ಸಮಾಜ ಸೇವೆಯಲ್ಲ, ಇದು ‘ಕರ್ತವ್ಯ’; ಜನಾನುರಾಗಿ ಈ ಬೆಂಗಳೂರು ಹುಡುಗ ವಿನೋದ್

ಇವರ ಹೆಸರು ವಿನೋದ್ ಕರ್ತವ್ಯ. ವೃತ್ತಿಯಲ್ಲಿ ಡಿಆರ್​​ಡಿಒ ತಾಂತ್ರಿಕ ಅಧಿಕಾರಿ. ನಮ್ಮ ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ, ಅದನ್ನು ನಾವು ಸಮಾಜಕ್ಕೆ ಮರಳಿಸಬೇಕು. ಹಾಗಾಗಿ ನಾನು ಮಾಡುತ್ತಿರುವುದು ಸಾಮಾಜಿಕ ಸೇವೆ ಅಲ್ಲ, ಕರ್ತವ್ಯ ಎಂದು ಹೇಳುವ ಜನಾನುರಾಗಿಯಾದ ಈ ಯುವಕನಿಗೆ ನಾಡು ನುಡಿ ಬಗ್ಗೆ ಅಪಾರ ಹೆಮ್ಮೆ. ಸಮಾಜದ ಬಗ್ಗೆ ಅತೀವ ಕಾಳಜಿ. ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ನೇತೃತ್ವವಹಿಸಿರುವ 'ಬೆಂಗಳೂರು ಹುಡುಗ' ತಂಡದ ಸಂಸ್ಥಾಪಕ ವಿನೋದ್ ಅವರ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಿರುನೋಟ ಬೀರುವ ಲೇಖನ ಇಲ್ಲಿದೆ.

ಸಮಾಜ ಸೇವೆಯಲ್ಲ, ಇದು 'ಕರ್ತವ್ಯ'; ಜನಾನುರಾಗಿ ಈ ಬೆಂಗಳೂರು ಹುಡುಗ ವಿನೋದ್
ವಿನೋದ್ ಕರ್ತವ್ಯ
Follow us
ರಶ್ಮಿ ಕಲ್ಲಕಟ್ಟ
|

Updated on:Jul 25, 2024 | 1:15 PM

ಫೇಸ್​​ಬುಕ್​​​ನಲ್ಲಿ ಸ್ಕ್ರಾಲ್ ಮಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಹೆಸರು ಬೆಂಗಳೂರು ಹುಡುಗ ವಿನೋದ್ ಕರ್ತವ್ಯ (Vinod karthavya). ವೃತ್ತಿ ಡಿಆರ್​​​ಡಿಒದಲ್ಲಿ(DRDO) ತಾಂತ್ರಿಕ ಅಧಿಕಾರಿ. ಹೆಸರಿನ ಬಗ್ಗೆ ಕುತೂಹಲದಿಂದ ಫೇಸ್​​ಬುಕ್ ಫೀಡ್ ನೋಡಿದಾಗ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಒಂದಷ್ಟು ವಿಷಯ ಗೊತ್ತಾಗಿಬಿಟ್ಟಿತು. ಇವರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲದಿಂದ ಅವರಲ್ಲಿ ಮಾತನಾಡಿಸಿದಾಗ ಅವರು ಹೇಳಿದ್ದು, ನಾವು ಮಾಡುತ್ತಿರುವುದು ಸೇವೆ ಅಲ್ಲ, ಕರ್ತವ್ಯ. ಸಮಾಜ ನಮಗೆ ಕೊಟ್ಟಿದ್ದನ್ನು ನಾವು ಸಮಾಜಕ್ಕೆ ಮರಳಿಸುತ್ತಿದ್ದೇವೆ. ಹೆಸರಿನ ಜತೆಗೆ ‘ಕರ್ತವ್ಯ’ ಎಂದು ಸೇರಿಸಿಕೊಂಡಿರುವ ಬಗ್ಗೆ ಮಾತು ಆರಂಭಿಸಿದ ವಿನೋದ್, ತಾವು ಯಾವ ರೀತಿ ಸಾಮಾಜಿಕ ಕರ್ತವ್ಯಗಳನ್ನು ಮಾಡುತ್ತಿದ್ದೇವೆ ಎಂಬುದನ್ನು ಟಿವಿ9 ಆ್ಯಪ್​​ಗೆ ವಿವರಿಸಿದ್ದಾರೆ.

