ಸ್ವಲ್ಪ ಮೃದು, ಸ್ವಲ್ಪ ಸಿಹಿ; ಪೌಷ್ಟಿಕ ಉಪಾಹಾರ ಮಂಗಳೂರು ಬನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಬೆಳಗ್ಗಿನ ತಿಂಡಿಯಾದರೂ ಸೈ, ಸಂಜೆಯ ಚಹಾ ಜತೆಗೆ ಆದರೂ ಓಕೆ ಎಂದು ತಿನ್ನಬಹುದಾದ ತಿಂಡಿಗಳಲ್ಲೊಂದು ಈ ಮಂಗಳೂರು ಬನ್ಸ್. ತುಂಬಾ ಮೃದು, ಸ್ವಲ್ಪ ಸಿಹಿಯಾಗಿರುವ ಈ ಬನ್ಸ್ ಆರೋಗ್ಯಕರವಾದ ತಿಂಡಿಗಳಲ್ಲೊಂದು. ನೋಡಲು ಪೂರಿಯಂತಿರುವ ಈ ಬನ್ಸ್ ಬಗ್ಗೆ ಸ್ವಾದಿಷ್ಟ ಮತ್ತು ರುಚಿಕರವಾದ ಸಂಗತಿಗಳನ್ನು ಅರಿಯಲು ಲೇಖನ ಓದಿ..
ಕೆಲವೊಂದು ಆಹಾರದ ಹೆಸರಿನ ಜತೆಗೆ ಊರಿನ ಹೆಸರು ಕೂಡಾ ಅಂಟಿಕೊಂಡಿರುತ್ತದೆ. ಉದಾಹರಣೆಗೆ ಧಾರವಾಡ ಪೇಡಾ, ಮೈಸೂರು ಪಾಕ್, ಮಂಗಳೂರು ಬಜ್ಜಿ, ಮದ್ದೂರ್ ವಡಾ, ದಾವಣಗೆರೆ ಬೆಣ್ಣೆ ದೋಸೆ ಹೀಗೆ ಸಾಗುತ್ತದೆ ಪಟ್ಟಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಉಪಾಹಾರಗಳಲ್ಲಿ ತನ್ನ ಹೆಸರಿನೊಂದಿಗೆ ಊರ ಹೆಸರು ಜೋಡಿಸಿಕೊಂಡಿರುವ ಉಪಾಹಾರವೆಂದರೆ ಅದು ಮಂಗಳೂರು ಬನ್ಸ್ (Mangalore Buns). ಬೆಳಗ್ಗಿನ ತಿಂಡಿಯಾದರೂ ಸೈ, ಸಂಜೆಯ ಚಹಾ ಜತೆಗೆ ಆದರೂ ಓಕೆ ಎಂದು ತಿನ್ನಬಹುದಾದ ತಿಂಡಿಗಳಲ್ಲೊಂದು ಈ ಬನ್ಸ್. ತುಂಬಾ ಮೃದು, ಸ್ವಲ್ಪ ಸಿಹಿಯಾಗಿರುವ ಈ ಬನ್ಸ್ ಆರೋಗ್ಯಕರವಾದ ತಿಂಡಿಗಳಲ್ಲೊಂದು. ನೋಡಲು ಪೂರಿಯಂತಿರುವ ಈ ಬನ್ಸ್ ಬಗ್ಗೆ ರುಚಿಕರವಾದ ವಿಚಾರಗಳನ್ನು ತಿಳಿಯೋಣ ಬನ್ನಿ…
ಮಂಗಳೂರು ಬನ್ಸ್ ಪೋಷಕಾಂಶಗಳ ಸಮೃದ್ಧ ಮೂಲ. ಇದು ಕಾರ್ಬೋಹೈಡ್ರೇಟ್ಸ್ , ಪ್ರೋಟೀನ್ ಮತ್ತು ಫೈಬರ್‌ನಂತಹ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ಬಾಳೆಹಣ್ಣು ಮತ್ತು ಮೊಸರು ಬಳಸಿ ಮಾಡುವ ತಿಂಡಿ ಇದಾಗಿರುವುರಿಂದ ಇವೆರಡ ಸಂಯೋಜನೆ ಇದನ್ನು ಪೌಷ್ಟಿಕ ಉಪಾಹಾರವನ್ನಾಗಿ ಮಾಡುತ್ತದೆ ಮಂಗಳೂರು ಬನ್‌ಗಳು ಕೇವಲ ರುಚಿಕರವಾದ ತಿಂಡಿ ಮಾತ್ರವಲ್ಲ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಿಟ್ಟು, ಬಾಳೆಹಣ್ಣುಗಳು ಮತ್ತು ಮೊಸರುಗಳ ಸಂಯೋಜನೆಯು ಇದನ್ನು ಪೌಷ್ಟಿಕ ಉಪಾಹಾರವನ್ನಾಗಿ ಮಾಡಿದೆ. ಬನ್ಸ್ ತಯಾರಿಸುವ ಪಾಕವಿಧಾನದಲ್ಲಿ ಬಳಸಲಾದ ಬಾಳೆಹಣ್ಣು ಪೊಟ್ಯಾಸಿಯಮ್, ವಿಟಮಿನ್ B6ಮತ್ತು ವಿಟಮಿನ್ Cಯ ಉತ್ತಮ ಮೂಲವಾಗಿದೆ. ಅದೇ ರೀತಿ ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳ ಅತ್ಯುತ್ತಮ ಮೂಲವಾಗಿದೆ. ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇವು ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಮಂಗಳೂರು ಬನ್ಸ್‌ನಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಮಂಗಳೂರು ಬನ್‌ಗಳಲ್ಲಿನ ಕಾರ್ಬೋಹೈಡ್ರೇಟ್‌ಗಳು ಶಕ್ತಿಯ ತ್ವರಿತ ಮೂಲವನ್ನು ಒದಗಿಸುತ್ತವೆ. ನೋಡಿದ್ರಾ ಒಂದು ಬನ್ಸ್ನಲ್ಲಿ ಎಷ್ಟೊಂದು ಸತ್ವಗಳು ಅಡಗಿವೆ!
ಸಾಂಸ್ಕೃತಿಕ ಮಹತ್ವ
ಮಂಗಳೂರು ಬನ್ಸ್ ಶ್ರೀಮಂತ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ಇದು ತುಳುನಾಡಿನ ಪಾಕಪದ್ಧತಿಯನ್ನು ಅನುಸರಿಸುತ್ತದೆ. ಹೆಸರೇ ಹೇಳುವಂತೆ ಇದು ಹುಟ್ಟಿಕೊಂಡಿದ್ದು ಮಂಗಳೂರಿನಲ್ಲಿ. ಇದು ವಸಾಹತುಶಾಹಿ ಯುಗದಲ್ಲಿ ಪ್ರಮುಖ ಬಂದರುಗಳನ್ನು ಹೊಂದಿದ್ದ ಮಂಗಳೂರಿನ ಕರಾವಳಿಯಲ್ಲಿ ನೆಲೆಸಿದ್ದ ಬ್ರಿಟಿಷ್ ಅಧಿಕಾರಿಗಳಿಗಾಗಿ ಕೆಲಸ ಮಾಡುವ ಸ್ಥಳೀಯ ಅಡುಗೆಯವರು ಮೊತ್ತ ಮೊದಲಿಗೆ ಈ ತಿಂಡಿ ತಯಾರಿಸಿದ್ದರು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ಖಾದ್ಯವು ಈ ಪ್ರದೇಶದಲ್ಲಿ ನೆಚ್ಚಿನ ಉಪಾಹಾರ ವಸ್ತುವಾಗಿ ಬದಲಾಯಿತು. ದಿನ ನಿತ್ಯದ ಆಹಾರವಾಗಿಯೂ ಹಬ್ಬದ ತಿನಿಸುಗಳಾಗಿಯೂ ಮಂಗಳೂರು ಬನ್ಸ್ ನೆಚ್ಚಿನ ತಿಂಡಿ ಎಂಬ ಮನ್ನಣೆ ಪಡೆದಿದೆ.
