ಹಾವೇರಿ: ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ಪರಭಾರೆ ಮಾಡದಂತೆ ಹೈಕೋರ್ಟ್ ಆದೇಶ

ಗೋಮಾಳ ಜಮೀನನ್ನು ಬೇರೆ ಬೇರೆ ಇಲಾಖೆಗಳಿಗೆ ಪರಭಾರೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ರಾಣೆಬೆನ್ನೂರು ತಾಲೂಕಿನ ಮಾಗೋಡ ಗ್ರಾಮದ ಜನರು ಹೈಕೋರ್ಟ್ ಮೆಟ್ಟಿಲೇರಿದ್ದು, ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ಪರಭಾರೆ ಮಾಡದಂತೆ ಹೈಕೋರ್ಟ್ ಆದೇಶ ಮಾಡಿದೆ.

ಹಾವೇರಿ: ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ಪರಭಾರೆ ಮಾಡದಂತೆ ಹೈಕೋರ್ಟ್ ಆದೇಶ
ಗೋಮಾಳ ಜಮೀನನ್ನು ಬೇರೆ ಉದ್ದೇಶಕ್ಕೆ ಪರಭಾರೆ ಮಾಡದಂತೆ ಹೈಕೋರ್ಟ್ ಆದೇಶ
Follow us
TV9 Web
| Updated By: Rakesh Nayak Manchi

Updated on: Nov 13, 2022 | 2:17 PM

ಹಾವೇರಿ: ವಿವಿಧ ಇಲಾಖೆಗಳಿಗೆ ಗೋಮಾಳ ಜಮೀನನ್ನು ಪರಭಾರೆ ಮಾಡಿದ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಾಗೋಡ ಗ್ರಾಮದ ಜನರಿಗೆ ಹೈಕೋರ್ಟ್ ಮೂಲಕ ಜಯ ಸಿಕ್ಕಿದೆ. ಗ್ರಾಮದ ಜನರಿಗೆ ಅಗತ್ಯವಾಗಿರೋ ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ಪರಭಾರೆ ಮಾಡದಂತೆ ನ್ಯಾಯಾಲಯವು ಆದೇಶಿಸಿದೆ. ಗ್ರಾಮದ ಬಳಿ 261 ಎಕರೆ 9 ಗುಂಟೆ ಗೋಮಾಳ ಜಮೀನಿದೆ. ಗ್ರಾಮದ ಸರ್ವೇ ನಂಬರ್ 11 ಅ ಮತ್ತು 13 ರಲ್ಲಿ ಗೋಮಾಳ ಜಮೀನನ್ನು ಪರಭಾರೆ ಮಾಡಲಾಗಿತ್ತು. ಸುಮಾರು ವರ್ಷಗಳಿಂದ ಗ್ರಾಮದ ಜನರು ತಮ್ಮ ಮನೆಗಳಲ್ಲಿನ ಜಾನುವಾರುಗಳು, ಕುರಿ ಮತ್ತು ಮೇಕೆಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಕುರಿ, ಮೇಕೆಗಳು ಮತ್ತು ಜಾನುವಾರುಗಳಿಗೆ ಗ್ರಾಮದ ಬಳಿ ಇರುವ ಗೋಮಾಳ ಜಮೀನೆ ಆಧಾರವಾಗಿದೆ.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಗೋಮಾಳ ಜಮೀನನನ್ನು ಬೇರೆ ಕೆಲಸಗಳಿಗೆ ಪರಭಾರೆ ಮಾಡಲು ಸಾಧ್ಯವಿಲ್ಲ. ಆದರೂ ಕೆಲವು ವರ್ಷಗಳ ಹಿಂದೆ ಸರಕಾರ ಗೋಮಾಳ ಜಮೀನಿನಲ್ಲಿ ವಿವಿಧ ಇಲಾಖೆಗಳ ಕಟ್ಟಡ ಕಟ್ಟಲು, ಆಶ್ರಯ ಯೋಜನೆ ಮನೆಗಳಿಗೆ ಹೀಗೆ ವಿವಿಧ ಉದ್ದೇಶಗಳ ಬಳಕೆಗೆ ಜಮೀನು ಮಂಜೂರು ಮಾಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮದ ಜನರು ಪ್ರಾಣ ಬಿಟ್ಟೆವು, ಭೂಮಿ ಕೊಡೋದಿಲ್ಲ ಅಂತಾ ಹಂತ ಹಂತವಾಗಿ ಪ್ರತಿಭಟನೆ ಮಾಡುತ್ತಲೆ ಬಂದಿದ್ದರು.

