AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ಪಾತಾಳಕ್ಕೆ ಕುಸಿದ ಈರುಳ್ಳಿ ದರ: ಕ್ವಿಂಟಾಲ್​ಗೆ ₹6 ಸಾವಿರದಿಂದ ₹2,500ಕ್ಕೆ ಇಳಿಕೆ

ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿದಿದ್ದು, ನಾಲ್ಕು ದಿನಗಳ ಹಿಂದೆ ಕ್ವಿಂಟಾಲ್‌ಗೆ ₹5,000ರಿಂದ ₹6,000ರವರೆಗೆ ಇದ್ದ ಬೆಲೆ ಈಗ ₹2,500ರಿಂದ ₹3,500ಕ್ಕೆ ಇಳಿಕೆಯಾಗಿದೆ. ದಲ್ಲಾಳಿಗಳ ಕುತಂತ್ರದಿಂದಲೇ ದರ ಕುಸಿತವಾಗಿದೆ ಎಂದು ಆರೋಪಿಸಿರುವ ರೈತರು, ಕನಿಷ್ಠ ₹6,000 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ.

ದಿಢೀರ್ ಪಾತಾಳಕ್ಕೆ ಕುಸಿದ ಈರುಳ್ಳಿ ದರ: ಕ್ವಿಂಟಾಲ್​ಗೆ ₹6 ಸಾವಿರದಿಂದ ₹2,500ಕ್ಕೆ ಇಳಿಕೆ
ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ರಾಶಿ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Oct 29, 2026 | 2:29 PM

Share

ಮುಖ್ಯಾಂಶಗಳು

  • ಗದಗದಲ್ಲಿ ದಿಢೀರ್ ಕುಸಿದ ಈರುಳ್ಳಿ ದರ
  • ಕ್ವಿಂಟಾಲ್‌ಗೆ ₹6 ಸಾವಿರದಿಂದ ₹2,500ಕ್ಕೆ ಇಳಿಕೆ
  • ದಲ್ಲಾಳಿಗಳ ವಿರುದ್ಧ ರೈತರ ಗಂಭೀರ ಆರೋಪ

ಗದಗ, ಅಕ್ಟೋಬರ್ 29: ಗದಗ, ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಈಗ ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ ₹60ರಿಂದ ₹70ರವರೆಗೆ ಬೆಲೆ ಕಂಡಿದ್ದ ಈರುಳ್ಳಿ ದರ ದಿಢೀರ್ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ನಾಲ್ಕು ದಿನಗಳ ಹಿಂದೆ ಕ್ವಿಂಟಾಲ್‌ಗೆ ₹5,000ರಿಂದ ₹6,000ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ ₹2,500ರಿಂದ ₹3,500ಕ್ಕೆ ಇಳಿಕೆಯಾಗಿದೆ. ದಿಢೀರ್ ಬೆಲೆ ಕುಸಿತದಿಂದ ಆಕ್ರೋಶಗೊಂಡಿರುವ ರೈತರು, ದಲ್ಲಾಳಿಗಳ ಆಟಕ್ಕೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದಲ್ಲಾಳಿಗಳ ಕುತಂತ್ರದಿಂದ ದರ ಕುಸಿತ: ರೈತರ ಆರೋಪ

ಗದಗ ನಗರದ ಎಪಿಎಂಸಿ ಆವರಣದಲ್ಲಿ ಎಲ್ಲಿ ನೋಡಿದರೂ ಈರುಳ್ಳಿ ರಾಶಿಗಳೇ ಕಾಣಿಸುತ್ತಿವೆ. ಭೀಕರ ಬರದ ನಡುವೆಯೂ ಕಷ್ಟಪಟ್ಟು ಈರುಳ್ಳಿ ಬೆಳೆದ ರೈತರು, ಉತ್ತಮ ಇಳುವರಿ ಮತ್ತು ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ನಾಲ್ಕು ದಿನಗಳ ಹಿಂದಷ್ಟೇ ₹5,000ರಿಂದ ₹6,000ರವರೆಗೆ ಇದ್ದ ಕ್ವಿಂಟಾಲ್ ಈರುಳ್ಳಿ ದರ ಈಗ ದಿಢೀರ್ ಕುಸಿದಿರುವುದು ರೈತರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ.

ಈರುಳ್ಳಿ ದರ ಕುಸಿತಕ್ಕೆ ದಲ್ಲಾಳಿಗಳ ಕುತಂತ್ರವೇ ಕಾರಣ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದಾಗ ಬೆಲೆ ಹೆಚ್ಚಿಸುವಂತೆ ವರ್ತಿಸುವ ದಲ್ಲಾಳಿಗಳು, ಕ್ಯಾಮೆರಾಗಳು ಹೋದ ಬಳಿಕ ಮತ್ತೆ ದರ ಇಳಿಸುತ್ತಾರೆ ಎಂಬುದು ರೈತರ ಆರೋಪ. ಈ ಆಟದಿಂದ ಈರುಳ್ಳಿ ಬೆಳೆದ ಅನ್ನದಾತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡವಾಳವೂ ವಾಪಸ್ ಬಾರದೆ ರೈತರು ಕಂಗಾಲು

ಈರುಳ್ಳಿ ಬಿತ್ತನೆ, ಕೂಲಿ ಕಾರ್ಮಿಕರ ಸಂಬಳ ಸೇರಿದಂತೆ ಬೆಳೆಗೆ ಸಾವಿರಾರು ರೂಪಾಯಿ ಬಂಡವಾಳ ಹೂಡಿರುವ ರೈತರಿಗೆ ಈಗ ಬೆಲೆ ಕುಸಿತದ ಹೊಡೆತ ಬಿದ್ದಿದೆ. ಹಾಕಿದ ಬಂಡವಾಳವನ್ನಾದರೂ ವಾಪಸ್ ಪಡೆಯಲು ಸಾಧ್ಯವಾಗದಿದ್ದರೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಬಂದು ದಲ್ಲಾಳಿಗಳ ಆಟಕ್ಕೆ ಕಡಿವಾಣ ಹಾಕುತ್ತಿಲ್ಲ. ಜಿಲ್ಲಾಡಳಿತವೂ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕ್ವಿಂಟಾಲ್‌ಗೆ ಕನಿಷ್ಠ ₹6 ಸಾವಿರ ಬೆಲೆಗೆ ಆಗ್ರಹ

ಈರುಳ್ಳಿ ಬೆಳೆಗಾರರು ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಕ್ವಿಂಟಾಲ್ ಈರುಳ್ಳಿಗೆ ಕನಿಷ್ಠ ₹6,000 ಬೆಲೆ ನಿಗದಿಪಡಿಸಬೇಕು. ರೈತರ ಹಿತ ಕಾಪಾಡಲು ಎಪಿಎಂಸಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ, ರೈತರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಈರುಳ್ಳಿ ಬೆಲೆ ದಿಢೀರ್​ ಏರಿಕೆ: ಕಟ್ ಮಾಡದಿದ್ದರೂ ಗ್ರಾಹಕರಲ್ಲಿ ಕಣ್ಣೀರು ತರಿಸಿದ ದರ

ಒಟ್ಟಿನಲ್ಲಿ, ಈರುಳ್ಳಿ ಬೆಲೆ ಏರಿಕೆಯಾದಾಗ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದರೆ, ಬೆಲೆ ಕುಸಿದಾಗ ರೈತರು ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿನ ದರ ಕುಸಿತದಿಂದ ರೈತರು ಕಂಗಾಲಾಗಿದ್ದು, ಅವರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಎಪಿಎಂಸಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More