ಕಲಬುರಗಿ: ನೆರೆ ಇಳಿದು 3 ತಿಂಗಳಾದ ಮೇಲೆ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ಸಿಗುವುದೇನು?

ಕಲಬುರಗಿ ಜಿಲ್ಲೆಯಲ್ಲಿ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ 4.29 ಲಕ್ಷ ಹೆಕ್ಟೆರ್ ಬೆಳೆ ನೆರೆಯಿಂದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ತೊಗರಿ ಸೇರಿದಂತೆ ಒಟ್ಟು 328.98 ಕೋಟಿ ರೂಪಾಯಿ ಬೆಲೆಯ ಬೆಳೆ ಮತ್ತು ಆಸ್ತಿ ಪಾಸ್ತಿಗೆ ಹಾನಿಯಾಗಿದೆ ಎಂದು ತಿಳಿಸಿದೆ. ಆದ್ರೆ ನೆರೆ ನಿಂತು ಮೂರು ತಿಂಗಳ ಮೇಲೆ ನೆರೆ ಅಧ್ಯಯನಕ್ಕೆ ಅಧಿಕಾರಿಗಳು ಬಂದ್ರೆ ಏನು ಗೊತ್ತಾಗುತ್ತದೆ ಎನ್ನುವುದು ಎಲ್ಲರ ಪ್ರಶ್ನೆ.

ಕಲಬುರಗಿ: ನೆರೆ ಇಳಿದು 3 ತಿಂಗಳಾದ ಮೇಲೆ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ಸಿಗುವುದೇನು?
ಕಲಬುರಗಿ ನೆರೆಯ ಚಿತ್ರಣ
preethi shettigar

| Edited By: sadhu srinath

Dec 14, 2020 | 2:58 PM

ಕಲಬುರಗಿ: ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ್ರು ಅನ್ನೋ ಗಾದೆ ಮಾತಿದೆ. ಆದೇ ರೀತಿಯ ಪರಿಸ್ಥಿತಿ ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದು, ನೆರೆ ಹೋಗಿ ತಿಂಗಳೇ ಕಳೆದ ಮೇಲೆ ನೆರೆ ಅಧ್ಯಯನಕ್ಕಾಗಿ ಅಧಿಕಾರಿಗಳು ಬಂದ್ರೆ ಏನು ಪ್ರಯೋಜನ ಎಂದು ಹೊಸ ಗಾದೆ ಮಾತೊಂದನ್ನು ಅಲ್ಲಿನ ಜನತೆ ಬದಲಾಯಿಸಿಕೊಂಡಿದ್ದಾರೆ.

ಇದಕ್ಕೆ ಕಾರಣ ನೆರೆ ನಿಂತು ತಿಂಗಳುಗಳು ಕಳೆದ ಮೇಲೆ ಇದೀಗ ಕೇಂದ್ರ ತಂಡ ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದಿಂದ ಉಂಟಾದ ಹಾನಿ ಪರಿಶೀಲನೆಗೆ ಇಂದು ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆಯಲ್ಲಿ ನೆರೆ ಅಧ್ಯಯನ ನಡೆಸಲಿದೆ. ಆದ್ರೆ ನೆರೆ ಮುಗಿದು ಮೂರು ತಿಂಗಳ ಮೇಲೆ ಅಧ್ಯಯನಕ್ಕೆ ತಂಡ ಬರುತ್ತಿರುವುದರಿಂದ ಜಿಲ್ಲೆಯ ಜನರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಕಲಬುರಗಿ ಜಿಲ್ಲೆಯ ಜನರು ಈ ಬಾರಿ ಕಂಡೂ ಕಾಣರಿಯದಂತಹ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ್ದಾರೆ. ಕಳೆದ ಜುಲೈ ನಿಂದ ಸೆಪ್ಟೆಂಬರ್ ತಿಂಗಳವರಗೆ ಜಿಲ್ಲೆಯಲ್ಲಿ ಒಂದೆಡೆ ಮಳೆ ಮತ್ತು ಮತ್ತೊಂದೆಡೆ ಭೀಮಾ, ಕಾಗಿಣಾ ನದಿಯ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದರು. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದವು. ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಸಾವಿರಾರು ಜನರು ಕಾಳಜಿ ಕೇಂದ್ರದಲ್ಲಿ ವಾರಗಟ್ಟಲೆ ಆಶ್ರಯ ಪಡೆದಿದ್ದರು. ಬೆಳೆದ ಬೆಳೆಗಳೆಲ್ಲಾ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದವು.

ನೆರೆಯಿಂದ ಜಲಾವೃತಗೊಂಡಿರುವ ದೃಶ್ಯ

ಕಲಬುರಗಿ ಜಿಲ್ಲೆಯಲ್ಲಿ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ 4.29 ಲಕ್ಷ ಹೆಕ್ಟೆರ್ ಬೆಳೆ ನೆರೆಯಿಂದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ತೊಗರಿ ಸೇರಿದಂತೆ ಒಟ್ಟು 328.98 ಕೋಟಿ ರೂಪಾಯಿ ಬೆಲೆಯ ಬೆಳೆ ಮತ್ತು ಆಸ್ತಿಪಾಸ್ತಿಗೆ  ಹಾನಿಯಾಗಿದೆ ಎಂದು ತಿಳಿಸಿದೆ. ಆದ್ರೆ ನೆರೆ ನಿಂತು ಮೂರು ತಿಂಗಳ ಮೇಲೆ ನೆರೆ ಅಧ್ಯಯನಕ್ಕೆ ಅಧಿಕಾರಿಗಳು ಬಂದ್ರೆ ಏನು ಗೊತ್ತಾಗುತ್ತದೆ ಎನ್ನುವುದು ಎಲ್ಲರ ಪ್ರಶ್ನೆ.

ಕೇಂದ್ರ ಸರ್ಕಾರ ರಾಜ್ಯದಲ್ಲಿನ ಪ್ರವಾಹ ಮತ್ತು ಬೆಳೆ ಹಾನಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಆರು ಜನರ ತಂಡವನ್ನು ರಚಿಸಿದೆ. ಈ ನಿಟ್ಟಿನಲ್ಲಿ ಕಲಬುರಗಿ, ವಿಜಯಪುರ, ಮತ್ತು ಉಡುಪಿ ಜಿಲ್ಲೆಗಳಿಗೆ ತಲಾ ಇಬ್ಬರಂತೆ ಅಧಿಕಾರಿಗಳ ತಂಡವನ್ನು ರಚಿಸಿದೆ. ಡಿಸೆಂಬರ್ 14 ರಂದು ಈ ತಂಡ ಪ್ರತ್ಯೇಕವಾಗಿ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಇಂದು ಕಲಬುರಗಿ ಜಿಲ್ಲೆಗೆ ಆಗಮಿಸಲಿರುವ ತಂಡ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದು, ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ಹಾನಿಯ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಿದೆ.

ನೆರೆಯಿಂದ ಜಲಾವೃತವಾದ ಕಲಬುರಗಿ

ಆದ್ರೆ ನೆರೆಯಿಂದ ಬೆಳೆ ಕಳೆದುಕೊಂಡಿದ್ದ ರೈತರು ಇದೀಗ ಹಿಂಗಾರು ಬಿತ್ತನೆ ಮಾಡಿದ್ದಾರೆ. ಮುಂಗಾರು ಬೆಳೆ ಹಾಳಾಗಿ ಹೋಗಿದ್ದರಿಂದ ನೆರೆ ನಿಂತ ಅದೇ ಭೂಮಿಯನ್ನು ಹಸನು ಮಾಡಿ, ಹಿಂಗಾರು ಬೆಳೆಗಳಾದ ಜೋಳ, ಕಡೆಲೆ ಸೇರಿದಂತೆ ಅನೇಕ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

ಇದೀಗ ನೆರೆ ಅಧ್ಯಯನ ನಡೆಸಲು ಬಂದ್ರೆ ಅಧಿಕಾರಿಗಳು ಏನು ನೋಡುತ್ತಾರೆ. ಹಾನಿ ತೋರಿಸು ಅಂದ್ರೆ ಏನನ್ನು ತೋರಿಸುವುದು. ನೆರೆ ನಿಂತ ಕೆಲವೇ ದಿನಗಳಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿದ್ದರೆ, ಅವರಿಗೆ ವಾಸ್ತವಾಂಶ ಗೊತ್ತಾಗುತ್ತಿತ್ತು. ಈಗ ಬಂದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದಡೆ ನೆರೆಯಿಂದ ಹಾಳಾಗಿ ಹೋಗಿದ್ದ ಮನೆಗಳನ್ನು ಜನರು ದುರಸ್ಥಿ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಕೂಡ ಅನೇಕ ರಸ್ತೆಗಳನ್ನು ಈಗಾಗಲೇ ದುರಸ್ಥಿ ಮಾಡಿಸಿದೆ. ಇದೀಗ ಅಧಿಕಾರಿಗಳು ಬಂದರು ಕೂಡಾ ನೆರೆಯ ವಾಸ್ತವ ಚಿತ್ರಣವನ್ನು ತಿಳಿಯಲು ಸಾಧ್ಯವಿಲ್ಲಾ. ಅಧಿಕಾರಿಗಳು ಏನು ಪರಿಶೀಲನೆ ನಡೆಸುತ್ತಾರೆ ಎನ್ನುವುದೇ ಜನರ ಪ್ರಶ್ನೆಯಾಗಿದೆ.

ಸಂಜಯ್ ಚಿಕ್ಕಮಠ

ಮುಳುಗಿದೂರಲ್ಲಿ ಜನರಿಗೆ ಮೇಲ್ಛಾವಣಿಯೇ ಆಸರೆ..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada