ಶುಭ ನುಡಿದ ಗೊರವಯ್ಯ: ಮೈಲಾರಲಿಂಗೇಶ್ವರ ಕಾರಣಿಕದಲ್ಲಿ ಒಳ್ಳೇ ಬೆಳೆಯ ಆಶಯ
ಕಾರಣಿಕವನ್ನು ಈ ವರ್ಷ ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿದೆ ಎಂಬ ಅರ್ಥದಲ್ಲಿ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದರು.
ಹಾವೇರಿ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಗೊರವಯ್ಯ ಮೈಲಾರಲಿಂಗೇಶ್ವರದ ವಾರ್ಷಿಕ ಕಾರಣಿಕವನ್ನು (Mylara Lingeshwara Karanika) ಶುಕ್ರವಾರ ನುಡಿದರು. ‘ಮಳೆ ಬೆಳೆ ಸಂಪಾಯಿತಲೆ ಪರಾಕ್’ ಎಂಬ ಕಾರಣಿಕವನ್ನು ಈ ವರ್ಷ ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿದೆ ಎಂಬ ಅರ್ಥದಲ್ಲಿ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದರು. ಹದಿನೈದು ಅಡಿ ಬಿಲ್ಲನ್ನು ಏರಿ ರಾಮಪ್ಪ ಗೊರವಯ್ಯ ಭವಿಷ್ಯವಾಣಿ ನುಡಿದರು.
ಕರ್ನಾಟಕಕ್ಕೆ ಈ ವರ್ಷ ಸುಖ: ಹರಪನಹಳ್ಳಿ ಕಾರಣಿಕ
ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗ ದೇಗುಲದಲ್ಲಿ ಪ್ರತಿ ವರ್ಷ ನಡೆಯುವ ಕಾರಣಿಕ ವಿಧಿವಿಧಾನ ಗುರುವಾರ ನಡೆಯಿತು. ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ಶೂನ್ಯವನ್ನು ದಿಟ್ಟಿಸಿ ನೋಡುತ್ತಾ, ಈ ವರ್ಷದ ಕಾರಣಿಕ ನುಡಿದರು. ಈ ವರ್ಷ ಗೊರವಯ್ಯ ‘ಅಂಬ್ಲಿರಾಶಿಗೆ ಮುತ್ತಿನ ಗಿಣಿ ಸಂಪಾದೀತಲೇ ಪರಾಕ್’ ಎಂಬ ಕಾರಣಿಕ ಹೇಳಿದ್ದಾರೆ. ಈ ಕಾರಣಿಕವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಹಲವು ವರ್ಷಗಳಿಂದ ಭರತ ಹುಣ್ಣಿಮೆಯಂದು ಕಾರಣಿಕ ನುಡಿಯುವ ಸಂಪ್ರದಾಯ ಇಲ್ಲಿದೆ. ಇಲ್ಲಿಯ ಕಾರಣಿಕದ ನಂತರ ಮೈಲಾರದಲ್ಲಿ ಕಾರಣಿಕವಾಗುತ್ತದೆ. ‘ಈ ಬಾರಿ ಮಳೆಬೆಳೆಯಾಗಿ ರಾಜ್ಯದ ಜನರು ಸುಖದಿಂದ ಇರುತ್ತಾರೆ’ ಎಂದು ಹಲವಾರು ಜನರು ಕಾರಣಿಕವನ್ನು ವಿವರಿಸಿದ್ದಾರೆ. ಇಲ್ಲಿನ ಕಾರಣಿಕ ಸತ್ಯವಾಗುತ್ತದೆ ಎಂದು ಜನರು ನಂಬುತ್ತಾರೆ.
