ಮಂಡ್ಯದಲ್ಲಿ ನಿಲ್ಲದ ಹೆಚ್‌ಡಿಕೆ-ಕಾಂಗ್ರೆಸ್ ಶಾಸಕರ ಸಮರ: ಮದ್ದೂರಲ್ಲಿ ಆಟೋ ನಿಲ್ದಾಣ ವಿಚಾರಕ್ಕೆ ಜಟಾಪಟಿ
ಮಂಡ್ಯದ ಮದ್ದೂರಿನಲ್ಲಿ ಆಟೋ ನಿಲ್ದಾಣ ನಿರ್ಮಾಣ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕ ಕದಲೂರು ಉದಯ್ ನಡುವೆ ಶೀತಲ ಸಮರ ತೀವ್ರಗೊಂಡಿದ್ದು, ಪುರಸಭೆ ಅಧಿಕಾರಿಗಳ ವಿರುದ್ಧ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಸ್‌ಆರ್ ಅನುದಾನದಲ್ಲಿ ಮದ್ದೂರು ಬಸ್ ನಿಲ್ದಾಣದ ಎದುರು ಆಟೋ ನಿಲ್ದಾಣ ಕಾಮಗಾರಿಗೆ ಕುಮಾರಸ್ವಾಮಿ ಪೂಜೆ ನೆರವೇರಿಸಿದ್ದರು. ಇದೇ ವಿಚಾರವೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಮಂಡ್ಯ, ಸೆಪ್ಟೆಂಬರ್ 25: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕರ ನಡುವಿನ ಸಮರ ಮುಂದುವರಿದಿದ್ದು, ಅಭಿವೃದ್ಧಿ ಕೆಲಸದ ವಿಚಾರದಲ್ಲೂ ರಾಜಕೀಯ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಸಿಎಸ್‌ಆರ್ ಅನುದಾನದಲ್ಲಿ ಮದ್ದೂರು ಬಸ್ ನಿಲ್ದಾಣದ ಎದುರು ಆಟೋ ನಿಲ್ದಾಣ ಕಾಮಗಾರಿಗೆ ಕುಮಾರಸ್ವಾಮಿ ಪೂಜೆ ನೆರವೇರಿಸಿದ್ದರು. ಆದರೆ ಪಾದಚಾರಿ ಮಾರ್ಗದಲ್ಲಿ ಕಾಮಗಾರಿ, ಅನುಮತಿ ಪಡೆಯದ ಆರೋಪ ಸಂಬಂಧ ಕಾಮಗಾರಿ ಆರಂಭದಲ್ಲೇ ನಗರಸಭೆ ಅಧಿಕಾರಿಗಳು ತಡೆಹಿಡಿದಿದ್ದರು. ನಗರಸಭೆ ಆಯುಕ್ತೆ ರಾಧಿಕಾ ನೇತೃತ್ವದಲ್ಲಿ ಕಾಮಗಾರಿಯ ಸಾಮಗ್ರಿಗಳನ್ನೂ ವಶಕ್ಕೆ ಪಡೆಯಲಾಗಿತ್ತು. ಕಳೆದ ದಿಶಾ ಸಭೆಯಲ್ಲಿ ಈ ಸಂಬಂಧ ಆಯುಕ್ತರನ್ನು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟಾದರೂ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭವಾಗದ ಕಾರಣ, ವಿಡಿಯೋ ಕಾನ್ಫರೆನ್ಸ್ ಮೂಲಕ ಆಯುಕ್ತರಿಗೆ ಹೆಚ್‌ಡಿಕೆ ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಚಿವರು ಮತ್ತು ಶಾಸಕ ಕದಲೂರು ಉದಯ್ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ ಎನ್ನಲಾಗಿದೆ.
ಆರೋಪ-ಪ್ರತ್ಯಾರೋಪ
ನಗರಸಭೆಯಿಂದ ಪರ್ಯಾಯ . ಜಾಗದಲ್ಲಿ ನಿಲ್ದಾಣ ನಿರ್ಮಾಣ ಸಂಬಂಧ ಪ್ರಸ್ತಾಪ ಮಾಡಲಾಗಿದ್ದರೆ ಅದೇ ಜಾಗದಲ್ಲಿ ನಿಲ್ದಾಣ ನಿರ್ಮಿಸಲು ಚಾಲಕರು ಕೇಳಿಕೊಂಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಶಾಸಕ ಉದಯ್ ಒತ್ತಡಕ್ಕೆ ಮಣಿಯಬೇಡಿ. ನನಗೂ ರಾಜಕೀಯ ಮಾಡಲು ಬರುತ್ತದೆ ಎಂದು ಹೆಚ್‌ಡಿಕೆ ಎಚ್ಚರಿಕೆ ನೀಡಿದ್ದಾರಂತೆ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕದಲೂರು ಉದಯ್, ಅಗತ್ಯ ಅನುಮತಿ ಪಡೆಯದೆ ಫುಟ್‌ಪಾತ್ ಹಾಗೂ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ ಆಟೋ ನಿಲ್ದಾಣದ ಕಾಮಗಾರಿಗೆ ತಡೆ ಒಡ್ಡಿರುವ ನಗರಸಭೆ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಮದ್ದೂರು ಪುರಸಭೆ, ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ತಪ್ಪಿಸಲು ಕಳ್ಳಾಟ: ಜೀವದ ಜೊತೆ ಚೆಲ್ಲಾಟ!
ಆಟೋ ರಿಕ್ಷಾ ನಿಲ್ದಾಣಕ್ಕೆ ಪರ್ಯಾಯ ಸ್ಥಳ ಒದಗಿಸಲಾಗುವುದು ಎಂದ ಅವರು, ಈ ವಿಚಾರವನ್ನು ರಾಜಕೀಯಗೊಳಿಸದಂತೆ ಮನವಿ ಮಾಡಿದರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿಯನ್ನೂ ನಡೆಸಿದ ಅವರು, ಮದ್ದೂರಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಸುಮಾರು ₹2,000 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




