Heavy Rain: ಕರ್ನಾಟಕದಲ್ಲಿ ನಿನ್ನೆ ರಾತ್ರಿ ಸುರಿದ ಧಾರಕಾರ ಮಳೆ: 50ಕ್ಕೂ ಹೆಚ್ಚು ಶೇಡ್ಗಳಿಗೆ ನುಗ್ಗಿದ ನೀರು
ದೇವನಹಳ್ಳಿ ಸುತ್ತಾಮುತ್ತ ಮತ್ತೆ ಮಳೆರಾಯ ಅಬ್ಬರಿಸಿದ್ದು, ಕಳೆದ ರಾತ್ರಿ ಭಾರಿ ಮಳೆಗೆ ಕಾರ್ಮಿಕರ ಶೇಡ್ಗಳು ಜಲದಿಗ್ಬಂಧನವಾಗಿದ್ದು, 50ಕ್ಕೂ ಹೆಚ್ಚು ಶೇಡ್ಗಳಿಗೆ ಮಳೆ ನೀರು ನುಗ್ಗಿದೆ.
ಮೈಸೂರು: ನಗರದಲ್ಲಿ ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಮೈಸೂರು ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ಕೆರೆ ಕೋಡಿ ಹರಿದು ನೀರು ನುಗ್ಗಿರುವಂತಹ ಘಟನೆ ಕೆ. ಹೆಮ್ಮನಹಳ್ಳಿ ಚಿಕ್ಕೆರೆ ಹಾಗೂ ಜಟ್ಟಿಹುಂಡಿ ಗ್ರಾಮದಲ್ಲಿ ನಡೆದಿದೆ. ಕೆ. ಹೆಮ್ಮನಹಳ್ಳಿಯಲ್ಲಿ ಬಡಾವಣೆ ನಿವೇಶನಕ್ಕೆ ಕೆರೆ ನೀರು ನುಗ್ಗಿದ್ದು, ಮೀನು ಸಾಕಾಣಿಕೆ ಕೇಂದ್ರಕ್ಕೂ ನೀರು ನುಗ್ಗಿದೆ. ಜಟ್ಟಿ ಹುಂಡಿ ಹಳ್ಳಿ ಗ್ರಾಮಕ್ಕೆ ಹೊಸಕೆರೆ ನೀರು ನುಗ್ಗಿದ್ದು, ಎರಡು ಕಡೆಗಳಲ್ಲೂ ಕೆರೆ ಕೋಡಿಯಿಂದ ಸಮಸ್ಯೆ ಉಂಟಾಗಿದೆ. ಹಾಸನ ಜಿಲ್ಲೆಯ ಹಲವೆಡೆ ವರುಣನ ಆರ್ಭಟ ಮುಂದುವರೆದಿದ್ದು, ತಡರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತ್ತಾಗಿದೆ. ಹಾಸನ, ಸಕಲೇಶಪುರ, ಅರಸೀಕೆರೆ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಇನ್ನೂ ವಿವಿಧೆಡೆ ಜಿಟಿ ಜಿಟಿ ಮಳೆ ಮುಂದುವರೆದಿದೆ. ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಭಾರಿ ಮಳೆಯಿಂದ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದು, ಹೊಲ, ಗದ್ದೆಗಳಲ್ಲಿ ನೀರು ನಿಂತ್ತಿದ್ದು, ಬೆಳೆ ನಾಶವಾಗುವ ಆತಂಕ ಎದುರಾಗಿದೆ.
