ಗದಗ: ಹೆತ್ತಮ್ಮನಿಗೇ ಮಹಾಮೋಸ ಮಾಡಿದ ಪುತ್ರ, ಆಕೆಗೆ ಮಾಡಿದ್ದೇನು? ಇಲ್ಲಿದೆ ಕಣ್ಣೀರ ಕಹಾನಿ
ಮಗನಿಂದ ಮೋಸ ಹೋದ ತಾಯಿ ಮಗನ ಬರುವಿಕೆಗಾಗಿ, ಸೊಸೆಯ ಮನೆ ಮುಂದೆ ಕುಳಿತಿರುವ ವಿಷಯ ಪೊಲೀಸರಿಗೆ ಗೊತ್ತಾಗಿದೆ. ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಬಂದು, ಬಾಳಮ್ಮನನ್ನು ಕರೆದುಕೊಂಡು ಹೋಗಿದ್ದಾರೆ. ಪುತ್ರ ಶಿವಾನಂದನ ಪತ್ತೆ ಕಾರ್ಯದಲ್ಲಿದ್ದಾರೆ.
ತಾಯಿ ತನ್ನ ಮಕ್ಕಳನ್ನು ಹೆತ್ತು ಹೊತ್ತು ಬೆಳೆಸಿ ದೊಡ್ಡವರನ್ನಾಗಿ ಮಾಡ್ತಾರೆ. ಮುಪ್ಪಿನ ವಯಸ್ಸಿನಲ್ಲಿ ಹೆತ್ತ ಮಕ್ಕಳು ತನ್ನನ್ನು ಚೆನ್ನಾಗಿ ನೋಡಿಕೊಳ್ತಾರೆ ಅಂತಾ ನೂರಾರು ಕನಸು ಕಟ್ಟಿಕೊಂಡಿರುತ್ತಾರೆ. ಆದ್ರೆ, ಇಲ್ಲೊಬ್ಬ ಸುಪುತ್ರ, ತನ್ನ ಹೆತ್ತಮ್ಮನಿಗೇ (mother) ಮಹಾಮೋಸ ಮಾಡಿದ್ದಾನೆ. ಹೌದು ಹೆತ್ತಮ್ಮ ಕಷ್ಟಪಟ್ಟು ದುಡಿದ ಹಣವನ್ನು ಲಪಟಾಯಿಸಿಕೊಂಡು, ಆಕೆಯನ್ನು ಬೀದಿಗೆ ತಳ್ಳಿದ್ದಾನೆ. ಹೆತ್ತಮ್ಮನಿಗೆ ಆಸರೆ ಇಲ್ಲದೆ ನ್ಯಾಯಕ್ಕಾಗಿ ಪುತ್ರನ ಮನೆ ಮುಂದೆ ಕಣ್ಣೀರು ಹಾಕ್ತಾ ಇದ್ದಾಳೆ. ಪುತ್ರ (Son) ಹಾಗೂ ಕುಟುಂಬಕ್ಕೆ ಇಡೀ ಊರೇ ಛೀ ಥೂ ಅಂತಿದೆ. ಹೆತ್ತ ತಾಯಿಗೆ ಮಹಾಮೋಸ ಮಾಡಿ ಬೀದಿಗೆ ತಳ್ಳಿದ್ದಾನೆ ಮಗ! ಚಿನ್ನ, ಬೆಳ್ಳಿ, ಹಣವನ್ನು ನಯವಾಗಿ ಲಪಟಾಯಿಸಿಕೊಂಡು ಮಗ ನಾಪತ್ತೆಯಾಗಿದ್ದಾನೆ! ತಾಯಿ ಹಣ ವಂಚಿಸಿ ಹೆಂಡತಿ ಮನೆ ಸೇರಿಕೊಂಡಿದ್ದಾನೆ ಹೆತ್ತಮಗ! ಆಶ್ರಯ ಹಾಗೂ ಹಣಕ್ಕಾಗಿ ಸೊಸೆ ಮನೆ ಮುಂದೆ ಕುಳಿತು ತಾಯಿ ಕಣ್ಣೀರು ಹಾಕ್ತಿದಾರೆ! ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ! ಸೊಸೆ ಮನೆ ಮುಂದೆ ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ತಾಯಿ ಹೋರಾಟ ನಡೆಸಿದ್ದಾಳೆ. ವೃದ್ಧ ಜೀವಕ್ಕೆ ಬೆಂಬಲವಾಗಿ ಅಲ್ಲಿದ್ದ ಮಹಿಳೆಯರು ಸೊಸೆ ಹಾಗೂ ಕುಟುಂಬಸ್ಥರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ವಾಗ್ವಾದ, ರಂಪಾಟ. ತಾಯಿ ಕಣ್ಣೀರು – ಈ ಎಲ್ಲ ಚಿತ್ರಣಗಳು ಕಂಡಿದ್ದು ಗದಗ ತಾಲೂಕಿನ (Gadag taluk) ಹರ್ಲಾಪೂರ ಗ್ರಾಮದಲ್ಲಿ (Harlapur village).