ಹುಟ್ಟಿ ಬೆಳೆದದ್ದು ಬಡತನದಲ್ಲಿ. ಅಪ್ಪ ಸೋಮಶೇಖರ್ ಮಗ್ಗದ ಕೆಲಸ ಮಾಡುತ್ತಿದ್ದರು. ಅಮ್ಮ ಇಂದ್ರಾಣಿ. ಮನೆಯಲ್ಲಿ ಬಡತನವಿದ್ದರೂ ಅಪ್ಪ ಅಮ್ಮ ನನಗೆ ಉತ್ತಮ ಶಿಕ್ಷಣವನ್ನು ಕೊಡಿಸಿದರು. ನಾನು ಐಐಟಿ ಮುಗಿಸಿ, ಬಿಕಾಂ ಮಾಡಿ ನಂತರ ಡಿಪ್ಲೋಮಾ ಇಂಜಿನಿಯರಿಂಗ್ ಮಾಡಿದ್ದೆ. ಸಂಜೆ ಕಾಲೇಜಿಗೆ ಹೋಗಿ ಶಿಕ್ಷಣ ಪೂರೈಸಿದ್ದೆ. ನನ್ನ 19ನೇ ವಯಸ್ಸಿನಲ್ಲಿ ಡಿಆರ್​​ಡಿಒದಲ್ಲಿ ನೌಕರಿ ಸಿಕ್ಕಿತು. ಬದುಕು ಸುಧಾರಿಸಿತು, ಮನೆ ಕೂಡಾ ಆಯ್ತು. ಈಗ ಒಂಥರಾ ನೆಮ್ಮದಿಯ ಬದುಕು. ಹೀಗಿರುವಾಗಲೇ ಯೋಚನೆ ಹೊಳೆದದ್ದು ಸರ್ಕಾರ ಅಂದ್ರೆ ತೆರಿಗೆದಾರರ ದುಡ್ಡಿನಿಂದಲೇ ಅಲ್ಲವೇ ಇದೆಲ್ಲ ಸಾಧ್ಯವಾಗಿದ್ದು, ಅದರ ಋಣ ನಮ್ಮ ಮೇಲಿದೆ. ನಾವು ನಮ್ಮ ಸುತ್ತಮುತ್ತಲಿನ ಜನರಿಗಾಗಿ, ಸಾರ್ವಜನಿಕರಿಗಾಗಿ ಏನಾದರೊಂದು ಕೆಲಸ ಮಾಡಬೇಕು ಎಂಬುದು. ಹಾಗೆ ನಾನು  ಸಮಾನ ಮನಸ್ಕರಾದ ಐವರು ಗೆಳೆಯರು ಜತೆ ಸೇರಿ 2013ರಲ್ಲಿ ಅಂಬೇಡ್ಕರ್ ಜಯಂತಿಯಂದು ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿದ್ದೆವು. ಅಲ್ಲಿನ ಅಗತ್ಯ ಏನು ಎಂದು ಕೇಳಿದಾಗ ಅವರಿಗೆ ಕುಡಿಯುವ ಶುದ್ಧನೀರಿನ ಅಗತ್ಯವಿದೆ ಎಂಬುದು ಗೊತ್ತಾಯಿತು. ನಾವು ಎಲ್ಲರೂ ದುಡ್ಡು ಹಾಕಿ ಒಂದು ವಾಟರ್ ಫಿಲ್ಟರ್​​ನ್ನು ಅನಾಥಾಶ್ರಮಕ್ಕೆ ಕೊಡುಗೆಯಾಗಿ ಕೊಟ್ಟೆವು. ಅದು ನಾವು ಮಾಡಿದ ಮೊದಲ ಕೆಲಸವಾಗಿತ್ತು. ಇನ್ನು ಟೀಂಗೆ ಒಂದು ಹೆಸರು ಇಡಬೇಕಲ್ಲಾ ಅಂತ ಯೋಚಿಸಿದಾಗ ಹೊಳೆದ ಹೆಸರೇ ಕರ್ತವ್ಯ. ನಾವು ಈಗ ತಾನೇ ಮಾಡಿದ ಕೆಲಸ  ಸೇವೆ ಅಲ್ಲ, ಅದು ನಮ್ಮ ಕರ್ತವ್ಯ. ನಮ್ಮ ಉದ್ದೇಶವೇ ಅದು. ಹಾಗಾಗಿ ನಮ್ಮ ತಂಡಕ್ಕೆ ಕರ್ತವ್ಯ ಎಂದು ಹೆಸರಿಟ್ಟು ಅನಾಥಾಶ್ರಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತಾ ಬಂದೆವು. ಈ ತಂಡದ ಹೆಸರೇ ನನ್ನ ಹೆಸರಿನ ಜತೆಯಾಯಿತು ಅಂತಾರೆ ಇವರು.

