ಅವಸಾನದ ಅಂಚಿನಲ್ಲಿ ಗದಗದ ಐತಿಹಾಸಿಕ ಜೈನ ಬಸದಿ; ಜೀರ್ಣೋದ್ಧಾರಕ್ಕಾಗಿ ಸ್ಥಳೀಯರಿಂದ ಒತ್ತಾಯ

ಅವಸಾನದ ಅಂಚಿನಲ್ಲಿ ಗದಗದ ಐತಿಹಾಸಿಕ ಜೈನ ಬಸದಿ; ಜೀರ್ಣೋದ್ಧಾರಕ್ಕಾಗಿ ಸ್ಥಳೀಯರಿಂದ ಒತ್ತಾಯ
ಗದಗದ ಜೈನ ಬಸದಿ

2017ರಲ್ಲಿ ಗದಗ ಜಿಲ್ಲಾಧಿಕಾರಿಯಾಗಿದ್ದ ಮನೋಜ್ ಜೈನ್ ಅವರು, ಈ ಬಸದಿಗೆ ಭೇಟಿ ನೀಡಿ ಪರಿಶೀಲಿಸಿ ಇದರ ಜೀರ್ಣೋದ್ಧಾರ ಕೈಗೊಳ್ಳುವಂತೆ ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಇದುವರೆಗೂ ಈ ಬಸದಿಗೆ ಅಭಿವೃದ್ಧಿ ಭಾಗ್ಯ ಕೂಡಿ ಬಂದಿಲ್ಲ.

preethi shettigar

| Edited By: sandhya thejappa

Apr 18, 2021 | 10:31 AM


ಗದಗ: ಜಿಲ್ಲೆಯ ಮುಳಗುಂದ ಪಟ್ಟಣ ಪ್ರಾಚೀನ ಕಾಲದಿಂದಲೂ ಜೈನ ಮುನಿಗಳ ವಾಸಸ್ಥಾನವಾಗಿತ್ತು. ದ್ಯಾಂಪರ ಚನ್ನಕವಿಗಳ ಮಹಾಂತೇಶ್ವರ ಪುರಾಣದಲ್ಲಿ ಮುಳಗುಂದವನ್ನು ಮುನಿವೃಂದ ಎಂದು ಕರೆದಿದ್ದಾರೆ. ಜೈನ ಮುನಿಗಳಿಂದಾಗಿಯೇ ಈ ಗ್ರಾಮಕ್ಕೆ ಮುಳಗುಂದ ಎಂಬ ಹೆಸರು ಬಂದಿದೆ ಎನ್ನುವ ಪ್ರತಿತಿ ಇದೆ. ಆದರೆ, ದುರ್ದೈವದ ಸಂಗತಿ ಎಂದರೆ ಇಂತಹ ಐತಿಹಾಸಿಕ ತಾಣದಲ್ಲಿರುವ ಪುರಾತನ ಜೈನ ಬಸದಿಗೆ ಈಗ ಜೀರ್ಣೋದ್ಧಾರ ಕೆಲಸ ಮರಿಚಿಕೆಯಾಗಿದೆ.

ಸಂಸ್ಕೃತ ಮಹಾಕವಿ ಮಲ್ಲೀಷೇಣನ ಕಾಲದಲ್ಲಿ ಜೈನರ ಪ್ರಮುಖ ತೀರ್ಥಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದ್ದ ಈ ತಾಣ ಈಗ ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದು ಮುಳ್ಳಿನ ಕೊಂಪೆಯಲ್ಲಿ ಮರೆಯಾಗಿದೆ. 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಹಾಗೂ ಕನ್ನಡದ ಕವಿ ನಯಸೇನನ ಹೆಜ್ಜೆ ಗುರುತುಗಳನ್ನು ಒಳಗೊಂಡ, ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿರುವ ಮುಳಗುಂದದ ಜೈನ ಬಸದಿ ಅವಸಾನದ ಅಂಚಿನಲ್ಲಿದೆ. ಇನ್ನು ಶಿಲೆಯಲ್ಲಿ ರಚಿತವಾದ ಬಾಹುಬಲಿ ವಿಗ್ರಹವನ್ನ ಕಿಡಿಗೆಡಿಗಳು ವಿರೂಪ ಮಾಡಿದ್ದಾರೆ. ಇದರ ತುರ್ತು ಸಂರಕ್ಷಣೆಗೆ ಮುಂದಾಗದಿದ್ದರೆ ಇಲ್ಲಿನ ಶಿಲಾ ಶಾಸನಗಳು, ಸ್ಮಾರಕಗಳು, ಕಾಲಗರ್ಭ ಸೇರುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರಾಚ್ಯಪ್ರಜ್ಞೆ ಇಲ್ಲದ ಜನರು ಈ ಬಸದಿಯನ್ನೇ ಸಾರ್ವಜನಿಕ ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಈ ಕಟ್ಟಡದ ಒಳಭಾಗದಲ್ಲೇ ಇಸ್ಪಿಟ್ ಆಡುವುದು, ಸರಾಯಿ ಕುಡಿಯುವುದು ಅವ್ಯಾಹತವಾಗಿ ನಡೆದಿದೆ. ಈ ಕಾರಣಕ್ಕಾಗಿಯೇ ಬಸದಿಗೆ ಸಂಬಂಧಿಸಿದ ಅನೇಕ ಶಿಲಾ ಶಾಸನಗಳು ಇಂದು ನಶಿಸಿ ಹೋಗುತ್ತಿವೆ. ಈ ಹಿಂದೆ ಮುಳಗುಂದದ ಜೈನ ಸಮುದಾಯದವರೇ ಈ ಬಸದಿಯನ್ನು ಜೀರ್ಣೋದ್ಧಾರ ಮಾಡಲು ಕೆಲಸ ಕೈಗೊಂಡಿದ್ದರು. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಂಡು, ತಕ್ಕಮಟ್ಟಿಗೆ ಸಂರಕ್ಷಣೆ ಮಾಡಿದ್ದರು. ಇದೀಗ ಮತ್ತೆ ಈ ಜೈನ ಬಸದಿ ಪಾಳು ಬಿದ್ದಿದೆ. ಜಿಲ್ಲಾಡಳಿತ ಈ ಬಸದಿಯ ಜೀಣೋದ್ಧಾರಕ್ಕೆ ಮುಂದಾದರೆ, ತಾಲ್ಲೂಕಿನ ಅಪರೂಪದ ತಾಣವೊಂದು ಉಳಿಯಲಿದೆ. ಪ್ರವಾಸೋದ್ಯ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಮಹತ್ವದ್ದು ಎಂದು ಸ್ಥಳೀಯರು ಹೇಳಿದ್ದಾರೆ.

