ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಗಣನೀಯವಾಗಿ ತಗ್ಗಿದ ನೀರಿನ ಮಟ್ಟ: ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಆತಂಕ
ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದೆ. ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯ ಕೆಆರ್‌ಎಸ್, ಉತ್ತರ ಕರ್ನಾಟಕ ಭಾಗದ ಭದ್ರಾ ಹಾಗೂ ಮಲಪ್ರಭಾ ಅಣೆಕಟ್ಟುಗಳಲ್ಲಿ ಒಳಹರಿವು ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂತ ಗಣನೀಯ ಮಟ್ಟದಲ್ಲಿ ನೀರಿನ ಸಂಗ್ರಹ ಇರುವುದು ಆತಂಕಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರImage Credit source: tv9
ಮುಖ್ಯಾಂಶಗಳು
- ಕಳೆದ ವರ್ಷಕ್ಕಿಂತ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ.
- ಕೆಆರ್‌ಎಸ್‌ನಲ್ಲಿ ಶೇ 63ಕ್ಕೆ ಕುಸಿದ ನೀರು.
- ಮಲಪ್ರಭಾ, ಭದ್ರಾ ಅಣೆಕಟ್ಟುಗಳಲ್ಲೂ ತಗ್ಗಿದ ಸಂಗ್ರಹ.
ಬೆಂಗಳೂರು, ಆಗಸ್ಟ್ 27: ಕರ್ನಾಟಕದ ಪ್ರಮುಖ ಜಲಾಶಯಗಳಿಗೆ (Karnataka Dam Water Level) ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಇಳಿಮುಖ ಕಂಡುಬಂದಿದ್ದು, ಕಳೆದ ವರ್ಷದ ಇದೇ ಅವಧಿಗೆ (ಆಗಸ್ಟ್ 27) ಹೋಲಿಸಿದರೆ ಈ ಬಾರಿ ಬಹುತೇಕ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕೊಂಚ ಕಡಿಮೆಯಾಗಿದೆ. ಜಲಸಂಪನ್ಮೂಲ ಇಲಾಖೆಯು ಆಗಸ್ಟ್ 27, 2026ರಂದು ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶದ ಪ್ರಕಾರ, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ.
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಸ್ಥಿತಿ
- ಕೆಆರ್‌ಎಸ್ (KRS): ಮಂಡ್ಯದ ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 31.47 ಟಿಎಂಸಿ (ಶೇ 63) ನೀರಿದ್ದು, ಕಳೆದ ವರ್ಷ ಇದೇ ದಿನ ಬರೋಬ್ಬರಿ 48.31 ಟಿಎಂಸಿ (ಶೇ 98) ನೀರು ಸಂಗ್ರಹವಿತ್ತು.
- ಹೇಮಾವತಿ: ಹಾಸನದ ಹೇಮಾವತಿಯಲ್ಲಿ ಪ್ರಸ್ತುತ 30.10 ಟಿಎಂಸಿ (ಶೇ 81) ನೀರಿದ್ದು, ಕಳೆದ ವರ್ಷ 36.89 ಟಿಎಂಸಿ (ಶೇ 99) ನೀರು ಇತ್ತು.
- ಕಬಿನಿ: ಹೆಚ್.ಡಿ. ಕೋಟೆಯ ಕಬಿನಿ ಜಲಾಶಯದಲ್ಲಿ ಈಗ 13.10 ಟಿಎಂಸಿ (ಶೇ 67) ನೀರಿದ್ದು, ಕಳೆದ ವರ್ಷ 19.13 ಟಿಎಂಸಿಯಷ್ಟು (ಶೇ 98) ಭರ್ತಿಯಾಗಿತ್ತು.
- ಹಾರಂಗಿ: ಕೊಡಗಿನ ಹಾರಂಗಿ ಜಲಾಶಯದಲ್ಲಿ 8.34 ಟಿಎಂಸಿ (ಶೇ 98) ನೀರಿದ್ದು, ಕಳೆದ ವರ್ಷ 8.13 ಟಿಎಂಸಿ (ಶೇ 96) ನೀರು ಇತ್ತು (ಇಲ್ಲಿ ಮಾತ್ರ ಕೊಂಚ ಹೆಚ್ಚಳ ಕಂಡುಬಂದಿದೆ).
ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳ ಸ್ಥಿತಿ
- ಮಲಪ್ರಭಾ: ಬೆಳಗಾವಿಯ ಮಲಪ್ರಭಾ (ರೇಣುಕಾ ಸಾಗರ) ಜಲಾಶಯದಲ್ಲಿ ಈಗ 22.52 ಟಿಎಂಸಿ (ಶೇ 60) ಸಂಗ್ರಹವಿದ್ದು, ಕಳೆದ ವರ್ಷ 36.41 ಟಿಎಂಸಿ (ಶೇ 96) ಯಷ್ಟು ಭರ್ತಿಯಾಗಿತ್ತು.
- ಭದ್ರಾ: ಶಿವಮೊಗ್ಗದ ಭದ್ರಾ ಜಲಾಶಯದಲ್ಲಿ ಪ್ರಸ್ತುತ 60.28 ಟಿಎಂಸಿ (ಶೇ 84) ನೀರಿದ್ದು, ಕಳೆದ ವರ್ಷ 69.86 ಟಿಎಂಸಿ (ಶೇ 98) ಯಷ್ಟು ನೀರಿತ್ತು.
- ವಾಣಿ ವಿಲಾಸ ಸಾಗರ: ಚಿಕ್ಕಮಗಳೂರು/ಚಿತ್ರದುರ್ಗದ ವಾಣಿ ವಿಲಾಸ ಸಾಗರದಲ್ಲಿ 22.42 ಟಿಎಂಸಿ (ಶೇ 74) ನೀರಿದ್ದು, ಕಳೆದ ವರ್ಷ 25.79 ಟಿಎಂಸಿ (ಶೇ 85) ನೀರು ಸಂಗ್ರಹವಾಗಿತ್ತು.
- ಆಲಮಟ್ಟಿ ಹಾಗೂ ತುಂಗಭದ್ರಾ: ಆಲಮಟ್ಟಿಯಲ್ಲಿ 122.66 ಟಿಎಂಸಿ (ಶೇ 99) ಮತ್ತು ತುಂಗಭದ್ರಾದಲ್ಲಿ 95.62 ಟಿಎಂಸಿ (ಶೇ 90) ನಷ್ಟು ಉತ್ತಮ ಸಂಗ್ರಹ ಕಂಡುಬಂದಿದೆ.
ವರದಿಯ ಪ್ರಕಾರ, ಜಲಾಶಯಗಳಿಗೆ ಬರುವ ಒಳಹರಿವು ಕಳೆದ ವರ್ಷಕ್ಕಿಂತ ಗಣನೀಯವಾಗಿ ಕಡಿಮೆಯಾಗಿರುವುದು ಈ ನೀರಿನ ಮಟ್ಟದ ಇಳಿಕೆಗೆ ಮುಖ್ಯ ಕಾರಣವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