ಮಂಗಳೂರು ಬನ್ಸ್ ಮಾಡುವುದು ಹೇಗೆ?
ತುಂಬಾ ಹಣ್ಣಾಗಿರುವ ಎರಡು ಬಾಳೆಹಣ್ಣು, 2 ಕಪ್ ಮೈದಾ, 2 ಚಮಚ ಸಕ್ಕರೆ, ಕಾಲು ಕಪ್ ಹುಳಿ ಮೊಸರು, ಒಂದು ಟೀ ಚಮಚ ಜೀರಿಗೆ, ಚಿಟಿಕೆ ಅಡುಗೆ ಸೋಡಾ,ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದ ಎಣ್ಣೆ ಇವಿಷ್ಟು ಅಗತ್ಯವಾದ ವಸ್ತುಗಳು.
ಬಾಳೆಹಣ್ಣು ಸಿಪ್ಪೆ ಸುಲಿದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವುಚಿಕೊಳ್ಳಿ, ಬಾಳೆ ಹಣ್ಣುತುಂಬಾ ಸಿಹಿ ಇದ್ದರೆ ಒಂದು ಚಮಚ ಸಕ್ಕರೆ ಇಲ್ಲದಿದ್ದರೆ 2 ಚಮಚ ಸಕ್ಕರೆ ಸೇರಿಸಿ. ಇವುಗಳನ್ನು ಹಿಸುಕಿ ನಯವಾದ ಪೇಸ್ಟ್ ರೀತಿ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಮಿಕ್ಸಿಯಲ್ಲಿ ಹಾಕಿ ರುಬ್ಬಬೇಡಿ. ಈ ಮಿಶ್ರಣಕ್ಕೆ ¼ ಕಪ್ ಮೊಸರು, 1 ಟೀಸ್ಪೂನ್ ಜೀರಿಗೆ, ಚಿಟಿಕೆ ಅಡಿಗೆ ಸೋಡಾ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಈ ಮಿಶ್ರಣಕ್ಕೆ 2 ಕಪ್ ಮೈದಾ ಸೇರಿಸಿ ಹಿಟ್ಟನ್ನು ತಯಾರಿಸಿ. ಹಿಟ್ಟನ್ನು ಚೆನ್ನಾಗಿ ನಾದಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ 8 ಗಂಟೆಗಳ ಕಾಲ ಒಂದು ಪಾತ್ರೆಯಲ್ಲಿ ಹಾಕಿ ಹುದುಗು (ಹುಳಿ ಬರಲು) ಬರಿಸುವುದಕ್ಕಾಗಿ ಇಡಿ. ಎಂಟು ಗಂಟೆಗಳ ನಂತರ ಹಿಟ್ಟು ಹದವಾಗಿ ಹುಳಿ ಬಂದಿರುತ್ತದೆ. ಸ್ವಲ್ಪ ಹಿಟ್ಟು ಅದರ ಮೇಲೆ ಉದುರಿಸಿ ಕೈಯಿಂದ ನಯವಾಗಿ ನಾದಿದ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಪೂರಿ ಲಟ್ಟಿಸಿದಂತೆ ಗುಂಡಗೆ , ಚಿಕ್ಕದಾಗಿ ಲಟ್ಟಿಸಿಕೊಳ್ಳಿ. ಎಣ್ಣೆ ಕಾಯಲು ಇಟ್ಟು ಈ ಈ ಪೂರಿಗಳನ್ನು ಡೀಪ್ ಫ್ರೈ ಮಾಡಿ. ಗಮನಿಸಿ ಮಧ್ಯಮ ಉರಿಯಲ್ಲಿ ಇವುಗಳನ್ನು ಬೇಯಿಸಿ. ಮೇಲ್ಭಾಗವು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಎರಡೂ ಕಡೆ ಬೇಯುವಂತೆ ಮಗಚಿ ಹಾಕಿ ಬೇಯಿಸಿ. ಹೊರಗೆ ಕಂದು ಬಣ್ಣ, ಒಳಗೆ ತುಂಬಾ ಮೃದುವಾಗಿರುವ ಮಂಗಳೂರು ಬನ್ಸ್ ಬಿಸಿ ಬಿಸಿಯಾಗಿರುವಾಗಲೇ ಸವಿಯಿರಿ. ಈ ಬನ್ಸ್ನ್ನು ಸಾಗು ಜತೆ ಇಲ್ಲವೇ ತೆಂಗಿನಕಾಯಿ ಗಟ್ಟಿ ಚಟ್ನಿಯೊಂದಿಗೆ ಬಡಿಸಿ.
