ರಾಯಚೂರಿನಲ್ಲಿ ನಾಪತ್ತೆಯಾಗಿ ಬೆಂಗಳೂರಿನಲ್ಲಿ ಶವವಾಗಿ ಪತ್ತೆ; ಎಫ್‌ಡಿಎ ಸಾವಿಗೆ ಸಿಕ್ತು ಟ್ವಿಸ್ಟ್
ಮೃತ ಪ್ರಕಾಶ್ ಎಸಿ ಸಂತೋಷಕುಮಾರ್ ಸಹಿಯನ್ನು ಪೋರ್ಜರಿ ಮಾಡಿ ಹಣವನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದ ಎಂಬುವುದು ಬಯಲಾಗಿದೆ. ಎಸಿ ಸಹಿ ಇಲ್ಲದೇ ಹಣ ವರ್ಗಾಯಿಸುವುದು ಅಸಾಧ್ಯ. ಹೀಗಾಗಿ ಸಹಿ ಪೋರ್ಜರಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಾಯಚೂರು: ನಗರದಲ್ಲಿರುವ ಕಂದಾಯ ಉಪ ವಿಭಾಗಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡ್ತಿದ್ದ ಪ್ರಕಾಶ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಬಳಿಕ ಈ ಪ್ರಕಾಶ್ ರಾಜಧಾನಿ ಬೆಂಗಳೂರಿನ ಗಾಂಧಿನಗರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದ. ಸದ್ಯ ಈ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ.
ಮೃತ ಪ್ರಕಾಶ್ ಎಸಿ ಸಂತೋಷಕುಮಾರ್ ಸಹಿಯನ್ನು ಪೋರ್ಜರಿ ಮಾಡಿ ಹಣವನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದ ಎಂಬುವುದು ಬಯಲಾಗಿದೆ. ಎಸಿ ಸಹಿ ಇಲ್ಲದೇ ಹಣ ವರ್ಗಾಯಿಸುವುದು ಅಸಾಧ್ಯ. ಹೀಗಾಗಿ ಸಹಿ ಪೋರ್ಜರಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಎಸಿ ಕಚೇರಿಯಲ್ಲಿ ಅಕೌಂಟೆಂಟ್ ಹುದ್ದೆ ಇಲ್ಲ. ಹೀಗಾಗಿ ಭೂಸ್ವಾಧೀನ ಪರಿಹಾರ ಸೇರಿ ಹಣಕಾಸಿನ ವ್ಯವಹಾರವನ್ನು ಪ್ರಕಾಶ ನೋಡಿಕೊಳ್ಳುತ್ತಿದ್ದ. ನಿರಂತರವಾಗಿ ಪ್ರಕಾಶ ಹಣ ದುರ್ಬಳಕೆ ಮಾಡಿಕೊಂಡ್ರು ಮೇಲಾಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ನಿರಂತರವಾಗಿ ನಕಲಿ ಸಹಿ ಮಾಡಿ ಹಣ ದೋಚಲು ಹೇಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇಷ್ಟೆಲ್ಲಾ ನಡೀತಿದ್ರು ಹಿರಿಯ ಅಧಿಕಾರಿಗಳು ಗಮನ ಹರಿಸದೆ ಇರಲು ಕಾರಣವೇನು? ಪ್ರಕಾಶ ಹಣ ದುರ್ಬಳಕೆ ಬಗ್ಗೆ ಶಂಕೆಯಾದ ಹಿನ್ನೆಲೆ ಆಡಿಟ್ಗೆ ಆದೇಶಿಸಲಾಗಿತ್ತು. ಆಡಿಟ್ ಎದುರಿಸಕಾಗದೇ ಪ್ರಕಾಶ ನಿಗೂಢ ಕಣ್ನರೆಯಾಗಿ ಆತ್ಮಹತ್ಯೆ ಮಾಡಿಕೊಂಡ್ರಾ ಎಂಬ ಅನುಮಾನ ಹುಟ್ಟಿದೆ. ಇನ್ನು ಪ್ರಕಾಶ ಅಕ್ರಮಕ್ಕೆ ಹಲವರು ಕೈ ಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕಾಶ ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಖಾತೆಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.
