AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸಮವಸ್ತ್ರ, ಶೂ ನೀಡಲು ಕ್ಯಾಬಿನೆಟ್​ ಅಸ್ತು

ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಭಾಗ್ಯ, ಬೀಳಗಿ ಏತ ನೀರಾವರಿ ಯೋಜನೆ ಮತ್ತು ಕಲಬುರಗಿಯ ಜವಳಿ ಪಾರ್ಕ್ ಅಭಿವೃದ್ಧಿಗೆ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸಮವಸ್ತ್ರ, ಶೂ ನೀಡಲು ಕ್ಯಾಬಿನೆಟ್​ ಅಸ್ತು
ಸಚಿವ ಸಂಪುಟImage Credit source: Getty images
ಹರೀಶ್ ಜಿ.ಆರ್​.
| Edited By: |

Updated on: Jul 02, 2026 | 6:43 PM

Share

ಮುಖ್ಯಾಂಶಗಳು

  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಸೌಲಭ್ಯ
  • ಬೀಳಗಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
  • ಎನ್‌ಜಿಇಎಫ್‌ ಸಂಸ್ಥೆ ಟ್ರೀ ಪಾರ್ಕ್​ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ

ಬೆಂಗಳೂರು, ಜುಲೈ 02: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ (Cabinet) ಸಭೆಯಲ್ಲಿ ಪ್ರಮುಖ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಮುಖವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕ್ರೀಡಾ ಉಡುಪು ಹಾಗೂ ಶೂ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 33.06 ಕೋಟಿ ರೂ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.

ಬೀಳಗಿ ಏತ ನೀರಾವರಿ ಯೋಜನೆಗೆ ಅನುಮೋದನೆ

ಬಾಗಲಕೋಟೆ ಜಿಲ್ಲೆಯ ರೈತರಿಗೆ ಸಂಪುಟ ಸಭೆಯು ಸಿಹಿ ಸುದ್ದಿ ನೀಡಿದ್ದು, ಬೀಳಗಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಸೂಚಿಸಿದೆ. ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಬಳಿ ಕೃಷ್ಣಾ ನದಿಯಿಂದ ನೀರೆತ್ತಿ, ಘಟಪ್ರಭಾ ಎಡದಂಡೆ ಕಾಲುವೆಯಡಿ ಬರುವ ಬೀಳಗಿ ಶಾಖಾ ಕಾಲುವೆಯ 38 ಕಿ.ಮೀ. ನಿಂದ 44 ಕಿ.ಮೀ. ವರೆಗಿನ ಬಾಧಿತ ಹಾಗೂ ಹೊಸ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಒಟ್ಟು 98.50 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ನೇತ್ರ ಉಪಕರಣಗಳನ್ನು ಖರೀದಿಸಲು ಕ್ಯಾಬಿನೆಟ್​ನಲ್ಲಿ ಅನುಮೋದನೆ

ರಾಷ್ಟ್ರೀಯ ಅಂಧತ್ವ ನಿಯಂತ್ರಣ ಮತ್ತು ದೃಷ್ಟಿಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯದಲ್ಲಿ ಕಣ್ಣಿನ ಆರೈಕೆ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಅತ್ಯಾಧುನಿಕ ನೇತ್ರ ಉಪಕರಣಗಳನ್ನು ಖರೀದಿಸಲು ಕ್ಯಾಬಿನೆಟ್‌ ಅಸ್ತು ಎಂದಿದೆ. ಇದಕ್ಕಾಗಿ 25.95 ಕೋಟಿ ರೂ ಅಂದಾಜು ಮೊತ್ತವನ್ನು ಕಾಯ್ದಿರಿಸಲಾಗಿದೆ.

ಇದನ್ನೂ ಓದಿ: ಹಿರಿಯ IAS ಅಧಿಕಾರಿಗಳ ವರ್ಗಾವಣೆ: ಹೊಸ ಪ್ರಜಾಸೇವೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ನೇಮಕ

ಇನ್ನು ಕಲಬುರಗಿಯ ಜವಳಿ ಪಾರ್ಕ್ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪಿಎಂ-ಮಿತ್ರ’ ಯೋಜನೆಯಡಿ ಜವಳಿ ಪಾರ್ಕ್ ಅನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. 26.23 ಕೋಟಿ ವೆಚ್ಚದಲ್ಲಿ ಎನ್‌ಜಿಇಎಫ್‌ ಸಂಸ್ಥೆ ‘ಟ್ರೀ ಪಾರ್ಕ್-ಫೇಸ್-1ಬಿ’ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ.

