ಹಾಸನ: ಶಾಲಾ ಕೊಠಡಿಯ ಮೇಲೆ ರೈಲು ಬೋಗಿಯ ಚಿತ್ತಾರ; ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಿನೂತನ ಪ್ರಯತ್ನ
ನೋಡುವುದಕ್ಕೆ ಥೇಟ್ ರೈಲು ಬೋಗಿಯಂತೆ ಕಾಣುವ ಈ ಶಾಲಾ ಕೊಠಡಿ ಸಿದ್ಧವಾಗಿರುವುದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ. ಶಿಕ್ಷಕರ ಪರಿಶ್ರಮದಿಂದ ವಿಶೀಷ್ಟವಾಗಿ ಅತ್ಯಂತ ಆಕರ್ಷಕವಾಗಿ ಕಾಣುತ್ತಿರುವ ಈ ಶಾಲಾ ಕೊಠಡಿ ಮಕ್ಕಳನ್ನು ಸೆಳೆಯುವ ಪ್ರಮುಖ ಕೇಂದ್ರ ಬಿಂದುವಾಗಿದೆ.
ಹಾಸನ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೊವಿಡ್ ಮಹಾಮಾರಿಯಿಂದ ರಾಜ್ಯದಲ್ಲಿ ಬಂದ್ ಆಗಿದ್ದ ಹಿರಿಯ ಪ್ರಾಥಮಿಕ ಶಾಲೆಗಳು ಒಂದೂವರೆ ವರ್ಷಗಳ ಬಳಿಕ ಇಂದು ಆರಂಭವಾಗುತ್ತಿದೆ. ಅದರಂತೆ ಹಾಸನ ಜಿಲ್ಲೆಯ 3 ಸಾವಿರಕ್ಕೂ ಅಧಿಕ ಶಾಲೆಯಲ್ಲಿ 65 ಸಾವಿರ ಚಿಣ್ಣರು ಇಂದಿನಿಂದ ಶಾಲೆಗೆ ಹೋಗುವುದಕ್ಕೆ ಸಿದ್ಧರಾಗಿದ್ದಾರೆ. ಶಿಕ್ಷಣ ಇಲಾಖೆ ಕೂಡ ಕೊವಿಡ್ ಮಾರ್ಗಸೂಚಿ ಪಾಲಿಸಿ ಶಾಲೆ ಆರಂಭಕ್ಕೆ ತಯಾರಿ ಕೂಡ ಮಾಡಿಕೊಂಡಿದೆ. ಆದರೆ ಅದೊಂದು ಊರಿನ ಶಾಲೆಯ ಚಿಣ್ಣರು ಇಂದಿನಿಂದ ರೈಲು ಹತ್ತುವುದಕ್ಕೆ ಸಿದ್ಧರಾಗಬೇಕಿದೆ. ಅದ್ಯಾಕೆ ಮಕ್ಕಳು ರೈಲು ಹತ್ತಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ನೋಡುವುದಕ್ಕೆ ಥೇಟ್ ರೈಲು ಬೋಗಿಯಂತೆ ಕಾಣುವ ಈ ಶಾಲಾ ಕೊಠಡಿ ಸಿದ್ಧವಾಗಿರುವುದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ. ಶಿಕ್ಷಕರ ಪರಿಶ್ರಮದಿಂದ ವಿಶೀಷ್ಟವಾಗಿ ಅತ್ಯಂತ ಆಕರ್ಷಕವಾಗಿ ಕಾಣುತ್ತಿರುವ ಈ ಶಾಲಾ ಕೊಠಡಿ ಮಕ್ಕಳನ್ನು ಸೆಳೆಯುವ ಪ್ರಮುಖ ಕೇಂದ್ರ ಬಿಂದುವಾಗಿದೆ. ಸರ್ಕಾರಿ ಶಾಲೆಗಳು ಅಂದರೆ ಮೂಗು ಮುರಿಯುವವರಿಗೆ ಈ ಶಾಲೆ ಉತ್ತರವಾಗಿದೆ. ಶಾಲೆಯಲ್ಲಿನ ಶಿಕ್ಷಕರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಯಾದರೇನು, ಅದು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಇರಬಲ್ಲದು