AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಣುಬಿಗಿದ ಸ್ಥಿತಿಯಲ್ಲಿ ಪೋಕ್ಸೋ ಕೇಸ್​​ ಆರೋಪಿ ಶವ ಪತ್ತೆ: ಆತ್ಮಹತ್ಯೆಯೋ? ಕೊಲೆಯೋ?

ಕಲಬುರಗಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅಪ್ರಾಪ್ತೆಯನ್ನು ಮದುವೆಯಾಗಿದ್ದ ಯುವಕ ಜಾಮೀನಿನ ಮೇಲೆ ಇತ್ತೀಚೆಗಷ್ಟೇ ಹೊರಬಂದಿದ್ದ. ಹೀಗಾಗಿ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ನಿಗೂಢತೆಯನ್ನು ಭೇದಿಸಲು ತನಿಖೆ ನಡೆಸುತ್ತಿದ್ದಾರೆ.

ನೇಣುಬಿಗಿದ ಸ್ಥಿತಿಯಲ್ಲಿ ಪೋಕ್ಸೋ ಕೇಸ್​​ ಆರೋಪಿ ಶವ ಪತ್ತೆ: ಆತ್ಮಹತ್ಯೆಯೋ? ಕೊಲೆಯೋ?
ಯುವಕ ಆತ್ಮಹತ್ಯೆImage Credit source: Tv9 Kannada
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Apr 20, 2026 | 7:16 AM

Share

ಕಲಬುರಗಿ, ಏಪ್ರಿಲ್​​ 20: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿ ಪೋಕ್ಸೋ ಕೇಸ್​​ ಎದುರಿಸುತ್ತಿದ್ದ ಯುವಕನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ನಡೆದಿದೆ. ರೇವಣಸಿದ್ದಪ್ಪ ತಳಕೇರಿ (26) ಮೃತನಾಗಿದ್ದು, ಶೌಚಕ್ಕೆ ಹೋಗಿ ಬರೋದಾಗಿ ಹೇಳಿ ಹೋರಹೋದವ ಊರಾಚೆಗಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾನೆ. ಹೀಗಾಗಿ ರೇವಣಸಿದ್ದಪ್ಪ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಟಂಟಂ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ರೇವಣಸಿದ್ದಪ್ಪ, ತನ್ನದೇ ಆಟೋದಲ್ಲಿ ನಿತ್ಯ ಓಡಾಡ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೇಮಿಸಿದ್ದ. ಈ ನಡುವೆ ಇವರಿಬ್ಬರ ನಡುವಿನ ಪ್ರೇಮದ ವಿಚಾರ ಮನೆಯವರಿಗೂ ಗೊತ್ತಾಗಿದೆ. ಹೀಗಾಗಿ ಈತನ ಪೋಷಕರು ಮಗನನ್ನು ಊರು ಬಿಡಿಸಿ ಹೈದರಾಬಾದ್​​ಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು. ಆದರೂ ಪ್ರಿತಿಸಿದ ಯುವತಿಯನ್ನು ತೊರೆಯಲು ಒಪ್ಪದ ಈತ ಆಕೆಯನ್ನು ಸಂಪರ್ಕಿಸಿ ಹೈದರಾಬಾದ್‌ಗೆ ಕರೆಸಿಕೊಂಡಿದ್ದ. ಸಾಲದ್ದಕ್ಕೆ ಆಕೆಯನನ್ನು ವಿವಾಹ ಕೂಡ ಆಗಿದ್ದ. ಈ ವಿಚಾರ ಬಾಲಕಿಯ ಮನೆಯವರಿಗೆ ಗೊತ್ತಾಗಿದ್ದೇ ತಡ ಪೊಲೀಸ್​​ ದೂರು ದಾಖಲಾಗಿದೆ.  ಪೋಕ್ಸೋ ಪ್ರಕರಣದ ಅಡಿ ರೇವಣಸಿದ್ದಪ್ಪನ ಬಂಧಿಸಿದ್ದ ಪೊಲೀಸರು, ಈತನನ್ನು ಜೈಲಿಗೆ ಕಳುಹಿಸಿದ್ದರು. ಕಳೆದ ಎರಡು ವಾರಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ರೇವಣಸಿದ್ದಪ್ಪ, ಊರುಬಿಟ್ಟು ಹೋಗೋಣ ಎಂದು ತಾಯಿಗೆ ಹೇಳಿದ್ದ. ಆದರೆ ತಾಯಿ ಮಗನಿಗೆ ಇಲ್ಲೇ ಇರೋಣ ಎಂದು ಧೈರ್ಯ ಹೇಳಿದ್ದಳು. ಈ ನಡುವೆಯೇ ಯುವಕನ ದಾರುಣ ಅಂತ್ಯವಾಗಿದೆ.

ಇದನ್ನೂ ಓದಿ: ಪಬ್ಬಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ; ಮಹಡಿಯಿಂದ ಬಿದ್ದು ಯುವಕ ಸಾವು!

ಇನ್ನು ರೇವಣಸಿದ್ದಪ್ಪ ಅಪ್ರಾಪ್ತ ಬಾಲಕಿಯನ್ನ ಮದುವೆಯಾದ ಬಳಿಕ, ಬಾಲಕಿಯ ಪೋಷಕರು ಆಕೆಯನ್ನ ಕರೆದುಕೊಂಡು ಬಂದು ತಾಳಿ ಕಿತ್ತುಹಾಕಿದ್ದರು. ಅಲ್ಲದೆ, ಅದನ್ನು ರೇವಣಸಿದ್ದಪ್ಪನ ಮುಖದ ಮೇಲೆ ಬಿಸಾಕಿದ್ದರಂತೆ. ಹೀಗಾಗಿ ಅತ್ತ ತಾನು ಪ್ರೀತಿಸಿದ ಹುಡುಗಿಯೂ ಇಲ್ಲ‌, ಇತ್ತ ಪೋಕ್ಸೋ ಪ್ರಕರಣ ಬೇರೆ ಎಂದು ರೇವಣಸಿದ್ದಪ್ಪ ತೀವ್ರವಾಗಿ ನೊಂದಿದ್ದ. ಇನ್ಸ್ಟಾಗ್ರಾಂನಲ್ಲಿ ತನ್ನದೇ ಫೋಟೋಗೆ RIP ಎಂದು ಬರೆದು ಪೋಸ್ಟ್ ಕೂಡ ಮಾಡಿದ್ದ.ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿರೊದನ್ನ ಮನಗಂಡ ಪೋಷಕರು, ರೇವಣಸಿದ್ದಪ್ಪನನ್ನ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಆದರೂ ತಮ್ಮ ಗ್ರಾಮಕ್ಕೆ ಈತ ಬಂದು ಹೋಗ್ತಿದ್ದ. ಇದರ ಮಧ್ಯೆ ಊರಲ್ಲಿ ರೇವಣಸಿದ್ದಪ್ಪನ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸ್ ಬಗ್ಗೆ ಜನ ಮಾತಾಡಿಕೊಳ್ಳತೊಡಗಿದ್ದರು. ಹೀಗಾಗಿ ಪ್ರಾಣಕಳೆದುಕೊಳ್ಳುವ ನಿರ್ಧಾರಕ್ಕೆ ಈತ ಬಂದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೇವಣಸಿದ್ದಪ್ಪ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದಾನ ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನ ಮರಕ್ಕೆ ನೇಣು ಹಾಕಿದ್ದಾರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us