ರಾಯಚೂರು: ಅಂಧರ ಬಾಳಿಗೆ ಬೆಳಕಾದ 14 ತಿಂಗಳ ಮಗು, ಬಸವಪ್ರಭುವಿನ ನೇತ್ರದಾನ ಮಾಡಿದ ತಾಯಿ-ತಂದೆ
ಅಪ್ಪು ನಿಧನದ ಮರುದಿನ ಜನಿಸಿದ, ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 14 ತಿಂಗಳ ನಿಧನವಾಗಿದೆ.
ರಾಯಚೂರು: ಹುಟ್ಟು ಉಚಿತ ಸಾವು ಖಚಿತ ಅನ್ನೊ ಮಾತಿದೆ. ಅದು ಸತ್ಯ ಕೂಡ. ಮನುಷ್ಯನು ಬದುಕಿದ್ದಾಗ ಇನ್ನೊಬ್ಬರ ಒಳಿತಾಗಿ ಬದುಕುವುದು ನಿಸ್ವಾರ್ಥಕ ಬದುಕು. ಸತ್ತಾಗ ಇನ್ನೊಬ್ಬರಿಗೆ ಬಾಳಿಗೆ ಬೆಳಕಾದರೆ ಅದು ಮಾನವೀಯತೆ ಬದುಕು. ಇದಕ್ಕೆ ರಾಯಚೂರು ಜಿಲ್ಲೆಯ 14 ತಿಂಗಳ ಮಗು ಸಾಕ್ಷಿಯಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿಚಿನ್ನದಗಣಿ ಸಮೀಪದ ಗೆಜ್ಜಲಗಟ್ಟಾ ಗ್ರಾಮದ ಕುಟುಂಬವೊಂದು ತಮ್ಮ 14 ತಿಂಗಳ ಮಗುವಿನ ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿ ಮಾನವೀಯತೆ ಮೆರೆದಿದ್ದಾರೆ. ಗೆಜ್ಜಲಗಟ್ಟಾ ಗ್ರಾಮದ ಅಮರೇಗೌಡ ಎನ್ನುವರು ಹಟ್ಟಿ ಚಿನ್ನದಗಣಿಯಲ್ಲಿ ಕಾರ್ಯವನಿರ್ಹವಹಿಸುತ್ತಿದ್ದಾರೆ. ಇವರು 2016 ರಲ್ಲಿ ಕರಡಕಲ್ ಗ್ರಾಮದ ತಮ್ಮ ಸಂಬಂಧಿಯಾಗಿದ್ದ ವಾಣಿ ಅನ್ನೋರನ್ನ ಮದುವೆಯಾಗಿದ್ದರು. ಇವರಿಗೆ ಜನಿಸಿದ ಮೊದಲು ಗಂಡು ಮಗು ಕಾಯಿಲೆಯೊಂದಕ್ಕೆ ತುತ್ತಾಗಿ 9 ದಿನಗಳಲ್ಲಿ ತೀರಿ ಹೋಗಿತ್ತು. ನಂತರ ಹೆಣ್ಣು ಮಗು ಜನಿಸಿದೆ ಈ ಮಗು ಈಗ 3 ವರ್ಷದ್ದಾಗಿದೆ.
ಅಮರೇಗೌಡ ಹಾಗೂ ವಾಣಿ ದಂಪತಿಗೆ ಮೂರನೇ ಮಗು ಜನಿಸಿದೆ. ಮಗುವಿಗೆ ಬಸವಪ್ರಭು ಎಂದು ನಾಮಕರಣ ಮಾಡಲಾಗಿದೆ. ಮುದ್ದಾದ ಮಗುವಿನ ಬಾಳಲ್ಲಿ ವಿಧಿ ಆಟವಾಡಿದೆ. ಅದು ಮಗುವಿಗೆ ಹುಟ್ಟುತ್ತಲೇ ಒಂದು ಕಾಯಿಲೆ ಕಾಣಿಸಿಕೊಂಡಿದೆ. ಈ ಮಗುವಿಗೆ ಬೆಂಗಳೂರು, ಬೆಳಗಾವಿ ಸೇರಿದಂತೆ ಬೇರೆ ಬೇರೆ ನಗರ ಪಟ್ಟಣಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆ ಮಗುವಿಗೆ ಇರುವ ರೋಗದ ಬಗ್ಗೆ ವೈದ್ಯರು ತಿಳಿಸಿದಾಗ ಕುಟುಂಬದವರು ಬೆರಗಾಗಿದ್ದಾರೆ.
ಈ ಮಗುವಿಗೆ ಇರುವದು ಅನುವಂಶೀಕ ರೋಗವಂತೆ. ಅಂದರೆ ಯಾರು ಸಂಬಂಧಿಕರದಲ್ಲಿ ಮದುವೆಯಾಗುತ್ತಾರೋ ಅಂಥವರಲ್ಲಿ ಕಾಣುವ ರೋಗವಿದು. ವಂಶಪರಂಪರೆಯಿಂದ ಬರುವ ರೋಗವಾಗಿದೆ. 6 ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಇಂತಹ ವಿಚಿತ್ರ ಕಾಯಿಲೆ ಬರುತ್ತದೆ. ಅದು ವಿಶೇಷವಾಗಿ ಗಂಡು ಮಕ್ಕಳಿಗೆ ಮಾತ್ರ ಬರುತ್ತದೆ. ಈ ಕಾಯಿಲೆಯನ್ನು ವಾಸಿ ಮಾಡಲು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆಂದು ಮಗುವಿನ ತಂದೆ ಹೇಳಿದ್ದಾರೆ.
ಪುನಿತ್ ರಾಜಕುಮಾರ್ ಹಾಡು ಕೇಳಿಸಿದರೆ ಸುಮ್ಮನಾಗುವ ಮಗು
ವಿಚಿತ್ರವೆಂದರೆ ಪುನೀತ್ ರಾಜಕುಮಾರ ನಿಧನದ ನಂತರ ನವೆಂಬರ್ 6 ರಂದು ಜನಿಸಿದ ಈ ಮಗು ಪುನೀತ್ (ಅಪ್ಪು) ಸಿನಿಮಾದ ಹಾಡುಗಳನ್ನು ಕೇಳಿಸಿದರೆ ಸುಮ್ಮನಾಗುತ್ತಿತ್ತಂತೆ. ಇಲ್ಲದಿದ್ದರೆ ಆ ಮಗು ಖಾಯಿಲೆಯ ಭೀಕರತೆಗೆ ಹಗಲು-ರಾತ್ರಿ ನಿದ್ದೆ ಇಲ್ಲದೆ ಅಳುತ್ತಿತ್ತಂತೆ. ಹೀಗಾಗಿ ಅಪ್ಪುವಿನ ಹಾಡನ್ನು ಮಗುವಿಗೆ ಕೇಳಿಸುತ್ತಿದ್ದರು.
ಇನ್ನು ತಮ್ಮ ಮಗು ಉಳಿಯಲ್ಲ ಅಂತ ವೈದ್ಯರೇ ಖಚಿತಪಡಿಸಿದ ಮೇಲೆ ಆ ಕುಟುಂಬದವರು ನಮ್ಮ ಮಗು ಇನ್ನೂ ಬದುಕಲು ಸಾದ್ಯವಿಲ್ಲ ಅಂತ ಸುಮ್ಮನಾಗಿದ್ದರು. ಆದರೆ ನಮ್ಮ ಮಗುವಿನ ಕಣ್ಣಾದರೂ (ನೇತ್ರಗಳು) ಅಂಧರ ಬಾಳಿಗೆ ಬೆಳಕಾಗಲಿ ಎಂದು ನಿರ್ಧರಿಸಿದ್ದರು. ಮಗು ಅಸುನೀಗಿದ ಬಳಿಕ ಮಗುವಿನ ಸಾವಿನ ನೋವಿನಲ್ಲೂ ಅಮರೇಗೌಡ ಹಾಗೂ ವಾಣಿ, ಮಗುವಿನ ದಂಪತಿ ನೇತ್ರದಾನ ಮಾಡಿದ್ದಾರೆ. ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮುಂದಿನ ದಿನಗಳಲ್ಲಿ ನಮ್ಮ ಕುಟುಂಬ ಸದಸ್ಯರೆಲ್ಲರೂ ದೇಹದಾನ ಮಾಡಲು ನಿರ್ಧರಿಸಿದ್ದೇವೆಂದು ಮಗುವಿನ ತಂದೆ ಅಮರೇಗೌಡ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