ಪವರ್ ಕಟ್ ನಡುವೆಯೂ ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ದಿನಕ್ಕೆ 2,000–3,000 ಮೆಗಾವ್ಯಾಟ್‌ಗಳಷ್ಟು ಹೆಚ್ಚಳ
ಕರ್ನಾಟಕದಲ್ಲಿ ಪ್ರತಿದಿನ ವಿದ್ಯುತ್ ಬೇಡಿಕೆ ಭಾರಿ ಏರಿಕೆಯಾಗುತ್ತಿದ್ದು, ಸೆಪ್ಟೆಂಬರ್ 11ರಂದು ಇದು ಸಾರ್ವಕಾಲಿಕ ದಾಖಲೆಯ 20,094 ಮೆಗಾವ್ಯಾಟ್ ತಲುಪಿದೆ. ಬೇಡಿಕೆ ಸರಿದೂಗಿಸಲು ಇಂಧನ ಇಲಾಖೆಯು ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ಕ್ರಮ ಕೈಗೊಳ್ಳುತ್ತಿರೋದಾಗಿ ಮಾಹಿತಿ ನೀಡಿದೆ. ಆದರೆ ಈ ನಡುವೆ ಹಲವೆಡೆ ವಿದ್ಯುತ್ ಕಡಿತ ಸಮಸ್ಯೆಯೂ ಆರಂಭವಾಗಿರೋದು ವರದಿಯಾಗಿದೆ.

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಪ್ರತಿದಿನ 2,000–3,000 ಮೆಗಾವ್ಯಾಟ್‌ಗಳಷ್ಟು ಏರಿಕೆಯಾಗುತ್ತಿದ್ದು, ಸೆಪ್ಟೆಂಬರ್ 11, 2026ರಂದು ರಾಜ್ಯದಲ್ಲಿ 20,094 ಮೆಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆ ದಾಖಲಾಗಿದೆ. ಇದಕ್ಕೂ ಮೊದಲು ಮಾರ್ಚ್ 13ರಂದು 18,655 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ದಾಖಲಾಗಿತ್ತು. ಸೆಪ್ಟೆಂಬರ್ 21ರಂದು ಬೆಳಗ್ಗೆ 11 ಗಂಟೆಗೆ ಗರಿಷ್ಠ ಬೇಡಿಕೆ 16,719 ಮೆಗಾವ್ಯಾಟ್‌ನಷ್ಟಿತ್ತು ಎನ್ನಲಾಗಿದೆ.
ರಾಜ್ಯದ ಎಲ್ಲೆಲ್ಲಿ ಬೇಡಿಕೆ ಹೆಚ್ಚಳ?
ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆ ದಾಖಲಾಗುತ್ತಿದೆ. ವಿದ್ಯುತ್ ಬೇಡಿಕೆ 3,000 ಮೆಗಾವ್ಯಾಟ್‌ನಷ್ಟು ಹೆಚ್ಚಾಗಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ. ಆದರೆ ಆತಂಕಪಡುವ ಅಗತ್ಯವಿಲ್ಲ, ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇತರ ರಾಜ್ಯಗಳಿಂದ ಅಲ್ಪಾವಧಿ ಹಾಗೂ ದೀರ್ಘಾವಧಿ ಆಧಾರದ ಮೇಲೆ ವಿದ್ಯುತ್ ಖರೀದಿಸುವ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ದೇಶಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ವಿಶೇಷವಾಗಿ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬೇಡಿಕೆ ಹೆಚ್ಚಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ, ಅದರಲ್ಲೂ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿ ಕಲ್ಲಿದ್ದಲು ಕೊರತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಉಚಿತ ವಿದ್ಯುತ್ ಪೂರೈಕೆ ನಡುವೆಯೂ 7 ವರ್ಷಗಳ ಬಳಿಕ ಲಾಭದ ಹಾದಿಗೆ ಬೆಸ್ಕಾಂ! ₹293.62 ಕೋಟಿ ವಾರ್ಷಿಕ ಲಾಭ
ವಿದ್ಯುತ್ ಕಡಿತ ಸಮಸ್ಯೆ
ಬೇಡಿಕೆ ಹೆಚ್ಚಿರುವ ನಡುವೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ರೈತರು ಹಾಗೂ ಗ್ರಾಹಕರು ವಿದ್ಯುತ್ ಕಡಿತದ ಬಗ್ಗೆ ದೂರು ನೀಡುತ್ತಿದ್ದರೆ, ಇಂಧನ ಇಲಾಖೆ ಅಧಿಕಾರಿಗಳು ನಿರ್ವಹಣಾ ಕಾಮಗಾರಿಗಳಿಗಾಗಿ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗರಿಷ್ಠ ತಾಪಮಾನ ಏರಿಕೆ ಹಾಗೂ ಮುಂಗಾರು ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಜಲಾಶಯಗಳಲ್ಲಿ ಸುಮಾರು ಶೇ.60ರಷ್ಟು ನೀರು ಮಾತ್ರ ಇರುವುದರಿಂದ ವಿದ್ಯುತ್ ಪೂರೈಕೆಯ ಹೊರೆ ಉಷ್ಣ ವಿದ್ಯುತ್ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರ ಮತ್ತು ಪವನ ವಿದ್ಯುತ್‌ಗಳ ಮೇಲೆ ಬಿದ್ದಿದೆ. ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದರೂ, ಅದನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಅಸಲಿ ಕಾರಣ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:12 pm, Tue, 22 September 26