ನಿತ್ಯೋತ್ಸವ ಅಭಿಯಾನ

ವಿನೋದ್ ಅವರ ಸೋಷಿಯಲ್ ಮೀಡಿಯಾ ಪುಟದಲ್ಲಿ ಗಮನ ಸೆಳೆದ ಒಂದು ಪೋಸ್ಟ್ ಅಂದರೆ ‘ ಯುಗಾದಿ ಆದರೇನು ಸಂಕ್ರಾಂತಿ ಆದರೇನು ಕನ್ನಡಿಗನಿಗೆ ಪ್ರತಿ ದಿವಸ ಹಬ್ಬ ಅದೇ ನಿತ್ಯೋತ್ಸವ’ ಎಂಬುದು. ಬೆಂಗಳೂರಿನ ಯಾವುದೇ ಪ್ರದೇಶ, ಗಲ್ಲಿ ಅಥವಾ ಹಳ್ಳಿಯೇ ಆಗಿರಲಿ ಹರಿದ, ಮಾಸಿದ ಕನ್ನಡ ಬಾವುಟ ಕಂಡರೆ ವಿನೋದ್ ಸುಮ್ಮನೆ ಕೂರುವುದಿಲ್ಲ. ಅವರು ಅದನ್ನು ಬದಲಿಸುತ್ತಾರೆ. ರಾಜ್ಯೋತ್ಸವ ಬಂದಾಗ ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡ ಧ್ವಜ ಹಾರಿಸಲಾಗುತ್ತದೆ. ಆಚರಣೆ ಮುಗಿದ ಮೇಲೆ ಆ ಬಾವುಟದ ಕತೆ ಏನು? ಅದು ಮಾಸಿರುತ್ತದೆ, ಹರಿದು ಹೋಗಿರುತ್ತದೆ. ಧ್ವಜಕ್ಕೆ ನಾವು ಗೌರವ ಕೊಡಬೇಕು ಅಲ್ವಾ..ಹಾಗಾಗಿ ಎಲ್ಲೇ ಇಂಥಾ ಧ್ವಜ ಕಂಡರೆ ವಿನೋದ್ ಅದನ್ನು ಬದಲಿಸುತ್ತಾರೆ. ನಿಮ್ಮ ಏರಿಯಾದಲ್ಲಿ ಈ ರೀತಿ ಬಾವುಟ ಇದ್ದರೆ ನಮಗೆ ತಿಳಿಸಿ, ಅದನ್ನು ಬದಲಾಯಿಸೋಣ ಎಂಬ ಕರೆಯನ್ನು ವಿನೋದ್ ಕನ್ನಡಿಗರಿಗೆ ನೀಡಿದ್ದಾರೆ.

