ಮೈಸೂರಿಗೆ ಇಂದು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ಕೊಡಗಿನಲ್ಲಿ 2 ದಿನ ವಿಶ್ರಾಂತಿ
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಸದ್ಯ ಮೈಸೂರಿಗೆ ತಲುಪಿದ್ದು ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರು ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo Yatra) ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಇಂದು ಮಧ್ಯಾಹ್ನದ ವೇಳೆಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ(Priyanka Gandhi) ಮೈಸೂರಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ವಿಶೇಷ ವಿಮಾನದ ಮೂಲಕ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸೋನಿಯಾ ಆಗಮಿಸಲಿದ್ದಾರೆ.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಸದ್ಯ ಮೈಸೂರಿಗೆ ತಲುಪಿದ್ದು ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಯಾತ್ರೆಯಲ್ಲಿ ಭಾಗಿಯಾಗುವ ಮುನ್ನ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳುವ ಸಾಧ್ಯತೆ ಇದೆ. ನಂತರ ಮತ್ತೆ ಹೆಲಿಕಾಫ್ಟರ್ ಮೂಲಕ ಕೊಡಗಿಗೆ ತೆರಳಲಿದ್ದಾರೆ. ಕೊಡಗಿನಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಸಂಜೆ ವೇಳೆಗೆ ರಾಹುಲ್ ಗಾಂಧಿ ಕೂಡ ಕೊಡಗಿಗೆ ಹೋಗಿ ಕುಟುಂಬದ ಜೊತೆ ಎರಡು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಅಕ್ಟೋಬರ್ 4 ಹಾಗೂ 5ರಂದು ಪಾದಯಾತ್ರೆಗೆ ವಿರಾಮ ಇರಲಿದೆ. ಬಳಿಕ ಅಕ್ಟೋಬರ್ 6 ರಂದು ಮಂಡ್ಯ ಜಿಲ್ಲೆಯ ಮಹದೇಶ್ವರಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದೆ. ಈ ರಾಲಿಯಲ್ಲಿ ರಾಹುಲ್, ಸೋನಿಯಾ ಭಾಗಿಯಾಗಲಿದ್ದಾರೆ. ಅಕ್ಟೋಬರ್ 7 ರಂದು ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು ಸಹೋದರ ರಾಹುಲ್ ಜೊತೆಗೆ ನಾಗಮಂಗಲದಲ್ಲಿ ಹೆಜ್ಜೆ ಹಾಕಲಿದ್ದಾರೆ. ಆದಿ ಚುಂಚನಗಿರಿ ಮಠಕ್ಕೂ ಪ್ರಿಯಾಂಕಾ ಗಾಂಧಿ ಭೇಟಿ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಂಗ್ರೆಸ್ನ ಭಾರತ್ ಜೋಡೋ 4ನೇ ದಿನದ ಪಾದಯಾತ್ರೆ ವೇಳೆ ಮಸೀದಿ ಚರ್ಚ್ಗೆ ಭೇಟಿ ನೀಡಿದ ರಾಹುಲ್ ಗಾಂಧಿ
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿಯ ಉಸ್ತುವಾರಿಯನ್ನು ಎಎಸ್ ಪೊನ್ನಣ್ಣ ವಹಿಸಿಕೊಂಡಿದ್ದಾರೆ. ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದಲ್ಲಿರುವ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ ನಲ್ಲಿ ಸೋನಿಯಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಇದು ಮಾಜಿ ಸಚಿವ ಟಿ ಜಾನ್ ಪುತ್ರ ಪೌಲ್ ಜಾನ್ ಒಡೆತನದ ರೆಸಾರ್ಟ್ ಆಗಿದ್ದು ರೆಸಾರ್ಟ್ ಗೆ CRPF ಪಡೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:52 am, Mon, 3 October 22