2016ರ ಅಕ್ಟೋಬರ್ 26 ರಂದು ಗ್ರಾಮದ ಜನರ ವಿರೋಧ ಲೆಕ್ಕಿಸದೆ ಅಧಿಕಾರಿಗಳು ಕಾಮಗಾರಿ ಆರಂಭಿಸುವ ಸಿದ್ಧತೆಯಲ್ಲಿದ್ದರು. ಆಗ ರೈತರು ಗೋಮಾಳ ಜಮೀನಿನಲ್ಲೇ ಟೆಂಟ್ ಹಾಕಿಕೊಂಡು ಕೆಲವು ದಿನಗಳ ಕಾಲ ನಿರಂತರ ಪ್ರತಿಭಟನೆ ಮಾಡಿದರು. ಆದರೂ ಸರಕಾರ ಗ್ರಾಮದ ಜನರ ಹೋರಾಟಕ್ಕೆ ಪೊಲೀಸ್ ಬಲ ಬಳಸಿಕೊಂಡು ಹೋರಾಟ ಹತ್ತಿಕ್ಕುವ‌ ಕೆಲಸ ಮಾಡಿದ್ದರು. ಹೀಗಾಗಿ ಗ್ರಾಮದ ಕೆಲವರು ಗೋಮಾಳ ಜಮೀನು ಗ್ರಾಮದ ಜನರ ಹಕ್ಕು. ಅದು ಗೋಮಾಳ ಜಮೀನು ಆಗಿಯೇ ಉಳಿಯಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹಾಗೂ ಅವರ ಸ್ನೇಹಿತರ ಬಳಗ ಗ್ರಾಮದ ಜನರ ಹೋರಾಟಕ್ಕೆ ಸಾಥ್ ನೀಡಿತ್ತು. ಎಸ್.ವಿ.ಭಟ್ ಎಂಬ ವಕೀಲರ ಮೂಲಕ ಗ್ರಾಮದ ಎಂಟು ಜನರು ಸರಕಾರದ ವಿರುದ್ಧ ಗೋಮಾಳ ಜಮೀನಿನ ಉಳಿವಿಗಾಗಿ ಹೈಕೋರ್ಟ್​​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಗ್ರಾಮಸ್ಥರ ಪರವಾಗಿ ತೀರ್ಪು ನೀಡಿ ಆದೇಶಿಸಿದೆ. ಗ್ರಾಮದ ಜನರಿಗೆ ಅಗತ್ಯವಾಗಿರುವ ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ಪರಭಾರೆ ಮಾಡದಂತೆ ಆದೇಶಿಸಿದೆ.

ಅಲ್ಲದೆ, ಈಗಾಗಲೆ ಕೆಲವು ಇಲಾಖೆಗಳಿಗೆ ವರ್ಗಾವಣೆ ಮಾಡಿರುವ ಗೋಮಾಳ ಜಮೀನನ್ನು ಗೋಮಾಳ ಜಮೀನು ಅಂತಾ ಮಾಡುವಂತೆ ಆದೇಶಿಸಿದೆ. ಇದು ಸುಮಾರು ವರ್ಷಗಳಿಂದ ಗೋಮಾಳ ಜಮೀನು ಉಳಿಸುವಂತೆ ಹೋರಾಟ ಮಾಡಿದ್ದ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಗ್ರಾಮದ ಜನರಿಗೆ ಅಗತ್ಯವಾಗಿರುವ ಗೋಮಾಳ ಜಮೀನನ್ನು ಸರಕಾರ ಬೇರೆ ಬೇರೆ ಉದ್ದೇಶಗಳಿಗೆ ಪರಭಾರೆ ಮಾಡಬಾರದು. ಗೋಮಾಳ ಜಮೀನು ಗ್ರಾಮದ ಜನರ ಜಾನುವಾರುಗಳು, ಕುರಿ ಮತ್ತು ಮೇಕೆಗಳ ಅನುಕೂಲಕ್ಕಾಗಿ ಗೋಮಾಳ ಜಮೀನಾಗಿಯೇ ಉಳಿಯಬೇಕು. ಆದರೂ ಸರಕಾರ ಗ್ರಾಮದ ಬಳಿ ಇರುವ ಗೋಮಾಳ ಜಮೀನನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿತ್ತು. ಆದರೆ ಗ್ರಾಮಸ್ಥರ ಸತತ ಹೋರಾಟದಿಂದ ಗೋಮಾಳ ಜಮೀನು ಬೇರೆ ಉದ್ದೇಶಗಳಿಗೆ ಪರಭಾರೆ ಮಾಡುವ ಸರಕಾರದ ನಿರ್ಧಾರಕ್ಕೆ ಬ್ರೇಕ್ ಬಿದ್ದಂತಾಗಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