ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದಂತೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಅಳೆಯುವ ಪಲ್ಸ್ ಆಕ್ಸಿಮೀಟರ್ ಉಪಕರಣದ ಬೆಲೆ ಕೂಡಾ ಹೆಚ್ಚಾಗುತ್ತಿದೆ. ಕೊರೊನಾ ಎರಡನೇ ಅಲೆ ತೀವ್ರಗೊಳ್ಳುವುದಕ್ಕೂ ಮೊದಲು ಅಂದರೆ ಮಾರ್ಚ್ ಕೊನೆಯ ವಾರದವರೆಗೆ ಪಲ್ಸ್ ಆಕ್ಸಿಮೀಟರ್ ಉಪಕರಣಕ್ಕೆ ಅಷ್ಟೇನು ಬೇಡಿಕೆ ಇರಲಿಲ್ಲ. ಜೊತೆಗೆ ಜಿಲ್ಲೆಯ ಬಹುಪಾಲು ಔಷಧ ಮಾರಾಟ ಮಳಿಗೆಗಳಲ್ಲಿ ಸುಲಭವಾಗಿ ಪಲ್ಸ್ ಆಕ್ಸಿಮೀಟರ್ ಸಿಗುತ್ತಿತ್ತು. ಆದರೆ ಏಪ್ರಿಲ್ ಮೊದಲ ವಾರದಲ್ಲಿ ಕೊವಿಡ್ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿ, ಸೋಂಕಿತರಲ್ಲಿ ಉಸಿರಾಟದ ತೊಂದರೆ ಶುರುವಾಗಿದ್ದೇ ತಡ ಪಲ್ಸ್ ಆಕ್ಸಿಮೀಟರ್‌ಗೆ ಬೆಲೆ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.
ಇದಕ್ಕೆ ಕಾರಣ ಕೊರೊನಾ ಸೋಂಕಿತರಲ್ಲಿ ಉಸಿರಾಟ ಸಮಸ್ಯೆ ಸಾಮಾನ್ಯವಾಗಿದ್ದು, ಸೋಂಕಿತರು ರಕ್ತದಲ್ಲಿನ ಆಮ್ಲಜನಕ ಪ್ರಮಾಣ ತಿಳಿಯುವ ಉದ್ದೇಶಕ್ಕೆ ಪಲ್ಸ್ ಆಕ್ಸಿಮೀಟರ್‌ನ ಮೊರೆ ಹೋಗುತ್ತಿದ್ದಾರೆ. ಪಲ್ಸ್ ಆಕ್ಸೀಮೀಟರ್ಗೆ ಯಾವಾಗ ಹೆಚ್ಚಿನ ಬೇಡಿಕೆ ಶುರುವಾಯ್ತೋ ಇದನ್ನೇ ಲಾಭವಾಗಿ ಮಾಡಿಕೊಂಡಿರುವ ಮೆಡಿಕಲ್ ಸ್ಟೋರ್ ಮಾಲೀಕರು, ಹಣ ಸಂಪಾದನೆಗಾಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು ಪಲ್ಸ್ ಆಕ್ಸಿಮೀಟರ್‌ನ ಬೆಲೆ ಹೆಚ್ಚಿಸಿಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಪಲ್ಸ್ ಆಕ್ಸಿಮೀಟರ್ ಉಪಕರಣಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಿರುವ ಆರೋಪ ಕೂಡ ಕೇಳಿಬಂದಿದೆ.
ಕೋಲಾರ ಜಿಲ್ಲೆಯ ಕೊವಿಡ್ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದ್ದು, ಎಲ್ಲೆಡೆ ಬೆಡ್ ಮತ್ತು ಆಕ್ಸಿಜನ್ ಹಾಹಾಕಾರ ಶುರುವಾಗಿದೆ. ಬೆಡ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಬೇಸತ್ತಿರುವ ಸೋಂಕಿತರು ತಮ್ಮ ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಶೇಕಡಾ 70ರಷ್ಟು ಸೋಂಕಿತರು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಹವರು ವೈದ್ಯರ ಸಲಹೆ ಮೇರೆಗೆ ಪಲ್ಸ್ ಆಕ್ಸೀಮೀಟರ್ ಖರೀದಿಗೆ ಹೋಗಿದ್ದೇ ಬೆಲೆ ಹೆಚ್ಚಳಕ್ಕೆ ಮೂಲವಾಗಿದೆ.
ಕೊರೊನಾ ಸೋಂಕಿತರ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಪ್ರತಿನಿತ್ಯ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಹೆದರಿದ ಜನರು ತಮ್ಮ ರಕ್ತದಲ್ಲಿನ ಆಮ್ಲಜನಕ ಮತ್ತು ಹೃದಯ ಬಡಿತದ ಪ್ರಮಾಣ ತಿಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೊವಿಡ್-19 ರ ಮೊದಲ ಅಲೆಯಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗೆ ಯಾವ ರೀತಿ ಬೇಡಿಕೆ ಹೆಚ್ಚಿ ಕೃತಕ ಅಭಾವ ಸೃಷ್ಟಿಯಾಗಿ ಬೆಲೆ ಏರಿಕೆಯಾಗಿತ್ತು. ಅದೇ ರೀತಿ ಈಗ ಕೋವಿಡ್ 2ನೇ ಅಲೆಯಲ್ಲಿ ಪಲ್ಸ್ ಆಕ್ಸಿಮೀಟರ್‌ಗೆ ಬೇಡಿಕೆ ಹೆಚ್ಚಿದ್ದು, ಹಣ ಕೊಟ್ಟರೂ ಔಷಧ ಮಾರಾಟ ಮಳಿಗೆಗಳಲ್ಲಿ ಈ ಉಪಕರಣ ಸಿಗುತ್ತಿಲ್ಲ.
