ಅಕ್ಕಿ ದರಕ್ಕೂ ತಟ್ಟಿದ ಬರಗಾಲದ ಎಫೆಕ್ಟ್; ಕ್ವಿಂಟಾಲ್ಗೆ 2,500 ರೂ ಹೆಚ್ಚಳ, ರೈಸ್ ಮಿಲ್ಗಳ ಕಾರ್ಯ ಸ್ಥಗಿತ
ರಾಜ್ಯದಲ್ಲಿನ ಭೀಕರ ಬರಗಾಲದಿಂದಾಗಿ ಅಕ್ಕಿ ದರದಲ್ಲಿ ಭಾರೀ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ 15 ದಿನಗಳಲ್ಲಿ ಕ್ವಿಂಟಾಲ್ಗೆ ಸಾವಿರಾರು ರೂ ಹೆಚ್ಚಳವಾಗಿದೆ. ಭತ್ತದ ಕೊರತೆಯಿಂದ ರೈಸ್ ಮಿಲ್ಗಳು ಉತ್ಪಾದನೆ ನಿಲ್ಲಿಸಿವೆ. ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ಅಕ್ಕಿ ಸ್ಟಾಕ್ ಇಲ್ಲದೆ ಹೋಲ್ಸೇಲ್ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಖ್ಯಾಂಶಗಳು
- ರಾಜ್ಯದಲ್ಲಿ ಭೀಕರ ಬರಗಾಲದ ಎಫೆಕ್ಟ್
- ಗಗನಕ್ಕೇರಿದ ಅಕ್ಕಿ ಬೆಲೆ
- ದಾವಣಗೆರೆಯಲ್ಲಿ ರೈಸ್ ಮಿಲ್ಗಳ ಕಾರ್ಯ ಸ್ಥಗಿತ
ಕೊಪ್ಪಳ, ಅಕ್ಟೋಬರ್ 15: ಕರ್ನಾಟಕದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಈ ಮಧ್ಯೆ ಅಕ್ಕಿ ದರಕ್ಕೂ ಬರಗಾಲದ ಎಫೆಕ್ಟ್ ತಟ್ಟಿದೆ. 15 ದಿನಗಳಲ್ಲಿ ಅಕ್ಕಿ ದರ ಗಗನಕ್ಕೇರಿದೆ. ಪ್ರತಿ ಕ್ವಿಂಟಾಲ್ಗೆ 2000 ರಿಂದ 2500 ರೂ ಬೆಲೆ ಏರಿಕೆ ಆಗಿದೆ. ಇನ್ನು ಜಿಲ್ಲೆಯ ಗಂಗಾವತಿಯಿಂದ ದೇಶ, ವಿದೇಶಕ್ಕೆ ಅಕ್ಕಿ ರಫ್ತು ಮಾಡಲಾಗುತ್ತಿದೆ. ಇತ್ತ ಅಕ್ಕಿ ದರ ಹೆಚ್ಚಳದಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಯಾವ ಅಕ್ಕಿ ಬೆಲೆ ಎಷ್ಟು ಏರಿಕೆ?
- ಸೋನಾ ಮಸೂರಿ: 6000 ರೂ (15 ದಿನಗಳ ಹಿಂದೆ), ಸದ್ಯ ಹೋಲ್ ಸೇಲ್ ದರ: 7500 ರೂ.
- ಆರ್ಎನ್ಆರ್: 6500 ರೂ, ಸದ್ಯ ಹೋಲ್ ಸೇಲ್ ದರ: 8500 ರೂ.
- ಸ್ಟೀಮ್ ರೈಸ್: 6500 ರೂ, ಸದ್ಯ ಹೋಲ್ ಸೇಲ್ ದರ: 8500 ರೂ.
- ಕೋಲಂ ರೈಸ್: 7500 ರೂ, ಸದ್ಯ ಹೋಲ್ ಸೇಲ್ ದರ: 10,000 ರೂ.
