AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯ ರಾಯರ ಹೆಸರಿನಲ್ಲಿ ಆನ್‌ಲೈನ್ ವಂಚನೆ! ಭಕ್ತರಿಗೆ ಮಂತ್ರಾಲಯ ಶ್ರೀಗಳ ಎಚ್ಚರಿಕೆ ಸಂದೇಶ

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ರೂಂ ಬುಕ್ಕಿಂಗ್, ಪರಿಮಳ ಪ್ರಸಾದ ಹಾಗೂ ದೇಣಿಗೆ ಸಂಗ್ರಹದ ನೆಪದಲ್ಲಿ ಆನ್‌ಲೈನ್ ವಂಚನೆ ನಡೆಯುತ್ತಿರುವ ಬಗ್ಗೆ ಭಕ್ತರಿಗೆ ಶ್ರೀ ಸುಬುಧೇಂದ್ರ ತೀರ್ಥರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಖಾಸಗಿ ವೆಬ್‌ಸೈಟ್‌ಗಳು ಮತ್ತು ವ್ಯಕ್ತಿಗಳನ್ನು ನಂಬದಂತೆ ಹಾಗೂ ಮಠದ ಅಧಿಕೃತ ತಾಣಗಳ ಮೂಲಕವೇ ವ್ಯವಹರಿಸುವಂತೆ ಅವರು ಸೂಚಿಸಿದ್ದಾರೆ.

ಮಂತ್ರಾಲಯ ರಾಯರ ಹೆಸರಿನಲ್ಲಿ ಆನ್‌ಲೈನ್ ವಂಚನೆ! ಭಕ್ತರಿಗೆ ಮಂತ್ರಾಲಯ ಶ್ರೀಗಳ ಎಚ್ಚರಿಕೆ ಸಂದೇಶ
ಮಂತ್ರಾಲಯ ರಾಯರ ಹೆಸರಿನಲ್ಲಿ ಆನ್‌ಲೈನ್ ವಂಚನೆ! ಭಕ್ತರಿಗೆ ಮಂತ್ರಾಲಯ ಶ್ರೀಗಳ ಎಚ್ಚರಿಕೆ ಸಂದೇಶImage Credit source: tv9
ಭೀಮೇಶ್​​ ಪೂಜಾರ್
| Edited By: |

Updated on: Sep 07, 2026 | 9:59 AM

Share

ಮುಖ್ಯಾಂಶಗಳು

  • ಮಂತ್ರಾಲಯ ರಾಯರ ಭಕ್ತರೇ ಎಚ್ಚರ
  • ಮಠದ ಹೆಸರಿನಲ್ಲಿ ನಡೆಯುತ್ತಿದೆ ಆನ್​ಲೈನ್ ವಂಚನೆ
  • ಶ್ರೀ ಸುಬುಧೇಂದ್ರ ತೀರ್ಥರಿಂದ ಎಚ್ಚರಿಕೆ ಸಂದೇಶ

ರಾಯಚೂರು, ಸೆಪ್ಟೆಂಬರ್ 7: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹೆಸರಿನಲ್ಲಿ ಆನ್‌ಲೈನ್ ವಂಚನೆ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಭಕ್ತರು ಎಚ್ಚರಿಕೆಯಿಂದ ಇರಬೇಕೆಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಆರಾಧನಾ ಮಹೋತ್ಸವ, ಗುರು ವೈಭವೋತ್ಸವ ಸೇರಿದಂತೆ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲೂ ರಾಯರ ಭಕ್ತರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ರೂಂ ಬುಕ್ಕಿಂಗ್, ಆನ್‌ಲೈನ್‌ನಲ್ಲಿ ಪರಿಮಳ ಪ್ರಸಾದ ಒದಗಿಸುವುದು ಹಾಗೂ ದೇಣಿಗೆ ಸಂಗ್ರಹದ ಹೆಸರಿನಲ್ಲಿ ವಂಚನೆ ನಡೆಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದ ಕಾರಣ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ.