ಮಳೆಗಾಲಕ್ಕೆ ಬೆಸ್ಟ್
ಮಳೆಗಾಲದಲ್ಲಿ ಬಾಳೆಹಣ್ಣು ಸೇವನೆ ಒಳ್ಳೆಯದು. ಬಾಳೆಹಣ್ಣು ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಮಳೆಗಾಲದಲ್ಲಿ ಉದರ ಸಂಬಂಧಿ ಕಾಯಿಲೆ, ಜಠರದಲ್ಲಿ ಸೋಂಕುಗಳು ಸಾಮಾನ್ಯ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮೂಲಕ, ಬಾಳೆಹಣ್ಣುಗಳು ಈ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಿಟ್ಟಿನೊಂದಿಗೆ ಬಾಳೆಹಣ್ಣು, ಮೊಸರು ಇವುಗಳ ಮಿಶ್ರಣದಿಂದ ತಯಾರಿಸಲಾದ ಮಂಗಳೂರು ಬನ್ಸ್ ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದರಿಂದ ಇದು ಮಳೆಗಾಲದಲ್ಲಿನ ಬೆಸ್ಟ್ ಆಹಾರ ಎಂದೇ ಹೇಳಬಹುದು.
ಗೋವಾದ ಸ್ವೀಟ್ ಬನ್ಗೂ ಮಂಗಳೂರು ಬನ್ಸ್ಗೂ ನಂಟು?
ಗೋವಾದ ಸ್ವೀಟ್ ಬನ್ಗೂ ಮಂಗಳೂರು ಬನ್ಸ್ಗೂ ಬಹುತೇಕ ಸಾಮ್ಯತೆ ಇದೆ. ಗೋವಾ ಒಂದು ಕಾಲದಲ್ಲಿ ಪೋರ್ಚುಗೀಸ್ ವಸಾಹತು ಆಗಿತ್ತು. ಹಾಗಾಗಿ ಪೋರ್ಚುಗೀಸರು ಇಲ್ಲಿ ಬೇಕ್ಡ್ ಬನ್ , ಬ್ರೆಡ್ ಮತ್ತು ಪಾವ್ ಮೊದಲಾದ ಆಹಾರಗಳನ್ನು ಪರಿಚಯಿಸಿದರು. ಸ್ಥಳೀಯರು ಇದನ್ನು ‘ಗೋವನ್ ಪೋಯಿ’ ಎಂದು ಕರೆಯುತ್ತಾರೆ. ಇದು ಇಲ್ಲಿ ಟೀ ಜತೆ ಸೇವಿಸುವ ತಿಂಡಿ. ಸಾಮಾನ್ಯವಾಗಿ ಭಾನುವಾರದ ಮಾಸ್ (ಪ್ರಾರ್ಥನೆ) ನಂತರ ತರಕಾರಿ ಪದಾರ್ಥ ಅಥವಾ ಸಬ್ಜೀ ಜತೆ ಗೋವಾದ ಜನರು ಇದನ್ನು ಸೇವಿಸುತ್ತಾರೆ. ಗೋವಾದವರು ಇದನ್ನು ತಯಾರಿಸುವಾಗ ಚಿಟಿಕೆ ಅರಶಿನವನ್ನೂ ಸೇರಿಸುತ್ತಾರೆ ಎಂಬುದನನ್ನು ಹೊರತು ಪಡಿಸಿದರೆ ಬಾಕಿ ಪಾಕವಿಧಾನ ಎಲ್ಲವೂ ಮಂಗಳೂರು ಬನ್ಸ್ನದ್ದೇ ಸೇಮ್ ಟು ಸೇಮ್ ಇರುತ್ತದೆ.
ಮಂಗಳೂರಿನಲ್ಲಿ ಈ ಆಹಾರಗಳೂ ಫೇಮಸ್
ನೀವು ಆಹಾರಪ್ರಿಯರಾಗಿದ್ದು ಮಂಗಳೂರಿಗೆ ಭೇಟಿ ನೀಡಿದರೆ ಅಲ್ಲಿನ ಸಾಂಪ್ರದಾಯಿಕ ಖಾದ್ಯಗಳ ರುಚಿ ನೋಡಲು ಮರೆಯದಿರಿ. ಇಂಥಾ ಆಹಾರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ನೀರು ದೋಸೆಗೆ ಸಲ್ಲುತ್ತದೆ. ಬೆಳ್ತಿಗೆ ಅಕ್ಕಿಯನ್ನು ನೆನೆಸಿ ರುಬ್ಬಿ ಮಾಡುವ ನೀರು ದೋಸೆಯ ರುಚಿಯೇ ಬೇರೆ. ಕಾವಲಿಗೆ ಕೊಬ್ಬರಿ ಎಣ್ಣೆ ಸವರಿ ಅದರ ಮೇಲೆ ನೀರು ನೀರಾದ ಹಿಟ್ಟನ್ನು ತೆಳ್ಳಗೆ ಹೊಯ್ದು, ಹದವಾದ ಉರಿಯಲ್ಲಿ ಬೇಯಿಸಿ ಮಾಡುವ ನೀರು ದೋಸೆಯ ಘಮಕ್ಕೆ ಮಾರುಹೋಗದವರು ಯಾರೂ ಇಲ್ಲ. ನೀರು ದೋಸೆಯೊಂದಿಗೆ ತೆಂಗಿನಕಾಯಿ ಚಟ್ನಿ, ಕಾಯಿಬೆಲ್ಲ ಅಥವಾ ಮೀನು,ಕೋಳಿ ಸಾರು ಬೆಸ್ಟ್ ಕಾಂಬಿನೇಷನ್. ಬೆಳಗ್ಗಿನ ಉಪಾಹಾರಕ್ಕೆ ನೀರು ದೋಸೆ ಆದರೆ ಸಂಜೆ ಟೀಗೆ ಗೋಳಿ ಬಜೆ. ಮೈದಾಹಿಟ್ಟಿನಿಂದ ಮಾಡಿದ ಮೃದುವಾದ ಈ ತಿಂಡಿ ಮಳೆಗಾಲದ ಸಂಜೆ ಟೀ ಹೀರುತ್ತಾ ತಿನ್ನಲು ಚೆನ್ನಾಗಿರುತ್ತದೆ. ಕೊಬ್ಬರಿ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿಯೇ ಇದಕ್ಕೆ ಕಾಂಬಿನೇಷನ್. ಸಂಜೆಯದ್ದಾಯ್ತು, ಇನ್ನು ರಾತ್ರಿಗೆ? ಕುಚ್ಚಲಕ್ಕಿ ಅನ್ನ ಬೇಡ ಅಂದ್ರೆ ಕೋರಿರೊಟ್ಟಿ ಸವಿಯಬಹುದು. ತೆಳುವಾದ ಪದರದಂತಿರುವ ಅಕ್ಕಿಯಿಂದ ಮಾಡಿದ ಸ್ವಲ್ಪ ಗಟ್ಟಿಯಾಗಿರುವ ಕೋರಿಕೊಟ್ಟಿಯನ್ನು ಮೆದು ಮಾಡಬೇಕಾದರೆ ಕೋಳಿ ಸಾರು ಬೇಕೇ ಬೇಕು.
