ಒಗ್ಗಟ್ಟಿನ ಮಂತ್ರದ ಮೂಲಕ ಹೊನ್ನ ಬೆಳೆದು ಫಲ ಕಂಡ ಒಡಹುಟ್ಟಿದವರು
ಅರಿನಾಗನಹಳ್ಳಿಯ ಅಣ್ಣ-ತಮ್ಮಂದರ ಒಗ್ಗಟ್ಟಿನ ಕೃಷಿ ಜೀವನ ಇಡೀ ಕೃಷಿ ಕುಲಕ್ಕೆ ಮಾದರಿಯಾಗಿದೆ.
ಕೋಲಾರ ತಾಲೂಕು ಅರಿನಾಗನಹಳ್ಳಿಯಲ್ಲಿ ಒಡಹುಟ್ಟಿದವರು ಸಿನಿಮಾವನ್ನು ನೆನಪಿಸುವಂತ ಅಣ್ಣ-ತಮ್ಮಂದಿರಿದ್ದಾರೆ. ಇವರ ಒಗ್ಗಟ್ಟಿನ ಕೃಷಿ ಜೀವನ ಇಡೀ ಕೃಷಿ ಕುಲಕ್ಕೆ ಮಾದರಿಯಾಗಿದೆ. ಇವರು ತಮ್ಮ ಒಗ್ಗಟ್ಟಿನ ಮಂತ್ರದ ಮೂಲಕ ಹೊಲದಲ್ಲಿ ಬಂಗಾರದಂತಹ ಬೆಳೆ ಬೆಳೆದಿದ್ದಾರೆ. ಇವರ ಒಗ್ಗಟ್ಟಿನ ನಿರಂತರ ಶ್ರಮಕ್ಕೆ ಲಕ್ಷ್ಮೀ ದೇವಿ ಇವರ ಮನೆಯಲ್ಲಿಯೇ ನೆಲೆಸಿದ್ದಾಳೆ.
ಅರಿನಾಗನಹಳ್ಳಿ ಗ್ರಾಮದ ಮುನಿರೆಡ್ಡಿ ಹಾಗೂ ಐದು ಜನ ಸಹೋದರರು ತಮ್ಮ ಕೃಷಿ ಬದುಕಿನಲ್ಲೇ ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಈ ಐದು ಜನ ಅಣ್ಣ ತಮ್ಮಂದಿರು ಮಾಡಿರದ ಕೃಷಿ ಇಲ್ಲ. ಇವರು ಹತ್ತಾರು ಬೆಳೆಗಳು, ಕುರಿ, ಕೋಳಿ, ಮೇಕೆ, ಹಸು, ಎಮ್ಮೆ, ಹತ್ತಾರು ಲಾಭದಾಯಕ ಸಾಕುಪ್ರಾಣಿಗಳು ಹೀಗೆ ಒಂದಲ್ಲ ಎರಡಲ್ಲಾ ರೈತನ ಬದುಕನ್ನು ಸಮೃದ್ದವಾಗಿಸಬಲ್ಲ ಎಲ್ಲ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಹೋದರರು ಕಳೆದ ಹಲವು ವರ್ಷಗಳಿಂದಲೂ ಕೃಷಿಯಲ್ಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲರೂ ಚೆನ್ನಾಗಿ ಓದಿ ವಿದ್ಯಾವಂತರಾಗಿದ್ದರೂ, ತಮಗೆ ಪಿತ್ರಾರ್ಜಿತವಾಗಿ ಬಂದ ಭೂಮಿಯಲ್ಲೇ ಕೃಷಿ ಮಾಡಿ ತಮ್ಮ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಐದು ಜನ ಅಣ್ಣ ತಮ್ಮಂದಿರು ಸುಮಾರು 30 ಎಕೆರೆ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಅದೇ ರೀತಿ ವಿಭಿನ್ನ ಹಾಗೂ ಸಮಗ್ರ ಕೃಷಿ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ತಮ್ಮ 30 ಎಕರೆ ಭೂಮಿಯಲ್ಲಿ, ಟೊಮ್ಯಾಟೋ, ಚೆಂಡು ಹೂವು, ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ, ವಿಳ್ಯದೆಲೆ, ಸೇವಂತಿಗೆ, ರಾಗಿ, ಜೋಳ ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಬಗೆಯ ಬೆಳೆಗಳನ್ನು ನಿರಂತವಾಗಿ ಬೆಳೆಯುತ್ತಿದ್ದಾರೆ.
ಜೊತೆಗೆ ಸುಮಾರು ಹದಿನೈದು ಸೀಮೆ ಹಸುಗಳು, ಹತ್ತು ನಾಟಿ ಹಸುಗಳು, ಎಮ್ಮೆಗಳು ಸಾಕಿದ್ದು ಹೈನುಗಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಕುರಿ ಸಾಕಾಣಿಕೆ, ಬೆಲೆ ಬಾಳುವ ಜಮುನಾಪುರಿ ಮೇಕೆ, ಕೋಳಿ ಸಾಕಾಣಿಕೆ ಮಾಡುವ ಮೂಲಕ ಲಕ್ಷ ಲಕ್ಷ ಆದಾಯಗಳಿಸುತ್ತಿದ್ದಾರೆ. ಹೀಗೆ ನಿತ್ಯ ಆದಾಯ ತರುವ, ವಾರ ಆದಾಯ, ತಿಂಗಳ ಆದಾಯ, ಮೂರು ತಿಂಗಳ ಆದಾಯ, ಹಾಗೂ ವಾರ್ಷಿಕ, ಅರ್ಧ ವಾರ್ಷಿಕವಾಗಿ ಆದಾಯ ತರುವ ಕೃಷಿ ಕಸುಬನ್ನು ಮಾಡುವ ಮೂಲಕ ಉತ್ತಮ ಕೃಷಿ ಬದುಕು ನಡೆಸುತ್ತಿದ್ದಾರೆ.
