ಮಂಡ್ಯ: ಆಸ್ತಿಗಾಗಿ ಹೆಚ್ಐವಿ ಪೀಡಿತ ಪತಿಗೆ ಹೆಂಡತಿ ಮಕ್ಕಳಿಂದಲೇ ಗೃಹಬಂಧನ?
ಶಿವಸ್ವಾಮಿ ಹಾಗೂ ಜಯಲಕ್ಷ್ಮೀಗೆ ಮದುವೆಯಾಗಿ 25 ವರ್ಷಗಳು ಕಳೆದಿವೆ. ಮದುವೆಯ ಬಳಿಕ ಗಂಡನ ಟಾರ್ಚರ್ ತಡೆಯಲಾಗದೆ ಪತ್ನಿ ಮನೆ ಬಿಟ್ಟು ಪರಾರಿಯಾಗಿದ್ದರು. ಅತ್ತೆ ತೀರಿ ಹೋದ ಬಳಿಕ ಪರಾರಿಯಾಗಿದ್ದ ಜಯಲಕ್ಷ್ಮೀ ವಾಪಸ್ಸಾಗಿದ್ದರು.
ಮಂಡ್ಯ: ಹೆಚ್ಐವಿ(HIV) ಪೀಡಿತ ಪತಿಗೆ ಆತನ ಪತ್ನಿ, ಮಕ್ಕಳು ಮೂರು ತಿಂಗಳಿನಿಂದ ಗೃಹ ಬಂಧನದಲ್ಲಿಟ್ಟು ಹಿಂಸಿಸುತ್ತಿರುವ ಆರೋಪ ಕೇಳಿ ಬಂದಿದೆ. ಮಂಡ್ಯದ 100ಫೀಟ್ ಬಳಿ ಇರುವ ವಿದ್ಯಾನಗರದಲ್ಲಿ ಆಸ್ತಿ ಆಸೆಗಾಗಿ ಹೆಚ್ಐವಿ ಪೀಡಿತ ಗಂಡನನ್ನೆ ಶೆಡ್ ನಲ್ಲಿ ಕೂಡಿ ಹಾಕಲಾಗಿದೆ ಎಂಬ ಗಂಭೀರ ಆರೋಪ ಪತ್ನಿ ಹಾಗೂ ಮಕ್ಕಳ ಮೇಲೆ ಕೇಳಿ ಬಂದಿದೆ.
ಶಿವಸ್ವಾಮಿ ಹಾಗೂ ಜಯಲಕ್ಷ್ಮೀಗೆ ಮದುವೆಯಾಗಿ 25 ವರ್ಷಗಳು ಕಳೆದಿವೆ. ಮದುವೆಯ ಬಳಿಕ ಗಂಡನ ಟಾರ್ಚರ್ ತಡೆಯಲಾಗದೆ ಪತ್ನಿ ಮನೆ ಬಿಟ್ಟು ಪರಾರಿಯಾಗಿದ್ದರು. ಅತ್ತೆ ತೀರಿ ಹೋದ ಬಳಿಕ ಪರಾರಿಯಾಗಿದ್ದ ಜಯಲಕ್ಷ್ಮೀ ವಾಪಸ್ಸಾಗಿದ್ದರು. ಈ ವೇಳೆ ಶಿವಸ್ವಾಮಿ ಅಕ್ಕ ಪುಟ್ಟತಾಯಮ್ಮ, ಜಯಲಕ್ಷ್ಮೀ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಆಸ್ತಿ ಆಸೆಗಾಗಿ ತಮ್ಮ ಶಿವಸ್ವಾಮಿಯನ್ನ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. 112 ಗೆ ಕರೆ ಮಾಡಿ ಪೊಲೀಸರನ್ನು ಮನೆಗೆ ಕರಿಸಿ ಸಹಾಯ ಪಡೆದು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಮನೆಗೆ ಬಂದ ಹೊಯ್ಸಳ ಪೊಲೀಸರು ಹೆಚ್ಐವಿ ಪೀಡಿತ ಶಿವಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಪತ್ನಿ, ಮಕ್ಕಳು ತನ್ನನ್ನು ಗೃಹ ಬಂಧನದಲ್ಲಿಟ್ಟಿರುವುದಾಗಿ ಶಿವಸ್ವಾಮಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಶಿವಸ್ವಾಮಿ ಪತ್ನಿ ಹಾಗೂ ಪತಿಯ ಅಕ್ಕನ ನಡುವೆ ಹೈಡ್ರಾಮ ನಡೆದಿದೆ. ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಜಗಳ ಮಾಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಗಲಾಟೆಯನ್ನು ಶಾಂತಗೊಳಿಸಿದ್ದಾರೆ.
ಆಸ್ತಿಗಾಗಿ ಪುಟ್ಟತಾಯಮ್ಮ ಈ ರೀತಿ ಆರೋಪ ಮಾಡ್ತಿದ್ದಾರೆ
ಘಟನೆ ಸಂಬಂಧ ಶಿವಸ್ವಾಮಿ ಪತ್ನಿ ಜಯಲಕ್ಷ್ಮೀ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು ಮೂರು ತಿಂಗಳ ಹಿಂದೆ ಅಪಘಾತವಾಗಿತ್ತು. ನಾವೇ ಪತಿಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲೇ ಇಟ್ಟಿದ್ದೇವೆ. ಪತಿ ಹಾಗೂ ನಾನು ಹೆಚ್ಐವಿ ಪಾಸಿಟಿವ್ ರೋಗಿಗಳು. ಯಾವ ಆಸ್ಪತ್ರೆಗೆ ಹೋದ್ರು ಸೂಕ್ತ ಚಿಕಿತ್ಸೆ ಸಿಗದ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇವೆ. ಅತ್ತೆ ತೀರಿ ಹೋದ ಬಳಿಕ ಆಸ್ತಿಯೆಲ್ಲಾ ಪತಿ ಶಿವಸ್ವಾಮಿ ಹೆಸರಿಗೆ ಬಂದಿದೆ. ಹಾಗಾಗಿ ಅವರ ಅಕ್ಕ ಪುಟ್ಟತಾಯಮ್ಮ ಈ ರೀತಿ ಹೈಡ್ರಾಮ ಮಾಡ್ತಾಯಿದ್ದಾರೆ. ಆಸ್ತಿ ವಿಚಾರಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಜಯಲಕ್ಷ್ಮೀ ಆರೋಪಿಸಿದ್ದಾರೆ. ಸದ್ಯ ಹೊಯ್ಸಳ ಪೊಲೀಸರ ಸಹಾಯದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಶಿವಸ್ವಾಮಿಯವರನ್ನು ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:11 pm, Wed, 17 August 22