ಕುಡುಕರ ಅಡ್ಡೆಯಾದ ಹಾವೇರಿ ತಾಲೂಕು ಕಚೇರಿ ಆವರಣ, ಅನೈತಿಕ ಚಟುವಟಿಕೆ ತಾಣ, ನೆಲಸಮ ಮಾಡಲು ಒತ್ತಾಯ
ಹಾವೇರಿ ತಾಲೂಕು ಪಂಚಾಯತಿ ಆವರಣ ಗಬ್ಬು ನಾರುತ್ತಿದೆ. ಇಲ್ಲಿಗೆ ಬರುವ ನೂರಾರು ಜನರಿಗೆ ಮೂಲಭೂತ ಸೌಕರ್ಯ ಇಲ್ಲವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಅದು ಏಲಕ್ಕಿ ಕಂಪಿನ ನಗರದ ಹೃದಯ ಭಾಗ. ನಿತ್ಯ ನೂರಾರು ಜನ ಬಂದು ಹೋಗುವ ಸ್ಥಳ. ಆದರೆ ಆ ಸ್ಥಳ ಇತ್ತೀಚೆಗೆ ಕುಡುಕರ ಅಡ್ಡೆಯಾಗಿದೆ. ಜೊತೆಗೆ ಪುಂಡಪೋಕರಿಗಳಿಗೆ ಅನೈತಿಕ ಚಟುವಟಿಕೆ (anti social elements) ತಾಣವಾಗಿ ಮಾರ್ಪಟಿದೆ. ಇದನ್ನು ಕಣ್ಣಾರೆ ಕಂಡ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದು ಕಿವುಡರಾಗಿ, ಬಾಯಿ ಇದ್ದು ಮೂಕರಾಗಿ ಎಲ್ಲ ದೃಶ್ಯವನ್ನು ಮೂಖ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಯಾವುದು ಆ ಕಚೇರಿ ಅಂತಿರಾ…? ಈ ಸ್ಟೋರಿ ನೋಡಿ
ಹೌದು ಹಾವೇರಿ ಜಿಲ್ಲೆಯಾಗಿ ರಜತ ಮಹೋತ್ಸವ ಆಚರಿಸಿದರೂ ಹೇಳಿಕೊಳ್ಳುವ ಮಟ್ಟದಲ್ಲಿ ಹಾವೇರಿ ಅಭಿವೃದ್ಧಿ ಆಗಿಲ್ಲ ಅನ್ನುವುದು ಈ ಭಾಗದ ಜನರ ಅಳಲು. ಇದಕ್ಕೆ ಕನ್ನಡಿ ಹಿಡಿಯುವಂತಿರುವುದು ಹಾವೇರಿ ತಾಲೂಕು ಪಂಚಾಯತಿ (Haveri Taluk Office) ಆವರಣ. ನಗರದ ಹೃದಯ ಭಾಗದಲ್ಲಿಯೇ ಇದ್ದರೂ ಇದು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಇದೇ ಆವರಣದಲ್ಲಿ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿಯವರ ಕಚೇರಿ ಇದೆ. ಜೊತೆಗೆ ಉಪಸಭಾಪತಿಯಾಗಿರುವ ರುದ್ರಪ್ಪ ಲಮಾಣಿಯವರ ಕಚೇರಿ ಇದೆ. ಆದರೂ ಸಹಿತ ರಾತ್ರಿಯಾದರೆ ಸಾಕು ಇಲ್ಲಿ ಕುಡುಕರು, ಪುಂಡಪೋಕರಿಗಳು ಬಂದು ಮಾಡಬಾರದನ್ನು ಮಾಡಿ ಹೋಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿ ಇರುವ ಹತ್ತಾರು ವರ್ಷದಿಂದ ಪಾಳು ಬಿದ್ದಿರುವ ವಸತಿ ಗೃಹಗಳು ಅಂತಿದ್ದಾರೆ ಸಾರ್ವಜನಿಕರು.
ಈ ಕುರಿತು ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತಿ ಎಇಓ ಭರತ್ ಹೆಗಡೆ ಅವರನ್ನು TV9 ಪ್ರಶ್ನೆ ಮಾಡಿದಾಗ ಅಸಹಾಯ ಮಾತುಗಳನ್ನು ಹೇಳಿದ್ದಾರೆ. ಹೌದು ಇದು ಸಂಜೆಯಾದರೆ ಸಾಕು ಕುಡುಕರ ಅಡ್ಡೆಯಾಗಿದ್ದು ನಿಜ. ಜೊತೆಗೆ ಕಾರಿನಲ್ಲಿ ಬಂದು ಮಾಡಬಾರದನ್ನು ಮಾಡುತ್ತಾರೆ. ಈ ಕುರಿತು ಪ್ರಶ್ನೆ ಮಾಡಿದರೆ ನಾವು ಸಚಿವರ ಕಡೆಯವರು, ಸಂಸದರ ಕಡೆಯವರು ಎಂದು ಹೇಳುತ್ತಾರೆ. ಹೀಗಾಗಿ ನಾವು ಏನು ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಜೊತೆಗೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಆದಷ್ಟು ಬೇಗ ಇದನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟುತ್ತೇವೆ ಎನ್ನುತ್ತಾರೆ.
ಒಟ್ಟಾರೆ ಹಾವೇರಿ ತಾಲೂಕು ಪಂಚಾಯತಿ ಆವರಣ ಗಬ್ಬು ನಾರುತ್ತಿದೆ. ಜೊತೆಗೆ ಅಲ್ಲಿಗೆ ಬರುವ ನೂರಾರು ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಇನ್ನಾದರೂ ತಾಲೂಕು ಪಂಚಾಯತಿ ಆವರಣದಲ್ಲಿ ಇರುವ ವಸತಿ ಗೃಹಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟುತ್ತಾ ಕಾಯ್ದು ನೋಡಬೇಕು.
(ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ)
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