ಎಂದು ಇಲ್ಲಿನ ಶಿಕ್ಷಕರು ಸಾಧಿಸಿ ತೋರಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾಳನಕೊಪ್ಪಲು ಗ್ರಾಮದ ಈ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಈಗ ಇಡೀ ಜಿಲ್ಲೆಯ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಶಾಲಾ ಕೊಠಡಿಗೆ ಮಾಡಲಾಗಿರುವ ಪೇಂಟ್. ಶಾಲೆಯಲ್ಲಿ ಆರು ಕೊಠಡಿಗಳಿದ್ದು, ಅವುಗಲ್ಲಿ ನಾಲ್ಕು ಕೊಠಡಿಗಳನ್ನು ಸೇರಿಸಿ ರೈಲಿನ ರೂಪ ನೀಡಲಾಗಿದೆ. ಕಟ್ಟಡದ ಮೊದಲನೆ ಕೊಠಡಿಯ ಒಂದು ಬದಿಗೆ ರೈಲಿನ ಇಂಜಿನ್ ಮುಂಬಾಗದ ಚಿತ್ರ ಬಿಡಿಸಲಾಗಿದೆ. ಮೊದಲನೆ ಕೊಠಡಿಯನ್ನು ಇಂಜಿನ್ ಮಾದರಿಯಲ್ಲೇ ಬಣ್ಣ ಬಳಿದು ಉಳಿದ ಮೂರು ಕೊಠಡಿಯನ್ನು ಒಂದೊಂದು ಬೋಗಿಯಾಗಿ ಚಿತ್ರಿಸಿ ಮೂರು ಬೋಗಿಯ ಒಂದು ಪುಟಾಣಿ ರೈಲು ಇಲ್ಲಿ ನೆಲದ ಮೇಲೆ ನಿಂತಿದೆ ಎನ್ನುವಂತೆ ಸಿದ್ಧಮಾಡಲಾಗಿದೆ.
ಬಡಮಕ್ಕಳು ಕಲಿಯುವ ಶಾಲೆಗೆ ಹೊಸ ರೂಪಕೊಟ್ಟ ಶಿಕ್ಷಕ ವೃಂದ ಕಾಳನಕೊಪ್ಪಲಿನ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ತರಗತಿಗಳಿದ್ದು, 48 ಬಾಲಕಿಯರು, 62 ಬಾಲಕರು ಸೇರಿ 110 ಮಕ್ಕಳು ಕಲಿಯುತ್ತಿದ್ದಾರೆ. ಅರಸೀಕೆರೆ ನಗರಕ್ಕೆ ಹೊಂದಿಕೊಂಡಂತೆ ಇರುವ ಈ ಶಾಲೆಗೆ ಬಡ ಕೂಲಿಜನರ ಮಕ್ಕಳು, ಕಾರ್ಮಿಕರ ಮಕ್ಕಳು, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಮಕ್ಕಳು ಬರುತ್ತಾರೆ. ಬಡ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಸಿಗಬೇಕು, ಇರುವ ವ್ಯವಸ್ಥೆಯಲ್ಲೇ ಉತ್ತಮ ಶಿಕ್ಷಣ ಸಿಗಬೇಕು ಎಂದು ತೀರ್ಮಾನಿಸಿದ ಇಲ್ಲಿನ ಆರು ಜನರ ಶಿಕ್ಷಕ ವೃಂದ, ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಬಂದಿಲ್ಲ. ಶಾಲೆ ತೆರೆಯುವ ಮುನ್ನ ನಮ್ಮ ಶಾಲೆಗೆ ಹೊಸ ರೂಪ ಕೊಡಬೇಕು, ಗಮನಸೆಳೆಯೋ ರೀತಿಯಲ್ಲಿ ಮಾಡಬೇಕು ಎಂದು ಆಲೋಚನೆ ಮಾಡಿದ್ದಾರೆ.