ಹತ್ತಾರು ವರ್ಷಗಳಿಂದ ಸಾವಯವ ಕೃಷಿಯ ಜೊತೆಗೆ ಸಮಗ್ರ ಕೃಷಿ ವಿಧಾನದಲ್ಲಿ ಕೃಷಿ ಮಾಡುತ್ತಿರುವ ಈ ಸಹೋದರರು ವಾರ್ಷಿಕವಾಗಿ ಸುಮಾರು ಅರ್ಧ ಕೋಟಿಯಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಈ ಆದಾಯ ಗಳಿಕೆಗೆ ಅಣ್ಣ ತಮ್ಮಂದಿರ ಒಗ್ಗಟ್ಟು ಒಂದೆಡೆಯಾದರೆ, ಮಾರುಕಟ್ಟೆ ಅಧ್ಯಯನ ಕೂಡಾ ಪ್ರಮುಖವಾಗಿದೆ. ಸಮಗ್ರ ಕೃಷಿಯಿಂದಾಗಿ ನಷ್ಟದ ಅರಿವು ಅಷ್ಟಾಗಿ ಆಗೋದಿಲ್ಲ ಹೀಗಾಗಿ ಸಮೃದ್ದ ಕೃಷಿ ಬದುಕು ಇವರದ್ದಾಗಿದೆ.
ವಿಶೇಷ ಅಂದರೆ ಇವತ್ತಿನವರೆಗೂ ಯಾವುದೇ ಸರ್ಕಾರಿ ಸೌಲಭ್ಯಗಳಿಗಾಗಿ, ಸಬ್ಸಿಡಿಗಳಿಗಾಗಿ ಯಾವ ಇಲಾಖೆ ಮುಂದೆ ಕೈಚಾಚಿ ನಿಂತಿಲ್ಲ. ಇನ್ನು ಇವರ ಕೃಷಿ ಬದುಕನ್ನು ನೋಡಿ ಕೃಷಿ ಇಲಾಖೆಯ ಅಧಿಕಾರಿಗಳೆ ಇವರ ಮನೆ ಬಾಗಿಲಿಗೆ ಬಂದು ಜಿಲ್ಲಾ ಉತ್ತಮ ಕೃಷಿಕ ಪ್ರಶಸ್ತಿ, ದ್ವಾರಕನಾಥ್ ಎಂಬ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿದ್ದಾರೆ. ಐದು ಜನ ಅಣ್ಣ ತಮ್ಮಂದಿರು ಹಾಗೂ ಅವರ ಕುಟುಂಬ ಶ್ರಮವಹಿಸಿ ಹೊಲದಲ್ಲಿ ಒಗ್ಗಾಟ್ಟಗಿ ಕೆಲಸ ಮಾಡುವುದರಿಂದ ಅವರಿಗೆ ಅಷ್ಟೇನು ಕೂಲಿಕಾರ್ಮಿಕರ ಸಮಸ್ಯೆ ತಲೆದೂರಿಲ್ಲ. ಇವರು ನಿತ್ಯ ಸುಮಾರು 25 ರಿಂದ 30 ಜನರಿಗೆ ಉದ್ಯೋಗ ನೀಡಿತ್ತಾರೆ. ಈ ಮೂಲಕ ಯಾವ ವಿದ್ಯಾವಂತ ಎಂಜಿನಿಯರ್, ಡಾಕ್ಟರ್ಗಳಿಗೂ ಕಡಿಮೆ ಇಲ್ಲದಂತೆ ಸಂಪಾದನೆ ಮಾಡುತ್ತಾ ಯಾರಿಗೂ ಕಡಿಮೆ ಇಲ್ಲದಂತೆ ಕೃಷಿಯಲ್ಲಿ ಬದುಕಿ ತೋರಿಸುತ್ತಿದ್ದಾರೆ.
ಒಟ್ಟಾರೆ ಭೂಮಿ ತಾಯಿಯೊಬ್ಬಳು ಕೈಹಿಡಿದರೆ ಯಾವ ಕುಟುಂಬವೂ ಸಂಕಷ್ಟಕ್ಕೆ ಬೀಳೋದಿಲ್ಲ ಅನ್ನೋದಕ್ಕೆ ಈ ಒಡಹುಟ್ಟಿದವರ ಕುಟುಂಬದ ಒಗ್ಗಟ್ಟೇ ಸಾಕ್ಷಿ. ಒಗ್ಗಟ್ಟಿನ ಜೊತೆಗೆ ಇವರ ನಿರಂತರ ಶ್ರಮ ಇಂದಿಗೂ ಇವರನ್ನು ಕೈಬಿಡದೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 pm, Sun, 16 October 22