ಮೈಲಾರಲಿಂಗೇಶ್ವರ ಕಾರಣಿಕವನ್ನು ಹಲವೆಡೆ ನುಡಿಯಲಾಗುತ್ತದೆ. ಇದನ್ನು ನುಡಿಯುವವರನ್ನು ಗೊರವಯ್ಯ ಅಥವಾ ಗ್ವಾರಪ್ಪ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಾರಣಿಕಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ವಿವಿಧ ಜಾತಿ ಮತ್ತು ಧರ್ಮಗಳಿಗೆ ಸೇರಿದ ಭಕ್ತರು ಮೈಲಾರಲಿಂಗೇಶ್ವರನನ್ನು ಆರಾಧಿಸುತ್ತಾರೆ. ಗೊರವಯ್ಯ ದೀಕ್ಷೆ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ಇದೆಯಾದರೂ, ಕುರುಬ ಹಾಲುಮತದ ಗೊರವಯ್ಯ ಮಾತ್ರ ಕಾರಣಿಕ ನುಡಿಯುವ ಅರ್ಹತೆ ಪಡೆದುಕೊಳ್ಳುತ್ತಾರೆ. ಎತ್ತರವಾದ ಕೊಲು ಅಥವಾ ಬಿಲ್ಲನ್ನು ಏರುವ ಗೊರವಯ್ಯ ಮೊದಲು ‘ಸದ್ದಲೇ ಪರಾಕ್’ ಎಂದು ಕೂಗುತ್ತಾರೆ. ಜಾತ್ರೆಗೆ ಸೇರಿರುವ ಲಕ್ಷಾಂತರ ಜನರು ಒಮ್ಮೆ ಮೌನ ವಹಿಸಿದ ನಂತರ ಗೊರವಯ್ಯ ಪರಾಕು ನುಡಿಯುವುದು ವಾಡಿಕೆ.
ಕಾರಣಿಕ ನುಡಿದ ನಂತರ ಗೊರವಯ್ಯ ಅಲ್ಲಿಂದಲೇ ಕೈಬಿಟ್ಟು ಕೆಳಗೆ ಬೀಳುತ್ತಾರೆ. ಬೀಳುವ ಗೊರವಯ್ಯನನ್ನು ಭಕ್ತರು ಕೆಳಗೆ ಹಿಡಿಯುತ್ತಾರೆ. ಇದನ್ನು ‘ದೈವವಾಣಿ’ ಎಂದು ಗೌರವಿಸುವ ರೈತರು ಮಳೆ-ಬೆಳೆ, ಆರೋಗ್ಯ, ಜಾನುವಾರುಗಳ ಆರೋಗ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಭವಿಷ್ಯವನ್ನು ಅರ್ಥೈಸುತ್ತಾರೆ. ರಾಜಕೀಯ ಕ್ಷೇತ್ರದ ಬಗೆಗಿನ ಇಣುಕುನೋಟವನ್ನೂ ಹಲವರು ಈ ಕಾರಣಿಕ ಆಧರಿಸಿ ವಿವರಿಸಿಕೊಳ್ಳುತ್ತಾರೆ. ಪಶುಪಾಲನೆಯ ಕುರುಬನಾಗಿ ಜನಿಸಿ ಪಶುಗಳ್ಳರಾದ ಮಣಿ ಹಾಗೂ ಮಲ್ಲರನ್ನು ಸಂಹಾರ ಮಾಡಿದವನು ಎಂದು ಭಕ್ತರು ಮೈಲಾರಲಿಂಗನನ್ನು ಆರಾಧಿಸುತ್ತಾರೆ. ಹೀಗೆ ಕಾರಣಿಕ ನುಡಿಯುವ ಗೊರವಯ್ಯನ ಮಾತನ್ನು ಈಶ್ವರನ ಮಾತು ಎಂದೇ ಭಕ್ತರು ನಂಬುತ್ತಾರೆ. ದೇವರೇ ಗೊರವನ ಬಾಯಿಂದ ಕಾರಣಿಕ ನುಡಿಸುತ್ತಾನೆ ಎಂಬ ಮಾತು ಪ್ರಚಲಿತದಲ್ಲಿದೆ.
ಇದನ್ನೂ ಓದಿ: ದೈವ ದರ್ಬಾರ ಅಕ್ಕತಲೆ ಪರಾಕ್: ದೇವರಗುಡ್ಡದಲ್ಲಿ ಗೊರವಯ್ಯ ನುಡಿದ ಕಾರಣಿಕದ ಅರ್ಥ ಇದು
ಇದನ್ನೂ ಓದಿ: ಸಮುದ್ಧ ದಿನಗಳು ಬರುತ್ತವೆ- ಸಾವಿರಾರು ಭಕ್ತ ಸಾಗರದ ನಡುವೆ ಶುಭ ಸಂದೇಶ ನುಡಿದ ಕಾರಣಿಕ ಪೂಜಾರಿ