ಕಾಕಂಬಿ ರಫ್ತು: ಖಾಸಗಿ ಕಂಪನಿಗಾಗಿ ನಿಯಮ ಉಲ್ಲಂಘಿಸಿದ್ರಾ ಬೊಮ್ಮಾಯಿ? ಅನುಮಾನ ಮೂಡಿಸಿದ ಸಿಎಂ ನಡೆ
ದೆಹಲಿಯಲ್ಲಿ ಅಬಕಾರಿ ಹಗರಣವು ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಅಬಕಾರಿ ಇಲಾಖೆ ವ್ಯಾಪ್ತಿಯ ಕಾಕಂಬಿ ಹಗರಣವೂ ಮುನ್ನೆಲೆಗೆ ಬಂದಿದೆ.
ಬೆಂಗಳೂರು: ಖಾಸಗಿ ಕಂಪನಿಯೊಂದಕ್ಕೆ ಲಾಭ ಮಾಡಿಕೊಡಲು ಹಾಗೂ ಕಿಕ್ ಬ್ಯಾಕ್ ಪಡೆಯಲು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಸಚಿವರು ನಿಯಮ ಉಲ್ಲಂಘನೆ ಮಾಡಿದ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಮೊಲ್ಯಾಸಿಸ್ ಅಥವಾ ಕಾಕಂಬಿ ( molasses export) ಎಂದು ಕರೆಯಲ್ಪಡುವ ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನವನ್ನು ಹೊರರಾಜ್ಯಕ್ಕೆ ಹೊರ ರಾಷ್ಟ್ರಗಳಿಗೆ ರಫ್ತು ಮಾಡಲು ಕಿಕ್ ಬ್ಯಾಕ್ ಪಡೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೊರರಾಜ್ಯ ಅಥವಾ ಹೊರರಾಷ್ಟ್ರಕ್ಕೆ ಕಾಕಂಬಿಯನ್ನು ರಫ್ತು ಮಾಡುತ್ತಿದ್ದ ರಾಜ್ಯದ ಸ್ಥಳೀಯ ಕಂಪನಿಗಳು ಮತ್ತು ರಾಜ್ಯದ ಬಂದರನ್ನು ಹೊರಗಿಟ್ಟು ಮುಂಬೈನ ಕೆ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಅನುಮತಿ ನೀಡಲಾಗಿದೆ. ಅನುಮತಿ ನೀಡುವ ಪ್ರಸ್ತಾವನೆಗೆ ಸಹಿ ಹಾಕುವ ಮೂಲಕ ಸ್ವತಃ ಸಿಎಂ ಹಾಗೂ ಸಚಿವರಯ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುರುತರವಾದ ಆರೋಪಕ್ಕೂ ಗುರಿಯಾಗಿದ್ದಾರೆ.
ರಾಜ್ಯದ ಕಾಕಂಬಿ (ಮೊಲ್ಯಾಸಿಸ್) ಅನ್ನು ಗೋವಾ ಬಂದರಿನ ಮೂಲಕ ರಫ್ತಿಗೆ ಅನುಮತಿ ನೀಡಿದರೆ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ಗೊತ್ತಿದ್ದರೂ ಇದೀಗ ಅಬಕಾರಿ ಸಚಿವ ಗೋಪಾಲಯ್ಯ ಅವರು ಗೋವಾ ಬಂದರಿನ ಮೂಲಕವೇ ಕಾಕಂಬಿ ರಫ್ತು ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಿಎಂ ಕೂಡ ಸಮ್ಮತಿ ಸೂಚಿಸಿದ್ದು ದಟ್ಟ ಅನುಮಾನ ಗಳಿಗೆ ಕಾರಣವಾಗಿದೆ. ಮಹಾರಾಷ್ಟ್ರ ಮೂಲದ ಕಂಪನಿಯ ಪ್ರಸ್ತಾವನೆಗೆ ಸಿಎಂ ಹಾಗೂ ಸಚಿವರು ಅನುಮೋದನೆ ನೀಡಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಇದಕ್ಕೆ ಸಂಬಂಧಿಸಿದ ಕಡತವು ತಮ್ಮ ಬಳಿ ಬಂದಿಲ್ಲ ಎಂದು ಸಚಿವ ಗೋಪಾಲಯ್ಯ ಅವರು ಖಚಿತ ಹೇಳಿಕೆ ನೀಡಿದ್ದರು. ಆದರೆ FD 16 EFL/2022- EXCISE ಇ- ಕಡತವನ್ನು (ಕಂಪ್ಯೂಟರ್ ನಂಬರ್ ; 903565) ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರು 2022ರ ಅಕ್ಟೋಬರ್ 12ರಂದು ಬೆಳಗ್ಗೆ 11.11ಕ್ಕೆ ಸಚಿವ ಗೋಪಾಲಯ್ಯ ಅವರಿಗೆ ರವಾನಿಸಿದ್ದರು. ಅಲ್ಲದೇ ಇದೇ ಕಡತವನ್ನು ಉಪಕಾರ್ಯದರ್ಶಿ ಅರುಳ್ ಕುಮಾರ್ ಅವರು 2022ರ ಅಕ್ಟೋಬರ್ 10ರಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್ ಕೌರ್ ಅವರಿಗೆ ಸಂಜೆ 5.16ಕ್ಕೆ ರವಾನಿಸಿದ್ದರು. ಆ ನಂತರ ಏಕ್‌ರೂಪ್ ಕೌರ್ ಅವರು 2022ರ ಅಕ್ಟೋಬರ್ 11ರಂದು ಸಂಜೆ 4.50ಕ್ಕೆ ಇದೇ ಕಡತವನ್ನು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರಿಗೆ ರವಾನಿಸಿದ್ದರು. ಆ ನಂತರ ಇದೇ ಕಡತವು 2022ರ ಅಕ್ಟೋಬರ್ 31ರಂದು ಉಪಕಾರ್ಯದರ್ಶಿ ಅರುಳ್‌ಕುಮಾರ್ ಬಳಿ ಇತ್ತು ಎಂಬುದು ಇ-ಕಡತದ ಚಲನವಲನದಿಂದ ತಿಳಿದು ಬಂದಿದೆ.
ಹಿಂದೆಯೂ ಇದೇ ಕಂಪನಿಯು ಸಲ್ಲಿಸಿದ್ದ ಪ್ರಸ್ತಾವನೆ/ಕೋರಿಕೆಯನ್ನು ಅಬಕಾರಿ ಇಲಾಖೆಯು ತಿರಸ್ಕರಿಸಿತ್ತು ಎಂದು ತಿಳಿದು ಬಂದಿದೆ. ಆದರೂ ಈ ಕಡತದ ಹಿಂದೆ ಬಿದ್ದಿರುವ ಸಚಿವರ ಕಚೇರಿಯ ಕೆಲ ಅಧಿಕಾರಿಗಳು ಅನುಮೋದನೆ ಪಡೆಯಲು ಆರ್ಥಿಕ ಇಲಾಖೆ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದರು ಎಂದು ಗೊತ್ತಾಗಿದೆ.
ಈ ರೀತಿ ರಾಜ್ಯದಲ್ಲಿ ಉತ್ಪಾದನೆ ಆಗುವ ಕಾಕಂಬಿಯನ್ನು ಹೊರ ರಾಜ್ಯದ ಬಂದರಿನಿಂದ ರಫ್ತು ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ಗಣನೀಯ ಪ್ರಮಾಣದಲ್ಲಿ ಆದಾಯ ನಷ್ಟವಾಗಲಿದೆ. ರಫ್ತುದಾರರು ರಾಜ್ಯದ ಬಂದರು ಇಲಾಖೆಗೆ ಹಡಗುಕಟ್ಟೆ ಸುಂಕ, ಹಡಗು ನಿಲುಗಡೆ, ಬಂದರು ನಿರ್ವಹಣೆ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಪಾವತಿಸಲಾಗುತ್ತದೆ. ರಾಜ್ಯದ ಕಾಕಂಬಿಯನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಅನುಮತಿ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಇದಷ್ಟೇ ಅಲ್ಲ, ಮುಂಬೈನ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ ರಾಜ್ಯ ಸರ್ಕಾರವು ಅನುಮತಿ ನೀಡಿದ್ದು ರಾಜ್ಯದಲ್ಲಿ ಈ ಕಂಪನಿಯು ಖರೀದಿಸಿದ ಕಾಕಂಬಿಯು ಗಡಿ ದಾಟಿ ಗೋವಾ ರಾಜ್ಯಕ್ಕೆ ಹೋದ ಮೇಲೆ ರಾಜ್ಯದ ಅಬಕಾರಿ ಇಲಾಖೆಯ ಹತೋಟಿಯು ಇಲ್ಲದಂತಾಗುತ್ತದೆ. ಹೀಗೆ ಖರೀದಿಸಿರುವ ಕಾಕಂಬಿಯು ದುರುಪಯೋಗವಾಗುವ ಎಲ್ಲಾ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ದುರುಪಯೋಗವಾಗುವ ಬಗ್ಗೆ ಮಾಹಿತಿ ಇದ್ದರೂ ಕೂಡ ಸಿಎಂ ಹಾಗೂ ಸಚಿವರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ
ಹೊರರಾಷ್ಟ್ರಗಳಿಗೆ ಸ್ಥಳೀಯ ಬಂದರು ಮೂಲಕ ಕಾಕಂಬಿ ರಫ್ತು ಮಾಡಲು ಅವಕಾಶವಿದೆಯೇ ಹೊರತು ಹೊರರಾಜ್ಯಗಳ ಬಂದರುಗಳ ಮೂಲಕ ಮುಖಾಂತರ ರಫ್ತು ಮಾಡಲು ಅವಕಾಶವಿಲ್ಲ. ಆದರೆ ನಿಯಮಬಾಹಿರವಾಗಿ ಹೊರರಾಜ್ಯದ ಬಂದರು ಮೂಲಕ ರಫ್ತು ಮಾಡಲು ಅನುನತಿ ನೀಡಿರುವ ಇದೊಂದೇ ಪ್ರಕರಣದಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟವಾಗಲಿದೆ ಎಂದು ಗೊತ್ತಾಗಿದೆ.
ಸ್ಥಳೀಯ ಬಂದರು ಮೂಲಕ ರಫ್ತು ಮಾಡುವ ಸಂಬಂಧ ಸರ್ಕಾರದ ಖಾತರಿಯೊಂದಿಗೆ ಇಲ್ಲಿನ ಸ್ಥಳೀಯ ಹೂಡಿಕೆದಾರರು/ರಫ್ತುದಾರರ ಕಂಪನಿಯು ಕನಿಷ್ಠ 50 ಕೋಟಿ ರು ಹೂಡಿಕೆ ಮಾಡಿದೆ. ಕನಿಷ್ಠ ಪಕ್ಷ 30ರಿಂದ 40 ಮಂದಿಗೆ ಉದ್ಯೋಗ ಲಭಿಸಿದೆ. ಹೊರರಾಜ್ಯದ ಕಂಪನಿಗೆ ಹೊರರಾಜ್ಯದ ಬಂದರು ಮೂಲಕ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಸ್ಥಳೀಯ ಹೂಡಿಕೆದಾರ/ರಫ್ತುದಾರ ಕಂಪನಿಯ ಮೂಲ ಬಂಡವಾಳಕ್ಕೆ ಪೆಟ್ಟು ಬೀಳಲಿದೆ. ಅಂದಾಜು 400ರಿಂದ 500 ಟ್ರಕ್, ಟ್ಯಾಂಕರ್‌ಗಳ ಮಾಲೀಕರು ಮಂದಿಯ ಮತ್ತು ನೂರಾರು ಮಂದಿಯ ಉದ್ಯೋಗವನ್ನು ಕಸಿದುಕೊಂಡಂತಾಗುತ್ತದೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ವಿಶೇಷವೆಂದರೆ ದೇಶದ ಯಾವುದೇ ರಾಜ್ಯ ಸರ್ಕಾರವು ತಮ್ಮ ರಾಜ್ಯದ ಸರಹದ್ದಿನ ಆಚೆ ಅಂದರೆ ಇತರೆ ರಾಜ್ಯಕ್ಕೆ ತಮ್ಮ ರಾಜ್ಯದಲ್ಲಿ ಉತ್ಪಾದನೆಯಾದ ಕಾಕಂಬಿಯನ್ನು ಸಾಗಿಸಲು ಅನುಮತಿ ನೀಡುವುದಿಲ್ಲ, ಮಹಾರಾಷ್ಟ್ರ ರಾಜ್ಯವು ಮಹಾರಾಷ್ಟ್ರದಲ್ಲಿ ಕಾಕಂಬಿ ಖರೀದಿಸಿ ಕರ್ನಾಟಕದಿಂದ ರಾಜ್ಯಕ್ಕೆ ಖರೀದಿಸಿ ಅದನ್ನು ಸಾಗಾಣಿಕೆ ಮಾಡಿ ವಿದೇಶಕ್ಕೆ ರಫ್ತು ಮಾಡಲು ಅನುಮತಿ ನೀಡುತ್ತಿಲ್ಲ. ಹೀಗಿದ್ದರೂ ಸಚಿವ ಗೋಪಾಲಯ್ಯ ಹಾಗೂ ಸಿಎಂ ಅವರು ರಾಜ್ಯದ ಕಾಕಂಬಿಯನ್ನು ಹೊರರಾಜ್ಯದ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲು ಅನುಮತಿ ದೊರಕಿಸಿಕೊಡಲು ಅನುಮೋದಿಸಿರುವುದಕ್ಕೆ ಇಲಾಖಾಧಿಕಾರಿಗಳಲ್ಲೇ ಆಕ್ಷೇಪ ಕೇಳಿ ಬಂದಿದೆ
ಕಾಕಂಬಿ ನಿಯಂತ್ರಣ ಕಾಯ್ದೆ 1965 ರದ್ದುಗೊಂಡ ನಂತರ ಭಾರತ ಸರ್ಕಾರವು 1996ರಲ್ಲಿ ಕಾಕಂಬಿ ನಿಯಂತ್ರಣದ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಇದರ ಪ್ರಕಾರ ಕಾಂಬಿಯನ್ನು ಅನುಮತಿಯಿಂದ ಕೇವಲ ರಸ್ತೆ ಸಾಗಾಣಿಕೆ ನಿಯಂತ್ರಣಗೊಳಿಸುವ ಅಧಿಕಾರವು ರಾಜ್ಯದ ಅಬಕಾರಿ ಆಯುಕ್ತರಿಗಿದೆ. ಆದರೆ ಕಾಕಂಬಿ ಒಂದು ಸಮಾಜ ವಿದ್ರೋಹಿ ವಸ್ತು (ಮದ್ಯ ತಯಾರಿಸುವ ಕಚ್ಛಾ ವಸ್ತು) ಎಂದು ಪರಿಗಣಿಸಿರುವುದರಿಂದ ಇದರ ದುರ್ಬಳಕೆ ತಡೆಯುವ ಎಲ್ಲಾ ಅಧಿಕಾರವನ್ನೂ ರಾಜ್ಯ ಅಬಕಾರಿ ಆಯುಕ್ತರು ಹೊಂದಿದ್ದಾರೆ. ಇಂತಹ ಸೂಕ್ಷ್ಮ ವಿಚಾರದ ಕಾಕಂಬಿ ನಿಯಂತ್ರಣದ ಕಡತಗಳಿಗೆ ಸಚಿವರಿಂದ ನಿಯಮಬಾಹಿರವಾಗಿ ಅನುಮೋದನೆ ದೊರಕಿಸಲಾಗಿದೆ. ಡಿಸ್ಟಲರಿಗಳಿಗೆ ಪರವಾನಿಗೆ ನೀಡಲು ಅಬಕಾರಿ ಉಪ ಆಯುಕ್ತರಿಗೆ ಅಧಿಕಾರವಿದೆ. ರಫ್ತು ಮಾಡುವ ಪರವಾನಿಗೆಯನ್ನು ಈಗ ಕೇಂದ್ರೀಕೃತಗೊಳಿಸಿ ಅದನ್ನು ರಾಜ್ಯದ ಅಬಕಾರಿ ಆಯುಕ್ತರಿಗೆ ನೀಡಲಾಗಿದೆ. ಹೀಗಾಗಿ ಸಚಿವರ ಸೂಚನೆ ಮತ್ತು ಒತ್ತಡದ ಕಾರಣಕ್ಕೆ ಆಯುಕ್ತರು ಕೂಡ ತಲೆಬಾಗುತ್ತಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಪ್ರಭಾವಿ ಡಿಸ್ಟಲರಿಗಳ ಪರವಾಗಿ ಅಬಕಾರಿ ಇಲಾಖೆಯ ಉಪ ಕಡತಗಳನ್ನು ತಮ್ಮ ಹಂತದಲ್ಲೇ ಆಯುಕ್ತರು ವಿಲೇವಾರಿ ಮಾಡಿದರು ಎಂಬ ಆರೋಪಗಳು ಕೇಳಿ ಬಂದಿದ್ದವು.
ಸಕ್ಕರೆ ಕಾರ್ಖಾನೆಗಳಿಂದ ರಾಜ್ಯದಲ್ಲಿ ಅಂದಾಜು 25.00 ಲಕ್ಷ ಮೆಟ್ರಿಕ್ ಕಾಕಂಬಿಯು ಉತ್ಪಾದನೆಯಾಗುತ್ತಿದೆ. 1 ಮೆಟ್ರಿಕ್ ಟನ್‌ಗೆ 7 ಸಾವಿರದಿಂದ 10 ಸಾವಿರ ದರವಿದೆ. ಯೂರೋಪ್ ರಾಷ್ಟ್ರಗಳಲ್ಲಿ ಒಂದು ಮೆಟ್ರಿಕ್ ಟನ್‌ಗೆ ಕನಿಷ್ಠ 8 ಸಾವಿರ ರು. ಸಾಗಾಣಿಕೆ ವೆಚ್ಚವೂ ಸೇರಿದಂತೆ ಒಟ್ಟಾರೆ ಮೆಟ್ರಿಕ್ ಟನ್‌ಗೆ 15 ಸಾವಿರ ರು. ದರವಿದೆ. ಡಿಸ್ಟಿಲರಿಸ್, ಕ್ಯಾಟಲ್‌ಫೀಡ್, ರಫ್ತು ಕಂಪನಿಗಳು ಕಾಕಂಬಿಯನ್ನು ಖರೀದಿ ಮಾಡುತ್ತವೆ. ಕರ್ನಾಟಕದಿಂದ ಯೂರೋಪ್ ರಾಷ್ಟ್ರ, ಮಧ್ಯ ಏಷ್ಯಾ ದೇಶಗಳು, ವಿಯೆಟ್ನಾಂ, ಫಿಲಿಫೈನ್ಸ್, ದಕ್ಷಿಣ ಕೊರಿಯಾ, ತೈವಾನ್‌ನಲ್ಲಿನ ವಿವಿಧ ಕಂಪನಿಗಳು ಕಾಕಂಬಿಯನ್ನು ಖರೀದಿ ಮಾಡುತ್ತವೆ. ಅಲ್ಲದೇ ಹೊರರಾಜ್ಯದ ಕಂಪನಿಯಿಂದ ಪ್ರತಿ ಮೆಟ್ರಿಕ್ ಟನ್‌ಗೆ 400 ರೂ. ನಂತೆ 2 ಲಕ್ಷ ಮೆಟ್ರಿಕ್ ಟನ್‌ಗೆ 8 ಕೋಟಿ ಆಪಾದನೆಗೂ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪಕ್ಕೂ ಸಿಎಂ ಹಾಗೂ ಸಚಿವರು ಗುರಿಯಾಗಿದ್ದಾರೆ. ದೆಹಲಿಯಲ್ಲಿ ಅಬಕಾರಿ ಹಗರಣವು ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಅಬಕಾರಿ ಇಲಾಖೆ ವ್ಯಾಪ್ತಿಯ ಕಾಕಂಬಿ ಹಗರಣವೂ ಮುನ್ನೆಲೆಗೆ ಬಂದಿದೆ.
ಕಾಕಂಬಿಯನ್ನು ಸರಾಗವಾಗಿ ರಫ್ತು ಮಾಡಲು ಮೂಲಸೌಕರ್ಯಗಳನ್ನು ಹೊಂದಿರುವ ಟರ್ಮಿನಲ್ ರಾಜ್ಯದ ಕಾರವಾರ ಬಂದರಿನಲ್ಲಿದ್ದರೂ ಬೇರೆ ರಾಜ್ಯಕ್ಕೆ ರಫ್ತು ಮಾಡುತ್ತಿರುವುದರ ಹಿಂದೆ 200 ಕೋಟಿ ಅವ್ಯವಹಾರ ಇದೆ ಎಂದು ಆರೋಪಿಸಲಾಗಿದೆ.