ಶಾಲಾ ಮುಖ್ಯೋಪದ್ಯಾಯರಾದ ವೈ.ಸಿ. ಮಲ್ಲೇಶ್ ಜೊತೆ ಸೇರಿದ ಶಿಕ್ಷಕರಾದ ಬಿ.ಆರ್.ವೀಣಾ, ಕೆ.ಟಿ.ವೀಣಾ, ಪಂಕಜಾ, ಎಸ್.ಆರ್.ತಿಮ್ಮೇಗೌಡ, ಮಂಜಮ್ಮರ ತಂಡ ಅಂದುಕೊಂಡಂತೆ ಶಾಲೆ ಆರಂಭ ಆಗುವ ವೇಳೆಗೆ ಇಡೀ ಶಾಲೆಯ ಚಿತ್ರಣವನ್ನೇ ಬದಲು ಮಾಡಿಬಿಟ್ಟಿದ್ದಾರೆ, ಶಾಲೆಗೆ ಬರುವ ಮಕ್ಕಳು ಕೊಠಡಿಗೆ ಬರುವಾಗ ರೈಲು ಬೋಗಿ ಹತ್ತಿದಂತೇ ಬಾಸವಾಗುವಂತೆ ಬಣ್ಣ ಬಳಿದು ಚಿತ್ರ ಬಿಡಿಸಿ ಆಕರ್ಷಣೀಯವಾಗಿದೆ.
ಸ್ವಂತ ಖರ್ಚಲ್ಲೇ ಬಣ್ಣ, ಶಿಕ್ಷಕರಿಂದಲೇ ಪೇಂಟಿಂಗ್ ಕೆಲಸ ಶಾಲೆಗೆ ಈಗ ಹೊಸ ರಂಗು ಬಂದಿದೆ. ನೋಡಿದವರೆಲ್ಲಾ ಶಾಲೆಯ ಅಂದವನ್ನು ಹಾಡಿ ಹೊಗಳುತ್ತಾರೆ. ಆದರೆ ಇಷ್ಟು ಸುಂದರ ಶಾಲಾ ಕೊಠಡಿಯ ಹಿಂದೆ ಇಲ್ಲಿನ ಶಿಕ್ಷಕರ ಪರಿಶ್ರಮ ಇದೆ. ಶಾಲೆಗೆ ಹೊಸ ರೂಪ ಕೊಡಬೇಕು ನಿಜ ಅದಕ್ಕಾಗಿ ಏನು ಮಾಡಬೇಕು ಎಂದು ಆಲೋಚನೆಮಾಡಿದ ಶಿಕ್ಷಕರು ಕೊಠಡಿಯನ್ನೇ ರೈಲು ಬೋಗಿ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಲೆಗೆ ಜಾಗವೇ ಇಲ್ಲದೆ ಇದ್ದಾಗ ಸರ್ಕಾರ ಎರಡು ಎಕರೆ ಜಾಗಕೊಟ್ಟು ಮೂರು ವರ್ಷಗಳ ಹಿಂದೆ ಹೊಸ ಕಟ್ಟಡ ಕಟ್ಟಿಕೊಟ್ಟಿತ್ತು. ಈಗ ಶಾಲೆಯನ್ನು ಆಕರ್ಷಕಗೊಳಿಸಬೇಕು ಎಂದು ತೀರ್ಮಾನಿಸಿ ಒಬ್ಬೊಬ್ಬ ಶಿಕ್ಷಕರು ಒಂದೊಂದು ಕೊಠಡಿ ದತ್ತು ಪಡೆದರು.
ತಮ್ಮ ಸಂಬಳದ ಹಣದಲ್ಲೇ ಪಾಲು ಹಾಕಿ ಅದಕ್ಕಾಗಿ ಬೇಕಾದ ಪೇಂಟ್, ಬ್ರಶ್ ಖರೀದಿಸಿ ತಂದು ಕಲಾವಿದರ ಮೂಲಕ ಚಿತ್ರಬಿಡಿಸುವ ಯತ್ನ ಮಾಡಿದ್ದಾರೆ. ಆದರೆ ಸಕಾಲಕ್ಕೆ ಸರಿಯಾಗಿ ಕಲಾವಿದರು ಲಭ್ಯಾಗದಿದ್ದಾಗ ತಾವೇ ಪೇಂಟ್ ಬ್ರಶ್ ಹಿಡಿದ ಶಿಕ್ಷಕರು ನೋಡ ನೋಡುತ್ತಲೆ ಮೈದಾನದಲ್ಲಿ ರೈಲು ಬೋಗಿಯನ್ನು ನಿಲ್ಲಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ತಾವಾಯಿತು ತಮ್ಮ ಕೆಲಸವಾಯಿತು, ನಮಗೇನು ಸಂಬಳ ಬಂದೇ ಬರುತ್ತದೆ ಎಂದು ಸುಮ್ಮನೆ ಕೂರದೆ ಇಡೀ ಶಾಲೆಯ ಜವಾಬ್ದಾರಿ ಹೊತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಹೊಸ ರೂಪ ನೀಡಿದ ಶಿಕ್ಷಕರು ಇಂದು ಆರನೇ ತರಗತಿಯ 15 ಹಾಗೂ ಏಳನೇ ತರಗತಿಯ 22 ಮಕ್ಕಳನ್ನು ಹೊಸ ಕೊಠಡಿಗೆ ಸ್ವಾಗತಿಸಲು ಸಜ್ಜಾಗಿದ್ದಾರೆ.