ಘಟನೆ ಮಾಹಿತಿ ಕಳೆದ ಆಗಸ್ಟ್ 23ರಂದು ಎಂದಿನಂತೆ ಬೆಳಗ್ಗೆ 9.30ಕ್ಕೆ ಕಚೇರಿಗೆ ಆಗಮಿಸಿದ್ದ ಪ್ರಕಾಶ್, ಕಚೇರಿಗೆ ಬಂದ ಅರ್ಧ ಗಂಟೆಯಲ್ಲೇ ವಾಪಸ್ ಹೋಗಿದ್ದ. ಆಮೇಲೆ ಪ್ರಕಾಶ್ ಬಗ್ಗೆ ಸುಳಿವೇ ಇರಲಿಲ್ಲ. ನಂತರ ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕಾಶ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿಯಲ್ಲಿ ಪ್ರಕಾಶ್ ಬಿಟ್ಟು ಹೋಗಿದ್ದ ಎಲ್ಲ ವಸ್ತು ಮತ್ತು ಆಫೀಸ್‌ನಲ್ಲೇ ಇದ್ದ ಬೈಕ್ ಜಪ್ತಿ ಮಾಡಿದ್ರು. ಆದ್ರೆ ಪೊಲೀಸರಿಗೆ ಪ್ರಕಾಶ್ ಎಲ್ಲಿದ್ದಾನೆ ಎಂಬುವುದು ಗೊತ್ತಾಗಿರಲ್ಲಿ. ಆದ್ರೆ ಬೆಂಗಳೂರಿಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎಲ್ಲರಿಗೂ ಬಿಗ್ ಶಾಕ್ ನೀಡಿದಂತಾಗಿತ್ತು.
ಪ್ರಕಾಶ್‌ಗೆ ಕಚೇರಿಯಲ್ಲಿ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಒತ್ತಡಗಳಿದ್ದವು ಎಂಬ ಮಾತು ಕೇಳಿ ಬರುತ್ತಿತ್ತು. ಅಲ್ಲದೇ ಜುರಾಲ ಯೋಜನೆಯ ಭೂಸ್ವಾಧೀನ ವಿಚಾರದಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಯುತ್ತಿತ್ತು. ಈ ವೇಳೆಯಲ್ಲಿ ಆಡಿಟ್ ಅಧಿಕಾರಿಗಳು ರಾಯಚೂರಿಗೆ ಆಗಮಿಸಿದ್ದರು. ಇದರಿಂದ ಭಯಗೊಂಡ ಪ್ರಕಾಶ್ ನಿಗೂಢವಾಗಿ ಕಣ್ಮರೆಯಾಗಿದ್ದನೆಂದು ಕಚೇರಿಯಲ್ಲಿ ಗುಸುಗುಸು ಚರ್ಚೆ ನಡೆದಿತ್ತು. ಆದ್ರೆ ಈಗ ಪ್ರಕಾಶ್ ಬೆಂಗಳೂರಿಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಒಟ್ನಲ್ಲಿ ರಾಯಚೂರು ಡಿಸಿ ಕಚೇರಿಯ ಪಕ್ಕದಲ್ಲೇ ಇರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಪ್ರಕಾಶ್ ನಿಗೂಢ ಆತ್ಮಹತ್ಯೆ ಕೇಸ್ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಪೊಲೀಸರು ತನಿಖೆ ನಂತರವೇ ಈ ಸಾವಿಗೆ ನಿಜವಾದ ಕಾರಣವೇನು ಅನ್ನೋ ಸತ್ಯ ಬಯಲಾಗಬೇಕಿದೆ.
ಇದನ್ನೂ ಓದಿ: ರಾಮನಗರ, ಮಾಗಡಿ ಕಡೆಗೆ ನಮ್ಮ ಮೆಟ್ರೋ; 4ನೇ ಹಂತದಲ್ಲಿ ಬಿಡದಿಗೂ ಸಿಗಲಿದೆ ಮೆಟ್ರೋ ರೈಲು ಸಂಚಾರ ಭಾಗ್ಯ