jaina basadi

ಅವಸಾನದ ಹಂತದಲ್ಲಿರುವ ಬಸದಿ

2017ರಲ್ಲಿ ಗದಗ ಜಿಲ್ಲಾಧಿಕಾರಿಯಾಗಿದ್ದ ಮನೋಜ್ ಜೈನ್ ಅವರು, ಈ ಬಸದಿಗೆ ಭೇಟಿ ನೀಡಿ ಪರಿಶೀಲಿಸಿ ಇದರ ಜೀರ್ಣೋದ್ಧಾರ ಕೈಗೊಳ್ಳುವಂತೆ ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಇದುವರೆಗೂ ಈ ಬಸದಿಗೆ ಅಭಿವೃದ್ಧಿ ಭಾಗ್ಯ ಕೂಡಿ ಬಂದಿಲ್ಲ.

ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿರುವ ಮುಳಗುಂದ ಪಟ್ಟಣದ ಪುರಾತನ ಕಾಲದ ಜೈನ ಬಸದಿಯ ಜೀರ್ಣೋದ್ಧಾರ ಕೆಲಸ ಅಪೂರ್ಣವಾಗಿ ಸುಮಾರು ವರ್ಷಗಳೇ ಕಳೆದಿದ್ದು, ಮತ್ತೆ ಅವಸಾನದ ಅಂಚಿನಲ್ಲಿ ಬಂದು ನಿಂತಿದೆ. ಈಗ ಸಂರಕ್ಷಣೆ ಮಾಡದಿದ್ದರೆ ಇಲ್ಲಿನ ಶಿಲಾ ಶಾಸನಗಳು, ಸ್ಮಾರಕಗಳು, ಕಾಲಗರ್ಭ ಸೇರುವುದು ನಿಶ್ಚಿತ.

jaina basadi

ಬಸದಿ ಜಿರ್ಣೋದ್ಧಾರಕ್ಕಾಗಿ ಸ್ಥಳೀಯರ ಒತ್ತಾಯ

ಸರ್ಕಾರ ನಿರ್ಲಕ್ಷಧೋರಣೆ ತೊರೆದು ಬಸದಿಯ ಜೀರ್ಣೋದ್ಧಾರಕ್ಕೆ ಮುಂದಾದರೆ ಕರ್ನಾಟಕದ ಇತಿಹಾಸವನ್ನು ಮೆರೆಸಬಲ್ಲ ಕನ್ನಡದ ಪ್ರಥಮ ಗ್ರಂಥಕ್ಕೊಂದು ಬೆಲೆ ಸಿಗಬಹುದು. ಜತೆಗೆ ಇತಿಹಾಸಕಾರರ ಅಧ್ಯಯನಕ್ಕೊಂದು ಮಹತ್ವ ಬರುತ್ತದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಇಂತಹ ಮಹತ್ವದ ದೇವಾಲಯಗಳು ನಶಿಸಿ ಹೋಗುವ ಮೊದಲೇ ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಜೈನ ಸಮುದಾಯದ ಹಿರಿಯರಾದ ಎನ್ ಆರ್. ದೇಶಪಾಂಡೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 

ಅಕ್ರಮ ಗಣಿಗಾರಿಕೆ: ಕಲ್ಮಶಗೊಂಡಿದೆ ಬಳ್ಳಾರಿಯ ಐತಿಹಾಸಿಕ ಹರಿಶಂಕರ ತೀರ್ಥ

ನದಿಯಿಂದ ಮೇಲೆದ್ದು ಬಂದ ಚನ್ನಕೇಶವ; ಶತಮಾನಗಳಷ್ಟು ಹಳೆಯ ದೇಗುಲದ ಜೀರ್ಣೋದ್ಧಾರದ ವೇಳೆ ಮಹಾ ಅಚ್ಚರಿ

(natives insist government the revival of a Historic Jain Basadi in Gadag)

Follow us on

Related Stories

Most Read Stories

Click on your DTH Provider to Add TV9 Kannada