ಇಂಗ್ಲೀಷ್ ಕೂಡ ಕಲಿತಾರೆ ಇಲ್ಲಿನ ಮಕ್ಕಳು ಯಾವಾಗ ಇಂಗ್ಲೀಷ್ ವ್ಯಾಮೋಹ ಶುರುವಾಗಿ ಕಾನ್ವೆಂಟ್ ಸಂಸ್ಕೃತಿ ಬಂದುಬಿಟ್ಟಿತೋ ನಿಧಾನವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಯುತ್ತಾ ಸಾಗಿತ್ತು. ಕೆಲವು ಸರ್ಕಾರಿ ಶಾಲೆಗಳಂತೂ ಮುಚ್ಚೇಬಿಡುವ ಹಂತಕ್ಕೂ ಹೋಗಿದ್ದವು. ಆದರೆ ಶಿಕ್ಷಕರ ಮುತುವರ್ಜಿ, ಆಸಕ್ತಿಯಿಂದ ಇದೀಗ ಸರ್ಕಾರಿ ಶಾಲೆಗಳು ಹೊಸ ರೂಪದೊಂದಿಗೆ ಖಾಸಗಿ ಶಾಲೆಗಳಿಗೂ ಸೆಡ್ಡುಹೊಡೆಯುವ ರೀತಿಯಲ್ಲಿ ಸ್ಪರ್ಧೆಯೊಡ್ಡುತ್ತಿದ್ದು, ಅದಕ್ಕೆ ಈ ಶಾಲೆಯೇ ಸಾಕ್ಷಿ. ಕಾಳನಕೊಪ್ಪಲು ಶಾಲೆಯಲ್ಲಿ 110 ಮಕ್ಕಳು ಕಲಿಯುತ್ತಿದ್ದಾರೆ. ಎಲ್ಲಾ ಮಕ್ಕಳಿಗೂ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಹೇಳಿಕೊಡುವ ಶಿಕ್ಷಕರು, ಮಕ್ಕಳ ಭವಿಷ್ಯ ಉಜ್ವಲವಾಗಿಸಲು ಶ್ರಮಿಸುತ್ತಿದ್ದಾರೆ.
ಮಕ್ಕಳ ಮನೆಯನ್ನು ಆರಂಭಿಸಿ, ಕಾನ್ವಂಟ್ಗಳ ಮಾದರಿಯಲ್ಲಿ ಎಲ್.ಕೆ.ಜಿ, ಯು. ಕೆ.ಜಿ ಗಳ ಪಾಠ ಪ್ರವಚನ ಮಾಡಿ ಬಡ ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕುತ್ತಿದ್ದಾರೆ, ಹಾಗಾಗಿಯೇ ಕೊವಿಡ್ಗೂ ಹಿಂದೆ ಕಡಿಮೆ ಸಂಖ್ಯೆಯಲ್ಲಿದ್ದ ಮಕ್ಕಳ ಸಂಖ್ಯೆ ಈಗ ಹೆಚ್ಚಾಗಿದೆ. ಉತ್ತಮ ಶಿಕ್ಷಣ ಪಡೆದು ಒಳ್ಳೆ ಅಂಕ ಪಡೆದು ಪಾಸಾಗಿ, ಉನ್ನತ ಶಿಕ್ಷಣ ಪಡೆದಿರುವ ಶಿಕ್ಷಕರಿದ್ದರೂ ಸರ್ಕಾರಿ ಶಾಲೆ ಎಂದರೆ ಕಲಿಕೆಯಲ್ಲಿ ಹಿಂದೆ ಎಂದು ಯೋಚನೆ ಮಾಡುವ ಜನರಿಗೆ ಉತ್ತರವಾಗಿ ನಿಂತಿರುವ ಕಾಳನಕೊಪ್ಪಲಿನ ಈ ಶಾಲೆಯ ಇಂದಿನ ಬದಲಾವಣೆ ಹಿಂದೆ ಇಲ್ಲಿನ ಶಿಕ್ಷಕರಿದ್ದು, ಶಿಕ್ಷಕರ ಈ ಪರಿಶ್ರಮವನ್ನು ಜಿಲ್ಲೆಯ ಜನರೇ ಕೊಂಡಾಡುತ್ತಿದ್ದಾರೆ. ನಮಗೆ ಅನ್ನ ನೀಡೋದು ನಮ್ಮ ಶಾಲೆ ಹಾಗಾಗಿ ನಾವು ನಮ್ಮ ಶಾಲೆಗೆ ಏನಾದ್ರು ಮಾಡಬೇಕು ಎಂದು ಯೋಚನೆ ಮಾಡಿದ್ದೇವು. ಶಾಲೆಗೆ ಜಾಗವೇ ಇರಲಿಲ್ಲ, ಸರ್ಕಾರ ಎರಡು ಎಕರೆ ಜಾಗ ಮಂಜೂರು ಮಾಡಿ ಕೊಠಡಿ ನಿರ್ಮಿಸಿಕೊಟ್ಟಿತ್ತು. ಈ ಕೊಠಡಿಗಳಿಗೆ ಹೊಸ ರೂಪ ಕೊಡಲು ನಿರ್ಧರಿಸಿ, ನಾವೇ ಸ್ವಂತ ಹಣದಿಂದ ಈ ರೂಪ ನೀಡಿದ್ದೇವೆ, ನಮ್ಮ ಕೆಲಸ ತೃಪ್ತಿ ಇದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಮಲ್ಲಪ್ಪ ಹೇಳಿದ್ದಾರೆ.
ನಮ್ಮ ಶಾಲೆಯನ್ನು ಎಲ್ಲರೂ ಗುರಿತಿಸುವಂತೆ ಮಾಡಬೇಕು ಎನ್ನೋದು ನಮ್ಮೆಲ್ಲಾ ಶಿಕ್ಷಕರ ಬಹುದಿನಗಳ ಆಸೆಯಾಗಿತ್ತು. ಅದಕ್ಕಾಗಿ ಏನು ಮಾಡೋಣ ಎಂದು ಆಲೋಚನೆ ಮಾಡಿದಾಗ ನಮಗೆ ಹೊಳೆದದ್ದು ಶಾಲೆಯನ್ನು ಆಕರ್ಷಕಗೊಳಿಸೋದು, ಆ ಮೂಲಕ ಶಾಲೆಗೆ ಮಕ್ಕಳನ್ನ ಸೆಳೆಯುವುದು. ಹಾಗಾಗಿಯೇ ನಾವೆಲ್ಲಾ ನಮ್ಮ ಕೈಲಾದಷ್ಟು ಹಣ ಭರಿಸಿ, ನಾವೇ ಪೇಂಟ್ ಮಾಡಿ, ಶಾಲೆಯನ್ನು ಸುಂಧರವಾಗಿ ರೈಲು ಬೋಗಿಯಂತೆ ಮಾಡಿದ್ದೇವೆ. ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ಜನರ ನಡುವೆ ನಮ್ಮ ಶಾಲೆಯ ಗಮನ ಸೆಳೆಯಬೇಕೆಂಬ ಆಸೆ ಇಡೇರಿದೆ ಎಂದು ಶಿಕ್ಷಕಿ ಬಿ.ಆರ್.ವೀಣಾ ತಿಳಿಸಿದ್ದಾರೆ.
ವರದಿ: ಮಂಜುನಾಥ್. ಕೆ.ಬಿ
ಇದನ್ನೂ ಓದಿ School Reopen: 6, 7, 8ನೇ ತರಗತಿ ಮಕ್ಕಳಿಗೆ ಇಂದಿನಿಂದ ಶಾಲೆ ಶುರು; ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯ
School Open: 6ರಿಂದ 8ನೇ ತರಗತಿಯವರೆಗೆ ಸೆಪ್ಟೆಂಬರ್ 6ರಿಂದ ಶಾಲೆ ಆರಂಭ: ಸಚಿವ ಆರ್ ಅಶೋಕ್ ಘೋಷಣೆ