ಇಷ್ಟೊಂದು ದರ ಏರಿಕೆ ಕಂಡಿರಲಿಲ್ಲ ಎಂದ ವ್ಯಾಪಾರಸ್ಥರು
ಈ ಭಾರೀ ಮುಂಗಾರು ಬೆಳೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ 15 ದಿನಗಳಲ್ಲಿ ಅಕ್ಕಿ ದರದಲ್ಲಿ ಭಾರೀ ಏರಿಕೆ ಆಗಿದೆ. ಅಕ್ಕಿ ಹೋಲ್ ಸೇಲ್ ದರದಲ್ಲೂ ಹೆಚ್ಚಳವಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಹಿಂಗಾರು ಬೆಳೆ ಬೆಳೆಯದೇ ನೆಲ್ಲು ಸಿಗದೆ ಮಿಲ್ಗಳಲ್ಲೂ ಅಕ್ಕಿ ಸ್ಟಾಕ್ ಇಲ್ಲ. ಹಾಗಾಗಿ ವ್ಯಾಪಾರಸ್ಥರಿಗೂ ತೊಂದರೆ ಉಂಟಾಗಿದೆ. ‘35 ವರ್ಷದ ಅಕ್ಕಿ ಮಾರಾಟದ ಅನುಭವದಲ್ಲಿ ಇಷ್ಟೊಂದು ದರ ಏರಿಕೆ ಆಗಿದ್ದು, ನೋಡಿರಲಿಲ್ಲ’ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಿದ ರೈಸ್ ಮಿಲ್ಗಳು
ದಾವಣಗೆರೆಯಲ್ಲೂ ದಿಢೀರ್ ಹೆಚ್ಚಾದ ಅಕ್ಕಿ ಬೆಲೆಯಿಂದ ಗ್ರಾಹಕರು ಶಾಕ್ ಆಗಿದ್ದಾರೆ. ಕೆ.ಜಿಗೆ 45 ರೂಪಾಯಿಗೆ ಇದ್ದ ಅಕ್ಕಿ 75 ರೂ.ಗೆ ಹೆಚ್ಚಳವಾಗಿದೆ. ಬರೋಬ್ಬರಿ 30 ರೂ ಹೆಚ್ಚಳವಾಗಿದೆ. ಹೀಗಾಗಿ ಇದ್ದಕ್ಕಿದ್ದಂತೆ ರೈಸ್ ಮಿಲ್ಗಳು ಕೆಲಸ ನಿಲ್ಲಿಸಿವೆ. ಜಿಲ್ಲೆಯಲ್ಲಿ ಇರುವ 60 ರೈಸ್ ಮಿಲ್ಗಳಲ್ಲಿ ಕೇವಲ 10 ರೈಸ್ ಮಿಲ್ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮಳೆ ಕೊರತೆ ಎಫೆಕ್ಟ್: ಮತ್ತೆ ಅಕ್ಕಿ ದರ ಏರಿಕೆ ಶಾಕ್, ಇಲ್ಲಿದೆ ದರ ವಿವರ
ಸಕಾಲಕ್ಕೆ ಮಳೆಯಾಗದ ಹಿನ್ನೆಲೆ ಡ್ಯಾಂನಿಂದ ಭತ್ತದ ಬೆಳೆಗೆ ನೀರು ಬಿಡದ ಹಿನ್ನೆಲೆ ರೈತರು ಭತ್ತ ನಾಟಿ ಮಾಡುತ್ತಿಲ್ಲ. ಹೀಗಾಗಿ ದಾವಣಗೆರೆ ಜಿಲ್ಲೆಯ ಬಹುತೇಕ ರೈಸ್ ಮಿಲ್ಗಳಲ್ಲಿನ ದಾಸ್ತಾನು ಇನ್ನೊಂದು ವಾರದಲ್ಲಿ ಖಾಲಿಯಾಗಲಿದೆ.
ಕೃಷ್ಣಾ ನದಿ ಪಾತ್ರದ ಭತ್ತ ಬಂದರೆ ಮಾತ್ರ ರೈಸ್ ಮಿಲ್ ನಡೆಸಬಹುದು. ಅಕ್ಕಿ ದರ ಈ ವರ್ಷ ಕಡಿಮೆ ಆಗುವ ಸಾಧ್ಯತೆ ಕಡಿಮೆ ಇದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಅಷ್ಟಾಗಿ ಭತ್ತ ಬೆಳೆದಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Thu, 15 October 26




