ಕನಿಷ್ಠ ವೇತನ ಜಾರಿ ಆಗಲೆಂದು ಹರಕೆ ಹೊತ್ತು ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಮುಸ್ಲಿಂ ಯುವಕ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳ್ಳಿಗನೂರು ಗ್ರಾಮದ ಮುಸ್ಲಿಂ ಯುವಕ ಶಫೀವುಲ್ಲಾ ಅವರು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತು ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿಗೆ ಇದು ಹರಕೆಯಾಗಿತ್ತು. ಅದೇ ಜಿಲ್ಲೆಯ ಮತ್ತೊಂದು ಮುಸ್ಲಿಂ ಕುಟುಂಬ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ದಾವಣಗೆರೆ, ಜನವರಿ 08: ಕೋಟಿ ಕೋಟಿ ಭಕ್ತರ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಿರುವ ಚೇತನ ಅಯ್ಯಪ್ಪ (Ayappa). ಭಕ್ತರೆಲ್ಲಾ ಪ್ರೀತಿಯಿಂದ ಭಜಿಸುವ ಸ್ವಾಮಿಯೇ ಶರಣಂ ಅಯ್ಯಪ್ಪಗೆ ಕೊಟ್ಯಂತರ ಭಕ್ತರಿದ್ದಾರೆ. ಅಯ್ಯಪ್ಪಸ್ವಾಮಿ ಜಾತಿ, ಮತ, ಪಂಥ, ಪಂಗಡಗಳ ಮೀರಿದ ದೇವರು ಎಂದು ಪದೇ ಪದೇ ಸಾಬೀತಾಗುತ್ತಿರುತ್ತದೆ. ಇದಕ್ಕೆ ನಿದರ್ಶನವೆಂಬತೆ ಇಲ್ಲೊಬ್ಬ ಮುಸ್ಲಿಂ ಯುವಕ ಅಯ್ಯಪ್ಪಸ್ವಾಮಿ ಮಾಲೆ ಧರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳ್ಳಿಗನೂರು ಗ್ರಾಮದ ಶಫೀವುಲ್ಲಾ ಅಯ್ಯಪ್ಪಸ್ವಾಮಿ ಮಾಲೆ ಧರಸಿ ಶಬರಿ ಮಲೆ ಯಾತ್ರೆ ಮಾಡಿದ ಯುವಕ. ಗೃಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿ ಆಗಲಿ ಎಂದು ಶಫೀವುಲ್ಲಾ ಅಯ್ಯಪ್ಪನಿಗೆ ಹರಕೆ ಹೊತ್ತಿದ್ದಾರೆ.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಕೇಸ್: ಮೃತ 8 ಅಯ್ಯಪ್ಪ ಮಾಲಾಧಾರಿ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ
ಕಳೆದ ಮೂರು ವರ್ಷಗಳಿಂದ ನಿರಂತರ ಮಾಲೆ ಧರಿಸುತ್ತಿರುವ ಶಫೀವುಲ್ಲಾ, ಬೆಳ್ಳಿಗನೂರ ಗ್ರಾಪಂ ಗೃಂಥಾಲಯ ಮೇಲ್ವಿಚಾರಕನಾಗಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನಿಷ್ಠ ವೇತನಕ್ಕೆ ಹರಕೆ ಹೊತ್ತ ಮೂರೇ ತಿಂಗಳಿನಲ್ಲಿ ಗೃಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿ ಮಾಡಲಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ಮಾಲೆ ಹಾಕಲು ಶಫೀವುಲ್ಲಾ ನಿರ್ಧರಿಸಿದ್ದಾರೆ.
ಮುಸ್ಲಿಂ ಕುಟುಂಬಗಳಿಂದ ಅಯ್ಯಪ್ಪಸ್ವಾಮಿ ಪಡಿಪೂಜೆ ಹಾಗೂ ಅನ್ನಸಂತರ್ಪಣೆ
ಮುಸ್ಲಿಂ ಯುವಕ ಶಫೀವುಲ್ಲಾ ಅಯ್ಯಪ್ಪಸ್ವಾಮಿ ಮಾಲೆ ಹಾಕಿದರೆ ಇತ್ತ ಇದೇ ಜಿಲ್ಲೆಯ ಜಗಳೂರು ತಾಲ್ಲೂಕಿನ ಮರೇನಹಳ್ಳಿ ಗ್ರಾಮದ ಶೌಕತ್ ಆಲಿ, ಆಪ್ರೋಜ್ ಮತ್ತು ಅಮೀದ್ ಕುಟುಂಬಸ್ಥರಿಂದ ಅಯ್ಯಪ್ಪಸ್ವಾಮಿ ಪಡಿಪೂಜೆ ಹಾಗೂ ಅನ್ನಸಂತರ್ಪಣೆ ಮಾಡಲಾಗಿದೆ. ಆ ಮೂಲಕ ಮುಸ್ಲಿಂ ಕುಟುಂಬಗಳು ಭಾವೈಕ್ಯತೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮತ್ತೊಂದು ಸಾವು, ಅಣ್ಣನ ಸಾವಿನಿಂದ ಕಂಗೆಟ್ಟು ರೋದಿಸುತ್ತಿರುವ ತಂಗಿ
ಮುಸ್ಲಿಂ ಕುಟುಂಬಗಳು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ತಮ್ಮ ಮನೆಯಲ್ಲೇ ಪಡಿಪೂಜೆ ನಡೆಸಿ ಅನ್ನಸಂತರ್ಪಣೆ ಮಾಡಿದ್ದಾರೆ. ಭಕ್ತಿ, ಭಾವದಿಂದ ಮುಸ್ಲಿಂ ಕುಟುಂಬಗಳು ಪಡಿಪೂಜೆಯಲ್ಲಿ ಭಾಗವಹಿಸಿದ್ದು ವಿಶೇಷ. ಇಂತಹ ಭಾವೈಕ್ಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:08 pm, Wed, 8 January 25