IMA ವಂಚನೆ ಪ್ರಕರಣ: ಇಬ್ಬರು ಅಧಿಕಾರಿಗಳಿಗೆ ಬೆಣ್ಣೆ, ನಾಲ್ವರು ಅಧಿಕಾರಿಗಳ ಕಣ್ಣಿಗೆ ಸುಣ್ಣ?
ಬೆಂಗಳೂರು: ಮಾಜಿ ಸಚಿವ ಆರ್.ರೋಷನ್ ಬೇಗ್ ಬಂಧನದೊಂದಿಗೆ ಮುನ್ನೆಲೆಗೆ ಬಂದ IMA ಪ್ರಕರಣ ವಿಚಾರದಲ್ಲಿ ಯಾಱರಿಗೆ ಶಿಕ್ಷೆ ಆಗುತ್ತೆ ಎಂಬುದನ್ನು ಈಗಲೇ ಹೇಳಲು ಕಷ್ಟವಾದರೂ ಈ ಕೇಸ್ಗೆ ಸಂಬಂಧಿಸಿದ ಎಲ್ಲರ ಮೇಲೂ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಖಡಕ್ ಸಂದೇಶ ಕೊಟ್ಟಿದೆ ಎಂದು ಖಡಾಖಂಡಿತವಾಗಿ ಹೇಳಲಾಗದು. ಉದಾಹರಣೆಗೆ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಸರಕಾರ ನಡೆದುಕೊಂಡ ರೀತಿ ನೋಡಿದರೆ ಈ ಶಂಕೆ ಬರುವುದು ಸಹಜ. ಈ ಕೇಸ್ನ ವಿಚಾರಣೆ ನಡೆಸಿದ ಸಿಬಿಐ, ಒಟ್ಟು ಆರು ಪೊಲೀಸ್ ಅಧಿಕಾರಿಗಳ […]
ಬೆಂಗಳೂರು: ಮಾಜಿ ಸಚಿವ ಆರ್.ರೋಷನ್ ಬೇಗ್ ಬಂಧನದೊಂದಿಗೆ ಮುನ್ನೆಲೆಗೆ ಬಂದ IMA ಪ್ರಕರಣ ವಿಚಾರದಲ್ಲಿ ಯಾಱರಿಗೆ ಶಿಕ್ಷೆ ಆಗುತ್ತೆ ಎಂಬುದನ್ನು ಈಗಲೇ ಹೇಳಲು ಕಷ್ಟವಾದರೂ ಈ ಕೇಸ್ಗೆ ಸಂಬಂಧಿಸಿದ ಎಲ್ಲರ ಮೇಲೂ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಖಡಕ್ ಸಂದೇಶ ಕೊಟ್ಟಿದೆ ಎಂದು ಖಡಾಖಂಡಿತವಾಗಿ ಹೇಳಲಾಗದು. ಉದಾಹರಣೆಗೆ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಸರಕಾರ ನಡೆದುಕೊಂಡ ರೀತಿ ನೋಡಿದರೆ ಈ ಶಂಕೆ ಬರುವುದು ಸಹಜ.
ಈ ಕೇಸ್ನ ವಿಚಾರಣೆ ನಡೆಸಿದ ಸಿಬಿಐ, ಒಟ್ಟು ಆರು ಪೊಲೀಸ್ ಅಧಿಕಾರಿಗಳ ಮೇಲೆ ತೀವ್ರ ಕ್ರಮಕ್ಕೆ ಸೂಚನೆ ನೀಡಿತ್ತು. ಕರ್ನಾಟಕ ರಾಜ್ಯ ಪೊಲೀಸ್ ಸೇವೆಯಲ್ಲಿರುವ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದ ಸರ್ಕಾರ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಸಹ ಒಪ್ಪಿಗೆ ನೀಡಿತ್ತು. ಆ ಅಧಿಕಾರಿಗಳೆಂದರೆ, ಇ.ಬಿ. ಶ್ರೀಧರ್ ಎಮ್. ರಮೇಶ್, ಗೌರಿಶಂಕರ್ ಮತ್ತು ಎಲ್.ಸಿ. ನಾಗರಾಜ್. ಆದರೆ ಸರ್ಕಾರ, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ (ಹೆಚ್ಚುವರಿ ಪೊಲೀಸ್ ಆಯುಕ್ತ [ಆಡಳಿತ], ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್) ಮತ್ತು ಅಜಯ್ ಹಿಲೋರಿ (ಕೆಎಸ್ಆರ್ಪಿ ಕಮಾಂಡೆಂಟ್) ಬಗ್ಗೆ ಮಾತ್ರ ಬಹಳ ಮೃದು ಧೋರಣೆ ತೋರಿದಂತೆ ಕಾಣುತ್ತಿದೆ.
ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ IMA ಪ್ರಕರಣಕ್ಕೂ ಈ ಮೇಲಿನ ಅಧಿಕಾರಿಗಳಿಗೂ ಯಾವ ರೀತಿ ಸಂಬಂಧ ಇದೆ ಎಂಬುದನ್ನು CBI ವಿವರವಾಗಿ ಪ್ರಸ್ತಾಪಿಸಿತ್ತು ಮತ್ತು ಅವರ ವಿರುದ್ಧ ಕಾನೂನಿನ ಕ್ರಮಕ್ಕೆ (permission for prosecution)ಅನುಮತಿ ಕೇಳಿತ್ತು. ಆಗಲೂ ಸಹ ಸರ್ಕಾರ ಬಹಳ ಮೀನಾಮೇಷ ಎಣಿಸಿ ಕೊನೆಗೆ ಅನುಮತಿ ನೀಡಿತ್ತು. ಆದರೆ, ಸಿಬಿಐ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ: ಈ ಎಲ್ಲರ ವಿರುದ್ಧ ಇಲಾಖಾ ವಿಚಾರಣೆ ಆಗಬೇಕು ಎಂದು. ಸಾಮಾನ್ಯವಾಗಿ ಈ ರೀತಿಯ ಆರೋಪ ಬಂದಾಗ, ಆ ಅಧಿಕಾರಿಯನ್ನು ಅಮಾನತ್ತಿನಲ್ಲಿ ಇಟ್ಟು ಇಲಾಖಾ ವಿಚಾರಣೆಗೆ ಆದೇಶಿಸುವುದು ಸರ್ಕಾರದ ಸಂಪ್ರದಾಯ.
