ತಾಪಂ, ಜಿಪಂ ಮೀಸಲಾತಿ ಬದಲಾವಣೆ ಕರಡು ನಿಯಮ ಪ್ರಕಟ: ಆಕ್ಷೇಪಣೆಗೆ ಆಹ್ವಾನ
ಜಿಲ್ಲಾ ಪಂಚಾಯಿತಿಗೆ ಮೀಸಲಿರಿಸದ ಸ್ಥಾನಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ಅನುಸೂಚಿತ ಪಂಗಡಗಳ ಜನಸಂಖ್ಯೆ ಹೆಚ್ಚು ಇರುವ ತಾಲ್ಲೂಕುಗಳಿಗೆ ಆದ್ಯತೆ ನೀಡಬೇಕು ಎಂದು ಕರಡು ಅಧಿಸೂಚನೆಯು ಹೇಳಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಬದಲಾವಣೆ ಮಾಡಲು ಉದ್ದೇಶಿಸಿದೆ. ಅಧಿನಿಯಮದ ಕರಡು ಪ್ರತಿಯನ್ನು ಗೆಜೆಟ್ನಲ್ಲಿ ಪ್ರಕಟಿಸಲಾಗಿದ್ದು ನ 4ರ ಒಳಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಚೇರಿಗೆ ಆಕ್ಷೇಪಣೆಗಳನ್ನು ಕಳುಹಿಸಬಹುದಾಗಿದೆ.
ತಾಲ್ಲೂಕು ಪಂಚಾಯಿತಿಯಲ್ಲಿ ಎಲ್ಲ ಪ್ರವರ್ಗಗಳ ಮಹಿಳೆಯರಿಗೆ ಮೀಸಲಿಟ್ಟ ಸ್ಥಾನಗಳಲ್ಲಿ ಆವರ್ತನೆಯ ಮೇಲೆ ಮೀಸಲಾತಿ ನಿಗದಿಪಡಿಸುವುದು. ತಾಲ್ಲೂಕಿನ ಜನಸಂಖ್ಯೆಯಲ್ಲಿ ಹೆಚ್ಚು ಅನುಸೂಚಿತ ಪಂಗಡಗಳ ಜನಸಂಖ್ಯೆ ಇರುವ ಮತಕ್ಷೇತ್ರಗಳನ್ನು ಅವರೋಹಣ ಕ್ರಮದಲ್ಲಿ ಪಟ್ಟಿ ಮಾಡುವುದು. ಮೀಸಲಾತಿ ಹಂಚಿಕೆ ಸಂದರ್ಭದಲ್ಲಿ ಅತಿಹೆಚ್ಚಿನ ಅನುಸೂಚಿತ ಪಂಗಡಗಳ ಮಹಿಳಾ ಅಭ್ಯರ್ಥಿಗಳಿಗೆ ಕ್ಷೇತ್ರವನ್ನು ಹಂಚಿಕೆ ಮಾಡಲಾಗುವುದು ಎಂದು ಸರ್ಕಾರವು ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಿದೆ.
ಯಾವುದೇ ಕ್ಷೇತ್ರವು ಅನುಸೂಚಿತ ಜಾತಿಗೆ ಮೀಸಲಾಗಿದ್ದಲ್ಲಿ, ಅತಿಹೆಚ್ಚು ಜನಸಂಖ್ಯೆ ಇರುವ ಮತಕ್ಷೇತ್ರಗಳಿಗೆ ಆವರ್ತನೆಯ ಮೇಲೆ ನಿರ್ಧರಿಸತಕ್ಕದ್ದು. ಅದೇ ಮತಕ್ಷೇತ್ರಕ್ಕೆ ಈ ಹಿಂದೆ ಅನುಸೂಚಿತ ಜಾತಿಯ ಸ್ಥಾನ ಹಂಚಿಕೆಯಾಗಿದ್ದಲ್ಲಿ, ಮೀಸಲಾತಿಯು ಮುಂದಿನ ಅವಧಿಯ ಚುನಾವಣೆಯಲ್ಲಿ ಪುನರಾವಾರ್ತನೆಯಾಗುತ್ತಿಲ್ಲ ಎನ್ನುವುದು ಖಾತ್ರಿಪಡಿಸಿಕೊಳ್ಳಬೇಕು. ಮಹಿಳೆಯರಿಗೆ ಹಂಚಿಕೆ ಮಾಡುವಾಗ ಅತಿಹೆಚ್ಚು ಅನುಸೂಚಿತ ಜಾತಿಯ ಮಹಿಳಾ ಜನಸಂಖ್ಯೆ ಇರುವ ಮತಕ್ಷೇತ್ರಕ್ಕೇ ಹಂಚಿಕೆ ಮಾಡತಕ್ಕದ್ದು.
ಜಿಲ್ಲಾ ಪಂಚಾಯಿತಿಗೆ ಮೀಸಲಿರಿಸದ ಸ್ಥಾನಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ಅನುಸೂಚಿತ ಪಂಗಡಗಳ ಜನಸಂಖ್ಯೆ ಹೆಚ್ಚು ಇರುವ ತಾಲ್ಲೂಕುಗಳಿಗೆ ಆದ್ಯತೆ ನೀಡಬೇಕು. ಒಂದೊಂದು ಸ್ಥಾನವನ್ನು ಆವರ್ತನೆಯ ಮೇಲೆ ಹಂಚಿಕೆ ಮಾಡಬೇಕು. ಯಾವುದೇ ಮತಕ್ಷೇತ್ರವು ವಿಲೀನ ಅಥವಾ ವಿಭಜನೆಯಿಂದ ಬದಲಾವಣೆಯಾದರೆ, ಮೊದಲ ಮತಕ್ಷೇತ್ರದ ಹೆಚ್ಚಿನ ಪ್ರದೇಶವನ್ನು ಗಮನಿಸಿ, ಹಿಂದಿನ ಮತಕ್ಷೇತ್ರದ ಅನುಕ್ರಮ ಮತಕ್ಷೇತ್ರ ಎಂದು ಪರಿಗಣಿಸಬಹುದು.
ಆಕ್ಷೇಪಣೆ ಕಳಿಸಲು ವಿಳಾಸ: ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ ಅಂಬೇಡ್ಕರ್ ವೀಧಿ, ಬೆಂಗಳೂರು – 01
ಅಧಿಸೂಚನೆಗೆ ಲಿಂಕ್: ಕರಡು ಅಧಿಸೂಚನೆಯನ್ನು ಪೂರ್ಣ ದಾಖಲೆ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:30 pm, Sun, 23 October 22