50ಕ್ಕೂ ಹೆಚ್ಚು ಶೇಡ್ಗಳಿಗೆ ನುಗ್ಗಿದ ಮಳೆ ನೀರು: ರಾತ್ರಿ ಇಡೀ ಜಾಗರಣೆ
ದೇವನಹಳ್ಳಿ ಸುತ್ತಾಮುತ್ತ ಮತ್ತೆ ಮಳೆರಾಯ ಅಬ್ಬರಿಸಿದ್ದು, ಕಳೆದ ರಾತ್ರಿ ಭಾರಿ ಮಳೆಗೆ ಕಾರ್ಮಿಕರ ಶೇಡ್ಗಳು ಜಲದಿಗ್ಬಂಧನವಾಗಿದ್ದು, 50ಕ್ಕೂ ಹೆಚ್ಚು ಶೇಡ್ಗಳಿಗೆ ಮಳೆ ನೀರು ನುಗ್ಗಿರುವಂತಹ ಘಟನೆ ದೇವನಹಳ್ಳಿ ತಾಲೂಕಿನ ನಂದಿ ಬೆಟ್ಟದ ರಸ್ತೆ ಎಂಬ್ರಹಳ್ಳಿ ಗೇಟ್ ಬಳಿ ನಡೆದಿದೆ. ರಾತ್ರಿ ಇಡೀ ಭಾರಿ ಮಳೆ ಸುರಿದಿದೆ. ಮಳೆಯಿಂದಾಗಿ ಈಗಾಗಲೇ ಕಾರಹಳ್ಳಿ ಕೆರೆ ಕೋಡಿ ತುಂಬಿ ಹೋಗಿದೆ. ಕಾರಹಳ್ಳಿ ಕೆರೆ ತುಂಬಿ ಹರಿಯುತ್ತಿರೋ ಪರಿಣಾಮ ರಾಜಕಾಲುವೆ ಒತ್ತುವರಿಯಿಂದಾಗಿ ಶೇಡ್ಗಳಿಗೆ ನೀರು ನುಗ್ಗಿದೆ ಎನ್ನಲಾಗುತ್ತಿದೆ. ಸುಮಾರು 300 ಮಂದಿ ಕಾರ್ಮಿಕರು ರಾತ್ರಿ ಇಡೀ ಜಾಗರಣೆ ಮಾಡಿದ್ದು, ಶೇಡ್ಗಳಲ್ಲಿ ನೀರು ತುಂಬಿದ ಪರಿಣಾಮ ಶೇಡ್ ಮೇಲೆ ಮಹಿಳೆಯರು ಕುಳಿತುಕೊಂಡಿದ್ದರು. ಮಹಾಮಳೆಗೆ ಕಾರ್ಮಿಕರು ತತ್ತರಿಸಿದ್ದು, ಶೇಡ್ಗಳಿಂದ ನೀರು ಹೊರಹಾಕಲು ಹರಸಾಹಸ ಪಡುವಂತ್ತಾಗಿದೆ.
ಗ್ರಾಮಗಳಿಗೆ ಹಾಗೂ ಜಮೀನಿಗೆ ನುಗ್ಗಿದ ನೀರು
ಚಾಮರಾಜನಗರ: ಚಾಮರಾಜನಗರದಲ್ಲಿಯೂ ಮಳೆ ಆರ್ಭಟ ಮುಂದುವರೆದಿದ್ದು, ಜಿಲ್ಲೆಯ ಹಲವೆಡೆ ರಾತ್ರಿ ಭಾರಿ ಮಳೆಯಾಗಿದೆ. ಮತ್ತೆ ಗ್ರಾಮಗಳಿಗೆ ಹಾಗೂ ಜಮೀನಿಗೆ ನೀರು ನುಗ್ಗಿದೆ. ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ನಾಗವಳ್ಳಿ ಸೇರಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಅದೇ ರೀತಿಯಾಗಿ ರಾಮನಗರ ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಮುಂದುವರೆದಿದ್ದು, ಹಳ್ಳದ ನೀರು ನುಗ್ಗಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ತೆಂಗು, ಬಾಳೆ, ಹಿಪ್ಪುನೇರಳೆ, ಬೇಬಿಕಾರ್ನ್, ತರಕಾರಿ ಹಾನಿಯಾಗಿದ್ದು, ಗ್ರಾಮದ ಕೆಲ ಮನೆಗಳಿಗೂ ಹಳ್ಳದ ನೀರು ನುಗ್ಗಿ ಅವಾಂತರ ಉಂಟಾಗಿದೆ.
50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ತುಮಕೂರು: ಜಲ್ಲೆಯಲ್ಲಿ ರಾತ್ರಿ ಪೂರ್ತಿ ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಜಿಲ್ಲೆಯ ಗುಬ್ಬಿ ತಾಲೂಕಿನ, ಚೇಳೂರು ಬಳಿಯ ಸಿ.ಅರಿವೇಸಂದ್ರ ಗ್ರಾಮದಲ್ಲಿ ಘಟನೆ ಕಂಡುಬಂದಿದೆ. ಸುಮಾರು 7 ಮನೆಗಳಿಗೆ ಹಾನಿಯಾಗಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಮಳೆನೀರು ಮನೆಗಳಿಗೆ ನುಗ್ಗೋಕೆ ಕಾರಣ ಎನ್ನಲಾಗಿದೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:03 am, Mon, 5 September 22