ಭಾಗಮಂಡಲ, ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ತೀರ್ಥೋದ್ಭವ
ದಕ್ಷಿಣ ಮಂದಾಕಿನಿ ಕನ್ನಡ ನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಅಸಂಖ್ಯ ಭಕ್ತರು ಆಗಮಿಸಿದ್ದರು.
ದಕ್ಷಿಣ ಮಂದಾಕಿನಿ ಕನ್ನಡ ನಾಡಿನ ಜೀವನದಿ ಕಾವೇರಿ. ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿದೆ. (Talacauvery Theerthodbhava) ಇಂದು (ಅ.17) ಸಂಜೆ 7 ಗಂಟೆ 21 ನಿಮಿಷಕ್ಕೆ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಿದ್ದಾಳೆ. ತುಲಾ ಮಾಸದ ಮೊದಲ ದಿನ ಅಂದರೆ ತುಲಾ ಸಂಕ್ರಮಣದ ದಿನ ಪ್ರತಿ ವರ್ಷ ಕಾವೇರಿ ಕೊಡಗಿನ ಮಡಿಕೇರಿ ತಾಲ್ಲೂಕಿನ ತಲಕಾವೇರಿಯ ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಈ ಪವಿತ್ರ ಘಳಿಗೆಯನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಜೀವ ನದಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಇಂದು ಸಂಜೆ 7 ಗಂಟೆ 21 ನಿಮಿಷಕ್ಕೆ ತುಲಾ ಲಘ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದಿವೆ.
ಕಾವೇರಿ ನದಿ ಕುರಿತು ಕಾವೇರಿ ಪುರಾಣ ಹೇಳುವುದೇನು?
ಕವೇರ ಮುನಿಗಳು ಪುತ್ರ ಸಂತಾನಕ್ಕಾಗಿ, ಬ್ರಹ್ಮಗಿರಿ ಬೆಟ್ಟದ್ದಲ್ಲಿ ಬ್ರಹ್ಮದೇವ ಕುರಿತು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡುತ್ತಾರೆ. ಮುನಿಗಳ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವ ಪ್ರತ್ಯಕ್ಷನಾಗುತ್ತಾನೆ. ಮಕ್ಕಳನ್ನು ನೀಡುವಂತೆ ಬ್ರಹ್ಮದೇವನಲ್ಲಿ ಕವೇರ ಮುನಿ ಪ್ರಾರ್ಥಿಸುತ್ತಾರೆ. ಆದರೆ ಕಳೆದ ಜನ್ಮದ ಕರ್ಮಫಲಗಳಿಂದಾಗಿ ಕವೇರಮುನಿಗೆ ಮಕ್ಕಳ ಭಾಗ್ಯವಿರುವುದಿಲ್ಲ. ಹಾಗಾಗಿ ಬ್ರಹ್ಮನ ಮಾನಸ ಪುತ್ರಿ ಲೋಪಾಮುದ್ರೆಯನ್ನೇ ಕವೇರ ಮುನಿಗೆ ದಯಪಾಲಿಸುತ್ತಾನೆ.
ಹಾಗೆ ಲೋಪಾಮುದ್ರೆ ಕವೇರನ ಮಗಳಾಗಿ ಕಾವೇರಿಯಾಗುತ್ತಾಳೆ. ಹಲವು ವರ್ಷಗಳ ಬಳಿಕ ಅಗಸ್ತ್ಯ ಮುನಿ ಬ್ರಹ್ಮಗಿರಿಗೆ ಬರುತ್ತಾರೆ. ಅಲ್ಲಿ ಬಹಳ ಸುಂದರಿಯಾಗಿದ್ದ ಕಾವೇರಿಯ ಮೇಲೆ ಮೋಹಗೊಳ್ಳುತ್ತಾರೆ. ಕಾವೇರಿಯನ್ನು ವಿವಾಹಮಾಡಿಕೊಡುವಂತೆ ಕವೇರ ಮುನಿಯನ್ನು ಕೋರುತ್ತಾರೆ. ಆದರೆ ಕಾವೇರಿ ಒಂದು ಷರತ್ತಿನೊಂದಿಗೆ ವಿವಾಹಕ್ಕೆ ಸಮ್ಮತಿಸುತ್ತಾಳೆ. ನನ್ನನ್ನು ಯಾವತ್ತೂ ಬಿಟ್ಟು ಹೋಗಕೂಡದೆಂದು ಅಗಸ್ತ್ಯ ಮುನಿಗೆ ಷರತ್ತು ವಿಧಿಸುತ್ತಾಳೆ.
