AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂವು ಬಿಡಿಸಲು ಜಮೀಮಿಗೆ ಹೋದ ರೈತನನ್ನು ಬಲಿ ಪಡೆದ ಚಿರತೆ

ಬೆಂಗಳೂರು ದಕ್ಷಿಣದ ಮಾಗಡಿ ತಾಲೂಕಿನ ಕಲ್ಲದೇವನಹಳ್ಳಿಯಲ್ಲಿ ಚಿರತೆ ದಾಳಿಗೆ ಓರ್ವ ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಮೀನು ಕೆಲಸಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಹಲವು ತಿಂಗಳಿಂದ ಚಿರತೆ ಉಪಟಳ ಹೆಚ್ಚಾಗಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಸದ್ಯ ಆಕ್ರೋಶಗೊಂಡಿರುವ ಗ್ರಾಮಸ್ಥರು ಚಿರತೆ ಸೆರೆಗೆ ಒತ್ತಾಯಿಸಿದ್ದಾರೆ.

ಹೂವು ಬಿಡಿಸಲು ಜಮೀಮಿಗೆ ಹೋದ ರೈತನನ್ನು ಬಲಿ ಪಡೆದ ಚಿರತೆ
ಮೃತ ರೈತ ಶಿವಸ್ವಾಮಿImage Credit source: tv9 kannada
ಪ್ರಶಾಂತ್​ ಬಿ.
| Edited By: |

Updated on:Oct 12, 2026 | 3:21 PM

Share

ಮುಖ್ಯಾಂಶಗಳು

  • ಮಾಗಡಿ ತಾಲೂಕಿನಲ್ಲಿ ಹೆಚ್ಚಾದ ಚಿರತೆ ಉಪಟಳ
  • ಬೆಂಗಳೂರು ದಕ್ಷಿಣ ‌ಜಿಲ್ಲೆ ಮಾಗಡಿ ತಾಲೂಕಿನ ಕಲ್ಲದೇವನಹಳ್ಳಿಯಲ್ಲಿ ಘಟನೆ
  • ಜಮೀನು ಕೆಲಸಕ್ಕೆ ತೆರಳಿದ್ದಾಗ ರೈತನ ಮೇಲೆ ದಾಳಿ, ಸಾವು

ರಾಮನಗರ, ಅಕ್ಟೋಬರ್​​ 12: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಚಿರತೆ ಉಪಟಳ ಹೆಚ್ಚಳವಾಗಿದೆ. ಇಂದು ಬೆಳ್ಳಂಬೆಳಗ್ಗೆ ಜಮೀನಿನಲ್ಲಿ ಹೂವು ಬಿಡಿಸುವುದಕ್ಕೆ ಅಂತಾ ರೈತ ಹೋಗಿದ್ದು, ಈ ವೇಳೆ ಅಲ್ಲೇ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿದೆ. ತೀವ್ರ ರಕ್ತಸ್ರಾವ ಹಿನ್ನೆಲೆ ರೈತ‌ ಸಾವನ್ನಪ್ಪಿದ್ದಾರೆ. ಶಿವಸ್ವಾಮಿ (62) ಮೃತ ರೈತ. ಚಿರತೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ ಗ್ರಾಮದಲ್ಲಿ ಶಿವಸ್ವಾಮಿ ಆರ್ಚಕನಾಗಿಯೋ ಕೆಲಸ‌ ಮಾಡುತ್ತಿದ್ದರು. ಇಂದು ಬೆಳ್ಳಂಬೆಳಗ್ಗೆ ತಮ್ಮ ಜಮೀನಿನಲ್ಲಿ ಕಾಕಾಡ ಹೂವು ಬಿಡಸಲು ಅಂತಾ ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಜಮೀನಿನಲ್ಲಿ ಅವಿತು ಕುಳಿತಿದ್ದ ಚಿರತೆ, ಶಿವಸ್ವಾಮಿ ಮೇಲೆ ಏಕಾಏಕಿ ದಾಳಿ‌ ಮಾಡಿದೆ. ಹೀಗಾಗಿ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ತೀವ್ರ ರಕ್ತಸ್ರಾವದಿಂದ ಜಮೀನಿನಲ್ಲೇ ಸಾವನ್ನಪ್ಪಿದ್ದಾರೆ.

ಹಲವು ತಿಂಗಳಿಂದ ಚಿರತೆ ಉಪಟಳ ಹೆಚ್ಚಳ

ಇನ್ನು ಬೆಂಗಳೂರು ‌ದಕ್ಷಿಣ ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿಂದ ಚಿರತೆ ಉಪಟಳ ಹೆಚ್ಚಾಗಿದೆ. ಜಾನುವಾರುಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ. ಅದೇ ರೀತಿ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಕೂಡ ಕಳೆದ ಹಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿತ್ತು. ಇತ್ತೀಚೆಗೆ ಜಾನುವಾರುಗಳ ಮೇಲೂ ದಾಳಿ ನಡೆದಿತ್ತು. ಹೀಗಾಗಿ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.

ಡಿಎಫ್​ಒ ರಾಮಕೃಷ್ಣಪ್ಪ ಹೇಳಿದ್ದಿಷ್ಟು

ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಇಂದು ಚಿರತೆ ದಾಳಿಗೆ ರೈತ ಸಾವನ್ನಪ್ಪಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ಮೃತದೇಹವನ್ನ ಎತ್ತಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಆನಂತರ ಚಿರತೆ ಸೆರೆ ಹಿಡಿಯುವ ಭರವಸೆ ನೀಡಿದ ನಂತರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಇನ್ನು ಈ ಬಗ್ಗೆ ಮಾತನಾಡಿದ ಡಿಎಫ್​ಒ ರಾಮಕೃಷ್ಣಪ್ಪ, ‘ಸಂಜೆಯಿಂದ ಡ್ರೋನ್ ಸಹಾಯದಿಂದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಿದ ಚಿರತೆ ಭೀತಿ: ಬ್ಯಾಡರಹಳ್ಳಿಯಲ್ಲಿ ಚಿರತೆ ಇದೆ ಎಚ್ಚರಿಕೆ ಬೋರ್ಡ್, ಬನಶಂಕರಿಯಲ್ಲೂ ಪ್ರತ್ಯಕ್ಷ!

ಚಿರತೆ ದಾಳಿಗೆ ರೈತ ಸಾವನ್ನಪ್ಪಿರುವುದು ಜಿಲ್ಲೆಯ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿದು ಜನರು ನೆಮ್ಮದಿಯಿಂದ ಇರಲು ಅವಕಾಶ ಮಾಡಿಕೊಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:17 pm, Mon, 12 October 26

Follow Us
ಪ್ರಶಾಂತ್​ ಬಿ.
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More