ಆನ್ಲೈನ್ನಲ್ಲೇ ಗ್ರಾಮ ನಕ್ಷೆ, ಸರ್ವೇ ಸಂಖ್ಯೆ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಕಷ್ಟು ಜನರಲ್ಲಿ ಗ್ರಾಮ ನಕ್ಷೆ ಮತ್ತು ಸರ್ವೇ ಸಂಖ್ಯೆ ನೋಡುವುದು ಹೇಗೆ ಎಂಬ ಗೊಂದಲವಿರುತ್ತದೆ. ಈ ಗೊಂದಲಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರವು ಕೆಲ ಆ್ಯಪ್ ಮತ್ತು ವೆಬ್ ಸೈಟ್ಗಳನ್ನು ಅಭಿವೃದ್ಧಿ ಪಡಿಸಿದೆ. ಅವುಗಳ ಮೂಲಕ ಮನೆಯಲ್ಲೇ ಕುಳಿತು ಮಾಹಿತಿ ಪಡೆಯಬಹುದಾಗಿದೆ. ಹಾಗಾದರೆ ಆ ಆ್ಯಪ್ ಮತ್ತು ವೆಬ್ ಸೈಟ್ಗಳು ಯಾವವು, ಅವುಗಳನ್ನು ಉಪಯೋಗಿಸುವುದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು, ಏಪ್ರಿಲ್ 03: ಇಂದಿನ ಡಿಜಿಟಲ್ ಯುಗದಲ್ಲಿ ಬೇಕಾದ ಮಾಹಿತಿ ಸುಲಭವಾಗಿ ದೊರಕುತ್ತದೆ. ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರದಿಂದ ಜನರು ತಮ್ಮ ಬೆರಳ ತುದಿಯಲ್ಲೇ ಬೇಕಾದ ಮಾಹಿತಿ ತಿಳಿಯಬಹುದಾಗಿದೆ. ಅದೇ ರೀತಿಯಾಗಿ ಭೂಮಿಯ ನಕ್ಷೆ (village map), ಸರ್ವೆ ನಂಬರ್ (survey number) ಮತ್ತು ಭೂಮಿ ಒತ್ತುವರಿಯ ಮಾಹಿತಿಯನ್ನು ಕೂಡ ನಾವು ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ತಿಳಿದುಕೊಳ್ಳಬಹುದಾಗಿದೆ. ಹಿಂದೆ ಸರ್ವೆ ನಂಬರ್ ತಿಳಿದುಕೊಳ್ಳಲು ಅಥವಾ ಭೂಮಿ ಒತ್ತುವರಿ ಬಗ್ಗೆ ಮಾಹಿತಿ ಪಡೆಯಲು ಕಂದಾಯ ಇಲಾಖೆ ಅಥವಾ ಸರ್ವೇಯರ್ ಅನ್ನು ಸಂಪರ್ಕಿಸಬೇಕಾಗುತ್ತಿತ್ತು. ಆದರೆ ಇದಕ್ಕಾಗಿ ಕರ್ನಾಟಕ ಸರ್ಕಾರ ಕೆಲ ಆ್ಯಪ್ ಮತ್ತು ವೆಬ್ ಸೈಟ್ಗಳನ್ನು ಅಭಿವೃದ್ಧಿ ಪಡಿಸಿದೆ. ಇವುಗಳಿಂದ ರೈತರು ಸೇರಿದಂತೆ ಜನಸಾಮಾನ್ಯರಿಗೆ ಅನುಕೂಲವಾಗಿದೆ.
ಕರ್ನಾಟಕ ಸರ್ಕಾರ ಅಭಿವೃದ್ಧಿ ಪಡೆಸಿರುವ ಕೆಲ ಆ್ಯಪ್ಗಳ ಮೂಲಕ ಭೂಮಿಯ ನಕ್ಷೆ, ಸರ್ವೆ ನಂಬರ್ ಮತ್ತು ಭೂಮಿ ಒತ್ತುವರಿಗೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದಾಗಿದೆ. ಇದಕ್ಕಾಗಿ ಕಚೇರಿಗಳಿಗೆ ಕೂಡ ಅಲೆದಾಡುವ ಅಗತ್ಯವಿಲ್ಲ. ಆ ಮೂಲಕ ಸಮಯದ ಉಳಿತಾಯ ಕೂಡ ಬಹುದಾಗಿದೆ. ಆ್ಯಪ್ ಮತ್ತು ವೆಬ್ ಸೈಟ್ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.
ದಿಶಾಂಕ್ ಆ್ಯಪ್
ಇದು ಕರ್ನಾಟಕ ರಾಜ್ಯದ ಸರ್ವೇ ಇಲಾಖೆ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಆಗಿದೆ. ಭೂಮಿಯ ನಕ್ಷೆ, ಸರ್ವೆ ನಂಬರ್ ತಿಳಿದುಕೊಳ್ಳಲು ದಿಶಾಂಕ್ ಆ್ಯಪ್ ಉತ್ತಮವಾಗಿದೆ. ಗೂಗಲ್ ಮ್ಯಾಪ್‌ನೊಂದಿಗೆ ಸಂಯೋಜಿಸಲಾಗಿದೆ. ದಿಶಾಂಕ್ ಸಾಫ್ಟ್‌ವೇರ್ ಸರ್ವೇ ನಂಬರ್, ಭೂಮಾಲೀಕರ ಹೆಸರು, ಭೂಮಿಯ ವಿಸ್ತೀರ್ಣ, ಭೂಮಿಯ ಬಳಕೆ ಮತ್ತು ಯಾವುದೇ ಸರ್ಕಾರಿ ಆಸ್ತಿಗಳ ಮಾಹಿತಿ (ಕೆರೆ, ಕಟ್ಟೆ, ಕಾಲುವೆಗಳು, ರಸ್ತೆಗಳು ಇತ್ಯಾದಿ) ನಂತಹ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ.
ದಿಶಾಂಕ್ ಆ್ಯಪ್ ಬಳಸುವ ವಿಧಾನ
- ಮೊದಲು ಗೂಗಲ್ ಪ್ಲೇ ಸ್ಟೋರ್ನಿಂದ ದಿಶಾಂಕ್ ಆ್ಯಪ್ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಆ್ಯಪ್ ಓಪನ್ ಮಾಡಿದ ಬಳಿಕ ಆ್ಯಕ್ಸೆಸ್ ಕೇಳುತ್ತದೆ, ಅದಕ್ಕೆ ಅನುಮತಿ ನೀಡಬೇಕು.
- ನಿಮ್ಮ ಮೊಬೈಲ್‌ನಲ್ಲಿ ಜಿಪಿಎಸ್ (GPS) ಆನ್ ಮಾಡಿರಬೇಕು.
- ನಂತ್ರ Survey Number Search ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮದ ಹೆಸರು ನಮೂದಿಸಿ.
- ಇಷ್ಟಾದ ಮೇಲೆ ಭೂಮಿ ವಿವರಗಳು, ಮಾಲಕತ್ವ ಮತ್ತು ನಕ್ಷೆಯನ್ನು ತೋರಿಸುತ್ತದೆ.
ಭೂಮಿ ಆರ್‌ಟಿಸಿ ಪೋರ್ಟಲ್
ಭೂಮಿ ಪೋರ್ಟಲ್ ಅನ್ನು ಕರ್ನಾಟಕ ಕಂದಾಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ. ಸರ್ವೇ ಸಂಖ್ಯೆ ಮತ್ತು ಆದಾಯ ನಕಾಶೆಗಳನ್ನು ಒಳಗೊಂಡಂತೆ ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುತ್ತದೆ. ಎಲ್ಲವನ್ನು ಭೂಮಿ ಆರ್‌ಟಿಸಿ ಪೋರ್ಟಲ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಡೌನ್‌ಲೋಡ್ ಮಾಡುವ ವಿಧಾನ ಹೀಗಿದೆ.
- ಮೊದಲು ಭೂಮಿ ಆರ್‌ಟಿಸಿ ಪೋರ್ಟಲ್‌ಗೆ ಭೇಟಿ ನೀಡಿ.
- ಆರ್‌ಟಿಸಿ ಮತ್ತು ಎಂಆರ್ ಅಥವಾ ಆದಾಯ ನಕ್ಷೆಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ನಮೂದಿಸಿ.
- ಪ್ರಸ್ತುತ ವರ್ಷ, ಸರ್ವೆ ಸಂಖ್ಯೆಯನ್ನು ನಮೂದಿಸಿದ ಬಳಿಕ ಗೋ ಎಂಬ ಬಟನ್ ಒತ್ತಿರಿ.
- ನಂತರ ಭೂ ದಾಖಲೆಗಳು, ನಕ್ಷೆಗಳು ಮತ್ತು ಮಾಲೀಕತ್ವದ ವಿವರಗಳನ್ನು ತೋರಿಸಿತ್ತದೆ.
- ಬೇಕಾದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಲ್ಯಾಂಡ್ ರೆಕಾರ್ಡ್ಸ್ ವೆಬ್‌ಸೈಟ್
‘ಲ್ಯಾಂಡ್ ರೆಕಾರ್ಡ್ಸ್’ ಕರ್ನಾಟಕ ಸರ್ಕಾರ ಅಭಿವೃದ್ಧಿ ಪಡಿಸಿರುವ ಆನ್‌ಲೈನ್ ವೇದಿಕೆಯಾಗಿದೆ. ಇದು ಭೂಮಿ ದಾಖಲೆಗಳು ಸೇರಿದಂತೆ ಗ್ರಾಮದ ನಕ್ಷೆಗಳು, ಸರ್ವೇ ಸಂಖ್ಯೆಗಳು ಮತ್ತು ಭೂಮಿಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ನೀಡುತ್ತದೆ.
- landrecords.karnataka.gov.inಗೆ ಭೇಟಿ ನೀಡಿ.
- ಆರ್‌ಟಿಸಿ ಮತ್ತು ಎಂಆರ್ ಅಥವಾ i-RTC ಕ್ಲಿಕ್ ಮಾಡಿ.
- ಬಳಿಕ ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ ನಮೂದಿಸಿ
- ಭೂ ಮಾಲೀಕತ್ವ, ಸರ್ವೇ ಸಂಖ್ಯೆ ಮತ್ತು ಇತರ ವಿವರಗಳು ನಮ್ಮ ಸ್ಕ್ರೀನ್ ಮೇಲೆ ಕಾಣುತ್ತದೆ.
- ಬೇಕಾದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ‘
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.