ಒಂದು ದಿನ ಅಗಸ್ತ್ಯ ಮುನಿ ಸಂಧ್ಯಾವಂದನೆ ಮಾಡಲೆಂದು ನದಿಗೆ ಇಳಿಯುತ್ತಾರೆ. ಈ ಸಂದರ್ಭದಲ್ಲಿ ಕಾವೇರಿಯನ್ನು ನೀರಿನ ರೂಪದಲ್ಲಿ ತನ್ನ ಕಮಂಡಲಿನಿಯಲ್ಲಿ ಕೂಡಿಟ್ಟು ತೆರಳುತ್ತಾರೆ. ಇದನ್ನು ಗಮಿನಸಿದ ಗಣಪತಿ ಕಾಗೆ ರೂಪದಲ್ಲಿ ಬಂದು ಕಮಂಡಲಿನಿಯನ್ನು ಮಗುಚಿ ಹಾಕುತ್ತಾನೆ. ಈ ಕಮಂಡಲಿನಿಯಿಂದ ನೀರೆ ಕಾವೇರಿಯಾಗಿ ಹರಿಯುತ್ತಾಳೆ.
ಆರಂಭದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ಭಾಗಮಂಡಲದ ಸಮೀಪ ದರ್ಶನ ನೀಡುತ್ತಾಳೆ. ಈ ಸಂದರ್ಭ ಅಗಸ್ತ್ಯ ಮುನಿ ಕಾವೇರಿಯನ್ನು ತನ್ನನ್ನ ಬಿಟ್ಟು ತೆರಳದಂತೆ ಪರಿ ಪರಿಯಾಗಿ ಬೇಡುತ್ತಾರೆ. ಆದರೆ ಇದಕ್ಕೊಪ್ಪದ ಕಾವೇರಿ ಲೋಕ ಪಾವನಗೊಳಿಸಲು ತಾನು ನದಿಯಾಗಿ ಹರಿಯುವುದಾಗಿ ಹೇಳುತ್ತಾಳೆ. ಆದರೆ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದ ದಿನ ಬ್ರಹ್ಮಗಿರಿಯ ಬ್ರಹ್ಮ ಗುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ದರ್ಶನ ನೀಡುವುದಾಗಿ ಭರವಸೆ ನೀಡುತ್ತಾಳೆ. ಅದರಂತೆ ಪ್ರತವರ್ಷ ತುಲಾಸಂಕ್ರಮಣದ ದಿನ ಸೂರ್ಯ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡುವ ಆ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗುತ್ತದೆ ಎಂಬ ನಂಬಿಕೆ ಇದೆ.
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು
ಈ ಬಾರಿ ಸಂಜೆ ವೇಳೆ ತೀರ್ಥೋದ್ಭವವಾಗುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಹಾಗಾಗಿ ಬೆಳಗ್ಗೆಯಿಂದಲೇ ನಿತ್ಯ ಪೂಜಾಕರ್ಮಗಳು ನಡೆದೆವು. ಆದರೆ ಸಂಜೆ 4 ಗಂಟೆಯ ಬಳಿಕ ಬ್ರಹ್ಮ ಕುಂಡಿಕೆ ಬಳಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿತ್ತು. ಸಂಜೆ 4 ಗಂಟೆಯ ಬಳಿಕ ಭಾಗಮಂಡಲದಿಂದ ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಭಕ್ತರ ಪ್ರಯಾಣಕ್ಕೆ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Mon, 17 October 22