ಈ ಅಭಿಯಾನಕ್ಕೆ ಕಾರಣವಾಗಿರುವ ಒಂದು ಘಟನೆಯನ್ನು ಅವರು ವಿವರಿಸಿದ್ದು ಹೀಗೆ. ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕನ್ನಡ ಬಾವುಟಗಳನ್ನು ಸುಟ್ಟು ಹಾಕಿದ್ದರು. ನಮ್ಮ ರಾಜ್ಯದ ಧ್ವಜಕ್ಕೆ ಆದ ಅವಮಾನವನ್ನು ಖಂಡಿಸಿ ರಾಜ್ಯದ ಮೂಲೆ ಮೂಲೆಗಳಲ್ಲೂ ಕನ್ನಡ ಬಾವುಟ ಹಾರಿಸಲಾಯಿತು. ಹೀಗೆ ಹಾರಿಸಿದ ಬಾವುಟಗಳು ಹರಿದು ಹೋದರೂ, ಬಣ್ಣ ಮಾಸಿ ಹೋದರೂ ತಿರುಗಿ ನೋಡುವವರು ಯಾರೂ ಇಲ್ಲ. ಬೇರೊಂದು ಕಡೆ ನಮ್ಮ ಧ್ವಜಕ್ಕೆ ಅವಮಾನವಾಗಿದೆ ಎಂದು ಹೇಳುವಾಗ ನಾವು ರೊಚ್ಚಿಗೇಳುತ್ತೇವೆ, ಹಾಗಾದರೆ ನಮ್ಮ ರಾಜ್ಯದಲ್ಲಿಯೂ ಈ ಧ್ವಜಕ್ಕೆ ಅವಮಾನ ಆಗಬಾರದು ಅಲ್ವ. ಎಲ್ಲವನ್ನೂ ಹೋರಾಟಗಾರರೇ ಮಾಡಬೇಕಾ? ಈ ನಾಡು ನುಡಿ ಎಲ್ಲವೂ ನಮಗೆ ಸೇರಿದ್ದು ಅಂದ ಮೇಲೆ ನಮ್ಮ ಕರ್ತವ್ಯವೂ ಇರತ್ತದೆ ಅಲ್ವೇ. ಈ ಒಂದು ಉದ್ದೇಶದಿಂದ ಹುಟ್ಟಿಕೊಂಡಿದ್ದೇ ನಿತ್ಯೋತ್ಸವ ಅಭಿಯಾನ. ನಾನು ಇಲ್ಲಿವರೆಗೆ ಸುಮಾರು 110 ಬಾವುಟ ಹಾರಿಸಿದ್ದೇನೆ. ತಿಂಗಳಲ್ಲಿ ಮೂರು ನಾಲ್ಕು ಬಾವುಟಗಳನ್ನು ಬದಲಿಸಿದ್ದೇನೆ ಅಂತಾರೆ ವಿನೋದ್. ಇದೊಂದೇ ಅಲ್ಲ ಹಲವು ಅಭಿಯಾನಗಳಲ್ಲಿ ವಿನೋದ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮರದಿಂದ ಮೊಳೆ ಕೀಳುತ್ತಿರುವ ವಿನೋದ್

ಮೊಳೆ ಮುಕ್ತ ಮರ ಅಭಿಯಾನ

ಅದು ಕೊರೊನಾ ಕಾಲ. ನಾವು ಆಹಾರ ವಿತರಣೆ ಮಾಡುತ್ತಿದ್ದೆವು. ಹಾಗೆ ಒಂದು ದಿನ ಮಾತಾಡುತ್ತಾ ಮರಕ್ಕೆ ಒರಗಿಕೊಂಡಾಗ ಏನೋ ಚುಚ್ಚಿತು. ನೋಡಿದ್ರೆ ಆ ಮರದಲ್ಲಿ ಮೊಳೆ ಇತ್ತು. ಬೆಂಗಳೂರಿನಲ್ಲಿ ಏನಾದರೂ ಜಾಹೀರಾತುಗಳ ಪೋಸ್ಟರ್​​ಗಳನ್ನು ಮರಕ್ಕೆ ಮೊಳೆ ಹೊಡೆದಿರುತ್ತಾರೆ. ನಮಗೆ ಒಂದು ಮೊಳೆ ಚುಚ್ಚಿದರೆ ನೋವಾಗುತ್ತದೆ. ಇಂಥದರಲ್ಲಿ ಮರಗಿಡಗಳಿಗೆ ಹೀಗೆ ಮೊಳೆ ಹೊಡೆದರೆ ಅವುಗಳಿಗೂ ನೋವಾಗಲ್ವಾ ಎಂಬ ಆಲೋಚನೆ ಬಂದಿದ್ದೇ ಮರಗಳಿಂದ ಮೊಳೆ ಕೀಳುವ ಕೆಲಸ ಶುರು ಮಾಡಿದೆ. ರಜಾ ದಿನಗಳಲ್ಲಿ ಕಟಿಂಗ್ ಪ್ಲೇರ್ ತಗೊಂಡು ನಮ್ಮ ಮನೆ ಸುತ್ತ ಮತ್ತ ಇದ್ದ ಮರದಿಂದ ಮೊಳೆ ಕೀಳಲು ಶುರು ಮಾಡಿದೆ. ಇವನೇನು ಮಾಡ್ತಿದ್ದಾನೆ ಎಂದು ಜನರು ಅಚ್ಚರಿಯಿಂದ ನೋಡುತ್ತಿದ್ದರು. ನಾನು ನನ್ನ ಕೆಲಸವನ್ನು ಮುಂದುವರಿಸಿದೆ. ಹೀಗೆ ಅದೊಂದು ದಿನ ಕಂಠೀರವ ಸ್ಟೇಡಿಯಂ ಬಳಿ ನಾನು ಮರಗಳಿಂದ ಮೊಳೆ ಕೀಳುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯ್ತು. ಜನರು ನನ್ನ ಜತೆ ಸೇರಿದರು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗಲು ಶುರುವಾಯಿತು. ‘ಬೆಂಗಳೂರು ಹುಡುಗರು’ ಎಂಬ ತಂಡ ಕಟ್ಟಿಕೊಂಡು ಮರಗಳಿಗೆ ಮೊಳೆ ಹೊಡೆಯುವುದು ತಪ್ಪು, ಅದು ಕಾನೂನಿನ ಉಲ್ಲಂಘನೆ ಎಂದು ಜಾಗೃತಿ ಮೂಡಿಸಿದೆವು. ಮರಗಳಿಗೆ ಮೊಳೆ ಹೊಡೆದವರ ವಿರುದ್ಧ ಎಫ್ಐಆರ್ ಕೂಡಾ ದಾಖಲಿಸಿದ್ದೆವು. ಅವರು ಆಮೇಲೆ ಮುಚ್ಚಳಿಕೆಯನ್ನೂ ಬರೆದುಕೊಟ್ಟರು. ನಮ್ಮ ಶ್ರಮಕ್ಕೆ ಬಿಬಿಎಂಪಿಯೂ ಕೈ ಜೋಡಿಸಿತು. ಹೀಗೆ ಬೆಂಗಳೂರಿನಲ್ಲಿ 2020ರಲ್ಲಿ ಮೊಳೆ ಮುಕ್ತ ಅಭಿಯಾನ ಆರಂಭವಾಯಿತು. ಈ ಅಭಿಯಾನದ ಮೂಲಕ ಮರಗಳ ಸಂರಕ್ಷಣೆಯಲ್ಲಿ ತೊಡಗಿರುವ ವಿನೋದ್, ಮೊಳೆಯಿಂದಾಗುವ ಹಾನಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂಥಾ ಅಭಿಯಾನಗಳಿಗೆ ತಂಡದ ಸದಸ್ಯರೇ ದುಡ್ಡು ಖರ್ಚು ಮಾಡುತ್ತಾರೆ. ಯಾವುದೇ ಆರ್ಥಿಕ ನೆರವು ಪಡೆಯುವುದಿಲ್ಲ, ಧನ ಸಂಗ್ರಹ ಕೂಡಾ ಮಾಡುವುದಿಲ್ಲ. ನಮ್ಮ ಕಾರ್ಯಗಳು ಫಲಾಪೇಕ್ಷೆಯಲ್ಲದೆ ಮಾಡುವಂಥದ್ದು, ಇದು ನಮ್ಮ ಕರ್ತವ್ಯ ಎಂಬುದು ವಿನೋದ್ ಅವರ ಮಾತು.