ಕರ್ನಾಟಕ ರಾಜ್ಯ ಪೊಲೀಸ್ ಸೇವೆಯ ಅಧಿಕಾರಿಗಳ ಮೇಲೆ ತನ್ನ ಪರಾಕ್ರಮ ತೋರಿದ ಸರ್ಕಾರ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ವಿರುದ್ಧ ಮಾತ್ರ ಅಮಾನತ್ತಿನಲ್ಲಿಡುವ ಆಥವಾ ಇಲಾಖಾ ವಿಚಾರಣೆಯನ್ನು ಆದೇಶಿಸುವ ಗೋಜಿಗೆ ಹೋಗದೇ ಹೊಸದೊಂದು ಸಂಪ್ರದಾಯ ಹುಟ್ಟುಹಾಕಿದಂತಿದೆ.
ಗೃಹ ಇಲಾಖೆಯಿಂದ ಬಂದ ಕಡತದಲ್ಲಿ ಈ ಇಬ್ಬರೂ ಐಪಿಎಸ್ ಅಧಿಕಾರಿಗಳ ಮೇಲೆ ತೀವ್ರ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದ್ದರೂ ಡಿಪಿಎಅರ್ ಏನನ್ನೂ ಮಾಡಿದಂತೆ ಕಾಣುತ್ತಿಲ್ಲ. ಡಿಪಿಎಅರ್ ಖಾತೆ ಮುಖ್ಯಮಂತ್ರಿಗಳ ಬಳಿ ಇದೆ. ಈ ಇಬ್ಬರೂ ಅಧಿಕಾರಿಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಟಿವಿ9 ಡಿಜಿಟಲ್ ಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕಿಸಿದಾಗ ತಮ್ಮ ಕಚೇರಿಗೆ ಬಂದ ಕಡತ ತಿರುಗಿ ಡಿಪಿಎಆರ್ಗೆ ಹೋಗಿದೆ ಎಂಬ ಮಾಹಿತಿ ಮಾತ್ರ ಸಿಕ್ಕಿತು. ಮುಖ್ಯಮಂತ್ರಿಯವರು ಈ ಎರಡೂ ಅಧಿಕಾರಿಗಳ ವಿರುದ್ಧ ಯಾವ ಕ್ರಮಕ್ಕೆ ಸೂಚಿಸಿದ್ದಾರೆ ಎಂಬ ವಿವರ ಸಿಗಲಿಲ್ಲ.
ಈ ಎಲ್ಲ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದ ಅಧಿಕಾರಿಯೋರ್ವರು ಹೇಳುವ ಪ್ರಕಾರ ಸರ್ಕಾರ ದೊಡ್ಡ ಐಪಿಎಸ್ ಲಾಬಿಗೆ ಮಣಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಸಿಬಿಐ ಚಾರ್ಜ್ಶೀಟ್ ಹಾಕಿ ಆಗಿದೆ. ಈ ಅಧಿಕಾರಿಗಳು ತಮ್ಮ ಅಧಿಕಾರ ಉಪಯೋಗಿಸಿ ತನಿಖೆಯನ್ನು ಹಳ್ಳಹಿಡಿಸುವ ಪ್ರಶ್ನೆ ಇನ್ನು ಉದ್ಭವಿಸುವುದಿಲ್ಲ. ಈ ಬೆಳವಣಿಗೆ ಕುರಿತು ತಿಳಿದಿರುವ ಮಂತ್ರಿಗಳೊಬ್ಬರ ಪ್ರಕಾರ ಈ ಇಬ್ಬರೂ ಅಧಿಕಾರಿಗಳನ್ನು ಅಮುಖ್ಯ ಹುದ್ದೆಗೆ ವರ್ಗಾಯಿಸಿ ಇಲಾಖಾ ತನಿಖೆಗೆ ಆದೇಶಿಬೇಕಿತ್ತು. ಆಗ, ಅಧಿಕಾರಿ ವರ್ಗಕ್ಕೆ ಒಂದು ಸಂದೇಶ ರವಾನೆಯಾಗುತ್ತಿತ್ತು. ಆದರೆ, ಸರಕಾರದ ವಿಚಾರಧಾರೆಯೇ ಬೇರೆ ಇದ್ದಂತಿದೆ. ಅವರನ್ನು ಅಮಾನತು ಮಾಡಲು ಯಾವ ಕಾರಣವಿಲ್ಲ ಎಂಬ ನಿರ್ಧಾರಕ್ಕೆ ಬಂದಂತಿದೆ. ಈ ಕುರಿತು ಟಿವಿ9 ಡಿಜಿಟಲ್ ಡಿಪಿಎಆರ್ನ ಪ್ರತಿಕ್ರಿಯೆ ಪಡೆಯಲು ತುಂಬಾ ಪ್ರಯತ್ನಿಸಿದರೂ ಏನೂ ಪ್ರಯೋಜನವಾಗಲಿಲ್ಲ.
Published On - 7:37 pm, Mon, 23 November 20