ಇಷ್ಟೆಲ್ಲ ಹೇಳಿದ ಮೇಲೆ ಗುಜ್ಜೆ ಪೋಡಿ ಬಗ್ಗೆ ಹೇಳದಿದ್ದರೆ ಹೇಗೆ? ದೀವಿ ಹಲಸು ಅಥವಾ ದೀಗುಜ್ಜೆಯಿಂದ ಮಾಡಿದ ಪೋಡಿ ಮಂಗಳೂರಿಗರ ಇಷ್ಟದ ಕರಿದ ತಿಂಡಿಗಳಲ್ಲೊಂದು. ದೀವಿ ಹಲಸನ್ನು ಚಿಕ್ಕದಾಗಿ,ತೆಳುವಾಗಿ ಕತ್ತರಿಸಿ, ಅಕ್ಕಿ ಹಿಟ್ಟಿನಲ್ಲಿ ಅದ್ದಿ ಗರಿಗರಿಯಾದ ಪೋಡಿ ಮಾಡಲಾಗುತ್ತದೆ. ಅಕ್ಕಿ ಹಿಟ್ಟು ಮಿಶ್ರಣ ಮಾಡುವಾಗ ಅದಕ್ಕೆ ಇಂಗು, ಓಂಕಾಳು, ಜೀರಿಗೆ ಮತ್ತು ಸ್ವಲ್ಪ ಅಚ್ಚಖಾರದ ಪುಡಿ ಸೇರಿಸಲಾಗುತ್ತದೆ. ಕತ್ತರಿಸಿದ ದೀವಿಹಲಸಿನ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕರಿದು ಮಾಡುವ ತಿಂಡಿಯೇ ದೀಗುಜ್ಜೆ ಪೋಡಿ. ಇನ್ನು ಪಲ್ಯದ ವಿಷಯಕ್ಕೆ ಬಂದರೆ ‘ಕಡ್ಲೆ ಮನೊಳಿ’ ಟ್ರೈ ಮಾಡಲೇ ಬೇಕು. ತುಳುವಿನಲ್ಲಿ ಮನೊಳಿ ಅಂದ್ರೆ ತೊಂಡೆಕಾಯಿ. ಕಡಲೆ ಮತ್ತು ತೊಂಡೆಕಾಯಿಯನ್ನು ಒಟ್ಟಿಗೆ ಪಲ್ಯದ ರೀತಿಯಲ್ಲಿ ಬೇಯಿಸಲಾಗುತ್ತದೆ. ನಿಶ್ಚಿತಾರ್ಥ, ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಈ ಖಾದ್ಯ ತಯಾರಾಗುತ್ತದೆ. ನೀವು ಮೀನು ಪ್ರಿಯರಾಗಿದ್ದರೆ ಮಂಗಳೂರಿನ ಅಂಜಲ್ ಫ್ರೈ ಟ್ರೈ ಮಾಡಲೇ ಬೇಕು. ಚಿಕನ್ ಇಷ್ಟಪಡುವವರಾಗಿದ್ದರೆ ಚಿಕನ್ ಘೀ ರೋಸ್ಟ್, ಚಿಕನ್ ಗಸಿ ಮಿಸ್ ಮಾಡಲೇಬೇಡಿ.