ಹೊಂಡ ಮುಕ್ತ ರಸ್ತೆ

ಬೆಂಗಳೂರಿನಲ್ಲಿ ಹೊಂಡ ಮುಕ್ತ ರಸ್ತೆ ಅಭಿಯಾನದ ಮೂಲಕ ವಿನೋದ್ ನೇತೃತ್ವದ ತಂಡ ರಸ್ತೆಗಳಲ್ಲಿನ ಹೊಂಡಗಳ ಆಳ ಅಗಲ ಅಳತೆ ಮಾಡಿ ಸೋಷ್ಯಲ್ ಮೀಡಿಯಾ ಮೂಲಕ ಬಿಬಿಎಂಸಿಯ ಗಮನ ಸೆಳೆಯುವ ಕಾರ್ಯವನ್ನು ಮಾಡುತ್ತದೆ.

ವೃಷಭಾವತಿ ಉಳಿಸಿ ನಡಿಗೆ

ವೃಷಭಾವತಿಗಾಗಿ ನಡಿಗೆ ಅಭಿಯಾನ

ರಿವೈವಲ್ ಹೆರಿಟೇಜ್ ಹಬ್ ತಂಡದ ಸಹಯೋಗದೊಂದಿಗೆ ಬೆಂಗಳೂರಿನ ವೃಷಭಾವತಿ ನದಿ ಉಳಿವಿಗಾಗಿ ರೂಪುಗೊಂಡ ಅಭಿಯಾನ ಇದು. ವೃಷಭಾವತಿ ನದಿ ಉಗಮ ಸ್ಥಳ ಮತ್ತು ಅದು ಹರಿಯುವ ಸ್ಥಳಗಳಲ್ಲಿ ಪ್ರಸ್ತುತ ನದಿ ಬಗ್ಗೆ ಅಲ್ಲಿನ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ವಿನೋದ್ ಅವರ ತಂಡ ಮಾಡಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಿಕ್ಷಾಟನೆ ವಿರುದ್ಧ ಚಳವಳಿ