ಮಾರ್ಚ್ ಮೊದಲು ಇದ್ದ ಬೆಲೆ ಎಷ್ಟು..? ಈಗಿನ ಬೆಲೆ ಎಷ್ಟು..? ಮಾರ್ಚ್ ತಿಂಗಳ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದವರೆಗೆ ಈ ಪಲ್ಸ್ ಆಕ್ಸಿಮೀಟರ್ ಬೆಲೆ ₹ 600 ರಿಂದ ಗರಿಷ್ಠ ₹ 1,500 ರವರೆಗೆ ಇತ್ತು. ಆದರೆ, ಏಪ್ರಿಲ್ ಮೊದಲ ವಾರದಿಂದೀಚೆಗೆ ಈ ಉಪಕರಣದ ಬೆಲೆ ₹ 4 ಸಾವಿರದ ಗಡಿ ದಾಟಿದೆ.
ಪಲ್ಸ್ ಆಕ್ಸಿಮೀಟರ್ ಏಕೆ ಬೇಕು..? ವೈದ್ಯರುಗಳು ಹೇಳುವಂತೆ ಕೊರೊನಾ 2ನೇ ಅಲೆಯಲ್ಲಿ ಹೆಚ್ಚಿನ ಸೋಂಕಿತರು ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೃತಪಡುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಮನುಷ್ಯನ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 95ರಿಂದ -100ರಷ್ಟಿರಬೇಕು. ಕೊರೊನಾ ಸೋಂಕಿತರ ಪೈಕಿ ಹೆಚ್ಚಿನ ಜನರಲ್ಲಿ ಈ ಪ್ರಮಾಣ ಶೇ 40ರವರೆಗೆ ಇಳಿಕೆಯಾಗುತ್ತಿದೆ. ಆಮ್ಲಜನಕ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಸೋಂಕಿತರು ಶೀಘ್ರವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಅದಕ್ಕಾಗಿ ಪಲ್ಸ್ ಆಕ್ಸಿ ಮೀಟರ್ ಇದ್ದರೆ ಅನುಕೂಲ ಎಂದು ತಿಳಿಸಿದ್ದಾರೆ.
ಇನ್ನು ಪಲ್ಸ್ ಆಕ್ಸಿಮೀಟರ್ ಬದಲಿಗೆ ಸ್ಮಾರ್ಟ್ ಬ್ಯಾಂಡ್‌ಗಳನ್ನು ಕೂಡಾ ಬಳಸಿಕೊಳ್ಳಬಹುದು. ಆಕ್ಸಿಮೀಟರ್ ಬೆಲೆಗೆ ಹೋಲಿಸಿದರೆ ಸ್ಮಾರ್ಟ್ ಬ್ಯಾಂಡ್‌ಗಳ ದರ ಕಡಿಮೆಯಿದೆ ಅದನ್ನು ತೆಗೆದುಕೊಂಡಲ್ಲಿ ಸ್ಮಾರ್ಟ್ ಬ್ಯಾಂಡ್‌ಗಳನ್ನು ಇತರೆ ಕೆಲಸಕ್ಕೂ ಬಳಕೆ ಮಾಡಬಹುದು ಎಂಬುದು ವೈದ್ಯರ ಅಭಿಪ್ರಾಯ. ಮೊದಲೆಲ್ಲಾ ಕೇವಲ ಆಸ್ಪತ್ರೆಯ ಅಥವಾ ಕ್ಲಿನಿಕ್ ನವರು, ಅಥವಾ ಸ್ವಲ್ಪ ಶ್ರೀಮಂತರು ಮಾತ್ರ ಪಲ್ಸ್ ಆಕ್ಸೀ ಮೀಟರ್ ಖರೀದಿ ಮಾಡುತ್ತಿದ್ದರು. ಈಗ ಕೊರೊನಾ ಬಂದಿರುವ ಎಲ್ಲರೂ ಕೇಳುತ್ತಿದ್ದಾರೆ, ಹಾಗಾಗಿ ಅದರ ಬೇಡಿಕೆ ಹೆಚ್ಚಾಗಿ, ಸ್ಟಾಕ್ ಇರುವ ಕೆಲವು ಮೆಡಿಕಲ್ ಅಂಗಡಿಯವರು ಬ್ಲಾಕ್ನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈಗ ಅದು ಸಹಜ ಸ್ಥಿತಿಗೆ ಬರುತ್ತಿದೆ ಎಂದು ಮೆಡಿಕಲ್ ಸ್ಟೋರ್ನ ಮಾಲೀಕರಾದ ಮಹೇಶ್ ಹೇಳಿದ್ದಾರೆ.
ಇದನ್ನೂ ಓದಿ:
ಯಾವುದೇ ರೋಗ ಲಕ್ಷಣಗಳಿಲ್ಲದೆ, ಸುಳಿವೂ ನೀಡದೆ ಯುವಕರನ್ನು ಬಲಿ ಪಡೆಯುತ್ತಿದೆ ಕೊರೊನಾ; ಏನಿದು ಹ್ಯಾಪಿ ಹೈಪೋಕ್ಸಿಯಾ?