಲಾ 6 ಲಕ್ಷ ರೂ.ನಂತೆ ಒಟ್ಟು 12 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈವರೆಗೆ ಕಂತುಗಳಲ್ಲಿ ಸುಮಾರು 7 ಲಕ್ಷ ರೂ. ಬಡ್ಡಿ ರೂಪದಲ್ಲೇ ಪಾವತಿಸಿದ್ದಾರೆ. ಆದರೆ ಸಾಲದ ಹಣದ ನೆಪದಲ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿದ ದಂಧೆಕೋರರು, ‘ಹಾಫ್ ನೋಂದಣಿ’ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ. ಮೌಲ್ಯದ 12 ಪ್ಲಾಟ್‌ಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ಮಗಳು ಅಂಬಿಕಾ ಕಬಾಡಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 4-5 ಕೋಟಿ ರೂ. ಮೌಲ್ಯದ 9,000 ಚದರ ಮೀಟರ್ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ದೂರು ದಾಖಲಾಗಿ ವರ್ಷವಾದರೂ ಜಾರಿಕೊಳ್ಳುತ್ತಿರುವ ಪೊಲೀಸರು
ಈ ಸಂಬಂಧ 2025ರ ಮಾರ್ಚ್ 15ರಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಂಧೆಕೋರರಾದ ಯಲ್ಲಪ್ಪ ಮಿಸ್ಕಿನ್, ವಿಕಾಸ್ ಮಿಸ್ಕಿನ್, ಸುನಿಲ್ ಸೇಠ್, ಪೂನಮ್ ಸೇಠ್ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ದೂರು ನೀಡಿದ ವರ್ಷ ಕಳೆಯುತ್ತಿದ್ದರೂ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಸಮಾಜದ ಪ್ರಭಾವಿ ಮುಖಂಡರು ಬಡ್ಡಿ ದಂಧೆಕೋರರ ಪರವಾಗಿ ನಿಂತು ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ತಾಯಿ-ಮಗಳು ಕಣ್ಣೀರಿಡುತ್ತಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