ಸರ್ಕಾರವೇ ಜನರ ಬಳಿ ಹೋಗಲಿದೆ ಎಂದ ಡಿಕೆ ಶಿವಕುಮಾರ್​

ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಜನರ ಸಮಸ್ಯೆ ಆಲಿಸಲು ಹೊಸ ಇಲಾಖೆ ಆರಂಭಿಸಿದ್ದು, ಪ್ರಜಾಸೇವೆ ಇಲಾಖೆ ಎಂದು ನಾಮಕರಣ ಮಾಡಿದ್ದೇವೆ. ಯಾವುದೇ ಸಮಸ್ಯೆಗಳನ್ನು ಈ ಇಲಾಖೆಯಲ್ಲಿ ಹೇಳಿಕೊಳ್ಳಬಹುದು. ಪ್ರಜಾಸೇವೆ ಇಲಾಖೆಗೆ ಐಎಎಸ್ ಅಧಿಕಾರಿ ನೇಮಕ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಜಾಸೇವೆ ಇಲಾಖೆಯಲ್ಲಿ ಎಲ್ಲಾ ಇಲಾಖೆಗಳ ಕೌಂಟರ್ ಇರಲಿದೆ. ಬೇಡಿಕೆ, ಸಮಸ್ಯೆಗಳಿದ್ದವರೂ ಕೌಂಟರ್​ನಲ್ಲಿ ಸಲ್ಲಿಕೆ ಮಾಡಬಹುದು. ಜನರು ಬೆಂಗಳೂರಿಗೆ ಬಂದು ಸಮಸ್ಯೆ ಹೇಳಿಕೊಳ್ಳುವ ಬದಲು, ಸರ್ಕಾರವೇ ಜನರ ಬಳಿ ಹೋಗಲಿದೆ. ನಾನು ಕೂಡ ಕೆಲವು ತಾಲೂಕುಗಳಿಗೆ ಪ್ರವಾಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ, ಎಷ್ಟು ಹೆಚ್ಚಳ? ಯಾವಾಗಿನಿಂದ ಜಾರಿಗೆ?

ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರ ಸಿದ್ಧವಿಲ್ಲ. ವಿದ್ಯುತ್ ಸರಬರಾಜು ಸಂಸ್ಥೆಗಳು ಆಕ್ಷೇಪಣೆ ಸಲ್ಲಿಸಲು ಹೇಳಿದ್ದೇನೆ. ಖಾಸಗೀಕರಣಕ್ಕೆ ಸರ್ಕಾರದ ಸಹಮತ ಇಲ್ಲ ಎಂದು ಹೇಳಿದ್ದೇವೆ. ಸರ್ಕಾರದ ಅಭಿಪ್ರಾಯವನ್ನು ನಿಗಮಗಳಿಗೆ ತಿಳಿಸಿದ್ದೇವೆ ಎಂದಿದ್ದಾರೆ.

ಜಲಾಶಯ ತುಂಬುವವರೆಗೆ ಬೆಳೆ ಬೆಳೆಯ ಬೇಡಿ ಎಂದ ಸಿಎಂ 

ಇನ್ನು ರಾಜ್ಯದಲ್ಲಿ ತೀವ್ರ ಬರ ಇದೆ. ನೀರು ಮತ್ತು ವಿದ್ಯುತ್​ಗೆ ಅಭಾವ ಇದೆ. ವಿದ್ಯುತ್ ಅಭಾವ ತಪ್ಪಿಸಲು ಪರ್ಯಾಯದತ್ತ ಗಮನಹರಿಸಬೇಕಿದೆ. ಬರಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡುತ್ತೇನೆ. ರಾಜ್ಯದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ. ನೀರಿಲ್ಲ ಹೀಗಾಗಿ ರೈತರು ಜಲಾಶಯ ತುಂಬುವವರೆಗೆ ಬೆಳೆ ಬೆಳೆಯಲು ಹೋಗಬೇಡಿ. ಈ ಬಾರಿ ಇಡೀ ದೇಶದಲ್ಲಿಯೇ ಭೀಕರ ಬರಗಾಲ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us