ಭಿಕ್ಷಾಟನೆ ಮುಕ್ತ ಭಾರತ ಚಳುವಳಿ

ಭಿಕ್ಷೆ ಬೇಡುವವರಿಗೆ ಹಣವನ್ನಂತೂ ಕೊಡಲೇಬಾರದು ಅಂತಾರೆ ವಿನೋದ್. ನೀವೇ ನೋಡಿ ಪ್ರತಿ ಸಿಗ್ನಲ್ ನಲ್ಲಿಯೂ ಎಳೆಕೂಸನ್ನು ಹಿಡಿದುಕೊಂಡು ಮಹಿಳೆ ಭಿಕ್ಷೆ ಬೇಡುತ್ತಾರೆ. ಇವರ ಪ್ಯಾಟರ್ನ್ ಎಲ್ಲ ಒಂದೇ ರೀತಿ ಇರುತ್ತದೆ. ಇವರ ಬಗ್ಗೆ ಕುತೂಹಲ ಹುಟ್ಟಿ ಒಂದು ಇಡೀ ದಿನ ಅನಿಲ್ ಕುಂಬ್ಳೆ ಸರ್ಕಲ್ ನಲ್ಲಿ ಕುಳಿತು ಭಿಕ್ಷಕರ ಚಲನವಲನಗಳನ್ನು ಗಮನಿಸಿದ್ದೆ. ಪ್ರತಿ ಸಿಗ್ನಲ್ ಬಿದ್ದಾಗ ಅವರು ಯಾವ ರೀತಿ ವಾಹನ ಸವಾರರ ಬಳಿ ಹೋಗಿ ದುಡ್ಡು ಯಾಚಿಸುತ್ತಾರೆ, ಅವರಿಗೆ ಎಷ್ಟು ಸಂಪಾದನೆ ಆಗುತ್ತದೆ ಎಂಬುದು ನನಗೆ ಅಂದಾಜಾಗಿತ್ತು. ಹೀಗೆ ಭಿಕ್ಷೆ ಬೇಡುವವರ ಕೈಯಲ್ಲಿರುವ ಮಗು ಇನ್ನು ಯಾರದ್ದೋ ಆಗಿರುತ್ತದೆ. ಭಿಕ್ಷಾಟನೆಗಾಗಿ ಮಕ್ಕಳ ಅಪಹರಣ ನಡೆಯುತ್ತದೆ, ಮಾನವ ಕಳ್ಳಸಾಗಣೆ ನಡೆಯುತ್ತದೆ. ಇದೊಂದು ದೊಡ್ಡ ಜಾಲ. ಹಾಗಾಗಿ ಇದನ್ನು ನಿಲ್ಲಿಸುವ ಉದ್ದೇಶದಿಂದ ಆರಂಭವಾಗಿದ್ದೇ ಭಿಕ್ಷಾಟಣೆ ಮುಕ್ತ ಅಭಿಯಾನ. ಅದು ಯಶಸ್ವಿಯೂ ಆಗಿದೆ.

ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ

ಶಿಕ್ಷಣ ಅಭಿಯಾನ

ಬೆಂಗಳೂರಿನ ಸರ್ಕಾರಿ ಶಾಲೆಗಳಿಗೆ ಪ್ರತಿ ಶನಿವಾರ, ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿಗಳನ್ನೂ ಇವರು ನೀಡುತ್ತಿದ್ದಾರೆ. ‘ಶಿಕ್ಷಣ’ ತಂಡದಲ್ಲಿ 40 ಜನರು ಸ್ವಯಂ ಸೇವಕರಾಗಿದ್ದು ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಬರೀ ತರಬೇತಿ ಅಷ್ಟೇ ಅಲ್ಲ ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ನೆರವಾಗಿದೆ ಈ ತಂಡ. ಈಗಾಗಲೇ 9 ಶಾಲೆಗಳಲ್ಲಿ ಕಂಪ್ಯೂಟರ್ ಹಾಗೂ 5 ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸ್ಥಾಪಿಸಿದ್ದಾರೆ.