ದೇಣಿಗೆ ಕೇಳುವಂತಹ ಯಾವುದೇ ವ್ಯವಸ್ಥೆ ಇಲ್ಲ: ಶ್ರೀಗಳ ಸ್ಪಷ್ಟನೆ

ಮಂತ್ರಾಲಯ ಮಠದ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವೆಬ್‌ಸೈಟ್‌ಗಳು, ವಾಟ್ಸ್‌ಆಪ್‌ ಖಾತೆಗಳು ಹಾಗೂ ಖಾಸಗಿ ವ್ಯಕ್ತಿಗಳ ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ಶ್ರೀ ಸುಬುಧೇಂದ್ರ ತೀರ್ಥರು ಸೂಚಿಸಿದ್ದಾರೆ. ಮಠದ ಹೆಸರಿನಲ್ಲಿ ಹಣ ಸಂಗ್ರಹಿಸಲು ಯಾರಿಗೂ ಅನುಮತಿ ನೀಡಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ದೇಣಿಗೆ ಕೇಳುವಂತಹ ಯಾವುದೇ ವ್ಯವಸ್ಥೆ ಶ್ರೀಮಠದಿಂದ ಇಲ್ಲ ಎಂದು ತಿಳಿಸಿದ್ದಾರೆ.

ಪರಿಮಳ ಪ್ರಸಾದ ಸೇವೆ ಆನ್​ಲೈನ್​ನಲ್ಲಿ ಸಿಗುತ್ತದೆಯಾ?

ಪರಿಮಳ ಪ್ರಸಾದವನ್ನು ಆನ್‌ಲೈನ್ ಮೂಲಕ ಒದಗಿಸುವ ಯಾವುದೇ ಅಧಿಕೃತ ಸೇವೆ ಮಠದಿಂದ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇಂತಹ ಸೇವೆಗಳ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ಭಕ್ತರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. ಅದೇ ರೀತಿ ಮಠದಲ್ಲಿ ರೂಂ ಬುಕ್ಕಿಂಗ್ ಅಥವಾ ಇತರ ಸೇವೆಗಳ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಹಣ ಕೇಳಿದರೆ ಪರಿಶೀಲನೆ ನಡೆಸದೆ ಹಣ ಪಾವತಿಸಬಾರದು ಎಂದು ಎಚ್ಚರಿಸಲಾಗಿದೆ.

ಸೇವೆಗಾಗಿ ಮಠದ ಕಾರ್ಯಾಲಯ ಸಂಪರ್ಕಿಸಿ

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಸಂಬಂಧಿಸಿದ ಯಾವುದೇ ಸೇವೆ ಅಥವಾ ಮಾಹಿತಿ ಅಗತ್ಯವಿದ್ದರೆ ಭಕ್ತರು ನೇರವಾಗಿ ಮಠದ ಕಾರ್ಯಾಲಯ ಅಥವಾ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿಯನ್ನು ಸಂಪರ್ಕಿಸುವಂತೆ ಶ್ರೀ ಸುಬುಧೇಂದ್ರ ತೀರ್ಥರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಯರ 355ನೇ ಉತ್ತರಾಧನೆ: ಈ ಬಾರಿ ಸುಬುಧೇಂದ್ರ ತೀರ್ಥರ ಅನುಗೃಹ ಸಂದೇಶದಲ್ಲೇನಿದೆ?

ದೇಣಿಗೆ ನೀಡುವವರು ಹಾಗೂ ವಿವಿಧ ಸೇವೆಗಳನ್ನು ಪಡೆಯಲು ಮುಂದಾಗುವ ಭಕ್ತರು ಖಾಸಗಿ ವ್ಯಕ್ತಿಗಳು ಅಥವಾ ಅನಧಿಕೃತ ಆನ್‌ಲೈನ್ ವೇದಿಕೆಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು. ಯಾವುದೇ ಅನುಮಾನವಿದ್ದರೂ ಮೊದಲು ಮಠದ ಅಧಿಕೃತ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us