ಚಿನ್ನ, ಬೆಳ್ಳಿ, ಹಣವನ್ನು ಕಳೆದುಕೊಂಡು ತಾಯಿ ಬಾಳಮ್ಮ ಕಂಗಾಲಾಗಿದ್ದಾರೆ. ಅಷ್ಟಕ್ಕೂ ಇಲ್ಲಿ ಹೆತ್ತ ಕರುಳಿಗೆ ಮೋಸ ಮಾಡಿದ್ದು ಬೇರೆ ಯಾರೋ ಅಲ್ಲ ಹೊಟ್ಟೆಯಲ್ಲಿ ಹುಟ್ಟಿದ ಮಗ. ಇಳಿ ವಯಸ್ಸಿನಲ್ಲಿ ತಾಯಿ ಆರೈಕೆ, ಸೇವೆ ಮಾಡಬೇಕಿದ್ದ ಪುತ್ರ ತಾಯಿ ದುಡಿದ ಲಕ್ಷಾಂತರ ಹಣವನ್ನು ಮೋಸ ಮಾಡಿ ಪಡೆದು ನಾಪತ್ತೆಯಾಗಿದ್ದಾನೆ. ಮಗನನ್ನು ಹುಡುಕಿಕೊಂಡು ತಾಯಿ ತನ್ನ ಸೊಸೆಯ ಮನೆ ಮುಂದೆ ಧರಣಿ ಮಾಡುತ್ತಿದ್ದಾರೆ.
ಸೊಸೆ ಮನೆ ಮುಂದೆ ಡಿಸೇಲ್ ಬಾಟಲ್ ಹಿಡಿದುಕೊಂಡು ಮಗನ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡ್ತಾಯಿದ್ದಾರೆ. ಮಹಿಳಾ ಸಂಘದ ಸದಸ್ಯರು ಹಾಗೂ ಪೊಲೀಸರು ಹಿರಿಯ ಜೀವಕ್ಕೆ ಸಾಥ್ ನೀಡಿದ್ದಾರೆ. ಅಂದಹಾಗೇ ಬಾಳಮ್ಮ ಎನ್ಮುವ ಮಹಿಳೆ ಸ್ವತಃ ಮಗನಿಂದಲೇ ಹೀಗೆ ಮೋಸ ಹೋಗಿದ್ದಾರೆ. ಬಾಳಮ್ಮ ಗದಗ ನಗರದಲ್ಲಿ ವಾಸ ಮಾಡ್ತಾಯಿದ್ದು, ಶ್ರೀಮಂತರ ಮನೆಯಲ್ಲಿ ಅಡುಗೆ ಮಾಡಿ, ಸ್ವಲ್ಪ ಚಿನ್ನ, ಬೆಳ್ಳಿ ಹಾಗೂ 5 ಲಕ್ಷ 50 ಸಾವಿರ ರೂಪಾಯಿ ಕೂಡಿ ಹಾಕಿದ್ದರು.
ಇದನ್ನೂ ಓದಿ: Digital Rupee: ಆರ್ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ
ಬಾಳಮ್ಮನ ಮಗ ಶಿವಾನಂದ ತನ್ನ ತಾಯಿಯ ಜೊತೆ ನಯವಾಗಿ ಮಾತನಾಡಿ, ನಿನಗೆ ಒಂದು ಸೈಟ್ ಹಿಡಿದುಕೊಡುತ್ತೇನೆ ಅಂತಾ, 5 ಲಕ್ಷ 50 ಸಾವಿರ ರೂಪಾಯಿ ಹಣವನ್ನು ತೆಗೆದುಕೊಂಡು, ತಾನೊಂದು, ಹಾಗೂ ತನ್ನ ಹೆಂಡತಿ ಹೆಸರಿನಿಂದಲೇ ಸೈಟ್ ಮಾಡಿದ್ದಾನಂತೆ. ಆದ್ರೆ, ತಾಯಿಗೆ ಸೈಟ್ ನೀಡಿಲ್ಲ, ತಾಯಿಗೆ ವಯಸ್ಸಾಗಿದ್ದು, ಮುಪ್ಪಾ ವಯಸ್ಸಿನಲ್ಲಿ ತಾಯಿ ಅನಾಥವಾಗಿದ್ದಾರೆ. ಈಗ ಬದುಕಿಗೆ ಆಸರೆಯಾಗಿದ್ದ ಹಣವೂ ಇಲ್ಲ, ಮಗನ ಆಶ್ರಯವೂ ಇಲ್ಲ. ಹೀಗಾಗಿ ನನಗೆ ಹಣ ಕೊಡಿಸಿ ಎಂದು ಸೊಸೆ ಮನೆ ಮುಂದೆ ನ್ಯಾಯಕ್ಕಾಗಿ ಧರಣಿ ನಡೆಸಿದ್ದಾರೆ ಮೋಸ ಹೋದ ತಾಯಿ ಬಾಳಮ್ಮ.
ಇನ್ನು ಬಾಳಮ್ಮನ ಗಂಡ ಮದ್ಯ ಸೇವನೆ ಮಾಡಿ ಬಂದು ಗಲಾಟೆ ಮಾಡ್ತಾಯಿದ್ದ. ಆದರೆ ಬಾಳಮ್ಮ ತನ್ನ ಮೂವರು ಮಕ್ಕಳೊಂದಿಗೆ ಗದಗದಲ್ಲಿ ಕೂಲಿ ನಾಲಿ ಮಾಡಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ್ದಾರೆ. ಮೂವರು ಮಕ್ಕಳು ಮದುವೆ ಮಾಡಿಕೊಂಡು ತಮ್ಮಷ್ಟಕ್ಕೆ ತಾವು ಜೀವನ ನಡೆಸುತ್ತಿದ್ದಾರೆ. ಬಾಳಮ್ಮ ಒಬ್ಬರೇ ಜೀವನ ನಡೆಸುತ್ತಿದ್ದರು. ಈ ವೇಳೆ ಶಿವಾನಂದ ನಿನಗೆ ನಾನು ಆಶ್ರಯ ನೀಡುತ್ತೇನೆ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ, ನಯವಾಗಿ ತಾಯಿ ಹತ್ತಿರ ಇರೋ ಹಣವನ್ನು ಲಪಟಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ.
ಎಲ್ಲಾ ಕಡೇ ಹುಡುಕಾಟ ನಡೆಸಿದ ನಂತ್ರ ಶಿವಾನಂದ ತನ್ನ ಹೆಂಡತಿ ಮನೆಯಾದ ಹರ್ಲಾಪುರ ಗ್ರಾಮದಲ್ಲಿರೋದರು ಗೊತ್ತಾಗಿದೆ. ಮಗ ಸಿಗ್ತಾನೆ ಎಂದು, ಹರ್ಲಾಪುರ ಗ್ರಾಮದ ಸೊಸೆ ಮನೆ ಮುಂದೆ ಹಣ ನೀಡುವಂತೆ ಧರಣಿ ಕುಳಿತಿದ್ದಾರೆ ಬಾಳಮ್ಮ. ಆದ್ರೆ, ಸೊಸೆ ಹಾಗೂ ಸೊಸೆ ಸಂಬಂಧಿಕರು, ಬಾಳಮ್ಮಳನ್ನು ಮನೆಗೆ ಸೇರಿಸಿಲ್ಲ. ಮಗ ಶಿವಾನಂದ ಕೂಡಾ ನಾಪತ್ತೆಯಾಗಿದ್ದಾನೆ. ಹೀಗಾಗಿ ಮಹಿಳಾ ಸಂಘದ ಸದಸ್ಯರು ಬಾಳಮ್ಮ ಪರವಾಗಿ ನಿಂತಿದ್ದು, ಮಗನಿಂದ ಅನ್ಯಾಯಕ್ಕೆ ಒಳಗಾದ ತಾಯಿಗೆ ನ್ಯಾಯ ಸಿಗಬೇಕು ಅಂತಾ ಪಟ್ಟು ಹಿಡಿದಿರುವುದಾಗಿ ಮಹಿಳಾ ದೌರ್ಜನ್ಯ ಸಮಿತಿ ಸದಸ್ಯೆ ಪೂಜಾ ಬೇವೂರ ಹೇಳಿದ್ದಾರೆ.
ಮಗನಿಂದ ಮೋಸ ಹೋದ ತಾಯಿ, ಡೀಸೆಲ್ ಬಾಟಲಿ ಹಿಡಿದುಕೊಂಡು, ಮಗನ ಬರುವಿಕೆಗಾಗಿ, ಸೊಸೆ ಮನೆ ಮುಂದೆ ಕುಳಿತಿರುವ ವಿಷಯ ಪೊಲೀಸರಿಗೆ ಗೊತ್ತಾಗಿದೆ. ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಬಂದು, ಬಾಳಮ್ಮನನ್ನು ಕರೆದುಕೊಂಡು ಹೋಗಿದ್ದಾರೆ. ನಾಪತ್ತೆಯಾದ ಪುತ್ರ ಶಿವಾನಂದನನ್ನು ಪತ್ತೆ ಮಾಡಿ, ಬಾಳಮ್ಮಗೆ ನ್ಯಾಯ ಕೊಡಿಸಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ
ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Thu, 15 December 22