ಕೂಲ್ ಟ್ರೀ ಅಭಿಯಾನ

ಕೂಲ್ ಟ್ರೀ ಅಭಿಯಾನ

ಬೆಂಗಳೂರು ಹುಡುಗರು ತಂಡ ಹಮ್ಮಿಕೊಂಡ ಮತ್ತೊಂದು ಮಹತ್ವದ ಅಭಿಯಾನ ಅಂದ್ರೆ ಕೂಲ್ ಟ್ರೀ ಅಭಿಯಾನ. ಬಿಸಿಲಿಗೆ ಮರದ ತೊಗಟೆಗಳು ಒಣಗದಂತೆ ಮಾಡುವ ಮೂಲಕ ಮರಗಳನ್ನು ರಕ್ಷಿಸುವುದೇ ಈ ಅಭಿಯಾನದ ಉದ್ದೇಶ. ಬಿಸಿಲಿಗೆ ಮರದ ತೊಗಟೆಗಳು ಒಣಗಿದರೆ ಬೇಗನೆ ಗೆದ್ದಲು ಹಿಡಿಯುತ್ತದೆ. ಗೆದ್ದಲು ಹಿಡಿದ ಮರ ಬೆಳೆಯಲ್ಲ, ಅದು ಸಾಯುತ್ತದೆ. ಹೀಗಾಗುವುದನ್ನು ತಡೆಯುವುದಕ್ಕೆ ಮರಕ್ಕೆ ಹಲವಾರು ರಾಸಾಯನಿಕಗಳನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ಬಳಿಯಲಾಗುತ್ತದೆ. ಈ ಮಿಶ್ರಣ ಬೆಫೆಂತ್ರಿನ್, ಮ್ಯಾಲಥಿಯಾನ್ ಅಥವಾ ಆರ್ಗಾನೊಫಾಸ್ಫೇಟ್, ಬೇವಿನ ಎಣ್ಣೆ, ವೈಟ್ ವಾಶ್ ಪೌಡರ್ ಹೊಂದಿದ್ದು ಮರದ ಕಾಂಡಗಳಿಗೆ ಅಂಟಿಕೊಳ್ಳಲು ಗೋಧಿ ಹಿಟ್ಟು ಬಳಸಲಾಗುತ್ತದೆ. ಬಿಬಿಎಂಪಿ ಅರಣ್ಯ ತಜ್ಞರೊಂದಿಗೆ ಚರ್ಚಿಸಿದ ನಂತರ ಈ ಅಭಿಯಾನ ಶುರುವಾಗಿದ್ದು ಈ ಪೇಸ್ಟ್ ಅನ್ನು ಮರದ ಕಾಂಡಗಳಿಗೆ ಹಚ್ಚುವುದರಿಂದ ಇದು ಸನ್ ಸ್ಕ್ರೀನ್ ರೀತಿಯಲ್ಲಿ ಕೆಲಸ ಮಾಡುತ್ತದೆ.  ಇದಲ್ಲದೆ ಕಿರಿಯರಿಗೆ ತಂಬಾಕು ಉತ್ಪನ್ನಗಳನ್ನು ನೀಡುವುದರ ವಿರುದ್ಧವೂ ವಿನೋದ್ ನೇತೃತ್ವದಲ್ಲಿ ಅಭಿಯಾನ ನಡೆದಿದೆ.

ಇಷ್ಟೆಲ್ಲ ಕೆಲಸಗಳಿಗೆ ಸಮಯ ಹೇಗೆ ಹೊಂದಿಸುತ್ತೀರಿ ಎಂದು ಕೇಳಿದರೆ ಎಲ್ಲ ಕೆಲಸಗಳಿಗೂ ಇಂತಿಷ್ಟು ಸಮಯ ಮೀಸಲಿರಿಸಿದ್ದೀನಿ. ಎಲ್ಲವೂ ನಿಗದಿತ ಸಮಯದಲ್ಲಿ ನಡೆಯುತ್ತದೆ ಎನ್ನುವ ವಿನೋದ್ ಅವರ ಮಾತಿನಲ್ಲಿ ನಾಡು-ನುಡಿ ಸಮಾಜದ ಬಗ್ಗೆ ಇರುವ  ಕಾಳಜಿ ಎದ್ದುಕಾಣುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ ಎಂಬ ಮಾತಿನಲ್ಲಿ ಬಲವಾದ ನಂಬಿಕೆ ಹೊಂದಿರುವ ವಿನೋದ್,  ತಮ್ಮ ನಡೆ ನುಡಿಗಳಿಂದ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ.

Published On - 5:09 pm, Fri, 12 July 24

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು