ಬಾಣಂತಿಯರ ಸರಣಿ ಸಾವಿಗೆ ಕಾರಣ ಬಹಿರಂಗ: ವರದಿಯಲ್ಲಿರುವ ಸ್ಫೋಟಕ ಅಂಶ ಇಲ್ಲಿದೆ
2024ರಲ್ಲಿ ಸಂಭವಿಸಿದ ಸರಣಿ ಬಾಣಂತಿಯರ ಸಾವು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಳ್ಳಾರಿ ಜಿಲ್ಲಾ ಆಸ್ಪತ್ರೆಯೊಂದರಲ್ಲೇ ಐವರು ಬಾಣಂತಿಯರು ಮೃತಪಟ್ಟಿದ್ದರು. ಈ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲೂ ಬಾಣಂತಿಯರ ಸಾವಿನ ಸಂಖ್ಯೆ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಾಣಂತಿಯರ ಸಾವಿನ ಬಗ್ಗೆ ಟೆಕ್ನಿಕಲ್ ಕಮಿಟಿ ರಚಿಸಿತ್ತು. ಇದೀಗ, ಟೆಕ್ನಿಕಲ್ ಕಮಿಟಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಹಲವು ವಿಚಾರ ಬಹಿರಂಗಗೊಂಡಿದೆ.

ಬೆಂಗಳೂರು, ಏಪ್ರಿಲ್ 04: ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ (Maternal Mortality) ಹಿನ್ನೆಲೆಯ ಡೆತ್ ಆಡಿಟ್ ವರದಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಬಿಡುಗಡೆ ಮಾಡಿದರು. ಬಳಿಕ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡುರಾವ್, ಟೆಕ್ನಿಕಲ್ ಕಮಿಟಿ ವರದಿಯ ಶಿಫಾರಸು ಸರ್ಕಾರ ಪಡೆದಿದೆ. ಅಗತ್ಯ ಔಷಧ ಸಲಕರಣೆ, ವೈದ್ಯರು ಜವಾಬ್ದಾರಿ ನಿರ್ವಹಿಸಿದ್ದರೇ, ಶೇ 70 ರಷ್ಟು ಬಾಣಂತಿಯರ ಸಾವುಗಳನ್ನು ನಾವು ತಡೆಯಬಹುದಿತ್ತು. ರಿಂಗರ್ ಲ್ಯಾಕ್ಟೇಟ್ ಸಮಸ್ಯೆಯಿಂದ 18 ಮಂದಿಯ ಬಾಣಂತಿಯರ ಸಾವಾಗಿದೆ. ಡಿಸೆಂಬರ್ನಿಂದ ಇದನ್ನು ಸರಿಪಡಿಸಲು ತಯಾರಿ ಮಾಡಿದ್ದೇವೆ ಫ್ರೆಷ್ ಫ್ರೋಜನ್ ಪ್ಲಾಸ್ಮಾ ಇದ್ದಿದ್ರೆ ಸಾವಿನ ಸಂಖ್ಯೆ ತಡೆಯಬಹುದಿತ್ತು ಎಂದು ಹೇಳಿದರು.
ಮೊದಲೇ ರಿಸ್ಕ್ ಪ್ರಮಾಣ ಗೊತ್ತಿದ್ದರೆ ಹೆಚ್ಚಿನ ಚಿಕಿತ್ಸೆ ನೀಡಬಹುದಿತ್ತು. ಬಹಳ ಸುಧಾರಣೆ ಮಾಡುವ ಅವಶ್ಯಕತೆ ಇದೆ. ಬಳ್ಳಾರಿಯಲ್ಲಿ 5 ಸಾವು ಆಗಿರುವಂತೆ 13 ಕಡೆಗಳಲ್ಲೂ ಹೀಗೆ ಆಗಿದೆ ಎಂಬ ಅನುಮಾನ ಇದೆ. 10 ಮಂದಿ ವೈದ್ಯರಿಗೆ ನಿರ್ಲಕ್ಷ್ಯದ ಕಾರಣಕ್ಕೆ ನೊಟೀಸ್ ನೀಡಿದ್ದೇವೆ ಎಂದು ತಿಳಸಿದರು.
ಬಾಣಂತಿಯರ ಸಾವಿನ ಸಂಖ್ಯೆ
- 2020-21 ರಲ್ಲಿ 714 ಸಾವು
- 2021-22 ರಲ್ಲಿ 635 ಸಾವು
- 2022-23 ರಲ್ಲಿ 594 ಸಾವು
- 2023-24 ರಲ್ಲಿ 550 ಸಾವು
- 2024-25 ರಲ್ಲಿ 530 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ವರದಿಯಲ್ಲಿ ಪ್ರಮುಖ ಅಂಶಗಳು
- ಶೇಕಡ 63 ರಷ್ಟು ತಾಯಂದಿರು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಶೇಕಡ 37 ರಷ್ಟು ಮಂದಿ ಬಾಣಂತಿಯರಿಗೆ ಸಾಮಾನ್ಯ ಹೆರಿಗೆಗಳಾಗಿವೆ.
- ರಿಂಗರ್ ಲ್ಯಾಕ್ಟೇಟ್ ಸಮಸ್ಯೆಗೆ ಸಂಬಂಧಿಸಿದ 18 ಬಾಣಂತಿಯರ ಸಾವುಗಳಾಗಿವೆ. 5 ಬಳ್ಳಾರಿ, 4 ರಾಯಚೂರು, 4 ಬೆಂಗಳೂರು ನಗರ, 3 ಉತ್ತರ ಕನ್ನಡ ಮತ್ತು ಯಾದಗಿರಿ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಸೇರಿವೆ.
- ವಿಶ್ಲೇಷಣೆ ಪ್ರಕ್ರಿಯಲ್ಲಿ ಕಂಡುಬಂದ ಅಂಶಗಳ ಆಧಾರದಮೇಲೆ 27 ಶಿಫಾರಸುಗಳನ್ನು ಸಲ್ಲಿಸಲಾಗಿದೆ.
- ಈ ಶಿಫಾರಸುಗಳು ಆರೋಗ್ಯ ಸಂಸ್ಥೆಗಳಲ್ಲಿ, ಪ್ರಸವ ಪೂರ್ವ ಮತ್ತು ಪ್ರಸವಾನಂತರದ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.
- ಶಿಫಾರಸುಗಳಲ್ಲಿ, ಸಾಮರ್ಥ್ಯ ವೃದ್ಧಿ, ಉಪಕರಣಗಳು ಮತ್ತು ಔಷಧಿಗಳೊಂದಿಗೆ ಸೌಲಭ್ಯಗಳನ್ನು ಬಲಪಡಿಸುವುದು. ರಕ್ತ ಸಂಗ್ರಹ ಘಟಕಗಳನ್ನು ಬಲಪಡಿಸುವುದು, ಸಾಮಾನ್ಯ ಹೆರಿಗೆಯ ನಂತರ ಬಾಣಂತಿಯರು 3 ದಿನಗಳು ಮತ್ತು ಸಿಸೇರಿಯನ್ ಹೆರಿಗೆಗಳ ನಂತರ 7 ದಿನಗಳ ಕಡ್ಡಾಯ ಆಸ್ಪತ್ರೆ ವಾಸ್ತವ್ಯ ಮಾಡಲು ಸೂಚಿಸಲಾಗಿದೆ.
- ಸಾವಿಗೆ ಕಾರಣ ಸ್ಪಷ್ಟವಾಗಿಲ್ಲದ ಕೆಲವು ಸಂದರ್ಭಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಶಿಫಾರಸ್ಸು ಮಾಡಲಾಗಿದೆ. ಹೆರಿಗೆಯ ಸ್ಥಳ ಅಥವಾ ಜನನ ಯೋಜನೆಯನ್ನು ಗರ್ಭಿಣಿಯರು ಮತ್ತು ಕುಟುಂಬ ಸದಸ್ಯರೊಂದಿಗೆ ಮಾಡಬೇಕು.
- ಹೆರಿಗೆಗೆ ನಿಯೋಜಿಸಿರುವ ಮಹಿಳೆಯರ ಪಟ್ಟಿಯನ್ನು ಸಂಬಂಧ ಪಟ್ಟ ಆಸ್ಪತ್ರೆಯೊಂದಿಗೆ ಮುಂಚಿತವಾಗಿ ಹಂಚಿಕೊಳ್ಳಲು ಸೂಚಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Fri, 4 April 25